ದಿಲ್ಲಿ ಮಾತು | ಹೋರಾಟವನ್ನೇ ಉಸಿರಾಡುವ ಜೀವಂತ ಲೋಕ ‘ಜಂತರ್‌ ಮಂತರ್’

Date:

ದೆಹಲಿಯ ಜಂತರ್ ಮಂತರ್ ಗೆ ತನ್ನದೇ ಆದ ಅಸ್ಮಿತೆ ಇದೆ, ಸುದೀರ್ಘ ಇತಿಹಾಸವಿದೆ. ಜಂತರ ಮಂತರ್ ಎಂಬುದು ಬರೀ ಗೋಡೆ, ಕಾಂಪೌಂಡು, ಫುಟ್ಪಾತು, ಗಿಡ ಮರಗಳ ನೆರಳಿರುವ ಮತ್ತು ನಾಲ್ಕಾರು ರಸ್ತೆಗಳು ಸೇರುವ ಚೌಕವೂ ಅಲ್ಲ, ಓಣಿಯೂ ಅಲ್ಲ. ಘೋಷಣೆಗಳನ್ನು, ಸಾವಿರ ಮಾತುಗಳನ್ನು , ಎದೆಯ ನೋವುಗಳನ್ನು ಒಣಗಿಸಿಟ್ಟುಕೊಂಡ ಬ್ಯಾನರುಗಳಲ್ಲ; ಅಂಗಿಯ ಮೇಲೊಂದು ಸಂಖ್ಯೆ ಹೊತ್ತ ಕೈದಿಯೂ ಅಲ್ಲ. ಜಂತರ್ ಮಂತರ್ ದೇಶದ ಜೀವಧಾತು, ಉಸಿರಾಡುವ ಜೀವಂತ ಮನುಷ್ಯಲೋಕ.

- Advertisement -

ಜೂನ್ 6, 2026ರಂದು ದೆಹಲಿಯ ಜಂತರ್‌–ಮಂತರ್ ನಲ್ಲಿ “ಕಾಕ್ರೋಚ್ ಜನತಾ ಪಾರ್ಟಿ” (CJP) ಬ್ಯಾನರ್ ಅಡಿಯಲ್ಲಿ ನಡೆದ ಪ್ರತಿಭಟನೆ ದೇಶದ ಗಮನ ಸೆಳೆಯಿತು. ಕೇವಲ ಇಂಟರ್ ನೆಟ್ ಗೆ ಸೀಮಿತವಾಗಿದ್ದ ಈ ಗುಂಪಿನ ಯುವಕರು ಮೊದಲ ಬಾರಿಗೆ ಬೀದಿಗಿಳಿದು ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು, ಪರೀಕ್ಷಾ ಪತ್ರಿಕೆ ಸೋರಿಕೆ, ನಿರುದ್ಯೋಗ ಮತ್ತು ಯುವಕರ ಭವಿಷ್ಯದ ಬಗ್ಗೆ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಸಾವಿರಾರು ಯುವಕರು ಧ್ವನಿಯೆತ್ತಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸಭಾಧ್ಯಕ್ಷರ ತವರಲ್ಲೇ ಬಡವರು ಅತಂತ್ರ: ʼಹಕ್ಕುಪತ್ರʼವಿದ್ದರೂ ಸ್ವಂತ ಸೂರಿಲ್ಲ,...

ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡಿರುವುದು ಈ ಸಂತ್ರಸ್ತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಜಾಪ್ರಭುತ್ವದ ಅತ್ಯುನ್ನತ ಪೀಠದಲ್ಲಿರುವ ಅವರು, ತಮ್ಮ ಸ್ವಕ್ಷೇತ್ರದ ಈ ದಶಕದ ಸಮಸ್ಯೆಗೆ ತಕ್ಷಣ...

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಕಾಕ್ರೋಚ್ ಜನತಾ ಪಾರ್ಟಿ (CJP) ಇಂಟರ್ನೆಟ್ ಮೀಮ್‌ನಿಂದ ತೊಡಗಿ ಜಂತರ್ ಮಂತರ್‌ನ ಬೃಹತ್ ಪ್ರತಿಭಟನೆಯಾಗಿ ರೂಪಾಂತರಗೊಂಡಿರುವುದು, ಭಾರತದ ಶೈಕ್ಷಣಿಕ ವ್ಯವಸ್ಥೆ ಮತ್ತು ಸಾಂಸ್ಥಿಕ ಹೊಣೆಗಾರಿಕೆಯ ವಿರುದ್ಧ ಯುವಜನರಲ್ಲಿರುವ ತೀವ್ರ ಆಕ್ರೋಶವನ್ನು ಎತ್ತಿ ತೋರಿಸುತ್ತದೆ.

ಉದ್ಯೋಗವಿಲ್ಲದ ಯುವಕರು ಮತ್ತು ಹೋರಾಟಗಾರರನ್ನು “ಕಾಕ್ರೋಚ್ (ಜಿರಳೆಗಳು) ಮತ್ತು “ಪರಾವಲಂಬಿಗಳು” ಎಂದು ಕರೆದಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ಆಂದೋಲನ ಪ್ರಾರಂಭವಾಯಿತು. ಈ ಅಪಮಾನವನ್ನೇ ಒಂದು ಅಸ್ತ್ರವನ್ನಾಗಿ ಬಳಸಿಕೊಂಡ ಬೋಸ್ಟನ್ ವಿಶ್ವವಿದ್ಯಾಲಯದ ಪದವೀಧರ ಅಭಿಜೀತ್ ದಿಪ್ಕೆ, “ಸೋಮಾರಿಗಳು ಮತ್ತು ನಿರುದ್ಯೋಗಿಗಳ ಧ್ವನಿ” ಎಂಬ ಟ್ಯಾಗ್‌ಲೈನ್‌ ಅಡಿಯಲ್ಲಿ ಈ ಹಾಸ್ಯಭರಿತ ರಾಜಕೀಯ ವೇದಿಕೆಯನ್ನು (CJP) ಆರಂಭಿಸಿದರು. ಯುವ ಪೀಳಿಗೆಯ ಹಾಸ್ಯ ಪ್ರಜ್ಞೆ (Gen-Z humor) ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ದೇಶದ ಆರ್ಥಿಕ ಮತ್ತು ಉದ್ಯೋಗದ ಸಮಸ್ಯೆಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ, ಇದರ ಇನ್‌ಸ್ಟಾಗ್ರಾಮ್ ಖಾತೆಯು ಲಕ್ಷಾಂತರ ಫಾಲೋವರ್ಸ್‌ಗಳನ್ನು ಗಳಿಸಿತು.

Cokroch
ನೀಟ್‌ ಅಕ್ರಮದ ವಿರುದ್ಧ ಜೂ. 6ರಂದು ನಡೆದ ಕಾಕ್ರೋಚ್‌ ಪಕ್ಷದ ಪ್ರತಿಭಟನೆ

ಕಾಕ್ರೋಚ್ ಎಂಬ ಹೆಸರೇ ಈ ಚಳವಳಿಯ ರಾಜಕೀಯ ರೂಪಕ. ಎಷ್ಟೇ ತುಳಿದರೂ ಬದುಕುಳಿಯುವ ಕೀಟದಂತೆ, ವ್ಯವಸ್ಥೆಯಿಂದ ಕಡೆಗಣಿಸಲ್ಪಟ್ಟ ಯುವಜನರು ತಮ್ಮ ಅಸ್ತಿತ್ವ ಮತ್ತು ಪ್ರತಿರೋಧವನ್ನು ಈ ಹೆಸರಿನ ಮೂಲಕ ವ್ಯಕ್ತಪಡಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯ, ವಿಡಂಬನೆಯಾಗಿ ಹುಟ್ಟಿದ ಈ ಚಳವಳಿ, ಮೊದಲ ಬಾರಿಗೆ ಬೀದಿಗಿಳಿದು ತನ್ನ ಶಕ್ತಿಯನ್ನು ಪ್ರದರ್ಶಿಸಿತು. ಇದೊಂದು ಅಭೂತಪೂರ್ವ ಘಟನೆಯಾಗಿ ಜನರ ನೆನಪಲ್ಲಿರುತ್ತದೆ. ಕಾಕ್ರೋಚ್ ಮುಖವಾಡಗಳು, ವ್ಯಂಗ್ಯಭರಿತ ಘೋಷಣೆಗಳು ಮತ್ತು ಶಾಂತಿಯುತ ಪ್ರತಿಭಟನೆಯ ಮೂಲಕ ಯುವಕರು ತಮ್ಮ ಅಸಮಾಧಾನವನ್ನು ದಾಖಲಿಸಿದರು. ಶಿಕ್ಷಣ ಸಚಿವರ ರಾಜೀನಾಮೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು.

ದೆಹಲಿಯ ಜಂತರ್ ಮಂತರ್ ಗೆ ತನ್ನದೇ ಆದ ಅಸ್ಮಿತೆ ಇದೆ, ಸುದೀರ್ಘ ಇತಿಹಾಸವಿದೆ. ಜಂತರ ಮಂತರ್ ಎಂಬುದು ಬರಿ ಗೋಡೆ, ಕಂಪೌಂಡುಗಳ, ಫುಟ್ಪಾತು, ಗಿಡ ಮರಗಳ ನೆರಳಿರುವ ಮತ್ತು ನಾಲ್ಕಾರು ರಸ್ತೆಗಳು ಸೇರುವ ಚೌಕವೂ ಅಲ್ಲ, ಓಣಿಯೂ ಅಲ್ಲ. ಘೋಷಣೆಗಳನ್ನು, ಸಾವಿರ ಮಾತುಗಳನ್ನು , ಎದೆಯ ನೋವುಗಳನ್ನು ಒಣಗಿಸಿಟ್ಟುಕೊಂಡ ಬ್ಯಾನರುಗಳಲ್ಲ; ಅಂಗಿಯ ಮೇಲೊಂದು ಸಂಖ್ಯೆ ಹೊತ್ತ ಕೈದಿಯೂ ಅಲ್ಲ. ಜಂತರ್ ಮಂತರ್ ದೇಶದ ಜೀವಧಾತು, ಉಸಿರಾಡುವ ಜೀವಂತ ಮನುಷ್ಯಲೋಕ.

