ನಮ್ಮ ಸಮಾಜದಲ್ಲಿ ಮಹಿಳೆಯನ್ನು ಸಹಜವಾಗಿಯೇ ಮೃದು, ಕರುಣಾಮಯಿ ಮತ್ತು ಹಿಂಸೆಯಿಂದ ದೂರವಿರುವ ವ್ಯಕ್ತಿಯಂತೆ ನೋಡುವ ಮನೋಭಾವವಿದೆ. ಆದರೆ ವಾಸ್ತವದಲ್ಲಿ ಅಪರಾಧವು ಲಿಂಗವನ್ನು ನೋಡಿ ನಡೆಯುವುದಿಲ್ಲ. ಅಪರಾಧ ಮಾಡುವ ಸಾಮರ್ಥ್ಯವೂ, ಅದಕ್ಕೆ ಹೊಣೆಗಾರಿಕೆಯೂ ಮಾನವನದ್ದು; ಅದು ಮಹಿಳೆ ಅಥವಾ ಪುರುಷ ಎಂಬ ಗುರುತಿನದ್ದಲ್ಲ.
ಇತ್ತೀಚೆಗೆ ಪುಣೆಯಲ್ಲಿ ನಡೆದ ಕೇತನ್ ಅಗರವಾಲ್ ಹತ್ಯಾಕಾಂಡ ಮತ್ತೊಮ್ಮೆ ಇಡೀ ದೇಶವನ್ನು ಚರ್ಚೆಗೆ ಒಡ್ಡಿದೆ. ಇನ್ನಾರು ತಿಂಗಳಲ್ಲಿ ಮದುವೆಯಾಗಬೇಕಿದ್ದ 20ರ ಯುವತಿ ಶಿಯಾ ಗೋಯಲ್ ತನ್ನ ಪ್ರಿಯಕರನೊಂದಿಗೆ ಷಡ್ಯಂತ್ರ ರಚಿಸಿ ಅಮಾಯಕ ಕೇತನ್ ಅಗರವಾಲನನ್ನು ಲೋಹಾಗಡ್ ಕೋಟೆ ಮೇಲಿಂದ ಕಮರಿಗೆ ತಳ್ಳಿ ಕೊಂದಿದ್ದಾಳೆ. ಇದೇ ತರಹ 2025 ಮೇ ತಿಂಗಳಲ್ಲಿ ಹನಿಮೂನ್ ಗೆಂದು ಮೇಘಾಲಯಕ್ಕೆ ತೆರಳಿದ್ದ ಸೋನಮ್ ರಘುವಂಶಿ ತನ್ನ ಪತಿ ರಾಜಾ ರಘುವಂಶಿಯನ್ನು ಪ್ರೇಮಿ ಹಾಗೂ ಬಾಡಿಗೆ ಹಂತಕರನ್ನು ಬಳಸಿಕೊಂಡು ಹತ್ಯೆಗೈದ ಆಘಾತಕಾರಿ ಸುದ್ದಿ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈಗ ಮತ್ತೊಮ್ಮೆ ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ.
ತಕ್ಷಣಕ್ಕೆ ನಾವೆಲ್ಲ ಕೇಳಿಕೊಂಡ ಪ್ರಶ್ನೆ – “ಮದುವೆ ಇಷ್ಟವಿಲ್ಲದಿದ್ದರೆ ಬೇಡ ಎನ್ನಬಹುದಿತ್ತಲ್ಲ, ಯಾವ ತಪ್ಪೂ ಇಲ್ಲದ ಅಮಾಯಕ ಯುವಕರನ್ನು ಕೊಲ್ಲಬೇಕೇಕೇ? ಹೊತ್ತು ಹೆತ್ತು ಬೆಳೆಸಿದ ಇನ್ಯಾರದೋ ಮಗನನ್ನು ತಮ್ಮ ಸ್ವಾರ್ಥಕ್ಕಾಗಿ ಕೊಲ್ಲುವುದು ಎಲ್ಲಿಯ ನ್ಯಾಯ? ಕಾನೂನಿನ ಭಯವೂ ಇಲ್ಲವೇ ಇವರಿಗೆ ?”
ಸೋನಮ್ ರಘುವಂಶಿ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡರೂ, ಎಲ್ಲಾ ಸಾಕ್ಷಿಗಳು ಅವಳೇ ಮಾಸ್ಟರ್ ಮೈಂಡ್ ಎಂದು ಸಾರಿ ಸಾರಿ ಹೇಳಿದರೂ, ಮೇಘಾಲಯ ಪೊಲೀಸರು ಒಂದು ಎಳೆಯನ್ನೂ ಬಿಡದೇ ಅತ್ಯಂತ ಕ್ಷಮತೆಯಿಂದ ಈ ಕೇಸನ್ನು ನಿಭಾಯಿಸಿದ್ದರೂ ಹನ್ನೊಂದು ತಿಂಗಳ ಜೈಲುವಾಸದಿಂದ ಆಕೆಗೆ ಜಾಮೀನು ಸಿಕ್ಕಿತು. ಅಪರಾಧ ಮಾಡದೇ ಇರುವ ಎಷ್ಟೋ ಜನ ಜೈಲಲ್ಲಿ ಟ್ರಯಲೂ ಇಲ್ಲದೇ ಕೊಳೆಯುತ್ತಿದ್ದಾರೆ. ಅವರಿಗೆ ಸಿಗದ ಜಾಮೀನು ಇಂತಹ ಘೋರ ಹತ್ಯೆಯಂತಹ ಅಪರಾಧ ಮಾಡಿರುವವರಿಗೆ ಸುಲಭವಾಗಿ ಸಿಗುತ್ತದೆ ಈ ದೇಶದಲ್ಲಿ. ಹಣಬಲವಿರಬೇಕು. ದೊಡ್ಡ ದೊಡ್ಡ ಮಂತ್ರಿ ಮಹೋದಯರ ಪ್ರಭಾವವಲಯದಲ್ಲಿರಬೇಕು.. ಬಹುಶಃ ಇದೇ ಧೈರ್ಯ ಶಿಯಾ ಗೋಯಲ್ ಅಂತಹವರ ಆತ್ಮಬಲವನ್ನು ಹೆಚ್ಚಿಸಿರಬಹುದು!
ಸೋನಮ್, ಮುಸ್ಕಾನ್, ಸಿಯಾ ಗೋಯಲ್ ಹೀಗೆ ಇತ್ತೀಚಿನ ದಿನಗಳಲ್ಲಿ ಕೆಲವು ಮಹಿಳೆಯರು ಭಾಗಿಯಾಗಿರುವ ಗಂಭೀರ ಅಪರಾಧ ಪ್ರಕರಣಗಳು ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ. ಈ ಚರ್ಚೆಗಳ ನಡುವೆ ಒಂದು ಮೂಲಭೂತ ಪ್ರಶ್ನೆ ಮತ್ತೆ ಮತ್ತೆ ಕೇಳಿಬರುತ್ತಿದೆ —ಕಾನೂನಿನ ಮುಂದೆ ಮಹಿಳೆ ಮತ್ತು ಪುರುಷ ಇಬ್ಬರನ್ನೂ ಸಮಾನವಾಗಿ ನೋಡಲಾಗುತ್ತಿದೆಯೇ? ಅಪರಾಧದ ವಿಚಾರದಲ್ಲಿ ಲಿಂಗತ್ವಕ್ಕೆ ಯಾವುದೇ ವಿಶೇಷ ಸ್ಥಾನವಿದೆಯೇ ?
ಪ್ರಜಾಪ್ರಭುತ್ವದ ಸಮಾಜದಲ್ಲಿ ಕಾನೂನಿನ ಶ್ರೇಷ್ಠತೆಯೇ ನ್ಯಾಯದ ಆಧಾರ. ಭಾರತೀಯ ಸಂವಿಧಾನದ 14ನೇ ವಿಧಿಯು ಎಲ್ಲರೂ ಕಾನೂನಿನ ಮುಂದೆ ಸಮಾನರು ಎಂದು ಸ್ಪಷ್ಟವಾಗಿ ಹೇಳುತ್ತದೆ. ಆದ್ದರಿಂದ ಅಪರಾಧದ ಮೌಲ್ಯಮಾಪನದಲ್ಲಿ ಆರೋಪಿ ಮಹಿಳೆಯೇ ಅಥವಾ ಪುರುಷನೇ ಎಂಬ ಪ್ರಶ್ನೆ ಮುಖ್ಯವಾಗಬಾರದು. ಮುಖ್ಯವಾಗಬೇಕಾದದ್ದು ಅಪರಾಧದ ಸ್ವರೂಪ, ಉದ್ದೇಶ, ಸಾಕ್ಷ್ಯ ಮತ್ತು ಅದರ ಪರಿಣಾಮ.
ನಮ್ಮ ಸಮಾಜದಲ್ಲಿ ಮಹಿಳೆಯನ್ನು ಸಹಜವಾಗಿಯೇ ಮೃದು, ಕರುಣಾಮಯಿ ಮತ್ತು ಹಿಂಸೆಯಿಂದ ದೂರವಿರುವ ವ್ಯಕ್ತಿಯಂತೆ ನೋಡುವ ಮನೋಭಾವವಿದೆ. ಆದರೆ ವಾಸ್ತವದಲ್ಲಿ ಅಪರಾಧವು ಲಿಂಗವನ್ನು ನೋಡಿ ನಡೆಯುವುದಿಲ್ಲ. ಅಪರಾಧ ಮಾಡುವ ಸಾಮರ್ಥ್ಯವೂ, ಅದಕ್ಕೆ ಹೊಣೆಗಾರಿಕೆಯೂ ಮಾನವನದ್ದು; ಅದು ಮಹಿಳೆ ಅಥವಾ ಪುರುಷ ಎಂಬ ಗುರುತಿನದ್ದಲ್ಲ.

ಇದರರ್ಥ ಮಹಿಳೆಯರಿಗೆ ರಕ್ಷಣೆ ನೀಡುವ ಕಾನೂನುಗಳು ಅಗತ್ಯವಿಲ್ಲ ಎಂಬುದಲ್ಲ. ಐತಿಹಾಸಿಕವಾಗಿ ಮಹಿಳೆಯರು ಅನೇಕ ರೀತಿಯ ದೌರ್ಜನ್ಯ, ಶೋಷಣೆ ಮತ್ತು ತಾರತಮ್ಯಕ್ಕೆ ಒಳಗಾಗಿರುವುದರಿಂದ ಅವರ ರಕ್ಷಣೆಗಾಗಿ ವಿಶೇಷ ಕಾನೂನುಗಳು ರೂಪುಗೊಂಡಿವೆ. ಆದರೆ ರಕ್ಷಣೆಯ ಕಾನೂನುಗಳು ಮತ್ತು ಅಪರಾಧಕ್ಕೆ ಹೊಣೆಗಾರಿಕೆ ಎಂಬ ಎರಡು ವಿಷಯಗಳನ್ನು ಬೆರೆಸಬಾರದು. ಒಬ್ಬ ಮಹಿಳೆ ಗಂಭೀರ ಅಪರಾಧ ಎಸಗಿದ್ದಾರೆ ಎಂದು ನ್ಯಾಯಾಲಯದಲ್ಲಿ ಸಾಬೀತಾದರೆ, ಆಕೆಗೆ ಕೇವಲ ಮಹಿಳೆ ಎಂಬ ಕಾರಣಕ್ಕೆ ಕಡಿಮೆ ಶಿಕ್ಷೆ ದೊರೆಯಬಾರದು.
ಆಘಾತವೆನಿಸಿದ್ದು ಟ್ವಿಟರ್ ಹ್ಯಾಂಡಲಿನಲ್ಲಿ ಅನೇಕ ಯುವತಿಯರು ಶಿಯಾ ಗೋಯಲ್‍ಳನ್ನು ಸಮರ್ಥಿಸಿಕೊಂಡಿರುವುದು. ಅನ್ಯಾಯವಾಗಿ ಒಬ್ಬ ವ್ಯಕ್ತಿಯ ಜೀವ ತೆಗೆಯುವ ಹಕ್ಕು ನಮಗಿದೆಯೇ ? ಕೇತನ್ ಅಗರವಾಲ್ ಸಾವನ್ನು ಸಂಭ್ರಮಿಸುವ ಮಟ್ಟಕ್ಕೆ ನಮ್ಮ ಹೃದಯ ಕಲ್ಲಾಗಿಹೋಗಿದೆಯೇ ? ಮನುಷ್ಯತ್ವ ಸತ್ತುಹೋಗಿದೆಯೇ ?
ಖ್ಯಾತ ಬರಹಗಾರ್ತಿ ಶೋಭಾ ಡೇ “ದಿ ಪ್ರಿಂಟ್” ಗೆ ಜಾಳು ಜಾಳಾದ ಬೇಜವಾಬ್ದಾರಿಯಿಂದ ಬರೆದ ಲೇಖನದಿಂದ ಸಾಕಷ್ಟು ಟ್ರೋಲ್‍ಗೆ ಒಳಗಾಗಿದ್ದಾರೆ. “ಪುಣೆ ಬದನಾಮ್ ಹುವಾ ಡಾರ್ಲಿಂಗ್ ತೇರೆ ಲಿಯೇ” ಎಂದು ಉಡಾಫೆಯಿಂದ ಆರಂಭಿಸುವ ಶೋಭಾ ಡೇ ಶಿಯಾ ಹತ್ಯೆ ಮಾಡಿದ್ದು ಸರಿಯೆನ್ನುವ ನೆರೆಟಿವ್ ಸೃಷ್ಟಿಸಿ ಉಗಿಸಿಕೊಳ್ಳುತ್ತಿದ್ದಾರೆ. ಕೇತನ್‍ನ ಬೊಕ್ಕತಲೆ, ಬೋಳು ತಲೆ, ಪ್ಯಾಚ್ ಹಚ್ಚುತ್ತಿದ್ದ, ಸಿಯಾ ದಷ್ಟಪುಷ್ಟ (ಹಟ್ಟಾಕಟ್ಟಾ) ಚೇತನ್‍ನನ್ನು ಇಷ್ಟಪಟ್ಟದ್ದರಲ್ಲಿ ಇವನನ್ನು ಸಾಯಿಸಿದ್ದರಲ್ಲಿ ಆಕೆಯ ತಪ್ಪೇನಿಲ್ಲ, ತಪ್ಪು ಆಕೆಯ ತಂದೆ ತಾಯಿಗಳದ್ದು ಎನ್ನುವಂತೆ ಸಮರ್ಥಿಸುವ ಶೋಭಾ ಅವರಿಗೆ ಯುವತಿಯ ಕ್ರಿಮಿನಲ್ ಮೈಂಡ್, ಒಂದು ಜೀವವನ್ನು ಕೊಂದ ಬಗ್ಗೆ ಏನೂ ಅನಿಸುವುದಿಲ್ಲ. ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ಬಗ್ಗೆ ಕನಿಕರವೂ ಇಲ್ಲ. ಇದು ನಿಜಕ್ಕೂ ಅಪಾಯಕಾರಿ.
ಖ್ಯಾತ ಲೇಖಕ ಚೇತನ್ ಭಗತ್ ವಾದ ಭಿನ್ನವಾಗಿದೆ. ₹10 ಕೋಟಿಯಿಂದ ₹500 ಕೋಟಿವರೆಗಿನ ಸಣ್ಣ ಮತ್ತು ಮಧ್ಯಮ ಉದ್ಯಮ (SME) ಹೊಂದಿರುವ ಅನೇಕ ಕುಟುಂಬಗಳು ಹೇಗೆ ತಮ್ಮನ್ನು “ಸಣ್ಣ ಸಂಸ್ಥಾನದ ಅರಸರು’ ಎಂದು ಭಾವಿಸುತ್ತವೆ. ಅವರಿಗೆ ಮಕ್ಕಳು ಕುಟುಂಬದ ಆಸ್ತಿಯ ಅಥವಾ ವ್ಯವಹಾರದ ಭಾಗ, ಮದುವೆಯನ್ನು ಕುಟುಂಬದ ಪ್ರತಿಷ್ಠೆ, ಜಾತಿ, ಆರ್ಥಿಕ ಲಾಭ ಮತ್ತು ವ್ಯಾಪಾರ ಸಂಬಂಧಗಳ ದೃಷ್ಟಿಯಿಂದ ನೋಡಲಾಗುತ್ತದೆ; ಮಕ್ಕಳ ವೈಯಕ್ತಿಕ ಇಚ್ಛೆಗೆ ಕಡಿಮೆ ಸ್ಥಾನ ಸಿಗುತ್ತದೆ. ಪೋಷಕರ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಕುಟುಂಬಕ್ಕೆ ಅವಮಾನ ಎಂದು ಮಕ್ಕಳಿಗೆ ಭಾವನೆ ಮೂಡಿಸಲಾಗುತ್ತದೆ ಎಂದು ಟೀಕಿಸಿದ್ದಾರೆ. 17 ಕೋಟಿ ರೂಪಾಯಿಗೆ ಅರಮನೆಯನ್ನೇ ಮದುವೆಗಾಗಿ ಬುಕ್ ಮಾಡಿರುವ ಕುಟುಂಬ ಸಮಾಜಕ್ಕೆ ಏನು ಸಂದೇಶ ಕೊಡುತ್ತಿದೆ? ತಮ್ಮ ಶ್ರೀಮಂತಿಕೆಯನ್ನು ಮೆರೆಯುವುದೇ ? ಪಾರ್ಟಿ ಪಬ್, ಶಾಪಿಂಗ್ ಎಂದು ಮಕ್ಕಳಿಗೆ ಕೈತುಂಬ (ಲಕ್ಷದಲ್ಲಿ) ಪಾಕೆಟ್ ಮನಿ ಕೊಟ್ಟು ಬೆಳೆಸುವ ಈ ಶ್ರೀಮಂತ ಪೋಷಕರಿಗೆ ಮಕ್ಕಳ ಸುತ್ತಲಿನ ಸ್ನೇಹಿತರ ವಲಯ ಯಾವುದು? ಅವರು ಏನನ್ನು ಓದುತ್ತಾರೆ? ಸಾಮಾಜಿಕ ಜಾಲತಾಣ, ಸಿನೇಮ, ವೆಬ್ ಸಿರೀಸ್ ಅಲ್ಲಿ ಯಾವುದನ್ನು ನೋಡುತ್ತಿದ್ದಾರ. ಬದುಕಿನ ಬಗ್ಗೆ ಅವರ ಕನಸುಗಳೇನು ಎಂಬುದರತ್ತಲೂ ಒಂದು ಕಣ್ಣಿರಬೇಕು ಅಲ್ಲವೇ?
ಮುಸ್ಕಾನ್ ಸೋನಿ ಎಂಬುವಳು All India Dental Students & Surgeons Association (AIDSA)ಯ ಮಧ್ಯಪ್ರದೇಶ ಘಟಕದ ಖಜಾಂಚಿಯಾಗಿದ್ದು, ಕೇತನ್ ಅಗರ್ವಾಲ್‍ನ ಹತ್ಯೆಯನ್ನು “he deserve it” ಎಂದು ಸಮರ್ಥಿಸಿದ್ದಳು. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ “I Hate Man” ಎಂಬ ಹ್ಯಾಶ್‌ಟ್ಯಾಗ್ ಬಳಸಿ, ಶಿಯಾ ಗೋಯಲ್ ಹತ್ಯೆ ಮಾಡಿದ ಪ್ರಕರಣವನ್ನು ಸಮರ್ಥಿಸಿದ್ದಲ್ಲದೇ ಕೇತನ್ ಅಗರವಾಲ್ ಅವರು ಬೋಳು ತಲೆಯವರಾಗಿದ್ದ ಕಾರಣ ಅವರಿಗೆ “ಇದೇ ಶಿಕ್ಷೆ ಸರಿ” ಎಂಬ ಅರ್ಥದಲ್ಲಿ ಅವರ ಸಾವನ್ನು ಹಾಸ್ಯ ಮಾಡಿದ್ದಳು. ರೀತಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಂಡ ಹಿನ್ನೆಲೆಯಲ್ಲಿ ಸಂಘದ ಸದಸ್ಯತ್ವದಿಂದ ಐದು ವರ್ಷಗಳ ಕಾಲ ಅಮಾನತುಗೊಂಡಿದ್ದಾರೆ ಎಂದು ವರದಿಯಾಗಿದೆ.

