ನುಡಿಯಂಗಳ | ಮಕ್ಕಳ ಓದು ಮನೆಯಿಂದ ಆರಂಭ!

Date:

ಗರ್ಭಧಾರಣೆಯ ಸುಮಾರು 23 ವಾರಗಳ ನಂತರ ತಾಯಿಯ ಗರ್ಭದಲ್ಲಿರುವ ಮಗು ಹೊರಗಿನ ಸದ್ದುಗಳನ್ನು ಕೇಳಿಸಿಕೊಳ್ಳ ತೊಡಗುತ್ತದೆ, ಅಮ್ಮನ ಮಾತನ್ನೂ ಆಲಿಸುತ್ತದೆ. ಇದು ಮುಂದೆ ಹೊರಜಗತ್ತಿಗೆ ಆಗಮಿಸಿ, ಮನೆಯವರ ಮಾತನ್ನು ಕಲಿಯಲು ಇದು ಬುನಾದಿ

- Advertisement -

“ಮತ್ತೆ ಮತ್ತೆ ತೆರೆದು ನೋಡಬಹುದಾದ ಉಡುಗೊರೆಯೆಂದರೆ, ಪುಸ್ತಕ” – ಗ್ಯಾರಿಸನ್ ಕೇಯ್ಲರ್

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಮಕ್ಕಳು ಮಾತಾಡುವುದನ್ನು ಯಾವಾಗ ಕಲಿಯುತ್ತಾರೆ? ಈ ಪ್ರಶ್ನೆಗೆ ನಿಮ್ಮಲ್ಲಿ ಒಬ್ಬೊಬ್ಬರಲ್ಲಿ ಒಂದೊಂದು ಉತ್ತರ ಇರಬಹುದು. ಕೆಲವರು ಒಂದು ವರ್ಷದ ನಂತರ ಎಂದರೆ ಇನ್ನೂ ಕೆಲವರು ತಾಯಿಯ ಗರ್ಭದಲ್ಲಿರುವಾಗಲೇ ಮಾತಾಡುವುದನ್ನು ಕಲಿಯುತ್ತಾರೆ ಎನ್ನುವುದೂ ಉಂಟು. ಇದೂ ಒಂದು ರೀತಿ ಸರಿ. ಗರ್ಭಧಾರಣೆಯ ಸುಮಾರು 23 ವಾರಗಳ ನಂತರ ತಾಯಿಯ ಗರ್ಭದಲ್ಲಿರುವ ಮಗು ಹೊರಗಿನ ಸದ್ದುಗಳನ್ನು ಕೇಳಿಸಿಕೊಳ್ಳ ತೊಡಗುತ್ತದೆ, ಅಮ್ಮನ ಮಾತನ್ನೂ ಆಲಿಸುತ್ತದೆ. ಇದು ಮುಂದೆ ಹೊರಜಗತ್ತಿಗೆ ಆಗಮಿಸಿ, ಮನೆಯವರ ಮಾತನ್ನು ಕಲಿಯಲು ಇದು ಬುನಾದಿ.

ಆ ನಂತರವೂ ಮಗು ಒಂದು ಪದದ ವಾಕ್ಯಗಳನ್ನು ಹೇಳತೊಡಗಲು ಸುಮಾರು 9 ತಿಂಗಳು ಬೇಕಾಗಿದ್ದರೂ ಅದು ಆರಂಭದಿಂದ ತನ್ನ ಸುತ್ತಮುತ್ತ ಇರುವವರ ಮಾತುಗಳನ್ನು ಸಕ್ರಿಯವಾಗಿ ಆಲಿಸತೊಡಗುತ್ತದೆ. ವಿಭಿನ್ನ ಸನ್ನಿವೇಶಗಳಲ್ಲಿ ಧ್ವನಿಯ ವಿವಿಧ ಏರಿಳಿತಗಳೊಂದಿಗೆ ಒಬ್ಬರು ಆಡುವ ಮಾತಿಗೆ ಇನ್ನೊಬ್ಬರು ತೋರುವ ಪ್ರತಿಕ್ರಿಯೆಯನ್ನು ಗಮನಿಸುತ್ತದೆ. ದೊಡ್ಡವರು, ಮುಖ್ಯವಾಗಿ ಸದಾಕಾಲ ಜೊತೆಗಿರುವ ಅಮ್ಮ ತನ್ನೊಂದಿಗೆ ಮಾತಾಡುವುದನ್ನು ಮಗು “ಅರ್ಥ ಮಾಡಿಕೊಳ್ಳುವ” ಉದ್ದೇಶದಿಂದಲೇ ಕಣ್ಣರಳಿಸಿ ಆಲಿಸುತ್ತದೆ.

ಎಂದರೆ ಮಗು ಮಾತನ್ನು ಕಲಿಯಲು ಆರಂಭಿಸಬೇಕು ಎಂದರೆ ಅದರ ಸುತ್ತ ಮಾತು ನಡೆಯುತ್ತಿರಲೇ ಬೇಕು, ಅದು ಅದನ್ನು ಆಲಿಸುತ್ತಲೇ ಇರಬೇಕು. ಮಗುವಿಗೆ ಕಿವಿ ಸರಿಯಾಗಿ ಕೇಳಿಸುತ್ತಿದ್ದರೂ, ಕಾರಣಾಂತರಗಳಿಂದ ಅದರ ಸುತ್ತ, ದಿನದ ಬಹಳ ಹೊತ್ತು ಮಾತು ಆಲಿಸುವ ಅವಕಾಶವಿಲ್ಲದಿದ್ದರೆ ಮಗುವಿನ ಭಾಷಾ ಕಲಿಕೆ ಕುಂಠಿತವಾಗುತ್ತದೆ.

ಓದನ್ನು ಕಲಿಯುವುದು

ಇನ್ನು ಮಕ್ಕಳು ಓದನ್ನು ಯಾವಾಗ ಕಲಿಯುತ್ತಾರೆ? ನಾವೆನ್ನುತ್ತೇವೆ, ಶಾಲೆಗೆ ಹೋದ ನಂತರ, ಮೊದಲ ತರಗತಿಯಲ್ಲಿ ಎಂದು. ಈಗ ಕಿಂಡರ್ಗಾರ್ಟನ್ ಶಾಲೆಗಳಲ್ಲಿಯೂ ಮಕ್ಕಳಿಗೆ ಓದುವುದನ್ನು ಕಲಿಸುತ್ತಾರೆ. ಆದರೆ, ಹೇಗೆ ವ್ಯವಸ್ಥಿತವಾದ ಆಲಿಸುವಿಕೆಯನ್ನು ಕಲಿಯುವುದಕ್ಕೆ ವಿಸ್ತೃತವಾದ ಮಾತು ಅದರ ಸುತ್ತ ಇರಬೇಕು ಎಂದು ಹೇಳಿದೆವೋ, ಹಾಗೆಯೇ ವ್ಯವಸ್ಥಿತ ಓದನ್ನು ಕಲಿಯುವ ಮುಂಚೆ, ಎಂದರೆ ಶಾಲೆಗೆ ಬರುವ ಮುಂಚೆ ಮಗು ಓದಿನ ವಾತಾವರಣದಲ್ಲಿ ಬೆಳೆಯಬೇಕಾಗುತ್ತದೆ.

ಎಂದರೆ, ಮೊದಲನೆಯದಾಗಿ ಮನೆಯಲ್ಲಿ ಓದಿನ ವಾತಾವರಣ ಇರಬೇಕು. ದೊಡ್ಡ ಮಕ್ಕಳು, ಪೋಷಕರು ಮಗುವಿಗೆ ಕಾಣುವ ಹಾಗೆ ಪತ್ರಿಕೆ, ಪುಸ್ತಕ ಓದುತ್ತಿರಬೇಕು. ಎಂದರೆ ಅವುಗಳಲ್ಲಿಯೂ ಭಾಷೆಯ ಒಂದು ರೂಪ ಅಡಗಿದೆ ಎನ್ನುವ ಮೂಲಭೂತ ಪ್ರಜ್ಞೆ ಮಗುವಿನಲ್ಲಿ ಬೆಳೆಯುತ್ತದೆ. ಇದು ಮುಂದೆ ಓದನ್ನು ಕಲಿಯಲು ಮೂಲ ಬುನಾದಿಯಾಗಿ ಕೆಲಸ ಮಾಡುತ್ತದೆ. ಮಗು ಒಂದೂ ಒಂದೂವರೆ ತಿಂಗಳಲ್ಲೇ ಅಣ್ಣ, ಅಕ್ಕನ ಪುಸ್ತಕಗಳನ್ನು ಎತ್ತಿಕೊಂಡು, ವಳವಳವಳ ಎಂದು ಏನೇನೊ ಧ್ವನಿ ತೆಗೆಯುತ್ತಾ ಓದುವ ’ನಾಟಕ’ ಮಾಡುವುದನ್ನು ನಾವು ನೋಡುತ್ತೇವೆ. (ಇಂಥ ಒಂದು ವಿಡಿಯೋವನ್ನು ನೋಡಿ: https://youtube.com/shorts/KNFUKdtpqcw ) ಇನ್ನಷ್ಟು ದೊಡ್ಡದಾದ ನಂತರ ಅಪ್ಪ, ಅಮ್ಮ, ಮಕ್ಕಳ ಪುಸ್ತಕವನ್ನು ಹಿಡಿದುಕೊಂಡು, ಆ ಮಗು ಪುಸ್ತಕದ ಮೇಲಿನ ಚಿತ್ರ, ಬರಹವನ್ನು ನೋಡುತ್ತಿರುವ ಹಾಗೆ, ಬೆರಳಿನಿಂದ ಸಾಲುಗಳನ್ನು ಮುಟ್ಟುತ್ತಾ ಓದಿ ಮಗುವಿಗೆ ಕಥೆಯನ್ನು ಹೇಳಬಹುದು.

video preview 0000

ಇಲ್ಲಿ ಎರಡು ಕೆಲಸಗಳು ಆಗುತ್ತಿರುತ್ತವೆ: ಪುಸ್ತಕದಲ್ಲಿ ಇಂಥ ಒಂದು ಅದ್ಭುತ ಕಥೆ ಅಡಗಿದೆ ಎಂಬ ಅರಿವು ಮಗುವಿನಲ್ಲಿ ಮೂಡುತ್ತದೆ; ಇನ್ನೊಂದು ಚಿತ್ರಗಳು ಮತ್ತು ಅಕ್ಷರದಂತೆ ಕಾಣುವ ಆಕಾರಗಳ ಸರಣಿ ಅರ್ಥವನ್ನು ಅಡಗಿಸಿಕೊಂಡಿರುತ್ತದೆ ಎಂಬ ಸ್ಥೂಲ ತಿಳಿವಳಿಕೆ ಮಗುವಿನಲ್ಲಿ ಮೂಡುತ್ತದೆ. ಮುಂದೆ ತಾನೇ ಅಕ್ಷರ ಕಲಿತು ವಿವಿಧ ಬರಹವನ್ನು ಓದುವ ಕೌಶಲವನ್ನು ಕಲಿಯಲು ಇದು ಪ್ರೇರಕವಾಗುತ್ತದೆ.

ಮುಂದೆ ಮಗು ಅಕ್ಷರಗಳನ್ನು ಕಲಿತಾಗ ಅದು ಮಗುವಿಗೆ ಓದಿನ ಜಗತ್ತಿನ ಸಾಗರದಷ್ಟು ಶ್ರೀಮಂತವಾದ ತಿಜೋರಿಗೆ ಕೀಲಿಕೈಯನ್ನು ಒದಗಿಸುತ್ತದೆ. ಮಗು ಬೆಳೆದ ಹಾಗೆ ತನಗೆ ಇಷ್ಟವಾದ ಬರಹಗಳನ್ನೂ ಓದಿ ಆನಂದಿಸುತ್ತದೆ, ಹಾಗೆಯೇ ಶಿಕ್ಷಣ ವ್ಯವಸ್ಥೆಯ ಭಾಗವಾಗಿರುವ ಪಠ್ಯಗಳನ್ನು ಹೆಚ್ಚು ಆತ್ಮವಿಶ್ವಾಸದಿಂದ ಓದಿ ಅರ್ಥ ಮಾಡಿಕೊಳ್ಳುತ್ತದೆ. (ಬರೆಯುವ ಕೌಶಲಕ್ಕೆ ಓದುವ ಕೌಶಲ ಬುನಾದಿ, ಇದನ್ನು ಮತ್ತೆ ಚರ್ಚಿಸೋಣ). ಇದೆಲ್ಲ ಸುಗಮವಾಗಿ, ಸಾರ್ಥಕವಾಗಿ ಸಾಗಬೇಕು ಎಂದರೆ ಮಕ್ಕಳ ಸುತ್ತ, ಕೈಗೆಟುಕುವ ಹಾಗೆ ವಿವಿಧ ರೀತಿಯ ಓದುವ ಸಾಮಗ್ರಿ ಇರಬೇಕು, ಇದನ್ನು ಉತ್ತಮ ಮಕ್ಕಳ ಪುಸ್ತಕಗಳು ಒದಗಿಸುತ್ತವೆ.

ನನಗೆ ಗೊತ್ತು, ತಾವೇ ಸ್ವತಃ ಸಾಕಷ್ಟು ಸಾಕ್ಷರರಲ್ಲದ, ಬಡವರಾದ ಪೋಷಕರಿಗೆ ಈ ರೀತಿಯ ಓದಿನ ಪರಿಸರವನ್ನು ಒದಗಿಸುವ ಕುರಿತು ಅರ್ಥವೂ ಅಗುವುದಿಲ್ಲ, ಆದರೂ ಅವರಲ್ಲಿ ಸಂಪನ್ಮೂಲದ ಕೊರತೆ ಇರುತ್ತದೆ. ಆದರೆ, ಅದೆಲ್ಲಾ ಇದ್ದು, ತಾವೂ ಸುಶಿಕ್ಷಿತರಾದ, ಕೈತುಂಬಾ ದುಡಿಯುವ ಪೋಷಕರಾದರೂ ಇದನ್ನು ಮಾಡುತ್ತಾರೆಯೇ? ಅಥವಾ ಒಂಭತ್ತು ತಿಂಗಳ ಮಗುವನ್ನು ಅಳದಂತೆ ಸುಮ್ಮನಿರಿಸಲು, ಊಟ ಮಾಡಿಸಲು ಕೈಯಲ್ಲಿ ಮೊಬೈಲನ್ನು ಕೊಟ್ಟು ಕೂಡಿಸುತ್ತಾರೆಯೇ?. ಮನೆಗೆ ಯಾವುದಾದರೂ ಒಂದು ದಿನ ಪತ್ರಿಕೆ, ವಾರಪತ್ರಿಕೆ ತರಿಸಿಕೊಂಡು ಓದಿ, ಜಗತ್ತಿನಲ್ಲಿ ಆಗುತ್ತಿರುವ ಆಗುಹೋಗುಗಳನ್ನು ತಿಳಿದುಕೊಳ್ಳುತ್ತಾರೆಯೇ, ಅಥವಾ ಸಿಕ್ಕ ಸಮಯವನ್ನೆಲ್ಲಾ ಟಿವಿ ನೋಡುತ್ತಾ, ಮೊಬೈಲ್ ದಿಟ್ಟಿಸುತ್ತಾ ಕಾಲಹರಣ ಮಾಡುತ್ತಾರೆಯೇ? ಇಂಥ ವಾತಾವರಣದಲ್ಲಿ ಬೆಳೆದ ಮಗು ನಿಜವಾಗಿಯೂ ಮುಂದೆ ಶಾಲೆಯಲ್ಲಿ ಅತ್ಯಗತ್ಯವಾದ ’ಓದಿನ’ ಕೌಶಲಕ್ಕೆ ಅಗತ್ಯವಾದ ಬುನಾದಿಯಿಂದ ವಂಚಿತವಾಗುತ್ತದೆ. ಶಾಲೆಯಲ್ಲಿ ಎದುರಿಸುವ ಹಲವಾರು ಶೈಕ್ಷಣಿಕ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ.

ಅದಕ್ಕೆ ಹೇಳುವುದು ಮಕ್ಕಳ ಸುತ್ತ ಮನೆತುಂಬ ಪುಸ್ತಕಗಳಿರಲಿ, ಅದರಲ್ಲೂ ಮುಖ್ಯವಾಗಿ ಮಕ್ಕಳ ಪುಸ್ತಕಗಳಿರಲಿ ಎಂದು.

WhatsApp Image 2025 11 08 at 11.14.27 AM

ಹಾಗೆ, ಮಕ್ಕಳಿಗಾಗಿಯೇ ಪುಸ್ತಕಗಳನ್ನು ಬರೆಯುವುದು, ಅದನ್ನು ಅವರನ್ನು ಸೆಳೆಯುವ ರೀತಿಯಲ್ಲಿ ವಿನ್ಯಾಸ ಮಾಡಿ, ಪ್ರಕಟಿಸಿ, ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುವುದು ಸಾಹಸದ ಕೆಲಸವೇ ಸರಿ. ಆದರೂ ನಮ್ಮ ಕನ್ನಡ ಲೇಖಕರೂ ಪ್ರಕಾಶಕರೂ ಈ ಮಹತ್ವದ ಕೆಲಸವನ್ನು ಮಾಡುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಕೆಲವು ಸುಂದರವಾದ ಮಕ್ಕಳ ಪುಸ್ತಕಗಳನ್ನು ಮಕ್ಕಳ ಕೈಗಿತ್ತ ಒಂದು ವಿಶಿಷ್ಟ ಪ್ರಯೋಗದಲ್ಲಿ ನಾನು ಭಾಗವಹಿಸಿದ್ದರ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳಬಯಸುತ್ತೇನೆ. ಇದು ನನ್ನ ವ್ಯಯಕ್ತಿಕ ವಿಚಾರವಾದರೂ ಮಕ್ಕಳಲ್ಲಿ ಓದಿನ ಅಭಿರುಚಿಯ ಬೀಜವನ್ನು ಬಿತ್ತುವ ಅಗತ್ಯದ ಕುರಿತು ಇದು ಹೇಳುತ್ತದೆ.

ಬಿಂಬ–ಪ್ರತಿಬಿಂಬ: ಒಂದು ಪ್ರಯೋಗ

ಟಾಟಾ ಟ್ರಸ್ಟ್ ಪ್ರಾಯೋಜಿತ ’ಪರಾಗ್’ ಎಂಬ ಸಂಸ್ಥೆ ಮತ್ತು ವಿಶಿಷ್ಟ ಪ್ರಕಟಣೆಗಳಿಂದ ಹೆಸರು ಮಾಡಿದ ’ಬಹುರೂಪಿ’ ಪ್ರಕಾಶನ ಕೈಜೋಡಿಸಿ ಜಾರಿಗೆ ತಂದ ಯೋಜನೆಯಲ್ಲಿ, ಜುಲೈ 6, 2025ರಲ್ಲಿ ಆಕರ್ಷಕವಾದ, 13 ಮಕ್ಕಳ ಪುಸ್ತಕಗಳನ್ನು ಪುಸ್ತಕಗಳನ್ನು ಬಿಡುಗಡೆಯಾದವು.

WhatsApp Image 2025 11 08 at 11.14.27 AM1

ಈ ಪುಸ್ತಕಗಳ ಹುಟ್ಟಿನ ಕಥೆಯೂ ರೋಚಕವಾಗಿದೆ. ಬಹುರೂಪಿ-ಪರಾಗ್ ಜೋಡಿ ಮೊದಲು, 2025 ಜನವರಿ 26ರಿಂದ 28ರ ವರೆಗೆ ’ಬಿಂಬ-ಪ್ರತಿಬಿಂಬ’ ಎಂಬ ಮೂರು ದಿನಗಳ ಸವಸತಿ ಕಲಿಕಾ ಕಮ್ಮಟವನ್ನು ನಡೆಸಿತು. ಅದರಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಲು ಬಂದ 91 ಅಭ್ಯರ್ಥಿಗಳಲ್ಲಿ, ಮೂರು-ನಾಲ್ಕು ಹಂತಗಳಲ್ಲಿ ಕಠಿಣ ಪರಿಶೀಲನೆಯ ಫಲವಾಗಿ ಒದಗಿದ 14 ಜನ ಉತ್ತಮ ಕನ್ನಡ ಅನುವಾದಕರು ಭಾಗವಹಿಸಿದ್ದರು. ವಿವಿಧ ಪ್ರಕಾಶಕರು ಮಕ್ಕಳಿಗಾಗಿ ಪ್ರಕಟಿಸಿದ ಕೃತಿಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸುವ ನಿರ್ದಿಷ್ಟ ಉದ್ದೇಶದಿಂದ, ಪರಸ್ಪರ ಸಮಾಲೋಚನೆಯ ಮೂಲಕ ನಮ್ಮ ಸಾಮರ್ಥ್ಯವನ್ನು ವಿಸ್ತಾರಗೊಳಿಸಿಕೊಳ್ಳುವುದು ಈ ಕಲಿಕಾ ಕಮ್ಮಟದ ಉದ್ದೇಶವಾಗಿತ್ತು.

ಎಂ.ಅಬ್ದುಲ್ ರೆಹಮಾನ್ ಪಾಷ, ತೇಜಸ್ವಿ ಶಿವಾನಂದ್, ಜಿ.ಎನ್.ಮೋಹನ್ ಮತ್ತು ಶ್ರೀಜಾ ವಿ.ಎನ್. ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಶಿಬಿರದ ವಿವಿಧ ಗೋಷ್ಠಿಗಳಲ್ಲಿ, ಮಕ್ಕಳಿಗಾಗಿ ಪುಸ್ತಕ ಬರೆಯುವುದು ಹೇಗೆ, ಪ್ರಚಲಿತ ವಿದ್ಯಮಾನಗಳನ್ನು ಮಕ್ಕಳಿಗಾಗಿ ಪ್ರಸ್ತುತಪಡಿಸುವುದು ಹೇಗೆ, ಭಾಷೆ ಹೇಗಿರಬೇಕು, ಚಿತ್ರಗಳನ್ನು ಹೇಗೆ ಯೋಜಿಸಬೇಕು, ಒಟ್ಟಾರೆ ವಿನ್ಯಾಸ ಹೇಗಿರಬೇಕು ಎಂಬ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ ಸಹಿತವಾದ ಚರ್ಚೆ ಇತ್ತು.

ನಂತರ, ಅನುವಾದ ಕಲೆಯ ಕುರಿತು ಪಿಪಿಟಿ ಆಧಾರಿತ ವಿಷಯ ಮಂಡನೆ, ಕಿರು ಅಭ್ಯಾಸಗಳು ಇದ್ದವು. ಇದರಲ್ಲಿ ಕನ್ನಡ ಭಾಷೆಯ ವೈಶಿಷ್ಠ್ಯ, ಪದಕೋಶ, ಲೇಖನ ಚಿಹ್ನೆಗಳು ಇತ್ಯಾದಿಗಳ ಕಲಿಕೆ ಇದ್ದವು. ಇದರ ಜೊತೆ ಮಕ್ಕಳ ಪುಸ್ತಕಗಳ ಪ್ರಕಟನೆ ಮತ್ತು ವಿತರಣೆಯ ಕುರಿತ ವಾಣಿಜ್ಯ ಪರಿಚಯವನ್ನೂ ಭಾಗಿಗಳಿಗೆ ನೀಡಲಾಯಿತು.

WhatsApp Image 2025 11 08 at 11.14.27 AM2

ಮಕ್ಕಳ ಕೃತಿಗಳ ಲೇಖಕರು/ಅನುವಾದಕರೂ ಆದ ಚತುರಾ ರಾವ್ ಮತ್ತು ನಾಗೇಶ್ ಹೆಗ್ಡೆಯವರೊಂದಿಗೆ ಮುಕ್ತ ಸಂವಾದವಿತ್ತು. ಇದರಲ್ಲಿ ಮಕ್ಕಳ ಸಾಹಿತ್ಯದ ಸ್ವರೂಪ, ಪುಸ್ತಕಗಳ ವಿನ್ಯಾಸ, ಅವುಗಳಲ್ಲಿರುವ ಚಿತ್ರಗಳು ಮತ್ತು ಪಠ್ಯದ ನಡುವಿನ ಸಂಯೋಜನೆ, ಮಕ್ಕಳ ಸಾಹಿತ್ಯದ ಅನುವಾದದ ವಿಶಿಷ್ಟ ತಂತ್ರಗಳು ಇತ್ಯಾದಿ ವಿಷಯಗಳ ಕುರಿತು ಸಕ್ರಿಯ ಸಂವಾದವಿತ್ತು.

ಶಿಬಿರದ ಉದ್ದಕ್ಕೂ ಸುಮಾರು ನೂರರಷ್ಟು ಆಯ್ದ ಮಕ್ಕಳ ಪುಸ್ತಕಗಳನ್ನು ಭಾಗಿಗಳ ಅಧ್ಯಯನಕ್ಕಾಗಿ ತೆರೆದಿಡಲಾಗಿತ್ತು. ಆ ಪುಸ್ತಕಗಳಿಂದಲೇ ಅವರು ಮುಂದೆ ತಾವು ಅನುವಾದಿಸಬೇಕಾದ ಒಂದು ಪುಸ್ತಕವನ್ನು ಆಯ್ದುಕೊಳ್ಳಬೇಕಾಗಿತ್ತು. ಈ ಆಯ್ಕೆಯ ಪ್ರಕ್ರಿಯೂ ಶಿಬಿರದ ಕಲಿಕೆಯ ಒಂದು ಪ್ರಮುಖ ಭಾಗವಾಗಿತ್ತು.

ಪರಾಗ್ ಸಂಸ್ಥೆಯ ಮುಖ್ಯಸ್ಥರಾರ ಲಕ್ಷಿ ಕರುಣಾಕರನ್ ಮತ್ತು ಶಿಸ್ತು ಮತ್ತು ಶ್ರಮದ ಪ್ರತೀಕವಾದ ಅವರ ಯುವ ತಂಡದ ವಿವೇಕ್ ವಿ.ಜಿ., ತುಹಿನಾ ಶರ್ಮಾ, ವಿ.ಎನ್.ಕುಮಾರ್ ಅರ್ಜುನನ್ ಮತ್ತು ಬಹುರೂಪಿಯ ಶ್ರೀಜಾ ಅವರ ಸಂಘಟನೆ ಅಪೂರ್ವವಾಗಿತ್ತು.

ಮುಂದುವರೆದ ಶಿಬಿರ

ಶಿಬಿರದ ಫಲಶ್ರುತಿಯಾಗಿ, ಪ್ರತಿಯೊಬ್ಬ ಭಾಗಿಯೂ ತಾನು ಅನುವಾದಿಸಲು ಬಯಸಿದ ಒಂದು ಮಕ್ಕಳ ಪುಸ್ತಕವನ್ನು ಆಯ್ದುಕೊಂಡರು. ಅಷ್ಟು ಪುಸ್ತಕಗಳಲ್ಲಿ ಅದನ್ನೇ ಆಯ್ದುಕೊಂಡಿದ್ದಕ್ಕೆ ಅನುವಾದಕರು ತಮ್ಮ ಸಮರ್ಥನೆಯನ್ನು ನೀಡಬೇಕಾಗಿತ್ತು. ನಂತರ ಚಿಕ್ಕ ಗುಂಪುಗಳಲ್ಲಿ ಭಾಗಿಗಳು ತಮ್ಮ ಪುಸ್ತಕದ ವಸ್ತು, ವಿನ್ಯಾಸ, ಭಾಷೆ ಮತ್ತು ತಾವು ಅದನ್ನು ಅನುವಾದಿಸಲು ಅನುಸರಿಸುವ ವಿಧಾನ ಇತ್ಯಾದಿಗಳ ಪರಸ್ಪರ ಚರ್ಚಿಸಬೇಕಾಗಿತ್ತು. ತಮ್ಮ ಗುಂಪಿನ ವರದಿಯನ್ನು ಸಂಪನ್ಮೂಲ ವ್ಯಕ್ತಿಗಳ ಸಮ್ಮುಖದಲ್ಲಿ ಇಡೀ ಗುಂಪಿಗೆ ಒಪ್ಪಿಸಬೇಕಾಗಿತ್ತು. ಈ ಎಲ್ಲಾ ಚಟುವಟಿಕೆಗಳ ಮೂಲಕ ಅನುವಾದಕರ ಕೌಶಲವು ಹೆಚ್ಚು ಹೆಚ್ಚು ಹರಿತಗೊಳ್ಳುತ್ತಿತ್ತು.

ಅದರ ಅಧ್ಯಯನಕ್ಕೂ ಶಿಬಿರದಲ್ಲಿ ವಿಶಿಷ್ಟ ಚಟುವಟಿಕೆಗಳನ್ನು ನಡೆಸಲಾಗಿತ್ತು. ಹಾಗೆಯೇ, ಎಂ.ಅಬ್ದುಲ್ ರೆಹಮಾನ್ ಪಾಷ, ತೇಜಸ್ವಿ ಶಿವಾನಂದ್, ಜಿ.ಎನ್.ಮೋಹನ್ – ಈ ಮೂರು ಜನರನ್ನು ಮಾರ್ಗದರ್ಶಕರು ಎಂದು ಗುರುತಿಸಿ, ಭಾಗಿಗಳನ್ನು ಅವರ ಜೊತೆ ಕೆಲಸ ಮಾಡುವಂತೆ ನಿಯೋಜಿಸಲಾಯಿತು. ಅವರೊಂದಿಗೆ ನಿರಂತರ ಸಮಾಲೋಚನೆಯಲ್ಲಿದ್ದು, ಮುಂದಿನ ಆರು ವಾರಗಳ ಒಳಗೆ ಅದನ್ನು ಕನ್ನಡಕ್ಕೆ ಅನುವಾದಿಸಿ, ಮುದ್ರಣಕ್ಕೆ ಸಜ್ಜು ಮಾಡಿಕೊಡಬೇಕು ಎಂಬುದು ಗುರಿಯಾಗಿತ್ತು. ಅದನ್ನು ಅನುವಾದಕರು ಸಮರ್ಥವಾಗಿ ಸಾಧಿಸಿದರು. ಅದರ ಫಲಶ್ರುತಿಯೇ ಓದುಗರ ಕೈಯಲ್ಲಿರುವ ಈ 13 ಉತ್ಕೃಷ್ಟ ಮಕ್ಕಳ ಪುಸ್ತಕಗಳು.

WhatsApp Image 2025 11 08 at 11.14.27 AM3
ಪುಸ್ತಕಮೂಲ ಲೇಖಕರುಅನುವಾದಕರು
ಬೂ! ನನ್ನ ತಂಗಿ ಇಲ್ಲವಾದಾಗರಿಚಾ ಝಾಶೃಂಗ ಜಿ ವಿ
ಅಪ್ಪುಕುಟ್ಟನನ್ನು ತೂಗುವುದು ಹೇಗೆ?
ಇಂದು ಹರಿಕುಮಾರ್ಅನಿತಾ ಪ್ರಿಯಕಾರಿಣಿ ಕಲ್ಲೆ
ಮೀನು ಸಾರು
ರಿಚಾ ಝಾ ಮತ್ತು ಸುಮಂತ ಡೇನಾಗಮಣಿ ಎಸ್ ಎನ್
ಅಯ್ಯೋ ಕಕ್ಕ…!ತೇಜಸ್ವಿನಿ ಆಪ್ಟೆ-ರಾಮ್ ಸುಜಾತಾ ಪದ್ಮನಾಭನ್ಕನ್ಸೆಪ್ಟಾ ಫೆರ್ನಾಂಡಿಸ್
ಚಿಟ್ಟಿ ಎಂಬ ನಾಯಿ ಮತ್ತವಳ ಕಾಡಿನ ತೋಟಸೆರೋವಿ ಗಾಯತ್ರಿ
ನದಿಯ ಹುಲಿಏಡ್ರಿಯನ್ ಪಿಂಡರ್ಅಪೂರ್ವ ಜಿ ಎ
ಒಂದು ಬಕೆಟ್ಟಿನಲ್ಲಿ ಸಮುದ್ರಆವೇಹಿ-ಅಬಾಕಸ್ ಕಥೆಕಿರಣ್ ಭಟ್
ಕಟ್ ಪೀಸ್ ಕುಮಾರಇಂದು ಹರಿಕುಮಾರ್ಮೆಹಬೂಬ್ ಮಠದ
ಆದಿಲ್ ಮಾತಾಡಿದರೆ ಪದಗಳು ಕುಣಿಯುತ್ತವೆಲಾವಣ್ಯ ಕಾರ್ತಿಕ್ಗಿರೀಶ್ ಜಕಾಪುರೆ
ಪಯಣಿಸುವ ಬೀಜಗಳುಲಾವಣ್ಯ ಕಾರ್ತಿಕ್ಶ್ರೀಹರ್ಷದೇವನ
ಶಾಲೆಯಲ್ಲಿ ನನ್ನಜ್ಜರಿಚಾ ಝಾಗಿರೀಶ್ ಬಾಬು ಎನ್
ಅಮ್ಮ ಮತ್ತು ನಾನು
ಮಮತ ನೈನಿಕುಸುಮ ಪಟೇಲ್
ನನ್ನ ಹೆಸ್ರೇ ಸಿನ್ನಮಾನ್ವಿಕಾಸ್ ಪ್ರಕಾಶ್ ಜೋಶಿಮಧು ವೈ ಎನ್

ಪರಾಗ್ ಮತ್ತು ಬಹುರೂಪಿ ಜೋಡಿಗೆ ಮುಂದೆ ಕನ್ನಡದಲ್ಲಿ ಮಕ್ಕಳ ಪುಸ್ತಕಗಳನ್ನು ರಚಿಸುವ ಕುರಿತು ಕಮ್ಮಟವನ್ನು ನಡೆಸುವ ಯೋಜನೆಯೂ ಇದೆ. ಇದರಿಂದ ಕನ್ನಡ ಮಕ್ಕಳ ಸಾಹಿತ್ಯ ಲೋಕಕ್ಕೆ ಪ್ರಯೋಜನವಾಗಲಿ.

“ನಿಮಗೆ ಓದಲು ಇಷ್ಟವಿಲ್ಲವೆಂದಾರೆ, ನಿಮಗೆ ಇನ್ನೂ ಸರಿಯಾದ ಪುಸ್ತಕ ಸಿಕ್ಕಿಲ್ಲ ಎಂದರ್ಥ” – ಜೆ.ಕೆ.ರೌಲಿಂಗ್

WhatsApp Image 2025 11 17 at 4.13.46 PM
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ!

ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು. ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು....

ಅಲ್ಲಮನ ಅನನ್ಯ ಪದಪ್ರಯೋಗಗಳು | ನಡೆದಡೆ ನುಡಿದಡೆ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ…

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ!...

ಅವಳ ಕಣ್ಣೋಟ | ‘ಗಾಂಧಾರಿ’: ಕಣ್ಣು ಕಳೆದುಕೊಂಡವಳು, ಕುರುಡಳಂತೆ ನಟಿಸಿದವಳು

ಮಕ್ಕಳ ಕಳ್ಳಸಾಗಣೆಯ ಜಾಲವನ್ನು ಚಿತ್ರದ ಕೇಂದ್ರ ಸಮಸ್ಯೆಯಾಗಿ ಇಟ್ಟಿರುವುದು ಮಹತ್ವದ ಸಂಗತಿ....