1724ರಲ್ಲಿ ಮಹಾರಾಜ ಸವಾಯಿ ಜಯಸಿಂಗ್ ದ್ವಿತೀಯ ನಿರ್ಮಿಸಿದ ಈ ಖಗೋಳ ವೀಕ್ಷಣಾಲಯವು ಮೂಲತಃ ಗ್ರಹ-ನಕ್ಷತ್ರಗಳ ಚಲನೆಯನ್ನು ಅಧ್ಯಯನ ಮಾಡಲು ನಿರ್ಮಿಸಲ್ಪಟ್ಟಿತು. ಆದರೆ ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅದು ಮತ್ತೊಂದು ಅರ್ಥವನ್ನು ಪಡೆದುಕೊಂಡಿತು. ಆಡಳಿತದ ಕಿವಿಗೆ ತಮ್ಮ ಧ್ವನಿಯನ್ನು ತಲುಪಿಸಲು ಬಯಸಿದ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು, ನಿವೃತ್ತ ಯೋಧರು, ಅಂಗವಿಕಲರ ಸಂಘಗಳು ಮತ್ತು ವಿವಿಧ ಹೋರಾಟ ಸಮಿತಿಗಳು ಜಂತರ್ ಮಂತರ್ ಅನ್ನು ತಮ್ಮ ಪ್ರತಿಭಟನೆಯ ತಾಣವನ್ನಾಗಿ ಮಾಡಿಕೊಂಡವು.

Jantar Mantar Delhi 27 05 2005

ಅಭಿವ್ಯಕ್ತಿ ಸ್ವಾತಂತ್ರ್ಯ, ’ವೈಚಾರಿಕತೆ’ಗಳ ಮೇಲೆ ನಡೆಯುತ್ತಿರುವ ದಾಳಿಗಳು, ಪ್ರಶ್ನೆ ಮಾಡುವುದೇ ’ರಾಷ್ಟ್ರದ್ರೋಹ’ ಎಂದು ಬಿಂಬಿಸುವುದೇ ಫ್ಯಾಸಿಸಂನ ಲಕ್ಷಣ. ಸರಕಾರಿ ಹುದ್ದೆಯಲ್ಲಿರುವವರ ಬಾಯಿಂದ “ಅವರ ತಲೆ ಕಡಿಯುತ್ತೇವೆ, ಇವರ ಕೈ ಕಡಿಯುತ್ತೇವೆ “ಎನ್ನುವ ಹೇಳಿಕೆಗಳು, ಸುಪಾರಿಗಳು, ಯಾರನ್ನು ಬೇಕಾದರೂ ಕೊಂದರೂ ನ್ಯಾಯಾಂಗ, ಶಾಸಕಾಂಗಗಳೇನೂ ಮಾಡಲಾರವೆಂಬ ಆಘಾತಕರ ಆತಂಕದ ಸಮಯದಲ್ಲಿ ಚಳವಳಿಗಳೇ ನಮ್ಮನ್ನು ಬದುಕಿಸಬೇಕಿವೆ.

ಈ ದೇಶದಲ್ಲಿ ಹಸಿವು ಬಡತನ, ನಿರುದ್ಯೋಗ, ಬೆಲೆ ಏರಿಕೆ, ದಿನೆ ದಿನೇ ಹೆಚ್ಚುತ್ತಿರುವ ಬಾಲಾಪರಾಧಗಳು, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಆರ್ಥಿಕ ಅಸಮಾನತೆ, ಕೋಮುವಾದ, ಪ್ರಗತಿಪರ, ಚಿಂತಕರ, ಹೋರಾಟಗಾರರ ಮೇಲೆ ನಡೆವ ಹಲ್ಲೆಗಳು, ಹತ್ಯೆಗಳು ಈ ದೇಶದ ನಾಗರಿಕನನ್ನು ನರಳಿಸುವ ವ್ಯಾಧಿಯಾಗಿರುವ ಇಂದಿನ ದುರಿತ ಕಾಲದಲ್ಲಿ ಎರಡು ದಶಕಗಳಿಂದಲೂ ಜನಸಾಮಾನ್ಯರ ಆಕ್ರೋಶಕ್ಕೆ, ಪ್ರತಿಭಟನೆಯ ಒಕ್ಕೊರಲಿಗೆ ವೇದಿಕೆ ಒದಗಿಸಿದ್ದ ಜಂತರ್ ಮಂತರ್ ಎಂಬ ಪ್ರಜಾಪ್ರಭುತ್ವದ ಕೊರಳನ್ನು ಕೊಯ್ಯಲು ಹಸಿರು ಪೀಠ ಮುಂದಾಗಿತ್ತು 2017ರಲ್ಲಿ.

ರಾಷ್ಟ್ರದ ರಾಜಧಾನಿ ದೆಹಲಿಯ ಹೃದಯ ಭಾಗದಲ್ಲಿ ಶಬ್ದ ಮಾಲಿನ್ಯಕ್ಕೆ ಕಾರಣವಾಗಿರುವ ಐತಿಹಾಸಿಕ ಜಂತರ್‌ ಮಂತರ್‌ ರಸ್ತೆಯಲ್ಲಿ ನಡೆಯುವ ಎಲ್ಲಾ ಬಗೆಯ ಧರಣಿ, ಪ್ರತಿಭಟನೆಗಳನ್ನು ತತ್‌ಕ್ಷಣದಿಂದ ನಿಲ್ಲಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಅಕ್ಟೋಬರ್ ತಿಂಗಳಲ್ಲಿ ದೆಹಲಿ ಸರ್ಕಾರಕ್ಕೆ ಆದೇಶಿಸಿತ್ತು. ಈ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲ ಪ್ರತಿಭಟನೆಗಳಿಂದಾಗಿ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಸೇರಿದಂತೆ ಪರಿಸರ ಸಂರಕ್ಷಣೆಯ ಕಾನೂನುಗಳ ಸಾರಾ ಸಗಟು ಉಲ್ಲಂಘನೆಯಾಗಿವೆ ಎಂದು ಹಸಿರು ಪೀಠ ಹೇಳಿತ್ತು.

ಜಂತರ್ ಮಂತರ್ ರಸ್ತೆಯ ಉದ್ದಕ್ಕೂ ಕಂಡು ಬರುವ ಎಲ್ಲ ತಾತ್ಕಾಲಿಕ ರಚನೆಗಳನ್ನು, ಲೌಡ್‌ ಸ್ಪೀಕರ್‌ಗಳನ್ನು ಈ ಕೂಡಲೇ ತೆರವುಗೊಳಿಸಬೇಕು ಎಂದು ನ್ಯಾಯಮೂರ್ತಿ ಆರ್‌ ಎಸ್‌ ರಾಠೊಡ್‌ ನೇತೃತ್ವದ ಹಸಿರು ಹಸಿರು ಪೀಠ ದೆಹಲಿ ಮುನಿಸಿಪಲ್‌ ಕೌನ್ಸಿಲ್‌ (ಎನ್ಎಂಡಿಸಿ)ಗೆ ಸೂಚಿಸಿತು. ಅಕ್ಟೋಬರ್ ತಿಂಗಳಿನಲ್ಲಿ ಜಂತರ್ ಮಂತರ್ ಮೇಲೆ ನಿಷೇಧ ಹೇರಲಾಗಿತ್ತು. ಆದರೆ 2018 ಜುಲೈ 23ರಂದು ಸುಪ್ರೀಂ ಕೋರ್ಟ್ ಈ ನಿಷೇಧವನ್ನು ರದ್ದುಪಡಿಸಿತು. ಪ್ರತಿಭಟಿಸುವ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು ಎಂದು ಹೇಳಿ ಸಂಪೂರ್ಣ ನಿಷೇಧವು ಸ್ವೀಕಾರಾರ್ಹವಲ್ಲ ಎಂದು ತೀರ್ಪು ನೀಡಿತು.

Chief Minister Siddaramaiah
ಒಕ್ಕೂಟ ಸರ್ಕಾರದ ತೆರಿಗೆ ಅನ್ಯಾಯದ ವಿರುದ್ಧ ಕರ್ನಾಟಕ ಸರ್ಕಾರದ ಪ್ರತಿಭಟನೆ

1993ವರೆಗೂ ದಿಲ್ಲಿಯ ಬೋಟ್ ಕ್ಲಬ್ ಸಾರ್ವಜನಿಕ ಧರಣಿ, ಆಂದೋಲನ, ಪ್ರತಿಭಟನೆಗಳಿಗೆ ಆಶ್ರಯತಾಣವಾಗಿತ್ತು. ಅಯೋಧ್ಯಾ ವಿವಾದ ಸಂಬಂಧ ನಡೆದ ಪ್ರತಿಭಟನೆಗಳು ಮತ್ತು ರೈತರ ರ್ಯಾಲಿಗಳ ನಂತರ ಕೇಂದ್ರ ಸರ್ಕಾರ ಪ್ರತಿಭಟನಾ ಸ್ಥಳವನ್ನು ಜಂತರ್ ಮಂತರ್ ಗೆ ವರ್ಗಾಯಿಸಿತು. ಕಳೆದ 30 ವರ್ಷಗಳಿಂದ ನೂರಾರು ಪ್ರತಿಭಟನೆಗಳಿಗೆ ಜಂತರ್ ಮಂತರ್ ಸಾಕ್ಷಿಯಾಗಿದೆ.

1988 ರಲ್ಲಿ ಮಹಿಂದರ್ ಸಿಂಗ್ ತಿಖೈತ್ ಎಂಬ ಜಾಟ್ ರೈತ ಮುಖಂಡ ಸಾವಿರಾರು ಜನ ರೈತರೊಂದಿಗೆ ( ಐದು ಲಕ್ಷ !!) ದೆಹಲಿಯ ಬೋಟ್ ಕ್ಲಬ್ ಪ್ರತಿಭಟನಾ ಸ್ಥಳದಲ್ಲಿ ಧರಣಿ ಕುಳಿತಾಗ ಸುತ್ತಲಿನ ಪಾರ್ಲಿಮೆಂಟಿನ ಪ್ರದೇಶ ರಾಷ್ಟ್ರಪತಿ ಭವನದಿಂದ ಹಿಡಿದು ಪ್ರಧಾನ ಮಂತ್ರಿಯವರ ನಿವಾಸದವರೆಗಿನ ಜಾಗವನ್ನು ಮಲಿನಗೊಳಿಸಿದ್ದರಂತೆ. ಧರಣಿಯ ಜನ ಅಲ್ಲಿಯೇ ಅಡುಗೆ ಮಾಡಿಕೊಳ್ಳುವುದರಿಂದ ಹಿಡಿದು ತಮ್ಮ ಸ್ನಾನ, ಶೌಚ ಇತ್ಯಾದಿಗಳಿಂದ ಆಯಕಟ್ಟಿನ ಜಾಗವನ್ನೆಲ್ಲ ಆಕ್ರಮಿಸಿ ಗಲೀಜುಗೊಳಿಸಿದ್ದರು. ಅದನ್ನು ತಪ್ಪಿಸುವುದಕ್ಕಾಗಿಯೇ ಮುಂದೆ 1993ರಲ್ಲಿ ಬೋಟ್ ಕ್ಲಬ್ಬಿನಿಂದ ಜಂತರ್ ಮಂತರ್ ಗೆ ಪ್ರತಿಭಟನಾ ಸ್ಥಳವನ್ನು ವರ್ಗಾಯಿಸಲಾಯಿತು.

2007 ರಿಂದ ಮಚಿಂದರ್ ನಾಥ ಎಂಬುವರು – “ ರಾಷ್ಟೀಯ ಜೂತಾ ಮಾರೋ ಆಂದೋಲನ”ವನ್ನು ನಡೆಸಿದ್ದರು. ಅವರ ಹೋರಾಟ ಒಂದು ಸೀಮಿತ ಉದ್ಧೇಶಕ್ಕಾಗಿರದೇ , ಭೂ ಸಮಸ್ಯೆಯಿಂದ ಸರಕಾರಿ ಉದ್ಯೋಗದವರೆಗೆ, ಖಾಸಗಿ ಉದ್ಯೋಗದಿಂದ ಬಗೆಹರಿಯದ ಕಗ್ಗೊಲೆ, ಹತ್ಯೆಗಳಂಥ ಕೇಸುಗಳವರೆಗೂ ವಿಸ್ತರಿಸಿತ್ತು. ನೋಡಿ ಇಪ್ಪತ್ತು ವರ್ಷದ ಹಿಂದೆ “ ಭ್ರಷ್ಟಾಚಾರಕ್ಕೆ, ಭ್ರಷ್ಟರಿಗೆ ಜೂತಾಮಾರೋ” ಎನ್ನಬಹುದಾಗಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯ ಇವತ್ತಿಲ್ಲ! ಮಧುಸೂದನ್ ಬಿಶ್ವಾಸ್ ಎಂಬ ಯುವಕ ದೂರದ ಕೋಲ್ಕತ್ತಾದಿಂದ ಬಂದು ಇಲ್ಲಿ ಭೂಮಿಯ ಬಹುಭಾಗವನ್ನು ಆಕ್ರಮಿಸಿ ಮನುಕುಲಕ್ಕೆ ಮಾರಕವಾಗುತ್ತಿರುವ –ಪ್ಲಾಸ್ಟಿಕ್, ಥರ್ಮೊಕೋಲ್ ಇವುಗಳನ್ನು ನಿಷೇಧಿಸಲು ಕೋರಿ ಆಂದೋಲನ ನಡೆಸುತ್ತಿದ್ದ.

ನಿರ್ಭಯಾಳಿಗಾದ ಪಾಶವೀ ಕೃತ್ಯವನ್ನು ಖಂಡಿಸಿ ನಡೆಸಿದ ಪ್ರತಿಭಟನೆಯಿರಬಹುದು, ಮಹಾದಾಯಿ ವಿವಾದ, ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು, ಎಲ್ಲ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಸದಸ್ಯರು ನಡೆಸಿದ ಪ್ರತಿಭಟನೆ. ತಮಿಳುನಾಡಿನ ರೈತರು ತಮ್ಮ ಮೂತ್ರ ಕುಡಿದು ತೋರಿದ ಉಗ್ರ ಪ್ರತಿಭಟನೆ, ಇಡೀ ದೇಶವನ್ನೇ ಬೆಚ್ಚಿಬೀಳಿಸಿ ಜನಸಾಮಾನ್ಯರನ್ನು ಗೋಳಾಡಿಸಿ ನರಳಿಸಿದ ’ನೋಟು ಅಮಾನ್ಯಿಕರಣ’ ವನ್ನು ವಿರೋಧಿಸಿ ನಡೆದ ಪ್ರತಿಭಟನೆ.