ಇದೊಂದು ಉದಾಹರಣೆ ಅಷ್ಟೇ. ಹೀಗೇ ಹತ್ಯೆಯನ್ನು ಸಮರ್ಥಿಸುತ್ತಿರುವವರು ಒಂದೆಡೆಯಾದರೆ, ತಮಗೆ ಮದುವೆಯೇ ಬೇಡ ಎನ್ನುವ ಯುವಕರು ಹೆಚ್ಚಾಗುತ್ತಿದ್ದಾರೆ. ರೀಲ್ಸ್ ಮೀಮ್ ಗಳ ಮೂಲಕ ಹೇಗೆ ಹೆಣ್ಣುಗಳು ಮಾರಿಯರಾಗಿದ್ದಾರೆ, ಪೂತನಾ, ತಾಡಕಾ ಎಂದೆಲ್ಲ ರಾಕ್ಷಸಿಯರಿಗೆ ಹೋಲಿಸತೊಡಗಿದ್ದಾರೆ. ಕೆಲವು ಚಾನೆಲ್ಲುಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿವೆ. ಕೆಲವರು ಹೆಣ್ಣುಮಕ್ಕಳ ತಂದೆ ತಾಯಿಯರೇ ಈ ಕೃತ್ಯಕ್ಕೆ ಕಾರಣರು. ಎಷ್ಟೇ ಆಧುನಿಕ ಮುಕ್ತ ವಾತಾವರಣದಲ್ಲಿ ತಮ್ಮ ಹೆಣ್ಣುಮಕ್ಕಳನ್ನು ಬೆಳೆಸಿದರೂ ಮದುವೆಯ ಪ್ರಸ್ತಾಪ ಬಂದಾಗ ಅವರು ತಮ್ಮ ಪ್ರತಿಷ್ಠೆ, ಆಸ್ತಿ ಅಂತಸ್ತುಗಳ ಲೆಕ್ಕಾಚಾರದಲ್ಲಿ ಮದುವೆಯನ್ನು ನಿರ್ಧರಿಸುತ್ತಾರೆ. ಮನೆತನದ ಗೌರವದ ಪ್ರಶ್ನೆ ಮುಂದಾಗುತ್ತದೆ. ತಮ್ಮ ಹೆಣ್ಣು ಮಗಳು ಇನ್ನೊಂದು ಸಂಬಂಧದಲ್ಲಿ ಇದ್ದಾಳೆನ್ನುವ ವಾಸ್ತವ ಗೊತ್ತಿದ್ದೂ..” ಮದುವೆಯಾದರೆ ತಾನೇ ಸರಿ ಹೋಗ್ತಾಳೆ” ಎನ್ನುವ ಉಡಾಫೆಯ ಮನಸ್ಥಿತಿಯೂ ಕಾರಣವಾಗಿದೆ.
ವಿದ್ಯೆ, ಸಂಪತ್ತು, ಹೊರಗಿನ ಸಾಮಾಜಿಕ ಬದುಕು, ಸ್ವಚ್ಛಂದತೆ, ಐಷೋ ಆರಾಮ ಜೀವನವನ್ನು ಧಾರಾಳವಾಗಿ ಪಡೆದಿರುವ ಈ ವರ್ಗದ ಯುವತಿಯರೇಕೆ ತಮ್ಮ ಪೋಷಕರನ್ನು ಎದುರು ಹಾಕಿಕೊಳ್ಳಲು ಇಷ್ಟಪಡುವುದಿಲ್ಲ? ಈ ಮದುವೆ ಬೇಡ ಎನ್ನಲು ಧೈರ್ಯ ಮಾಡುವುದಿಲ್ಲವೇಕೆ? ಮನೆಯಲ್ಲಿ ಸುಳ್ಳು ಹೇಳಿ ಬಾಯ್‍ಫ್ರೆಂಡ್ ಜೊತೆ ಸುತ್ತಾಡುವ ಊರೂರು ಅಲೆದಾಡುವ ಯುವತಿಯರಿಗೆ ಮನೆಯಲ್ಲಿ – “ ಮದುವೆ ಬೇಡ” ಎಂದು ಹೇಳುವ ಧೈರ್ಯವಿಲ್ಲವೇ?”
ಇತ್ತೀಚೆಗೆ ನಾನು ನನ್ನ ತಂಗಿಯ ಕುಟುಂಬ ಮಸ್ಸೂರಿಗೆ ಹೋಗಿದ್ದೆವು. ನಾವು ಮಾಲ್ ರೋಡಿನಲ್ಲಿ ಹಾಗೇ ಮಾತಾಡಿಕೊಂಡು ಹೋಗುತ್ತಿರುವ ವೇಳೆ ಇಬ್ಬರು ಯುವತಿಯರು ಓಡಿ ಬಂದು “ನಿಮ್ಮೊಂದಿಗೆ ಫೋಟೋ ತಗೋಬಹುದಾ?” ಎನ್ನುತ್ತ ಒಪ್ಪಿಗೆಗೂ ಅವಕಾಶ ನೀಡದೇ ನಮ್ಮೆಲ್ಲರನ್ನು ನಿಲ್ಲಿಸಿ ಫೋಟೋ ತಗೊಂಡರು. ನಾನು ಬಿಡದೇ ನಿಲ್ಲಿಸಿ ಕಾರಣ ಕೇಳಿದೆ. ಮನೆಯಲ್ಲಿ ಗೆಳತಿಯ ಮನೆಯವರೊಂದಿಗೆ ಟೂರ್ ಹೋಗಿದ್ದೇವೆ ಎಂದು ಸುಳ್ಳು ಹೇಳಿ ಬಂದಿದ್ದರು ಈ ಮೂವರು ಯುವತಿಯರು. ಅದರ ಸಾಕ್ಷಿಗಾಗಿ ನಮ್ಮೊಂದಿಗೆ ಫೋಟೋ ತಗೊಂಡು ತಮ್ಮ ಪೋಷಕರಿಗೆ ಕಳಿಸಿದ್ದಂತೆ. ಒಬ್ಬಳು ಆಂಧ್ರ, ಒಬ್ಬಳು ಮಹಾರಾಷ್ಟ್ರ, ಒಬ್ಬಳು, ಉತ್ತರಭಾರತದವಳು. ತುಸು ದೂರದಲ್ಲಿ ಅವರೊಂದಿಗೆ ಬಂದ ಮೂವರು ಯುವಕರಿದ್ದರು. ನಾನು ನನ್ನ ತಂಗಿ ತುಂಬಾ ತಲೆ ಕೆಡಿಸಿಕೊಂಡೆವು. ನಮ್ಮ ಫೋಟೋ ಯಾಕೆ ತಗೊಂಡ್ರು? ಏನಾದರೂ ಆದರೆ ನಮ್ಮನ್ನೆಲ್ಲ ಪೊಲೀಸರು ಹುಡುಕ್ತಾರೆ ಇತ್ಯಾದಿ… ಕೆಟ್ಟ ಕೆಟ್ಟ ಯೋಚನೆಗಳೇ ತುಂಬಿದ್ದವು ತಲೆಯೊಳಗೆ.
ಹೀಗಿದ್ದಾರೆ ಈಗಿನ ಯುವಕ ಯುವತಿಯರು. ಮಹಾ ಬುದ್ಧಿವಂತರು – ಧೈರ್ಯವಂತರಿದ್ದಾರೆ. ವಾಪಸ್ಸು ದೆಹರಾಡೂನಿನಿಂದ ಟ್ರೇನ್ ಹತ್ತುವಾಗಲೂ ಅವರೆಲ್ಲ ನಮ್ಮ ಜೊತೆಗೆ ಟ್ರೇನ್ ಹತ್ತಿದರು. ಬೈ ಬೈ ಹೇಳಿದರು. ಇವರೆಲ್ಲ ಮಧ್ಯಮ ವರ್ಗದ ಹುಡುಗ ಹುಡುಗಿಯರು. ಕಾಲೇಜು ಸೆಮಿಸ್ಟರ್ ಮುಗಿದ ಕಾರಣಕ್ಕೆ ಸುತ್ತಾಡಲು ಬಂದಿರಬಹುದು. ತಪ್ಪೇನಿಲ್ಲ, ಆದರೆ ಮನೆಯಲ್ಲಿ ಹೇಳಿದ ಸುಳ್ಳು, ಮನೆಯವರನ್ನು ನಂಬಿಸಲು ಮಾಡಿದ ತಂತ್ರ ಚಿಂತನೆಗೆ ಹಚ್ಚುತ್ತದಲ್ಲವೇ?
ಇಷ್ಟೆಲ್ಲ ಧೈರ್ಯವಿರುವ ಯುವ ಪೀಳಿಗೆಗೆ ಅದರಲ್ಲೂ ಸೋನಮ್, ಶಿಯಾರಂತಹ ಕೋಟ್ಯಾಧಿಪತಿಗಳ ಮಕ್ಕಳಿಗೆ ತಮ್ಮ ಪೋಷಕರ ಎದುರು ಮಾತಾಡುವಷ್ಟೂ ಧೈರ್ಯವಿಲ್ಲವೇ ?
ಶಿಯಾಳ ಗೆಳೆಯ ಚೇತನ್ ಓಡಿಹೋಗೋಣ ಅಂದಾಗ ಆಕೆ ಒಪ್ಪುವುದಿಲ್ಲ. ಮನೆಯಲ್ಲಿ ಹೇಳಲೂ ಧೈರ್ಯವಿಲ್ಲ. ಆಕೆ ಹೇಳುತ್ತಾಳೆ, “ನನಗೆ ಈ ಮದುವೆ ಇಲ್ಲ ಎನ್ನುವುದಕ್ಕಿಂತ ಕೇತನ್‍ನನ್ನು ಕೊಲ್ಲುವುದು ಸುಲಭ” ಅಂತ! ಯಾವ ಮನಸ್ಥಿತಿ ಇದು? ಇಂತಹ ದುಷ್ಟ ಕ್ರಿಮಿನಲ್ ಬುದ್ಧಿಯ ಮೂಲ ಯಾವುದು? ಕಾನೂನಿನ ಬಗ್ಗೆ ಧೈರ್ಯವೇ? ಹಣ ಬಲದ ಧೈರ್ಯವೇ? ಅಥವಾ ಅತಿಯಾದ ವೈಯಕ್ತಿಕತೆಯೋ?
ಆಧುನಿಕ ಸಮಾಜದಲ್ಲಿ “ನನ್ನ ಜೀವನ, ನನ್ನ ಆಯ್ಕೆ” ಎಂಬ ಭಾವನೆ ಹೆಚ್ಚಾಗಿದೆ. ವೈಯಕ್ತಿಕ ಸ್ವಾತಂತ್ರ್ಯ ಮುಖ್ಯವಾದರೂ, ಅದು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಸಮತೋಲನದಲ್ಲಿರದಿದ್ದರೆ ಸಂಬಂಧಗಳಲ್ಲಿ ಸಂಘರ್ಷ ಹೆಚ್ಚಾಗಬಹುದು. ಅಪರಾಧಗಳು ಹೆಚ್ಚಾಗಬಹುದು. ರಾಜಾ ರಘುವಂಶಿ, ಕೇತನ್ ಅಗರ್ವಾಲರಂತೆ ಇನ್ನಷ್ಟು ಯುವಕರು ಬಲಿಯಾಗಬಹುದು.
ಅದೇ ರೀತಿ ಪುರುಷ ಅಪರಾಧಿಗಳೂ ಇದ್ದಾರೆ. ವರದಕ್ಷಿಣೆಯ ಹೆಸರಿನಲ್ಲಿ ಈಗಲೂ ಯುವತಿಯರು ಜೀವಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿಗಿನ ಭೋಪಾಲ್‍ನ ತ್ವಿಶಾ ಶರ್ಮ ಆತ್ಮಹತ್ಯೆ ಕೇಸು ನೆನಪಿರಬಹುದು. ಮಾಜಿ ಜಿಲ್ಲಾ ನ್ಯಾಯಾಧೀಶೆಯಾಗಿದ್ದ ಅತ್ತೆ ಗಿರಿಬಾಲಾ ಸಿಂಗ್ ಹಾಗೂ ವಕೀಲ ಪತಿ ಸಮರ್ಥ ಸಿಂಗ್ ಜೈಲಿನಲ್ಲಿದ್ದಾರೆ. ವರದಕ್ಷಿಣೆ ಕಿರುಕುಳದಲ್ಲಿ ತ್ವಿಶಾ ಅನುಮಾನಾಸ್ಪದವಾಗಿ ತೀರಿಕೊಂಡಿದ್ದಳು. ಈಗಲೂ ವಿಚಾರಣೆ ನಡೆಯುತ್ತಿದೆ ಅಪರಾಧ ಸಾಬೀತಾಗಿಲ್ಲ.

ತಾಯಿಯಲ್ಲಿ – “ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ” ಎಂದು ರೋಧಿಸಿದ್ದ ತ್ವಿಶಾ ಧೈರ್ಯಮಾಡಿ ಒಂದು ಬಸ್ಸೋ ರೈಲೋ ಹತ್ತಿ ವಾಪಸ್ಸು ದಿಲ್ಲಿಗೆ( ತವರಿಗೆ) ಯಾಕೆ ಬರಲಿಲ್ಲ? ಧೈರ್ಯವಿದ್ದಿಲ್ಲವೋ ಅಥವಾ ಮನೆತನದ ಮರ್ಯಾದೆಯ ಪ್ರಶ್ನೆಯೋ ಗೊತ್ತಿಲ್ಲ. ಇಂತಹ ಹಲವಾರು ಪ್ರಶ್ನೆಗಳು ಕಾಡುತ್ತವೆ. ಎಲ್ಲೋ ಸಾಮಾಜಿಕ ನೈತಿಕತೆ ಎಳೆ ತಪ್ಪುತ್ತಿದೆ. ಸಮಾಜ ಹಳಿ ತಪ್ಪಿದ ರೈಲಿನಂತಾಗುತ್ತಿದೆ. ಘಟನೆಗಳು ಮಾತ್ರ ನಡೆಯುತ್ತಲೇ ಇರುತ್ತವೆ.
ಒಬ್ಬ ಪುರುಷ ಕೊಲೆ ಮಾಡಿದರೆ ಅವನನ್ನು ನಿರ್ದಯ ಅಪರಾಧಿ ಎಂದು ಕರೆಯಲಾಗುತ್ತದೆ. ಅದೇ ಕೃತ್ಯವನ್ನು ಒಬ್ಬ ಮಹಿಳೆ ಮಾಡಿದರೆ, ಅವಳ ಹಿನ್ನೆಲೆ, ಮಾನಸಿಕ ಸ್ಥಿತಿ, ಕುಟುಂಬದ ಪರಿಸ್ಥಿತಿ, ಸಾಮಾಜಿಕ ಒತ್ತಡ, ಹೀಗೆ ಅನೇಕ ಕಾರಣಗಳನ್ನು ಹುಡುಕುವ ಪ್ರಯತ್ನ ಆರಂಭವಾಗುತ್ತದೆ. ಇದೇ ನಮ್ಮ ಸಮಾಜ ಮತ್ತು ಕೆಲವೊಮ್ಮೆ ನ್ಯಾಯದ ಚರ್ಚೆಯಲ್ಲೂ ಕಾಣಿಸಿಕೊಳ್ಳುವ ದೊಡ್ಡ ವೈರುಧ್ಯ.
ಹಿಂಸೆಗೆ ಒಳಗಾದ ಪುರುಷರೇ ಮುಂಚೂಣಿಯಲ್ಲಿದ್ದಾರೆ. ಹೆಂಡತಿ ಹಾಗೂ ಹೆಂಡತಿಯ ಕುಟುಂಬದ ಕಿರುಕುಳ ತಾಳಲಾರದೇ ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಶ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಣ್ಮುಂದೆಯೇ ಇದೆ. ಆಗ ವೈವಾಹಿಕ ಕಾನೂನುಗಳ ದುರುಪಯೋಗ, ಪುರುಷರ ಮಾನಸಿಕ ಆರೋಗ್ಯ, ಕುಟುಂಬ ನ್ಯಾಯಾಲಯಗಳ ಕಾರ್ಯವೈಖರಿ, ಲಿಂಗ ತಟಸ್ಥ ಕಾನೂನುಗಳ ಅಗತ್ಯತೆಯ ಕುರಿತು ವ್ಯಾಫಕ ಚರ್ಚೆ ನಡೆದಿತ್ತು. ಸಮಾಜವು ಮಹಿಳೆಯನ್ನು ಸದಾ “ಬಲಿಪಶು” ಎಂಬ ಏಕೈಕ ಚೌಕಟ್ಟಿನಲ್ಲಿ ನೋಡುವುದನ್ನು ನಿಲ್ಲಿಸಬೇಕು. ಮಹಿಳೆ ನ್ಯಾಯಕ್ಕಾಗಿ ಹೋರಾಡುವ ಶಕ್ತಿಯೂ ಹೊಂದಿದ್ದಾಳೆ; ಹಾಗೆಯೇ ಕಾನೂನು ಉಲ್ಲಂಘಿಸಿದರೆ ಅದರ ಪರಿಣಾಮವನ್ನು ಎದುರಿಸುವ ಹೊಣೆಗಾರಿಕೆಯನ್ನೂ ಹೊಂದಿದ್ದಾಳೆ.
ಯಾವುದೇ ಗಂಭೀರ ಅಪರಾಧದಲ್ಲಿ ಆರೋಪಿ ಮಹಿಳೆಯಾಗಿರಲಿ ಅಥವಾ ಪುರುಷನಾಗಿರಲಿ, ನ್ಯಾಯಾಲಯದ ತೀರ್ಪು ಒಂದೇ ಪ್ರಶ್ನೆಗೆ ಉತ್ತರಿಸಬೇಕು. ಅಪರಾಧ ಸಾಬೀತಾಗಿದೆಯೇ ? ಉತ್ತರ “ಹೌದು” ಎಂದಾದರೆ, ಶಿಕ್ಷೆಯೂ ಅಪರಾಧದ ಗಂಭೀರತೆಗೆ ತಕ್ಕದ್ದಾಗಿರಬೇಕು. ಲಿಂಗದ ಆಧಾರದ ಮೇಲೆ ಮೃದುತ್ವ ತೋರಿಸುವುದು ನ್ಯಾಯವಲ್ಲ; ಅದು ಪಕ್ಷಪಾತ.
ಒಂದು ನಾಗರಿಕ ಸಮಾಜದ ಶಕ್ತಿ ಅದರ ನ್ಯಾಯ ವ್ಯವಸ್ಥೆಯಲ್ಲಿದೆ. ಆ ನ್ಯಾಯ ವ್ಯವಸ್ಥೆ ನಿಜವಾಗಿಯೂ ವಿಶ್ವಾಸಾರ್ಹವಾಗಬೇಕಾದರೆ “ಅಪರಾಧಕ್ಕೆ ಲಿಂಗವಿಲ್ಲ; ನ್ಯಾಯಕ್ಕೂ ತಾರತಮ್ಯ ಇರಬಾರದು” ಎಂಬ ತತ್ವವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಮಾನ ಹಕ್ಕುಗಳ ಜೊತೆಗೆ ಸಮಾನ ಹೊಣೆಗಾರಿಕೆಯೂ ಇರಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಂವಿಧಾನದ ಆಶಯವು ಕೇವಲ ಘೋಷಣೆಯಾಗಿ ಉಳಿಯದೆ, ನ್ಯಾಯಾಂಗದ ಪ್ರತಿಯೊಂದು ತೀರ್ಪಿನಲ್ಲೂ ಪ್ರತಿಫಲಿಸಬೇಕು.
ಜಾಮೀನು ಮತ್ತು ಶಿಕ್ಷೆ ಎರಡೂ ಬೇರೆ ಬೇರೆ ವಿಷಯಗಳು ಎಂಬುದನ್ನು ಕೂಡ ನಾವು ಅರ್ಥಮಾಡಿಕೊಳ್ಳಬೇಕು. ಜಾಮೀನು ಎಂದರೆ ನಿರ್ದೋಷಿತ್ವದ ಪ್ರಮಾಣಪತ್ರವಲ್ಲ; ಶಿಕ್ಷೆ ಎಂದರೆ ಅಪರಾಧ ಸಾಬೀತಾದ ನಂತರದ ಕಾನೂನು ಕ್ರಮ. ಹೀಗಾಗಿ ಪ್ರತಿಯೊಂದು ಪ್ರಕರಣದಲ್ಲೂ ನ್ಯಾಯಾಲಯವು ಸಾಕ್ಷ್ಯಾಧಾರಗಳು ಮತ್ತು ಕಾನೂನಿನ ನಿಯಮಗಳ ಆಧಾರದ ಮೇಲೆ ತೀರ್ಮಾನಿಸಬೇಕು.
ಇದನ್ನೂ ಓದಿ ದಿಲ್ಲಿ ಮಾತು | ಹೋರಾಟವನ್ನೇ ಉಸಿರಾಡುವ ಜೀವಂತ ಲೋಕ ‘ಜಂತರ್ ಮಂತರ್’
ಕಾನೂನಿನ ತಕ್ಕಡಿಯಲ್ಲಿ ಮಹಿಳೆ, ಪುರುಷ ಎಂಬ ಎರಡು ತಕ್ಕಡಿಗಳಿರಬಾರದು. ಅಲ್ಲಿ ಒಂದೇ ತೂಕ ಇರಬೇಕು ಅಪರಾಧ ಮತ್ತು ಸಾಕ್ಷ್ಯ. ನ್ಯಾಯದ ಕಣ್ಣು ಕಟ್ಟಿರುವುದಕ್ಕೆ ಕಾರಣ ಅದು ಯಾರ ಲಿಂಗ, ಜಾತಿ, ಧರ್ಮ ಅಥವಾ ಸ್ಥಾನಮಾನವನ್ನು ನೋಡಬಾರದು ಎಂಬುದು. ಆ ತತ್ವವೇ ಪ್ರಜಾಪ್ರಭುತ್ವದ ಜೀವಾಳ.
ಅದೇ ರೀತಿ ಪುರುಷ ಎಂಬ ಕಾರಣಕ್ಕೆ ಹೆಚ್ಚು ಕಠಿಣ ಶಿಕ್ಷೆ ವಿಧಿಸುವುದೂ ನ್ಯಾಯವಲ್ಲ. ನ್ಯಾಯದ ತಕ್ಕಡಿಯು ಲಿಂಗದ ಆಧಾರದ ಮೇಲೆ ಅಲ್ಲ, ಅಪರಾಧದ ಆಧಾರದ ಮೇಲೆ ತೂಗಬೇಕು. ಇಲ್ಲವಾದರೆ ನ್ಯಾಯದ ಮೇಲಿನ ಜನರ ನಂಬಿಕೆಯೂ ಕುಗ್ಗುತ್ತದೆ.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ



