ರಜಾ ದಿನಗಳೆಂದರೆ ಖಾಸಗಿ ಬಸ್‌ಗಳಿಗೆ ಹಬ್ಬ; ದುಪ್ಪಟ್ಟಾಗುವ ಟಿಕೆಟ್‌ ದರ; ಕ್ರಮ ಕೈಗೊಳ್ಳದ ಸಾರಿಗೆ ಇಲಾಖೆ

Date:

ಹಬ್ಬ ಹರಿದಿನ, ವಾರಾಂತ್ಯ ಹಾಗೂ ರಜಾ ದಿನಗಳ ಸಮಯದಲ್ಲಿ ಹಲವು ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಇಚ್ಛಿಸುತ್ತಾರೆ. ಇದೇ ಸಮಯವನ್ನು ಬಂಡವಾಳ ಮಾಡಿಕೊಳ್ಳುವ ಖಾಸಗಿ ಬಸ್‌ಗಳ ಮಾಲೀಕರು ದುಪ್ಪಟ್ಟು ದರ ನಿಗದಿ ಮಾಡಿ ಜನರಿಂದ ಹಗಲು ದರೋಡೆ ಮಾಡುತ್ತಿದ್ದಾರೆ. ಇದೀಗ ಸೆ.18 ರಂದು ಗಣೇಶ್ ಚತುರ್ಥಿ ಇರುವ ಹಿನ್ನೆಲೆ, ಜನರು ತಮ್ಮ ಊರುಗಳಿಗೆ ತೆರಳಲು ₹1,500 ರಿಂದ ₹2,500 ವರೆಗೆ ಹಣ ನೀಡಿ, ಟಿಕೆಟ್ ಬುಕ್ ಮಾಡಿಕೊಂಡು ತೆರಳಬೇಕಾಗಿದೆ.

ಖಾಸಗಿ ಬಸ್‌ಗಳಿಂದ ಪ್ರಯಾಣಿಕರಿಗೆ ಅನುಕೂಲವಾಗುವುದಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಖಾಸಗಿ ಬಸ್‌ಗಳ ಟಿಕೆಟ್ ದರವನ್ನು ವಿಪರೀತವಾಗಿ ಏರಿಕೆ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಹುಬ್ಬಳ್ಳಿ, ಧಾರವಾಡ, ಮಹಾಲಿಂಗಪುರ, ಹುನಗುಂದ, ಬದಾಮಿ, ಬಾಗಲಕೋಟೆ, ಅಥಣಿ, ತೇರದಾಳ, ಜಮಖಂಡಿ, ಮುಧೋಳ, ಮಂಗಳೂರು ಸೇರಿದಂತೆ ಹಲವು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಿಂದ ರಾಜಧಾನಿ ಬೆಂಗಳೂರಿಗೆ ಜನರು ವಲಸೆ ಬಂದು ಕೆಲಸ ಮಾಡುತ್ತಿದ್ದಾರೆ. ದೀಪಾವಳಿ, ಯುಗಾದಿ, ದಸರಾ, ಗಣೇಶ ಚತುರ್ಥಿ ಸೇರಿದಂತೆ ಇತರೆ ಹಬ್ಬಗಳ ಸಂದರ್ಭ, ವಾರಾಂತ್ಯ ಹಾಗೂ ರಜಾದಿನಗಳ ಸಮಯದಲ್ಲಿ ಅವರ ಊರಿಗೆ ತೆರಳಿ ಸಂಬಂಧಿಕರೊಂದಿಗೆ ಕೆಲವು ಸಮಯ ಕಳೆದು ಬರುತ್ತಾರೆ. ಇತ್ತೀಚೆಗೆ ಇದು ಸಾಮಾನ್ಯವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಖಾಸಗಿ ಬಸ್‌

ಬೆಂಗಳೂರಿಗೆ ಕೆಲಸಕ್ಕಾಗಿ ವಲಸೆ ಬಂದ ಜನರು ಹಬ್ಬದ ಹಿನ್ನೆಲೆ, ತಮ್ಮ ವಾಸ ಸ್ಥಾನಗಳಿಗೆ ತೆರಳುತ್ತಾರೆ. ಇದನ್ನೇ ಬಳಸಿಕೊಳ್ಳುವ ಖಾಸಗಿ ವಾಹನಗಳ ಮಾಲೀಕರು ನಿಗದಿತ ದರಕ್ಕಿಂತ ದುಪ್ಪಟ್ಟು ದರ ವಿಧಿಸುತ್ತಾರೆ. ವಾರಾಂತ್ಯ ಹಾಗೂ ಹಬ್ಬದ ಸಮಯದಲ್ಲಿ ಖಾಸಗಿ ಬಸ್‌ಗಳ ಟಿಕೆಟ್ ದರ ದಿಢೀರ್ ಏರಿಕೆ ಕಾಣುತ್ತಿದೆ. ಇದರಿಂದ ಜನರು ಅನಿವಾರ್ಯವಾಗಿ ಭಾರೀ ಬೆಲೆ ನೀಡಿ ಊರಿಗೆ ತೆರಳಬೇಕಾದ ಪರಿಸ್ಥಿತಿ ಕಳೆದ ಹಲವು ವರ್ಷಗಳಿಂದ ನಿರ್ಮಾಣ ಆಗುತ್ತ ಬರುತ್ತಿದೆ. ಆದರೂ, ಈ ಬಗ್ಗೆ ಸಾರಿಗೆ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ.

ರೆಡ್‌ ಬಸ್‌, ಮೇಕ್ ಮೈ ಟ್ರಿಪ್, ಗೋಯಿಬಿಬೋ, ಅಭಿ ಬಸ್, ಕ್ಲಿಯರ್ ಟ್ರಿಪ್, ಇಸಿ ಮೈ ಟ್ರಿಪ್ ಸೇರಿದಂತೆ ಹಲವಾರು ಬಸ್‌ ಬುಕಿಂಗ್‌ ಆಪ್‌ಗಳು ಆನ್‌ಲೈನ್ ಟಿಕೆಟ್‌ ಬುಕಿಂಗ್‌ ಓಪನ್ ಮಾಡಿವೆ.

ವಿಆರ್‌ಎಲ್ ಟ್ರಾವೆಲ್ಸ್‌, ಎಮ್‌ ಎಸ್‌ ಟ್ರಾವೆಲ್ಸ್‌, ಸುಗುಮಾ ಟೂರಿಸ್ಟ್‌, ರಾಯಲ್ ಟ್ರಾವೆಲ್ಸ್‌, ಸಾಯಿ ಟ್ರಾವೆಲ್ಸ್, ಎಸ್‌ಆರ್‌ಎಸ್‌ ಸೇರಿದಂತೆ ಹಲವಾರು ಬಸ್‌ಗಳು ಬೆಂಗಳೂರಿನಿಂದ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಊರುಗಳಿಗೆ ಪ್ರಯಾಣ ಬೆಳೆಸುತ್ತವೆ.

ಬೆಂಗಳೂರಿನಿಂದ ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರಕ್ಕೆ ತೆರಳಲು ವಿಆರ್‌ಎಲ್‌ ಟ್ರಾವೆಲ್ಸ್‌ ಟಿಕೆಟ್‌ ದರ ₹1,500 ನಿಗದಿ ಮಾಡಿದೆ. ಎಮ್‌ಎಸ್ ಟ್ರಾವೆಲ್ಸ್‌ನಲ್ಲಿ ₹1,600 ಇದ್ದರೆ, ಸಾಯಿ ಟ್ರಾವೆಲ್ಸ್‌ನಲ್ಲಿ ₹1,899 ಟಿಕೆಟ್‌ ದರ ನಿಗದಿ ಮಾಡಲಾಗಿದೆ.

ಇನ್ನು ಬೆಂಗಳೂರಿನಿಂದ ಬೆಳಗಾವಿಗೆ ತೆರಳಲು ಎಸ್‌ಆರ್‌ಎಸ್‌ ಟ್ರಾವೆಲ್ಸ್‌ನಲ್ಲಿ ₹1,799 ಇದ್ದು, ರೇಷ್ಮಾ ಟ್ರಾವೆಲ್ಸ್‌ ₹1,800 ಇದ್ದರೆ, ಭಾರತಿ ಟ್ರಾವೆಲ್ಸ್‌ ₹2,799 ಇದೆ. ವಿಆರ್‌ಎಲ್‌ನಲ್ಲಿ ₹2,100 ಇದ್ದು, ಆರೆಂಜ್ ಟೂರ್ಸ್‌ ಅಂಡ್ ಟ್ರಾವೆಲ್ಸ್‌ನಲ್ಲಿ ₹2,400 ಇದೆ.

ಬೆಂಗಳೂರಿನಿಂದ ಮಂಗಳೂರಿಗೆ ಎಸ್‌ಆರ್‌ಎಸ್‌ ಟ್ರಾವೆಲ್ಸ್‌ನಲ್ಲಿ ತೆರಳಲು ₹1,750 ಇದ್ದರೆ, ಭಾರತಿ ಟ್ರಾವೆಲ್ಸ್‌ನಲ್ಲಿ ₹2,599 ಇದೆ. ವಿಆರ್‌ಎಲ್ ಟ್ರಾವೆಲ್ಸ್‌ನಲ್ಲಿ ₹1,800 ಟಿಕೆಟ್‌ ದರ ಇದ್ದು, ಆನಂದ್ ಟ್ರಾವೆಲ್ಸ್‌ನಲ್ಲಿ ₹1,710 ಇದೆ.

ಖಾಸಗಿ ಬಸ್

ಸದ್ಯ ಗಣೇಶ ಚತುರ್ಥಿಗೆ ಒಂದು ದಿನ ರಜೆ ಹಾಕಿದರೆ ನಾಲ್ಕು ದಿನ ರಜೆ ಸಿಗಲಿದೆ. ಶುಕ್ರವಾರ ರಾತ್ರಿಯಿಂದ ಖಾಸಗಿ ಬಸ್ ಟಿಕೆಟ್ ದರ ಏರಿಕೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಉತ್ತರ ಕರ್ನಾಟಕದ ಹಲವು ಊರಿಗಳಿಗೆ ತೆರಳಲು ಟಿಕೆಟ್ ದರ ₹700 ರಿಂದ ₹800 ಇರುತ್ತದೆ. ಶುಕ್ರವಾರ ಈ ಬಸ್‌ಗಳ ದರ ₹1,600 ರಿಂದ ₹2,800 ವರೆಗೂ ಏರಿಕೆಯಾಗಿದೆ. ಖಾಸಗಿ ಬಸ್ ಮಾಲೀಕರು ಹಾಗೂ ಆನ್‌ಲೈನ್ ಟಿಕೆಟ್ ನೀಡುವ ವಿತರಕರು ಮನಸೋ ಇಚ್ಛೆ ಟಿಕೆಟ್‌ ದರ ದುಪ್ಪಟ್ಟು ಮಾಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಕೂಡಲೇ ಸಾರಿಗೆ ಸಚಿವರು ಕ್ರಮ ಕೈಗೊಳ್ಳಬೇಕು, ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಈ ಹಿಂದೆ ಸಾರಿಗೆ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು ಖಾಸಗಿ ಬಸ್‌ಗಳು ಟಿಕೆಟ್‌ ದರ ಹೆಚ್ಚಳ ಮಾಡಿ ಪ್ರಯಾಣಿಕರಿಂದ ಹಗಲು ಸುಲಿಗೆ ಮಾಡಲು ಇಳಿದರೆ, ಅಂತಹವರ ಬಸ್‌ನ ರೂಟ್ ಪರ್ಮಿಟ್ ರದ್ದು ಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೂ, ಈ ವ್ಯವಸ್ಥೆಯಲ್ಲಿ ಇಲ್ಲಿಯವರೆಗೆ ಯಾವುದೇ ಬದಲಾವಣೆಯಾಗಿಲ್ಲ. ಇಂದೂ ಕೂಡ ಖಾಸಗಿ ಬಸ್‌ಗಳು ಆನ್‌ಲೈನ್‌ನಲ್ಲಿ ರಾಜಾರೋಷವಾಗಿ ಟಿಕೆಟ್‌ ದರ ದುಪ್ಪಟ್ಟು ಮಾಡಿ, ಜನರಿಂದ ಸುಲಿಗೆ ಮಾಡುತ್ತಿವೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಬ್ಬೆದ್ದು ನಾರುತ್ತಿರುವ ಪಾರಂಪರಿಕ ರಸೆಲ್ ಮಾರುಕಟ್ಟೆ: ಕ್ರಮ ಕೈಗೊಳ್ಳದ ಬಿಬಿಎಂಪಿ

ಖಾಸಗಿ ಬಸ್‌ ಮಾಲೀಕರಿಗೆ ಕರ್ನಾಟಕ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದ್ದು, “ಟಿಕೆಟ್ ದರವನ್ನು ಹೆಚ್ಚಿಸಿ ಪ್ರಯಾಣಿಕರಿಗೆ ಅನಾನುಕೂಲ ಮಾಡಿದರೆ ಅದಕ್ಕೆ ತಕ್ಕ ದಂಡ ತೆರಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದೆ.

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ಬೆಂಗಳೂರು ನಗರ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಎಂ. ಶೋಭ, “ಖಾಸಗಿ ಬಸ್‌ಗಳ ಟಿಕೆಟ್‌ ದರ ಹೆಚ್ಚಳವಾಗಿರುವ ಬಗ್ಗೆ ಸಾರ್ವಜನಿಕರಿಂದ ಈಗಾಗಲೇ ಹಲವಾರು ದೂರುಗಳು ಬಂದಿವೆ. ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಈಗಾಗಲೇ ಹಲವು ಬಸ್‌ ಮಾಲೀಕರಿಗೆ ದಂಡ ವಿಧಿಸಿದ್ದೇವೆ. ಇನ್ನೂ ಮೂರು ದಿನಗಳ ವರೆಗೆ ಟಿಕೆಟ್‌ ದರ ಹೆಚ್ಚಳ ಮಾಡಿದ ಬಗ್ಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಟಿಕೆಟ್‌ ದರ ಹೆಚ್ಚಳ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಖಾಸಗಿ ಬಸ್

ಟಿಕೆಟ್‌ ದರ ಹೆಚ್ಚಳದ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ಮಹಾಲಿಂಗಪುರದ ನಿವಾಸಿ ಅಕ್ಷತಾ, “ನಾನು ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ನಮಗೆ ಕೆಲಸದ ದಿನಗಳಲ್ಲಿ ಹೆಚ್ಚಾಗಿ ರಜೆ ಸಿಗುವುದಿಲ್ಲ. ಹಾಗಾಗಿ, ಹಬ್ಬದ ಸಮಯದಲ್ಲಿ ಊರಿಗೆ ತೆರಳಬೇಕಾಗುತ್ತದೆ. ಆದರೆ, ಖಾಸಗಿ ಬಸ್‌ಗಳು ವಿಪರೀತ ಟಿಕೆಟ್‌ ದರ ಹೆಚ್ಚಳ ಮಾಡುತ್ತಿವೆ. ಇದರಿಂದ ನಮಗೆ ತುಂಬಾ ಕಷ್ಟವಾಗುತ್ತಿದೆ” ಎಂದರು.

“ನಾನು ಕಳೆದ ಎರಡು ವರ್ಷದಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವೆ. ರಜೆ ಸಮಯದಲ್ಲಿ ಊರಿಗೆ ತೆರಳಬೇಕೆಂದರೆ, ಖಾಸಗಿ ಬಸ್‌ಗಳ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ” ಎಂದು ಈ ದಿನ.ಕಾಮ್‌ಗೆ ವಿದ್ಯಾರ್ಥಿನಿ ಅಶ್ವಿನಿ ಹೇಳಿದರು.

+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಸರ್ಕಾರಿ ಬಸ್ ಗಳಲ್ಲೂ ವಾರಾಂತ್ಯದಲ್ಲಿ ಹೆಚ್ಚಳ ಮಾಡುವ ರೂಢಿಯಲ್ಲಿದೆ ಹಾಗಾಗಿ ಖಾಸಗಿ ಬಸ್ ಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಿಲ್ಲ…

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೈಲ್ವೆ ಟ್ರ್ಯಾಕ್ ಬಳಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ; ಪ್ರಕರಣ ಭೇಧಿಸಿದ ರೈಲ್ವೆ ಪೊಲೀಸರು

ಯಲಹಂಕ ರೈಲ್ವೆ ಟ್ರ್ಯಾಕ್ ಬಳಿ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ಇದೀಗ...

ಬೆಂ.ಗ್ರಾಮಾಂತರ | ಮಾ.4ರಂದು ನೆಲಮಂಗಲಕ್ಕೆ ಮುಖ್ಯಮಂತ್ರಿ ಭೇಟಿ; ಅಗತ್ಯ ಸಿದ್ಧತೆಗೆ ಡಿಸಿ ಸೂಚನೆ

ಹಲವು ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

ಬೆಂಗಳೂರು | ವ್ಹೀಲಿಂಗ್ ಮಾಡುವವರ ವಿರುದ್ದ ಕಾರ್ಯಾಚರಣೆಗಿಳಿದ ಪೊಲೀಸರು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಳವಾಗಿದ್ದು, ಪೊಲೀಸರು ಎಷ್ಟೇ...

₹2.3 ಕೋಟಿ ಮೌಲ್ಯದ ನಿಷೇಧಿತ ಮಾದಕ ವಸ್ತುಗಳ ವಶ: ಪೊಲೀಸ್ ಆಯುಕ್ತ ದಯಾನಂದ

ಬೆಂಗಳೂರು ನಗರ ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ...