ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಅರಿ
ಅರಿದೆವರಿದೆವೆಂಬಿರಿ
ಅರಿದ ಪರಿಯೆಂತು ಹೇಳಿರೆ?
ಅರಿದವರು ಅರಿದೆವೆಂಬರೆ?
ಅರಿಯಬಾರದ ಘನವನರಿದು, ಅರಿಯದಂತಿಪ್ಪರು ಗುಹೇಶ್ವರಾ.
ವಚನಾರ್ಥ:
ಅರಿದೆವರಿದೆವೆಂಬಿರಿ. ಅರಿದೆವು ಅರಿದೆವು ಎಂಬಿರಿ ಎಂಬ ಮೂರು ಪದಗಳನ್ನು ಒಂದು ಪದವಾಗಿ ಬೆಸೆದು ವಚನ ಆರಂಭವಾಗುತ್ತದೆ. ಯಾವುದನ್ನು ಅರಿದಿದ್ದೀರಿ? ದೈವ ವಸ್ತುವಿನ ಪರಬ್ರಹ್ಮ ಸ್ವರೂಪವನ್ನು ಅರಿದಿದ್ದೇವೆ. ಹಾಗಾದರೆ ಅದನ್ನು ಅರಿದ ಪರಿ ಅಥವಾ ಪ್ರಕ್ರಿಯೆಯನ್ನು ವಿವರಿಸಿ. ಹಾಗೆಂದು ಕೇಳಿದರೆ ಉತ್ತರವಿಲ್ಲ. ಏಕೆಂದರೆ ಅರಿಯುವವ, ಅರಿಯಲ್ಪಡುವ ವಸ್ತು ಮತ್ತು ಅರಿವಿನ ಪರಿ ಈ ಮೂರೂ ಭಿನ್ನವಲ್ಲ. ಒಂದರಲ್ಲೊಂದು ಮಿಳಿತವಾಗಿವೆ. ಹಾಗಾಗಿ ಅರಿದವರು ಅರಿದಿದ್ದೇವೆ ಅನ್ನಲಾಗದು. ಅರಿಯದವರು ಅರಿವಿನ ಪ್ರಕ್ರಿಯೆಯ ಭಾಗವಾಗಿರುವುದರಿಂದ ಅವರು ನಾವು ಅರಿತಿಲ್ಲ ಅನ್ನಲಾಗದು. ಅವರು ಅರಿಯಬಾರದ ಘನವನರಿದು ಅರಿಯದಂತೆ ಇರುವವರು. ಅರಿದಿರುವವರಲ್ಲಿ ಅರಗದ ಮತ್ತು ಅರಿಯದವರಲ್ಲಿ ಅರಗಿರುವುದೇ ಬ್ರಹ್ಮದ ನಿಜ ಸ್ವರೂಪ.
ಪದ ಪ್ರಯೋಗಾರ್ಥ:
ಈ ಚಿಕ್ಕ ವಚನದಲ್ಲಿ ಅರಿ ಎಂಬ ಪದ ಎಂಟು ಬಾರಿ ಬಳಕೆಯಾಗಿದೆ. ಅರಿ ಎಂದರೆ ಅರಿವು, ಜ್ಞಾನ, ತಿಳಿದಿರುವಿಕೆ. ಅರಿ ಎಂಬ ಪದ ಅತಿ ಚಿಕ್ಕದಾದರೂ ಅದರ ವ್ಯಾಪ್ತಿ ಬಹಳ ವಿಸ್ತಾರವಾದುದು. ಅರಿವಿನ ಪರಿಗೆ ಮತ್ತು ಪರಿಧಿಗೆ ಆದಿ ಅಂತ್ಯಗಳಿಲ್ಲ. ಅಲ್ಲಮ ಇಲ್ಲಿ ಪ್ರಸ್ತಾಪಿಸಿರುವುದು ಪರಬ್ರಹ್ಮ ಸ್ವರೂಪದ ಅರಿವು. ಕೇನೋಪನಿಷತ್ತಿನ ಎರಡನೇ ಭಾಗದ 3ನೇ ಶ್ಲೋಕದಲ್ಲಿ “ಅರಿ” ಎಂಬ ಬಗ್ಗೆ ವಿಶ್ಲೇಷಣೆ ಇದೆ. ಯಾರು ಅದನ್ನು ಅರಿದಿದ್ದೇವೆ ಎಂದು ಭಾವಿಸುತ್ತಾರೋ ಅವರಿಗೆ ಅದು ಅರಿದಿರುವುದಿಲ್ಲ. ಯಾರು ತನಗೆ ಅರಿದಿಲ್ಲ ಎಂದು ಭಾವಿಸುತ್ತಾರೋ ಅವರಿಗೆ ಅದು ಅರಿದಿರುತ್ತದೆ. ಅರಿದಿರುವವರು ಅರಿಯದ ಮತ್ತು ಅರಿಯದವರು ಅರಿದಿರುವುದೇ ಬ್ರಹ್ಮದ ನಿಜ ಸ್ವರೂಪ ಎಂದು ಉಪನಿಷತ್ ಉವಾಚ. ಅದನ್ನೇ ಅಲ್ಲಮ ಅರಿಯಬಾರದ ಘನವನು ಅರಿದವರು ಅರಿಯದಂತಿಪ್ಪರು ಎಂದದ್ದು. ಗುಹೇಶ್ವರನೆಂಬ ಲಿಂಗವು ಅರಿವಿನ ಮರೆಯಲ್ಲಿಹುದನಾರೂ ಅರಿಯರಲ್ಲಾ ಎಂದು ಅಲ್ಲಮನೇ ವಿಸ್ಮಯಗೊಂಡ ಸನ್ನಿವೇಶವಿದೆ. ಅರಿ ಎಂಬ ಪದದ ಅಗಾಧ ವಿಸ್ತಾರತೆಯನ್ನು ಐದು ಸಾಲುಗಳಲ್ಲಿ ಎಂಟು ಬಾರಿ ಪ್ರಯೋಗಿಸಿ ವಚನದಲ್ಲಿ ಪ್ರಸ್ತುತಪಡಿಸಿರುವುದು ಅಲ್ಲಮನ ಅನನ್ಯತೆ.
ದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.



