ಬಿಹಾರದಲ್ಲಿ ಮಹಿಳೆಯರ ಮೇಲಿನ ಅಪರಾಧ ತಡೆಯುವಲ್ಲಿ ಮದ್ಯ ನಿಷೇಧ ಕಾಯ್ದೆಯು ವಿಫಲವಾಗಿದೆ. ಆದ್ದರಿಂದ, ಆ ಕಾಯ್ದೆಯನ್ನು ರಾಜ್ಯ ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ‘ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್’ (NCAER) ಆರ್ಥಿಕ ಸಂಶೋಧನಾ ಸಂಸ್ಥೆ ಹೇಳಿದೆ. ಆದಾಗ್ಯೂ, ಮಹಾಘಟಬಂಧನ್ ಸರ್ಕಾರ ಜಾರಿಗೆ ತಂದಿದ್ದ ಈ ಕಾಯ್ದೆಯನ್ನು ಹಿಂಪಡೆಯುವ ಉದ್ದೇಶದಿಂದಲೇ ಇಂದಿನ ಬಿಜೆಪಿ ಸರ್ಕಾರ ಇಂತಹ ವರದಿಯನ್ನು ಸಿದ್ಧಪಡಿಸಿದೆ ಎಂಬ ಮಾತುಗಳೂ ಬಿಹಾರ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಕುಟುಂಬಗಳಲ್ಲಿನ ಗೃಹಹಿಂಸೆ ತಡೆಗಟ್ಟುವ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ‘ಮದ್ಯ ನಿಷೇಧ ಕಾಯ್ದೆ’ಯಿಂದ ಯಾವುದೇ ಪ್ರಯೋಜವಾಗಿಲ್ಲ; ಬದಲಾಗಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಇನ್ನಷ್ಟು ಹೆಚ್ಚಾಗಿವೆ ಎಂದು ವರದಿ ತಿಳಿಸಿದೆ.
ಅರ್ಥಶಾಸ್ತ್ರಜ್ಞೆ ರತ್ನ ಸಹಾಯ್ ನೇತೃತ್ವದ ತಂಡ ಸಿದ್ಧಪಡಿಸಿರುವ ‘ಬಿಹಾರದ ಅಭಿವೃದ್ಧಿ ಸಾಧನೆಗಳು ಮತ್ತು ಮುಂದಿನ ಹಾದಿ’ ವರದಿಯ ಪ್ರಕಾರ, 2016ರಲ್ಲಿ ಮದ್ಯ ನಿಷೇಧ ಜಾರಿಯಾದ ನಂತರ ರಾಜ್ಯದಲ್ಲಿ ಅಪರಾಧಗಳು ಕಡಿಮೆಯಾಗಿಲ್ಲ. ಬದಲಿಗೆ, ಅಕ್ರಮ ಮದ್ಯ ಮಾರಾಟ ಜಾಲಗಳು, ಕಳ್ಳಸಾಗಣೆ, ಪೊಲೀಸ್ ಭ್ರಷ್ಟಾಚಾರ ಹಾಗೂ ಮಾದಕ ದ್ರವ್ಯಗಳ ಪರ್ಯಾಯ ಬಳಕೆ ಗಣನೀಯವಾಗಿ ಏರಿಕೆಯಾಗಿದೆ.
ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸುವ ಉದ್ದೇಶವೂ ಈ ಕಾಯ್ದೆಯಿಂದ ಈಡೇರಿಲ್ಲ. ಬದಲಾಗಿ, ಕಳ್ಳ ಹಾದಿಯಲ್ಲಿ ದುಬಾರಿ ಬೆಲೆಗೆ ಮದ್ಯ ಮಾರಾಟವಾಗುತ್ತಿದ್ದು, ಬಡ ಕುಟುಂಬಗಳ ಹಣ ಅನಗತ್ಯವಾಗಿ ಪೋಲಾಗುತ್ತಿದೆ ಎಂದು ವರದಿ ಹೇಳಿದೆ.
ಮದ್ಯ ನಿಷೇಧಕ್ಕೂ ಮೊದಲು ಬಿಹಾರ ಸರ್ಕಾರಕ್ಕೆ 14%ರಷ್ಟು ಆದಾಯ ಅಬಕಾರಿ ಸುಂಕದಿಂದಲೇ ಬರುತ್ತಿತ್ತು. ಆದರೆ, ನಿಷೇಧದ ನಂತರ ರಾಜ್ಯ ಸರ್ಕಾರ ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ ರಾಜಸ್ವ ಆದಾಯ ಕೈತಪ್ಪಿದ್ದರೆ, ಇನ್ನೊಂದೆಡೆ ಅಕ್ರಮ ಮದ್ಯ ನಿಯಂತ್ರಿಸಲು ಮತ್ತು ಕಳ್ಳಸಾಗಣೆ ತಡೆಯಲು ಸರ್ಕಾರ ಕೋಟ್ಯಂತರ ರೂಪಾಯಿ ಹೆಚ್ಚುವರಿ ಹಣ ಪೋಲು ಮಾಡುತ್ತಿದೆ ಎಂದು ವರದಿ ವಿವರಿಸಿದೆ.
“ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಮದ್ಯ ನಿಷೇಧ ತನ್ನ ಮೂಲ ಉದ್ದೇಶ ಸಾಧಿಸುವಲ್ಲಿ ವಿಫಲವಾಗಿದೆ. ಸರ್ಕಾರ ತಕ್ಷಣವೇ ಅಬಕಾರಿ ಸುಂಕವನ್ನು ಹಳೆಯ ಹಂತಕ್ಕೆ ಮರುಸ್ಥಾಪಿಸಿದರೆ ರಾಜ್ಯದ ಸ್ವಂತ ಆದಾಯ 14ರಿಂದ 15%ರಷ್ಟು ಹೆಚ್ಚಾಗಲಿದೆ” ಎಂದು NCAER ವರದಿ ಹೇಳಿದೆ.
ಈ ಲೇಖನ ಓದಿದ್ದೀರಾ?: FCRA ತಿದ್ದುಪಡಿ | ವಿದೇಶಿ ದೇಣಿಗೆ ನಿಯಂತ್ರಣವೋ, ಧಾರ್ಮಿಕ ಸಂಸ್ಥೆಗಳ ಮೇಲಿನ ಸರ್ಕಾರಿ ಹಿಡಿತವೋ?
ಭಾರತದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಬಿಹಾರದಲ್ಲಿ ಬಡತನ ನಿರ್ಮೂಲನೆ ಮಾಡಲು ಕೇವಲ ಮದ್ಯ ನಿಷೇಧದಂತಹ ಕಣ್ಣೊರೆಸುವ ತಂತ್ರಗಳು ಸಾಲದು. ಸರ್ಕಾರವು ತಕ್ಷಣವೇ ಶಿಕ್ಷಣ, ಆರೋಗ್ಯ, ಕಾನೂನು-ಸುವ್ಯವಸ್ಥೆ, ಪ್ರವಾಹ ತಡೆ ಹಾಗೂ ಯುವಜನತೆಗೆ ಉದ್ಯೋಗ ಸೃಷ್ಟಿಸುವ ನೈಜ ಅಭಿವೃದ್ಧಿ ಮಾದರಿಗಳತ್ತ ಗಮನಹರಿಸಬೇಕು ಎಂದು ವರದಿ ಹೇಳಿದೆ.
ಬಿಹಾರದ ವಿವಿಧ ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಈ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಮದ್ಯ ನಿಷೇಧ ಹಿಂಪಡೆದರೆ ಮತ್ತೆ ಮನೆಗಳಲ್ಲಿ ಹಿಂಸಾಚಾರ ತಾಂಡವವಾಡುತ್ತದೆ. ಆದಾಯದ ನೆಪವೊಡ್ಡಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದು ಮಹಿಳೆಯರ ಕ್ಷೇಮಾಭಿವೃದ್ಧಿಗೆ ಮಾಡುವ ದ್ರೋಹ” ಎಂದು ಆಕ್ರೋಶ ಹೊರಹಾಕಿದ್ದಾರೆ.