ನಮ್ಮವರೇ ಆದ ಬೇಜವಾಡ ವಿಲ್ಸನ್ ಅವರು ಮೂರು ದಶಕಗಳಿಂದಲೂ ನಡೆಸುತ್ತಿರುವ ‘ಸಫಾಯಿ ಕರ್ಮಚಾರಿ ಆಂದೋಲನ’ ಇಂದು ದೇಶಾದ್ಯಂತ ಪ್ರಬಲ ಆಂದೋಲನವಾಗಿ ರೂಪುಗೊಂಡಿದೆ. ಮಲಹೊರುವ ಪದ್ದತಿ ನಿಷೇಧ ಕಾನೂನು ಜಾರಿಯಲ್ಲಿದ್ದರೂ ನಾವಿಂದು ’ಸ್ವಚ್ಚ ಭಾರತ್’ ಎಂದು ಮೆರೆಯುತ್ತಿರುವ ಹೊತ್ತಿನಲ್ಲಿ ಭಾರತದಲ್ಲಿ ಇನ್ನೂ ಮಲಹೊರುವ ಪದ್ದತಿ ಜೀವಂತವಾಗಿದೆ. ಮಲ ಹೊರುವವರ ಬದುಕನ್ನು ಬದಲಿಸಲು ಆಗಿಲ್ಲ. ಇದೇ ಜಂತರ್ ಮಂತರಿನಲ್ಲಿ ಆಂದೋಲನಕಾರರು ಮಲದ ಬುಟ್ಟಿಗಳನ್ನು ಸುಟ್ಟು ತಮ್ಮ ಆಂದೋಲನವನ್ನು ನಡೆಸಿದ್ದರು.

ಹೀಗೆ ಪಟ್ಟಿಮಾಡುತ್ತ ಹೋದರೆ ಈ ಪುಟವೂ ಸಾಕಾಗಲಾರದೇನೋ. ಹೀಗೆ ಎಲ್ಲ ಹೋರಾಟಗಳಿಗೆ ಜಂತರ್ ಮಂತರ್ ಮೂಕ ಸಾಕ್ಷಿಯಾಗಿದೆ. ಬರಿ ಜನಸಾಮಾನ್ಯರಷ್ಟೇ ಅಲ್ಲದೇ (NGO)ಎನ್ಜಿವೋಗಳಿಂದ ಹಿಡಿದು ರಾಜಕಾರಣಿಗಳವರೆಗೂ ಈ ಸ್ಥಳದಲ್ಲಿ ಆಂದೋಲನ ನಡೆಸಿದ್ದಾರೆ.

ದೇಶ ಅಂದರೆ ಬರಿ ಮಣ್ಣಲ್ಲ, ಉಸಿರಾಡುವ ಜೀವಿಸುವ ಮನುಷ್ಯರು ಎಂದು ತೆಲುಗು ಕವಿ ಗುರುಜಾಡ ಅಪ್ಪಾರಾವ್ ಹೇಳಿದ್ದರು ಅಲ್ಲವೇ ? ಹಾಗೆ ಈ ದೇಶದ ನಾನಾ ಕಡೆಗಳಿಂದ ಜನ ದೆಹಲಿಗೆ ಬಂದು ಆಳುವ ಸರಕಾರದೆದುರು ತಮ್ಮ ಅಸಹನೆ, ದೂರು, ಬೇಡಿಕೆಗಳನ್ನು ಸಲ್ಲಿಸದಿದ್ದರೆ ಮತ್ತೆಲ್ಲಿ ಹೇಳಿಕೊಳ್ಳಬೇಕು? ಮತ್ತು ಅಂಥ ಅವಕಾಶವನ್ನು ನಮ್ಮ ಸಂವಿಧಾನ ನಮಗೆ ಒದಗಿಸಿದೆ. ಪ್ರಜಾತಂತ್ರದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಮಾತಾಡುವ, ತನ್ನ ಅಭಿಪ್ರಾಯಗಳನ್ನು ವ್ಯಕ್ತಮಾಡುವ, ತನ್ನ ಆಹಾರವನ್ನು ಆಯ್ದುಕೊಳ್ಳುವ, ಸ್ವತಂತ್ರ ಭಾರತದಲ್ಲಿ ನೆಮ್ಮದಿಯಾಗಿ ಬದುಕುವ ಎಲ್ಲ ಹಕ್ಕುಗಳನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ಅದಕ್ಕೆ ಈ ದೇಶದ ಪ್ರತಿಯೊಬ್ಬನೂ ಹಕ್ಕುದಾರನು. ಕಾಡು ಮೇಡಿನಲ್ಲಿ ಬದುಕುವ ಪ್ರಾಣಿ ಪಕ್ಷಿ ಸಂಕುಲವೂ ತಮ್ಮ ಸಾತಂತ್ರ್ಯಕ್ಕೆ ಧಕ್ಕೆಬಾರದಂತೆ ಶಿಸ್ತುಬದ್ಧವಾಗಿಯೇ ಬದುಕುತ್ತವೆ.

Manipur protest
ಮಣಿಪುರದ ಜನಾಂಗೀಯ ಹತ್ಯೆ ವಿರೋಧಿಸಿ ನಡೆದ ಪ್ರತಿಭಟನೆ

ಒಂದು ಮರಕ್ಕೆ ಕಲ್ಲೆಸೆದರೂ ಪಾರ್ಲಿಮೆಂಟಿಗೆ ಕೇಳಿಸುವಷ್ಟು ಹತ್ತಿರವಿದ್ದುದೇ ಇಲ್ಲಿ ನಡೆಯುವ ಧರಣಿ , ಸತ್ಯಾಗ್ರಹಗಳನ್ನು ಅರ್ಥಪೂರ್ಣವಾಗಿಸಿದೆ. ಚಳವಳಿಗಾರರ ಕನಸುಗಳನ್ನು ಜೀವಂತವಾಗಿಟ್ಟಿದೆ, ದೆಹಲಿಯ ರಣಗುಡುವ ಬಿಸಿಲು, ಬೇಸಿಗೆಯ ಉರಿವ ಸೂರ್ಯನನ್ನು ಲೆಕ್ಕಿಸದೇ ಜನರು ಇಲ್ಲಿ ಬಂದು ಉಪವಾಸ ಸತ್ಯಾಗ್ರಹ, ಧರಣಿ ನಡೆಸುತ್ತಾರೆ, ತಮ್ಮ ಅಳಲು ಸರಕಾರಕ್ಕೆ ತಲುಪುತ್ತದೆ ಒಂದಿನ ಎಂಬ ಕನಸನ್ನು ದಿನವೂ ಕಾಣುತ್ತಾರೆ.

ಹಿಂದೆ ಈ ಚಳವಳಿಗಾರರ ಮನೆಯೆಂದರೆ ಈ ಜಂತರ್ ಮಂತರ್ ನ ಫುಟಪಾತ್. ಅಲ್ಲಿಯೇ ಚಾಯ್ ವಾಲಾಗಳು, ಛೊಲೇ ಕುಲ್ಚೆ ಮಾರುವವರು, ತಿಂಡಿ ತಿನಿಸಿನ ಗೂಡಂಗಡಿಗಳು, ಚಳವಳಿಗಾರರ ಟೆಂಟುಗಳು, ಊಟ ತಿಂಡಿ, ಸ್ನಾನ ಎಲ್ಲವೂ ಇಲ್ಲಿಯೇ. ಮೇಲೆ ಖುಲಾ ಆಕಾಶ, ಮಲಗಲು ಭೂತಾಯಿಯ ಸೆರಗು, ಕಂಡು ಮಾತಾಡಿಸಿದವರೇ ಬಂಧುಗಳು, ಬದುಕಿನ ಉದ್ಧೇಶ ನಿಸ್ವಾರ್ಥ ಸೇವೆ, ಸಮಾಜಪರ ಹೋರಾಟ. ಸಮಾಜದ ಒಳಿತಿಗಾಗಿ ಎಲ್ಲವನ್ನೂ ಬದಿಗಿಟ್ಟು ಟೊಂಕಕಟ್ಟಿ ನಿಂತ ಜೀವಗಳೇ ಇಲ್ಲಿನ ಕಾಲಾಳುಗಳು. ಈಗ ಪರಿಸ್ಥಿತಿ ಬದಲಾಗಿದೆ
.
ಪ್ರಜಾತಂತ್ರದ ಈ ಚರಿತ್ರೆ ಬ್ರಿಟಿಷರ ಕಾಲದಿಂದಲೂ ತನ್ನ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. 1911 ರಲ್ಲಿ ದೆಹಲಿ ಮುಕುಟಕ್ಕೆ ರಾಷ್ಟ್ರದ ರಾಜಧಾನಿಯ ಗರಿಮೂಡಿದಾಗ ಚಾಂದನಿಚೌಕಿನ ಟೌನ್ ಹಾಲ್ ಎದುರು ನಾಗರಿಕರು ತಮ್ಮ ಪ್ರತಿಭಟನೆಯ ಪ್ರದರ್ಶನವನ್ನು ಮಾಡುತ್ತಿದ್ದರಂತೆ. ಮುಂದೆ 1950 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದೇ ಟೌನ್ ಹಾಲಿನೆದುರು – “ಪೋರ್ಚುಗೀಸರೇ ಗೋವೆಯನ್ನು ಬಿಟ್ಟು ತೊಲಗಿ” ಎಂಬ ಉದ್ಘೋಷಣೆಗಳನ್ನು ಕೂಗಿ ಆಂದೋಲನ ನಡೆಸಿದ್ದರೆಂಬ ಇತಿಹಾಸವಿದೆ. ಆದರೆ ಅನಾದಿಕಾಲದಿಂದಲೂ ಆಳುವ ಶಾಸಕರು ಈ ಚಳವಳಿಗಾರ, ಪ್ರತಿಭಟನಾಕಾರರಿಂದ ದೂರವುಳಿಯುವುದನ್ನೇ ಬಯಸುತ್ತ ಬಂದಿದ್ದಾರೆ.

ಇಂದು GenZ ಪ್ರತಿಭಟನೆಯ ಮಹತ್ವ ಕೇವಲ ಅದರ ಬೇಡಿಕೆಗಳಲ್ಲಿಲ್ಲ; ರಾಜಕೀಯ ಪಕ್ಷಗಳ ಹೊರತಾಗಿ, ಡಿಜಿಟಲ್ ತಲೆಮಾರಿನ ಯುವಕರು ತಮ್ಮದೇ ಆದ ಭಾಷೆ, ಸಂಕೇತ ಮತ್ತು ಸಂಘಟನಾ ಮಾದರಿಯನ್ನು ಕಂಡುಕೊಳ್ಳುತ್ತಿರುವುದರಲ್ಲಿದೆ. ಜಂತರ್ ಮಂತರ್‌ನ ಈ ಪ್ರತಿಭಟನೆ, ಭಾರತದ ಯುವಜನರ ಕೋಪ ಮತ್ತು ನಿರೀಕ್ಷೆಗಳ ಹೊಸ ರಾಜಕೀಯ ಅಭಿವ್ಯಕ್ತಿಯಾಗಿ ದಾಖಲಾಗಿದೆ.

ಪಾರ್ಲಿಮೆಂಟಿನ ಹತ್ತಿರವೇ ಇರುವ ಜಂತರ್ ಮಂತರರಿನ ಗೋಡೆಗಳಿಂದ, ಹಕ್ಕಿಗೂಡುಗಳಿಂದ ಹೊರಡುವ ದನಿಗಳು ಆಳುವ ಪ್ರಭುತ್ವಕ್ಕೆ ಬೇಡ. ಅದಕ್ಕೆ ಅದು ಪ್ರತಿಭಟನೆಗಳಿಗೆ ಭಯಪಡುತ್ತದೆ. ಭಿನ್ನ ದನಿಗಳನ್ನು ಅದು ಸಹಿಸುವುದಿಲ್ಲ. ಪ್ರಶ್ನೆ ಕೇಳುವವರನ್ನೂ ಅದು ಇಷ್ಟಪಡುವುದಿಲ್ಲ. ಅಂತಹ ಸಂದಿಗ್ಧ ವಾತಾವರಣದಲ್ಲಿ CJP ಗೆ ಅನುಮತಿ ನೀಡಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೆಲವರಿಗೆ ಅಚ್ಚರಿ ಹುಟ್ಟಿಸಿದೆ. ಆದರೆ, ಚಾಣಾಕ್ಷ ಸರಕಾರ Gen Z ಗಳ ಆಳವನ್ನು ಅಳೆಯಲೆಂದೇ ಅವರನ್ನು ಕೆಣಕದೇ ಅತ್ಯಂತ ಸೌಹಾರ್ದಪೂರ್ಣವಾಗಿ ಈ ಯುವ ಹೋರಾಟಗಾರರೊಂದಿಗೆ ನಡೆದುಕೊಂಡಿದೆ. ಮುಂದೆಯೂ ಜಂತರ್ ಮಂತರಿನಲ್ಲಿ ಆಂದೋಲನ ನಡೆಸಲು ಇದೇ ರೀತಿಯ ಸೌಹಾರ್ದಪೂರ್ಣ ಅನುಮತಿ ನೀಡುವುದೇ? ಕಾದು ನೋಡಬೇಕಿದೆ.

jantar mantar
 
 

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿಯಲ್ಲಿ ಘೋರ ಕ್ರೌರ್ಯ: ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಶವ ತಿಂದ ಬೀದಿ ನಾಯಿಗಳು

ಹದಿನೇಳು ವರ್ಷದ ಅಪ್ರಾಪ್ತೆಯನ್ನು ಸಾಮೂಹಿಕ ಅತ್ಯಾಚಾರಗೈದು, ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ...

ಬೀದರ್‌ | ʼಆಪ್‌ʼ ರಾಜ್ಯ ಅಲ್ಪಸಂಖ್ಯಾತರ ಘಟಕಕ್ಕೆ ಸೈಯದ್‌ ಜಮೀಲ್‌ ನೇಮಕ : ಸನ್ಮಾನ

ಆಮ್ ಆದ್ಮಿ ಪಕ್ಷದ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿ ಬೀದರ್‌ನ ಸೈಯದ್‌...

ಲಕ್ಷ ಶತಾಯುಷಿಗಳ ದೇಶ ಜಪಾನ್! ದೀರ್ಘಾಯಸ್ಸಿನ ಗುಟ್ಟೇನು?

ಬದುಕಿನ ಇಳಿಜಾರಿನಲ್ಲೂ ಯೌವನದ ಉತ್ಸಾಹ, ನೂರು ವರ್ಷವಾದರೂ ಕುಗ್ಗದ ಆರೋಗ್ಯ... ಇದು...

ಸಭಾಧ್ಯಕ್ಷರ ತವರಲ್ಲೇ ಬಡವರು ಅತಂತ್ರ: ʼಹಕ್ಕುಪತ್ರʼವಿದ್ದರೂ ಸ್ವಂತ ಸೂರಿಲ್ಲ, 13 ವರ್ಷಗಳಿಂದ ಬೀದಿಯಲ್ಲೇ ಬದುಕು!

ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡಿರುವುದು...