ಸಮಕಾಲೀನ ಪುರುಷ ಬರಹಗಾರರ ನೆರಳಿನಿಂದ ಹೊರಬಂದು ಪಂಜಾಬಿ ಸಾಹಿತ್ಯದಲ್ಲಿ ಸ್ವತಂತ್ರವಾಗಿ ಎತ್ತರಕ್ಕೇರಿದ ಮಹಿಳೆಯಾಗಿ ಅಮೃತಾ ಪ್ರೀತಮ್ ವಿಶಿಷ್ಟರು. ಆಕೆ ಕವಿ ಮಾತ್ರವಾಗದೇ ನಿಜಕ್ಕೂ ಕ್ರಾಂತಿಯ ವ್ಯಕ್ತಿಯಾಗಿದ್ದರು. ಬದುಕಿನ ಆಯ್ಕೆ, ಸಾಹಿತ್ಯ, ವೈಚಾರಿಕತೆ ಅವರಿದ್ದ ಕಾಲಕ್ಕಿಂತಲೂ ಮುಂದುವರಿದವಾಗಿದ್ದವು. ಅವರ ಅದಮ್ಯವಾದ ಜೀವನಪ್ರೀತಿ, ಸಂಘರ್ಷ, ಹಿಡಿ ಪ್ರೀತಿಗಾಗಿ ತಹತಹಿಸಿದ ಯಾತನೆಗಳೆಲ್ಲವೂ ಎಲ್ಲೋ ಒಂದು ಕಡೆ ನಮ್ಮೆಲ್ಲರದೂ ಆಗಿಬಿಡುವ ಅನನ್ಯತೆಯಲ್ಲೇ ಅಮೃತಾ ಆಪ್ತವಾಗುತ್ತಾರೆ. ಅಗಸ್ಟ್ 31 ಅವರ ಹುಟ್ಟುಹಬ್ಬ. ನಮಗೆ ನೆನಪಿನ ಹಬ್ಬ.
ಬರೆದಂತೆ ಬದುಕಬೇಕು ಎನ್ನುವ ಮಾತಿದೆ. ಆದರೆ ಅದು ಸುಲಭದ ಮಾರ್ಗವಲ್ಲ. ಕಡು ಕಠಿಣವಾದ ಮಾರ್ಗ. ಭಾರತದ ಸಾಹಿತ್ಯ ಚರಿತ್ರೆಯಲ್ಲಿ ಪರಂಪರೆ, ಕಟ್ಟುಪಾಡುಗಳು ಮತ್ತು ಸಾಮಾಜಿಕ ಮಡಿವಂತಿಕೆಯನ್ನು ಧೈರ್ಯದಿಂದ ಧಿಕ್ಕರಿಸಿ, ತನ್ನದೇ ಆದ ದಾರಿಯಲ್ಲಿ ಬದುಕಿದ ವಿಶಿಷ್ಟ ಚೇತನವೆಂದರೆ ಅಮೃತಾ ಪ್ರೀತಮ್. ಅವರು ಕೇವಲ ಕಾಗದದ ಮೇಲೆ ಪದಗಳನ್ನು ಬರೆದ ಬರಹಗಾರ್ತಿಯಲ್ಲ; ಬರೆದಂತೆ ಬದುಕಿದರು ಕೂಡ. ಅವರ ಆಲೋಚನೆಗಳು, ಬದುಕು ಮತ್ತು ಸಾಹಿತ್ಯವೇ ಒಂದು ಕ್ರಾಂತಿಯಾಗಿತ್ತು. 20ನೇ ಶತಮಾನದ ಅಗ್ರಗಣ್ಯ ಪಂಜಾಬಿ ಮತ್ತು ಹಿಂದಿ ಸಾಹಿತಿಯಾದ ಇವರ ಬದುಕು ಭಾರತ-ಪಾಕಿಸ್ತಾನದ ಗಡಿಗಳನ್ನು ಮೀರಿ ಇಂದಿಗೂ ಕೋಟ್ಯಂತರ ಜನರಿಗೆ ಪ್ರೇರಣೆಯಾಗಿದೆ.
ಸ್ವಾತಂತ್ರ್ಯಪೂರ್ವದ ಪಂಜಾಬಿನ ಗುಜರನ್ವಾಲಾದಲ್ಲಿ ಅಗಸ್ಟ್ 31, 1919 ರಲ್ಲಿ ಹುಟ್ಟಿದ ಅಮೃತಾ ಚಿಕ್ಕಂದಿನಲ್ಲೆ ತಾಯಿಯನ್ನು ಕಳೆದುಕೊಂಡರು. ತಂದೆ ನಂದ್ ಸಾಧೂ ( ಕರತಾರ್ ಸಿಂಗ್) ಸ್ವತಃ ಕವಿಯಾಗಿದ್ದು, ಮಗಳಿಗೂ ಕವಿತೆ ಕಟ್ಟಲು ಪ್ರೋತ್ಸಾಹಿಸುತ್ತಿದ್ದರಂತೆ. ನಂದ ಸಾಧು ಅವರ ಕಟ್ಟಾ ಸಾಂಪ್ರದಾಯಿಕ ಹಾಗೂ ಧಾರ್ಮಿಕ ನಿಗರಾನಿಯಲ್ಲಿ ತುಂಬಾ ಕಟ್ಟುನಿಟ್ಟಿನಲ್ಲಿ ಬಾಲ್ಯ ಕಳೆದ ಅಮೃತಾ ಮುಂದೆ ತಮ್ಮ ಬದುಕನ್ನು ಯಾವುದೇ ಧಾರ್ಮಿಕ ಕಟ್ಟುಪಾಡುಗಳಲ್ಲಿ ಕಟ್ಟಿಹಾಕಿಕೊಳ್ಳದೇ ತಮಗೆ ಒಳಿತೆನಿಸಿದ ಅಸಾಂಪ್ರದಾಯಿಕ ಹಾದಿಯನ್ನು ಆರಿಸಿಕೊಂಡಿದ್ದು ಅವರ ದಿಟ್ಟತನಕ್ಕೆ ಸಾಕ್ಷಿಯಾಗಿದೆ.
ಅಂದಿನ ಸ್ವಾತಂತ್ರ್ಯಪೂರ್ವದ ಹಾಗೂ ಸ್ವಾತಂತ್ರ್ಯೋತ್ತರದ ವಿಭಜನೆಯ ಕರಾಳ ಹಿಂಸಾಚಾರದ ಇತಿಹಾಸ ಅಮೃತಾ ಪ್ರೀತಮ್ ಅವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮಹಿಳೆಯರು ಹಿಂದುಳಿದಿದ್ದ, ತೀರಾ ಕಟ್ಟುಪಾಡುಗಳಿದ್ದ ಕಾಲಘಟ್ಟದಲ್ಲಿ ಅಮೃತಾರ ಬದುಕು ಬಾಲ್ಯದಿಂದಲೂ ಸಂಘರ್ಷಮಯವಾಗಿದ್ದು ಮುಂದೆ ಆಕೆಗೆ ಬದುಕೇ ಬಹಳಷ್ಟನ್ನು ಕಲಿಸಿತು. ಇಷ್ಟವಿಲ್ಲದ್ದನ್ನು ಪ್ರತಿಭಟಿಸುವ, ಬೇಡದ್ದನ್ನು ಪ್ರತಿರೋಧಿಸುವ ಹಾಗೂ ತನ್ನದೇ ಶರತ್ತು, ಸಿದ್ಧಾಂತಗಳ ಮೇಲೆ ಇಚ್ಚಿತ ಬದುಕನ್ನು ರೂಪಿಸಿಕೊಳ್ಳುವ ಆತ್ಮಸ್ಥೈರ್ಯ.

ಖ್ಯಾತ ಉರ್ದು ಕವಿ ಮತ್ತು ಗೀತರಚನೆಗಾರ ಅಮೃತಾರಿಗೆ ಭಾರತ ಪಾಕಿಸ್ತಾನ್ ಎರಡೂ ದೇಶದ ಜನರ ಪ್ರೀತಿ ಅಭಿಮಾನ ಅಪಾರವಾಗಿ ದಕ್ಕಿದೆ. ಈಗಲೂ ಲಾಹೋರಿನ ಜನ ಅಮೃತಾರನ್ನು ಪ್ರೀತಿಯಿಂದ ನೆನೆಯುತ್ತಾರೆ. ಲಾಹೋರಿನ ಆಕಾಶವಾಣಿಯಲ್ಲಿನ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮವನ್ನು ಮರೆತಿಲ್ಲ. ಸಾಹಿರ್ ಲುಧಿಯಾನ್ವಿ ಮತ್ತು ಅಮೃತಾ ಅವರ ನಡುವಿನ ಪ್ರೇಮ ಇತಿಹಾಸ ಪ್ರಸಿದ್ಧವಾದುದು. ಲಾಹೋರಿನ ಒಂದು ಮುಷಾಯಿರಾದಲ್ಲಿ ಇಬ್ಬರೂ ಭೇಟಿಯಾಗುತ್ತಾರೆ. ಅಲ್ಲಿಂದ ಊರಿಗೆ ಮರಳುವಾಗ ಇಬ್ಬರೂ ಜೊತೆಗೆ ಹೆಜ್ಜೆಹಾಕುತ್ತಾರೆ. ಹೀಗೆ ಹುಟ್ಟಿದ ಪ್ರೇಮ ಅವರ ಬದುಕಿನುದ್ದಕ್ಕೂ ಕಾಡುತ್ತದೆ. ಕೆಲವರು ಅದು ಅಮೃತಾಳದ್ದೇ ಹುಚ್ಚು ಪ್ರೀತಿ ಎಂದರೆ, ಕೆಲವರು ಆ ಪ್ರೀತಿಯನ್ನು ಒಂದು ಮಧುರ ಯಾತನೆಯಾಗಿ ಬಣ್ಣಿಸಿದ್ದಾರೆ. ಸಾಹಿರ್ ಕುಡಿದು ಬಿಟ್ಟ ಸಿಗರೇಟ್ ತುಂಡುಗಳನ್ನು ಅಮೃತಾ ಎತ್ತಿಟ್ಟುಕೊಂಡು, ಆ ಸಿಗರೇಟ್ ಹೊಗೆಯಲ್ಲಿ ಸಾಹಿರ್ನನ್ನು ಕಾಣುತ್ತಿದ್ದರು. ಈ ಪ್ರೀತಿ ಎಂದಿಗೂ ಸಫಲವಾಗಲಿಲ್ಲವಾದರೂ, ಇಬ್ಬರ ಸಾಹಿತ್ಯಕ್ಕೆ ಇದು ದೊಡ್ಡ ಪ್ರೇರಣೆಯಾಯಿತು.
ಜೀವನವೆಂದರೆ ಪ್ರೀತಿಯ ಹುಡುಕಾಟ ! ನಿರಂತರ ಅನ್ವೇಷ್ಶಣೆ! ಹತ್ತು ವರ್ಷಕ್ಕೇ ತಾಯಿಯನ್ನು ಕಳೆದುಕೊಂಡ ಅಮೃತಾ ಇಮರೋಜ್ ಅವರ ಬದುಕಿನಲ್ಲಿ ಬರುವವರೆಗೂ ಹಿಡಿ ಪ್ರೀತಿಗಾಗಿ ತಹತಹಿಸುತ್ತಿದ್ದರು. ಸಾಹಿರ್ ಜತೆಗಿನ ವಿಫಲ ಪ್ರೇಮ ಅವರನ್ನು ಖಿನ್ನತೆಗೆ ತಳ್ಳಿತ್ತು. ಪತಿ ಪ್ರೀತಂ ಸಿಂಗ್ ಅವರೊಂದಿಗೆ ಬಾಳಲಾಗಲೇ ಇಲ್ಲ.
ಉರ್ದು ಪತ್ರಿಕೆ “ಶಮಾ”ದಲ್ಲಿ ವಿನ್ಯಾಸಕಾರರಾಗಿದ್ದ ಇಮರೋಜ್ ಪಟೇಲ್ ನಗರದಲ್ಲಿ ಅಮೃತಾ ಮನೆ ಹತ್ತಿರವೇ ಒಂದು ಬಾಡಿಗೆ ಕೋಣೆಯಲ್ಲಿರುತ್ತಿದ್ದರು. ಅಮೃತಾ ಪತಿ ಪ್ರೀತಂಸಿಂಗ್ರೊಂದಿಗೆ ಇದ್ದಾಗಲೂ ಇಮರೋಜ್ ತಾವೇ ಮಕ್ಕಳ ಸ್ಕೂಲ್ ಬಿಟ್ಟನಂತರ ತಮ್ಮ ಕಚೇರಿಯಿಂದ ಹೋಗಿ ಸ್ಕೂಟರ್ ಮೇಲೆ ಕೂರಿಸಿಕೊಂಡು ಮನೆಗೆ ತಂದು ಬಿಡುತ್ತಿದ್ದರಂತೆ. ಅವರಿಗೆ ಯಾರೂ ನೀನು ಈ ಕೆಲಸ ವಹಿಸಿಕೋ ಎಂದು ಹೇಳಲಿಲ್ಲ. ಅವರೇ ಖುದ್ದಾಗಿ ಮಕ್ಕಳನ್ನು ಕರೆತರುವ ಕೆಲಸವನ್ನು ಮಾಡತೊಡಗಿದ್ದರು. ಅಲ್ಲಿವರೆಗೆ ಅಮೃತಾ ಯಾವತ್ತೂ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ಅಡುಗೆಯವನಿದ್ದ. ಇಮ್ರೋಜ್ ಮಕ್ಕಳನ್ನು ಕರೆತರುವ ಕೆಲಸ ವಹಿಸಿಕೊಂಡ ಮೇಲೆ ಅಮೃತಾ ತಾವೇ ಅಡುಗೆ ಮಾಡತೊಡಗಿದರು. ಇಮ್ರೋಜ್ ಮಕ್ಕಳನ್ನು ಬಿಟ್ಟು ಕಚೇರಿಗೆ ಹೋಗುತ್ತಿದ್ದರಂತೆ. ಆಗೆಲ್ಲ ಅಮೃತಾ ಆಗ್ರಹಪಡಿಸಿ ಊಟಕ್ಕೆ ನಿಲ್ಲಿಸಿಕೊಳ್ಳುತ್ತಿದ್ದರಂತೆ.

ಒಮ್ಮೊಮ್ಮೆ ಪ್ರೀತಮ್ ಸಿಂಗರೂ “ನಿನ್ನಿಂದಾಗಿ ಅಮೃತಾ ಕೈಊಟ ಸಿಗುತ್ತಿದೆ, ಊಟ ಮಾಡು” ಎನ್ನುತ್ತಿದ್ದರಂತೆ. ಪ್ರೀತಮ್ ಸಿಂಗ್ ಕೊನೆಗಾಲದಲ್ಲಿ ತುಂಬಾ ಅನಾರೋಗ್ಯದಲ್ಲಿದ್ದಾಗ ಅಮೃತಾ –ಇಮರೋಜ್ ಅವರನ್ನು ತಮ್ಮ ಹೌಸ್ಖಾಸ್ ಮನೆಗೆ ಕರೆತಂದು ಆರೈಕೆ ಮಾಡಿದ್ದನ್ನು ಇಮರೋಜ್ ಈಗಲೂ ನೆನಪಿಸಿಕೊಳ್ಳುತ್ತಾರೆ. ಪಟೇಲ್ ನಗರದಲ್ಲಿದ್ದಾಗ ಅಮೃತಾ ಆಗ ರೇಡಿಯೋದಲ್ಲಿ ಪಂಜಾಬಿ ಉದ್ಘೋಷಕಿಯಾಗಿ ಕೆಲಸಮಾಡುತ್ತಿದ್ದರು. ಸಂಬಳ ಕೇವಲ 5 ರೂಪಾಯಿ! ಇಮರೋಜ್ ಅವರೇ ಸ್ಕೂಟರಿನಲ್ಲಿ ಅವರನ್ನು ಆಕಾಶವಾಣಿಗೆ ಬಿಡುತ್ತಿದ್ದರು.
ಭಾರತದ ವಿಭಜನೆಯ ನಂತರ ಪಂಜಾಬಿನಿಂದ ದೆಹಲಿಗೆ ವಲಸೆ ಬಂದ ನಿರಾಶ್ರಿತರಿಗೆ ಸರಕಾರದಿಂದ ನೂರು ಗಜದ ಭೂಮಿ ಹಂಚಿಕೆಯಾಗುತ್ತಿತ್ತು. ಅಮೃತಾ ಮತ್ತು ಇಮರೋಜ್ ತಮ್ಮಲ್ಲಿದ್ದ ಹಣ ಹೂಡಿ K-25, ಹೌಜ್ ಖಾಸಿನ ಮನೆಕಟ್ಟಿಕೊಂಡರು. ಕೆಳಗಿನ ಮಜಲು ಮಕ್ಕಳಿಗೆ, ಮೇಲಿನ ಮಜಲಿನಲ್ಲಿ ಅಮೃತಾ ಹಾಗೂ ಇಮರೋಜರಿಗೆ ಪ್ರತ್ಯೇಕ ಕೋಣೆಗಳು. ಮನೆಯ ಒಳವಿನ್ಯಾಸ, ಹೊರ ವಿನ್ಯಾಸ, ಹೆಸರಿನ ಕ್ಯಾಲಿಗ್ರಾಫೀ ಬರಹ ಎಲ್ಲ ಇಮರೋಜ್ ತಾವೇ ಬರೆದಿದ್ದರು. K-25 ಇಬ್ಬರೂ ಕಟ್ಟಿದ ಪ್ರೀತಿಯ ಗೂಡು! ಇಬ್ಬರೂ ಸೇರಿ ಪಾರಿಜಾತದ ಮರವನ್ನು ನೆಟ್ಟರು. ಶರದೃತುವಿನ ಮುಂಜಾವಿನಲ್ಲಿ ತಟ್ಟೆತುಂಬಾ ಪಾರಿಜಾತ ಆರಿಸಿ ತಂದು ಅಮೃತಾಳ ಮೇಜಿನ ಮೇಲಿಡುತ್ತಿದ್ದರು ಇಮರೋಜ್. ಆ ಮನೆಯ ಫಲಕದಲ್ಲಿ ಇಮರೋಜ್ ಹೀಗೆ ಬರೆಯುತ್ತಾರೆ..
ಯೇ ಮೈ -ಔರ್ ಯೇ ತೂ, ಔರ್ ಬೀಚ್ ಮೇ ಸಪನ…
ಇಮರೋಜ್ ಅಮೃತಾರನ್ನು ದೇವತೆಯಂತೆ ನೋಡಿಕೊಂಡಿದ್ದಾರೆ. ನೆರಳಿನಂತೆ ಜೊತೆಯಾಗಿದ್ದಾರೆ, ತಾಯಿಯಂತೆ ಪೊರೆದಿದ್ದಾರೆ. ಬಹುಶಃ ಜಗತ್ತಿನಲ್ಲಿ ಪ್ರತಿಯೊಬ್ಬ ಹೆಣ್ಣು ಬಯಸುವಂತಹ ಸಂಗಾತಿಯಾಗಿದ್ದರು ಇಮರೋಜ್. ಆಕೆಯ ಸಾಹಿರ್ ಬಗೆಗಿನ ಹುಚ್ಚು ಪ್ರೀತಿಯನ್ನೂ ಗೌರವಿಸುವಷ್ಟು ಹೃದಯವಂತರಾಗಿದ್ದರು. ಅವರನ್ನು ಹತ್ತಿರದಿಂದ ನೋಡಿದ ಒಡನಾಡಿದ ನನಗೆ ಅವರು ಒಂದು ವಿಸ್ಮಯ! ಈ ಲೋಕದ ವ್ಯಕ್ತಿಯೇ ಅಲ್ಲವೆನಿಸುವಷ್ಟು ಮಾನವೀಯತೆ, ಪ್ರೀತಿ ಅವರೊಳಗಿತ್ತು. ಸಮಾಜದ ಬಗ್ಗೆ ಅವರ ಅಲೋಚನೆಗಳು ಭಿನ್ನವಾಗಿದ್ದವು. ಸಮಾಜದ ಕ್ರೂರತೆಗಳಿಗೆ ಮಿಡಿಯುತ್ತಿದ್ದರು. ವಿಭಜನೆಯ ಸುದ್ದಿ ಬಂದಾಗೆಲ್ಲ ಮೌನವಾಗುತ್ತಿದ್ದರು. ಒಂದುಕಾಲದಲ್ಲಿ ಖ್ಯಾತ ಕಲಾವಿದರಾಗಿದ್ದ ಇಮರೋಜ್ ಅಮೃತಾರ ಸಾವಿನನಂತರ ಕವಿಯಾಗಿದ್ದು, ತಮ್ಮ ಇಡೀ ಜೀವಮಾನವನ್ನು ಅಮೃತಾಳಿಗಾಗಿಯೇ ಮುಡಿಪಾಗಿಟ್ಟಿದ್ದು ಈ ಕಾಲದ ಸತ್ಯ. ಶುದ್ಧ ಪ್ರೀತಿಗೊಂದು ಪರ್ಯಾಯ ಪದವಿದ್ದರೆ ಅದು ಇಮ್ರೋಜ್. ಅವರೊಬ್ಬ ಜನಪರ ಕವಿ. ಲೋಕ ಕವಿ. ದೈನಂದಿನ ಬದುಕೇ ಅವರ ವಸ್ತು. ಅಮೃತಾರೇ ಅವರ ಕವಿತೆಯ ಉಸಿರು… ಅವರ ಜೀವಭಾವ.

1935 ರಲ್ಲಿ, ಅಮೃತಾ ಕೇವಲ 16 ವರ್ಷದವರಿದ್ದಾಗ ಪ್ರೀತಮ್ ಸಿಂಗ್ ಎಂಬುವವರ ಜೊತೆ ಇವರ ವಿವಾಹವಾಯಿತು. ಮದುವೆಯ ನಂತರ ಅವರ ಹೆಸರಿನ ಜೊತೆ ‘ಪ್ರೀತಮ್’ ಎಂಬ ಹೆಸರು ಸೇರಿಕೊಂಡಿತು. ಆದರೆ, ಸಾಂಪ್ರದಾಯಿಕ ಕಟ್ಟುಪಾಡುಗಳ ಆ ದಾಂಪತ್ಯ ಜೀವನ ಇವರ ಸ್ವತಂತ್ರ ವಿಚಾರಧಾರೆಗೆ ಒಗ್ಗಲಿಲ್ಲ. ಕೊನೆಗೆ 1960 ರಲ್ಲಿ ಅವರು ಈ ವೈವಾಹಿಕ ಜೀವನದಿಂದ ಮುಕ್ತಿ ಪಡೆದರು. ಇಮರೋಜ್ ಜತೆ ಲಿವ್ ಇನ್ ಸಂಬಂಧದಲ್ಲಿದ್ದಾಗಲೂ ಪತಿ ಪ್ರೀತಮ್ ಸಿಂಗ್ ಅವರನ್ನು ಅವರ ಇಚ್ಛೆಯಂತೆ ಬದುಕಲು ಬಿಟ್ಟಿದ್ದನ್ನು ಉಲ್ಲೇಖಿಸದೇ ಇರಲಾಗದು. ಯಾವ ಪತಿಯ ಹೃದಯ ಇಷ್ಟು ವಿಶಾಲವಾಗಿರಬಲ್ಲದು! ಅವರು ನೊಂದಿದ್ದರೂ ಅಮೃತಾರನ್ನು ಕಟ್ಟಿ ಹಾಕಲು ಪ್ರಯತ್ನಿಸಲಿಲ್ಲ. ಇಲ್ಲಿ ಪ್ರೀತಮ್ ಸಿಂಗ್ ಅವರನ್ನು ಅವರ ಒಳ್ಳೆಯತನಕ್ಕಾಗಿ ತಲೆಬಾಗಿ ವಂದಿಸಲೇಬೇಕು. ಆಕೆ ಏನಾದರೂ ಆಗಿದ್ದರೆ, ಅದರಲ್ಲಿ ಪ್ರೀತಮ್ ಸಿಂಗ್ ಅವರ ಒಳ್ಳೆಯತನದ ಪಾಲೂ ಇದೆ.
1947 ರ ಭಾರತ-ಪಾಕಿಸ್ತಾನ ವಿಭಜನೆ ಅಮೃತಾ ಅವರ ಬದುಕಿನ ಅತ್ಯಂತ ಕರಾಳ ಘಟನೆಯಷ್ಟೇ ಅಲ್ಲ ಇಡೀ ಪಶ್ಚಿಮ ಪಂಜಾಬಿಗಳ ಬದುಕಿನ ಕರಾಳ ಘಟನೆ. ತಮಗೆ ಪ್ರಾಣಕ್ಕಿಂತ ಪ್ರೀತಿಯಾಗಿದ್ದ ಲಾಹೋರ್ ನಗರವನ್ನು ಬಿಟ್ಟು, ಗರ್ಭಿಣಿಯಾಗಿದ್ದ ಅವರು ರೈಲಿನಲ್ಲಿ ದಿಲ್ಲಿಗೆ ಬರಬೇಕಾಯಿತು. ದಾರಿಯುದ್ದಕ್ಕೂ ನಡೆದ ಹಿಂಸಾಚಾರ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳನ್ನು ಕಣ್ಣಾರೆ ಕಂಡ ಅವರು ತೀವ್ರವಾಗಿ ನೊಂದರು. ಈ ಆಕ್ರೋಶವೇ ಮುಂದೆ “ಅಜ್ಜ್ಆಖಾಂವಾರಿಸ್ಶಾನು / ಕಬ್ರಾ ವಿಚ್ ಬೋಲ್” ಕವಿತೆಯಾಗಿ ಹೊರಹೊಮ್ಮಿತು.
ಏಳು ವಾರಿಸ್ ಶಾಹ್, ಗೋರಿಯೊಳಗಿಂದಲೇ ಮಾತಾಡು, ಒಬ್ಬ ಪಂಜಾಬದ ಹೆಣ್ಣುಮಗಳು ಅತ್ತಿದ್ದಕ್ಕೆ ಒಂದು ಮಹಾಕಾವ್ಯವನ್ನೇ ಬರೆದೆ. ಇಂದು ಪಂಜಾಬದ ಲಕ್ಷಾಂತರ ಹೆಂಗಳೆಯರು ಕಂಬನಿಗರೆಯುತ್ತಿದ್ದಾರೆ / ಏಳು ಪ್ರೇಮದ ಹೊಸ ಪುಟವನ್ನು ತೆರೆ, ಚನಾಬಿನಲ್ಲಿ ರಕ್ತದ ಕೋಡಿಯೇ ಹರಿಯುತ್ತಿದೆ, ನೋಡು ಎದ್ದೇಳು“ ಎನ್ನುವ ಕವಿತೆ ಗಡಿಗಳ ಎರಡೂ ಭಾಗಗಳ ಜನರಿಗೆ ಭಗವದ್ಗೀತೆಯಾಯ್ತು. ನೊಂದ ಹೃದಯಗಳನ್ನು ಸಂತೈಸುವ ಹಾಡಾಯ್ತು. ತಮ್ಮ ಬಂಧು ಬಾಂಧವರನ್ನು ಕಳೆದುಕೊಂಡ ಜನ ಈ ಕವಿತೆಯನ್ನು ತಮ್ಮ ಜೇಬಿನಲ್ಲಿಟ್ಟುಕೊಂಡು ಓಡಾಡುತ್ತಿದ್ದರಂತೆ. ಕಣ್ಣೀರು ಹಾಕುತ್ತಿದ್ದರಂತೆ.
ಭಾಯೀ ವೀರ್ ಸಿಂಗ್, ಪ್ರೊ.ಮೋಹನ್ ಸಿಂಗ್ , ಅಮೃತಾ ಪ್ರೀತಂ , ಗೋಪಾಲ ಸಿಂಗ್ ’ದರ್ದಿ’, ಹರಿಂದರ್ ಸಿಂಗ್ ನೂರ್ ’ಕಂವರ್”; ಮುಂತಾದ ಕವಿಗಳು ಭಾರತ ವಿಭಜನೆಯ ದುರಂತದ ದುರ್ದಿನಗಳಿಗೆ ಸಾಕ್ಷಿಯಾದವರು ಮತ್ತು ಆ ಎಲ್ಲ ಸಂಕಟಗಳನ್ನು ಸ್ವತಃ ಅನುಭವಿಸಿದವರು. ಅಂಥ ಸಂದರ್ಭದಲ್ಲಿ ಅಮೃತಾ ಪ್ರೀತಂ ’ಆಜ್ ಅಖ್ಕಾಂ ವಾರಿಸ್ ಶಾಹ್ ನೂ” ಬರೆದು ಉಭಯ ದೇಶಗಳ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿ ಹೋದರು.
”ಶವಗಳ ರಾಶಿಯನ್ನಷ್ಟೇ ಅಲ್ಲ, ಶವಗಳಂಥ ಜನರನ್ನೂ ಕಂಡಿದ್ದೇನೆ” ಎಂದು ತಮ್ಮ ಆತ್ಮಕತೆ ‘ರಶೀದಿ ಟಿಕೆಟ್’ ನಲ್ಲಿ ಬರೆದಿದ್ದಾರೆ. ವಿಭಜನೆಯ
ನರಕ ಯಾತನೆಯೇ ಆ ಕಾಲದ ಪಂಜಾಬಿ ಸಾಹಿತ್ಯದ ಕೇಂದ್ರಬಿಂದು ಆಗಿತ್ತು.
ಸಾಹಿರ್ ಅಮೃತಾ ಇಮರೋಜ್ ಪ್ರೇಮ ಇತಿಹಾಸದ ಅದ್ವಿತೀಯ ಪ್ರೇಮಗಾಥೆಯಾಗಿ ಅಚ್ಚಳಿಯದೇ ಎಲ್ಲಾ ಕಾಲದ ಪ್ರೇಮಿಗಳನ್ನು ಕಾಡುತ್ತಲೇ ಇರುತ್ತದೆ. ದಕ್ಕದ ಸಾಹಿರ್ ಪ್ರೇಮ, ಹತಾಶೆ, ವಿಫಲವಾದ ವಿವಾಹದಿಂದ ಅಮೃತಾ ವಿಚ್ಚೇದನ ಪಡೆದು ಹೊರಬಂದಾಗ ಸಾಹಿರ್ ಇನ್ನೊಬ್ಬಳ ಪ್ರೇಮದಲ್ಲಿದ್ದಾನೆಂಬ ವದಂತಿಗೆ ಕುಸಿದು ಖಿನ್ನತೆಗೆ ಜಾರುತ್ತಾರೆ. ಅದಕ್ಕಾಗಿ ಅವರು ಚಿಕಿತ್ಸೆಯನ್ನೂ ಪಡೆಯಬೇಕಾಗುತ್ತದೆ. ಆ ಖಿನ್ನತೆಯ ಸೋಲಿನ ಕಾಲದಲ್ಲಿ ಅವರ ಸಾಹಿತ್ಯ ಕೃಷಿ ಪ್ರವಾಹದಂತೆ ಉಕ್ಕೇರುತ್ತದೆ. ಲೇಖನಿ ಮತ್ತೆಲ್ಲಿಯೂ ನಿಲ್ಲುವುದಿಲ್ಲ. ಅಂತಹ ಕಷ್ಟಕರ ಸಮಯದಲ್ಲಿ ಅವರಿಗೆ ಆಸರೆಯಾದದ್ದು ಇಮರೋಜ್. ಅವರಿಗಿಂತ ಚಿಕ್ಕವರಿದ್ದ ಇಮರೋಜರಿಗೂ ಮದುವೆಯಾಗಿ ಇಬ್ಬರು ಮಕ್ಕಳಿದ್ದವಳೊಂದಿಗೆ ಬದುಕನ್ನು ಹಂಚಿಕೊಳ್ಳುವುದೇನು ಸರಳವಾಗಿದ್ದಿಲ್ಲ. ಒಳಗಿನ ಸಂಬಂಧಿಕರ ಕೊಂಕುನುಡಿಗಳು ಹೊರಗಿನ ಸಮಾಜದ ಚೂಪು ಕಟು ನಂಜಿನ ಬಾಣಗಳನ್ನು ಎದುರಿಸಬೇಕಾಗಿತ್ತು. ಸಖ್ಯವನ್ನು ಸಾಂಗತ್ಯವನ್ನು ಗಳಿಸುವುದಕ್ಕಿಂತ ಉಳಿಸಿಕೊಳ್ಳುವುದಿದೆಯಲ್ಲ ಸುಲಭದ್ದಲ್ಲ. ಅದಕ್ಕೆ ಇಬ್ಬರ ಸಮರ್ಪಣೆಯೂ ಬೇಕು.
ಅಂಥ ಒಂದು ಘಟನೆಯನ್ನು ಆಗ ಬ್ಯಾಂಕಿನ ಉದ್ಯೋಗಿಯಾಗಿದ್ದ ಗೆಳತಿ ನಂದಿನಿ ಮಲ್ಯ ವಿವರಿಸುವಂತೆ, ಅಮೃತಾ ಮತ್ತು ಇಮರೋಜ್ ಗ್ರೀನ್ ಪಾರ್ಕಿನ ಬ್ಯಾಂಕಿನ ಕೆಲಸಕ್ಕೆಂದು ಹೋದರೆ ಸಾಕು ಎಲ್ಲರ ದೃಷ್ಟಿಗಳು ಅವರನ್ನೇ ನೋಡುತ್ತಿದ್ದವಂತೆ. ಈ ಘಟನೆಯನ್ನು ಕೇಳಿ ನಾನೇ ಅನುಭವಿಸಿದಷ್ಟು ನೊಂದಿದ್ದೆ. ಅದೀಗ ನನ್ನೆದೆಯ ನೋವಿನ ತುಂಡಾಗಿ ಉಳಿದುಹೋಗಿದೆ. ಈಗ ಸುಲಭ ಸಾಧ್ಯವಾಗಿರುವ ಲಿವ್ ಇನ್ ರಿಲೇಶನಶಿಪ್ ಅಂದಿನ ಅರವತ್ತರ ದಶಕದಲ್ಲಿಯೇ ಅಮೃತಾ- ಇಮರೋಜ್ ಬದುಕಿ ತೋರಿಸಿದ್ದಾರೆ. ಇಮರೋಜರ ಮಾತಿನಲ್ಲಿ ಹೇಳುವುದಾದರೆ- “ನೀನು ನನ್ನ ಸಮಾಜ, ನಾನು ನಿನ್ನ ಸಮಾಜ. ಇದೇ ಸತ್ಯ. ಬಾಕಿ ಎಲ್ಲ ಮಿಥ್ಯ”. ಹೀಗೆ ಇಮರೋಜ್ ಸಮಾಜದ ಪರಿಭಾಷೆಯನ್ನೇ ಬದಲಿಸಿಬಿಡುತ್ತಾರೆ. ಈ ಪ್ರೇಮದ ಅನುಭಾವವೇ ಅವರ ನಾಕು ದಶಕಗಳ ಸಾಂಗತ್ಯವನ್ನು ಗಟ್ಟಿಗೊಳಿಸುತ್ತದೆ. ಮತ್ತು ಬಾಳಿಸಿದೆ. 1966 ರಿಂದ 2002 ರವರೆಗಿನ ಮೂರುದಶಕಗಳ ಕಾಲ “ನಾಗಮಣಿ” ಎಂಬ ಪಂಜಾಬಿ ಸಾಹಿತ್ಯಿಕ ಪತ್ರಿಕೆಯನ್ನು ಇಮರೋಜ್ ಅಮೃತಾ ನಡೆಸುತ್ತಾರೆ. ಅನೇಕ ಯುವಕವಿಗಳನ್ನು ಬರಹಗಾರರನ್ನು ಪೋಷಿಸಿ ಬೆಳೆಸಿದ ಪತ್ರಿಕೆಯೆಂಬ ಹೆಗ್ಗಳಿಕೆಯಿದೆ ನಾಗಮಣಿಗೆ. ಅದೆಲ್ಲ ಇಂದು ಇತಿಹಾಸ.

ಅಮೃತಾರಿಗೆ ಭಾರತ ಪಾಕಿಸ್ತಾನ್ ಎರಡೂ ದೇಶದ ಜನರ ಪ್ರೀತಿ ಅಭಿಮಾನ ಅಪಾರವಾಗಿ ದಕ್ಕಿದೆ. ಈಗಲೂ ಲಾಹೋರಿನ ಜನ ಅಮೃತಾರನ್ನು ಪ್ರೀತಿಯಿಂದ ನೆನೆಯುತ್ತಾರೆ. ಲಾಹೋರಿನ ಆಕಾಶವಾಣಿಯಲ್ಲಿನ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮವನ್ನು ಮರೆತಿಲ್ಲ. ಅಮೃತಾರ ಮನೆಯೆದುರಿನ ಪಾನ್ ಅಂಗಡಿಯಲ್ಲಿ ಸಾಹಿರ್ ಗಂಟೆಗಟ್ಟಲೇ ಸಿಗರೇಟ್ ಸೇದುತ್ತ ನಿಂತಿರುತ್ತಿದ್ದರಂತೆ. ಅಮೃತಾ ಕಿಟಕಿ ತೆರೆಯುವವರೆಗೂ ಸಿಗರೇಟ್ ಸೇದುತ್ತಾ ಆಕೆ ಕಿಟಕಿ ತೆರೆದಾಗ ಒಂದು ಕ್ಷಣ ಅವಳನ್ನು ಕಣ್ಣಲ್ಲಿ ತುಂಬಿಕೊಂಡ ನಂತರವೇ ಅಲ್ಲಿಂದ ಹೋಗುತ್ತಿದ್ದುದನ್ನು ಈಗಲೂ ಅಲ್ಲಿನ ಜನ ನೆನೆಯುತ್ತಾರೆ. ಈಗ ಆ ಪಾನ್ ಅಂಗಡಿಯ ಜಾಗದಲ್ಲಿ ದೊಡ್ದ ಶಾಪಿಂಗ್ ಕಾಂಪ್ಲೆಕ್ಸ್ ಆಗಿದೆಯೆಂದು ಅಲ್ಲಿಗೆ ಭೇಟಿಯಿತ್ತವರು ಇಮರೋಜರಿಗೆ ತಿಳಿಸಿದ್ದನ್ನು ಅವರು ನನ್ನೊಂದಿಗೂ ಹಂಚಿಕೊಂಡಿದ್ದರು.
ಒಮ್ಮೆ ಅಮೃತಾ ಪ್ರೀತಮ್ ಅವರ ಆಪ್ತ ಸ್ನೇಹಿತರೊಬ್ಬರು ಭಾರತದಿಂದ ಪಾಕಿಸ್ತಾನಕ್ಕೆ (ಲಾಹೋರ್ಗೆ) ಭೇಟಿ ನೀಡಿದ್ದರು. ಅಲ್ಲಿ ಅವರು ರಸ್ತೆಯ ಬದಿಯಲ್ಲಿ ನಿಂತಿದ್ದ ಒಬ್ಬ ಬಾಳೆಹಣ್ಣು ಮಾರುವವನಿಂದ ಹಣ್ಣುಗಳನ್ನು ಕೊಳ್ಳುತ್ತಿದ್ದರು. ಮಾತಿನ ಮಧ್ಯೆ ಆ ಸ್ನೇಹಿತರು ತಾವು ದಿಲ್ಲಿಗೆ ಮರಳಿ ಹೋಗಿ ಅಮೃತಾ ಪ್ರೀತಮ್ ಅವರನ್ನು ಭೇಟಿಯಾಗುವುದಾಗಿ ಹೇಳಿದರು.
“ಅಮೃತಾ ಪ್ರೀತಮ್” ಎಂಬ ಹೆಸರನ್ನು ಕೇಳಿದ ತಕ್ಷಣ ಆ ಬಡ ವ್ಯಾಪಾರಿಯ ಕಣ್ಣುಗಳು ತೇವವಾದವು. ಆತ ತಕ್ಷಣವೇ ಒಂದು ಗೊನೆ ಬಾಳೆಹಣ್ಣನ್ನು ಪ್ರೀತಿಯಿಂದ ಪೊಟ್ಟಣ ಕಟ್ಟಿ ಆ ಸ್ನೇಹಿತನ ಕೈಗಿಟ್ಟು, “ಇದನ್ನು ದಯವಿಟ್ಟು ದಿಲ್ಲಿಗೆ ಹೋದಾಗ ನನ್ನ ಪರವಾಗಿ ಅಮೃತಾ ಅವರಿಗೆ ಕೊಡಿ” ಎಂದು ವಿನಂತಿಸಿದನು. ಸ್ನೇಹಿತರು ಆಶ್ಚರ್ಯಪಟ್ಟು, “ನೀನು ಅವಳನ್ನು ನೋಡಿದ್ದಿಯಾ? ನಿನಗೆ ಆಕೆ ಹೇಗೆ ಗೊತ್ತು?” ಎಂದು ಕೇಳಿದರು. ಅದಕ್ಕೆ ಆ ವ್ಯಾಪಾರಿ, “ನಾನು ಅವಳನ್ನು ನೋಡಿಲ್ಲ, ಆದರೆ ಆಕೆಯ ಕವಿತೆ (ವಾರಿಸ್ ಶಾ) ಕೇಳಿದ್ದೇನೆ. ವಿಭಜನೆಯ ಸಮಯದಲ್ಲಿ ನಮ್ಮ ಜಾಗದಲ್ಲಿ ನಡೆದ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ನೋವನ್ನು ಆಕೆಗಿಂತ ಚೆನ್ನಾಗಿ ಯಾರೂ ಬರೆಯಲು ಸಾಧ್ಯವಿಲ್ಲ. ಆಕೆಗೆ ಕೊಡಲು ನನ್ನ ಹತ್ತಿರ ಹಣವಿಲ್ಲ, ಈ ಬಾಳೆಹಣ್ಣುಗಳೇ ನಾನು ಆಕೆಗೆ ಕೊಡುವ ಕಾಣಿಕೆ. ನನಗೆ ಇದು ಹಜ್ಯಾತ್ರೆ ಮಾಡಿದಷ್ಟೇ ಪವಿತ್ರವಾದುದು” ಎಂದು ಕಣ್ಣೀರಿಡುತ್ತಾನೆ.
ಅಮೃತಾ ಹುಟ್ಟಾ ಬಂಡಾಯಗಾರ್ತಿ, ಆಕೆ ಚಿಕ್ಕವಳಿದ್ದಾಗಿನ ಒಂದು ಘಟನೆಯನ್ನು ’ರಸೀದಿ ಟಿಕೇಟ್’ ನಲ್ಲಿ ಹೇಳುತ್ತಾರೆ.
ಬಹಳಷ್ಟು ಸ್ಟೀಲ್ ಗ್ಲಾಸುಗಳನ್ನು ಅಜ್ಜಿ ತೊಳೆದು, ಒರೆಸಿ ಶೆಲ್ಫಿನ ಮೇಲೆ ಜೋಡಿಸುತ್ತಿದ್ದಳಂತೆ. ಮೂರು ಗ್ಲಾಸುಗಳು ಮಾತ್ರ ಅಡುಗೆಕೋಣೆಯ ಹೂರಗೆ ಅನಾಥ ಮಕ್ಕಳಂತೆ ಕೂತಿರುತ್ತಿದ್ದವು, ಪುಟ್ಟ ಹುಡುಗಿ ಅಮೃತಾ ಅಜ್ಜಿಗೆ ಕೇಳುತ್ತಾಳೆ, ಈ ಮೂರು ಗ್ಲಾಸುಗಳು ಇಲ್ಲ್ಯಾಕೆ ಇಟ್ತಿದ್ದೀ, ಅವೇಕೆ ಒಳಗಿಲ್ಲ? ಅಂತಾ. ಅಜ್ಜಿ ಹೇಳುತ್ತಾಳೆ, ಇವು ಮನೆಗೆ ಬರುವ ಮುಸ್ಲಿಮರಿಗೆ ಚಹ ಮತ್ತು ಲಸ್ಸಿ ಕುಡಿಯಲು ಕೊಡೋಕೆ ಇಟ್ಟದ್ದು…ಅಂತಾ. ಆ ಮಾತು ಅಮೃತಾರಿಗೆ ಚೂರು ಹಿಡಿಸುವುದಿಲ್ಲ. ಆಕೆ ಅಜ್ಜಿಯೊಂದಿಗೆ ಜಗಳ ಕಾದು, ಉಪವಾಸ ಹೂಡಿ, ಮನೆಯಲ್ಲಿ ’ಹಿಂದೂ’ ಗ್ಲಾಸು, ’ಮುಸ್ಲಿಂ’ ಗ್ಲಾಸು ಅಂತಾ ಬೇರೆ ಬೇರೆ ಇರಕೂಡದು ಎಂದು ಹಠ ಹಿಡಿಯುತ್ತಾರೆ. ಕೊನೆಗೆ ಅಜ್ಜಿ ಸೋತು, ಮೊಮ್ಮಗಳು ಗೆಲ್ಲುತ್ತಾಳೆ. ಆಗ ಬಹುಶಃ ಅಜ್ಜಿಗೂ ಗೊತ್ತಿರಲಿಕ್ಕಿಲ್ಲ ಮೊಮ್ಮಗಳು ಮುಂದೆ ಮುಸ್ಲೀಮನೊಬ್ಬನ ಪ್ರೇಮದಲ್ಲಿ ಬೀಳುತ್ತಾಳೆಂದು.
ಸಾಹಿರ್ ಮಿತಭಾಷಿ. ಗಂಟೆಗಟ್ಟಲೆ ಇಬ್ಬರೂ ಮಾತಿಲ್ಲದೇ ಮೌನದಲ್ಲಿ ಕೂತಿರುತ್ತಿದ್ದರು. ಸಿಗರೇಟ್ ಸೇದುತ್ತಿದ್ದರು. ಅಮೃತಾ ಮಾತಾಡು ಮಾತಾಡು ಎಂದರೂ ಹೆಚ್ಚು ಮಾತಾಡುತ್ತಿರಲಿಲ್ಲವಂತೆ. “ರೋಶನೀ ಮೇ ಮೈ ಬಾತ್ ನಹೀ ಕರ್ ಸಕತಾ “ ಅಂತಿದ್ದರಂತೆ. ಆಗ ಅಮೃತಾ ರೋಸಿಹೋಗಿ “ಈ ಸೂರ್ಯನನ್ನೇ ಬಚ್ಚಿಡಬೇಕು, ಆಗಲಾದರೂ ನೀನು ಮಾತನಾಡುತ್ತೀ ’ ಅನ್ನೋ ಪದ್ಯ ಬರೆದರು. ಸಾಹಿರ್ಗಾಗಿ ಬಹಳಷ್ಟು ಪದ್ಯಗಳನ್ನು ಬರೆದರು. ನೋವು- ಹತಾಶೆಯಲ್ಲಿ ಖಿನ್ನತೆ ಅವರನ್ನು ಸಾಯಿಸುತ್ತಿತ್ತು.
ಸಿಗರೇಟಿನಂತೆ ನಾನು ಮೌನವಾಗಿ ನೋವನ್ನು ಕುಡಿಯುತ್ತಿದ್ದೆ
ಸಿಡಿಸಿದ ಬೂದಿಯಿಂದ ಕೆಲವು ಕವಿತೆಗಳು ಉದುರಿದವು !
ಆತ ಹೋದ ನಂತರ, ಅಮೃತಾ ಅವರು ಸಾಹಿರ್ ಅರ್ಧಕ್ಕೆ ಬಿಟ್ಟುಹೋದ ಸಿಗರೇಟ್ ತುಂಡುಗಳನ್ನು ಎತ್ತಿಟ್ಟುಕೊಳ್ಳುತ್ತಿದ್ದರು. ನಂತರ ಆ ಸಿಗರೇಟ್ ತುಂಡುಗಳನ್ನು ತಾವೇ ಹಚ್ಚಿ ಸೇದುತ್ತಿದ್ದರು. ಆ ಹೊಗೆಯನ್ನು ಉಸಿರಾಡುವಾಗ ತಮಗೆ ಸಾಹಿರ್ನನ್ನು ಸ್ಪರ್ಶಿಸಿದ ಅನುಭವವಾಗುತ್ತಿತ್ತು ಎಂದು ಅವರು ಬರೆದಿದ್ದಾರೆ. ಒಬ್ಬ ಮಹಿಳೆ ತನ್ನ ವಿಫಲ ಪ್ರೇಮವನ್ನು ಇಷ್ಟು ಮುಕ್ತವಾಗಿ ಸಮಾಜದ ಮುಂದೆ ಒಪ್ಪಿಕೊಂಡಿದ್ದು ಅಂದಿನ ಕಾಲಕ್ಕೆ ದೊಡ್ಡ ಕ್ರಾಂತಿಯಾಗಿತ್ತು.
ಇದನ್ನೂ ಓದಿ ಬಳ್ಳಾರಿ ಪಾದಯಾತ್ರೆ: ಕಮಲ-ದಳ ಮೈತ್ರಿಯಲ್ಲಿ ಅಪಸ್ವರ; ‘ಉದ್ದೇಶವಿಲ್ಲದ’ ಹೋರಾಟಕ್ಕೆ ಜೆಡಿಎಸ್ ಹಿಂದೇಟು
ಸಮಕಾಲೀನ ಪುರುಷ ಬರಹಗಾರರ ನೆರಳಿನಿಂದ ಹೊರಬಂದು ಪಂಜಾಬಿ ಸಾಹಿತ್ಯದಲ್ಲಿ ಸ್ವತಂತ್ರವಾಗಿ ಎತ್ತರಕ್ಕೇರಿದ ಮಹಿಳೆಯಾಗಿ ಅಮೃತಾ ಪ್ರೀತಮ್ ವಿಶಿಷ್ಟರು. ಆಕೆ ಕವಿ ಮಾತ್ರವಾಗದೇ ನಿಜಕ್ಕೂ ಕ್ರಾಂತಿಯ ವ್ಯಕ್ತಿಯಾಗಿದ್ದರು. ಬದುಕಿನ ಆಯ್ಕೆ, ಸಾಹಿತ್ಯ, ವೈಚಾರಿಕತೆ ಅವರಿದ್ದ ಕಾಲಕ್ಕಿಂತಲೂ ಮುಂದುವರಿದವಾಗಿದ್ದವು. ಅವರ ಅದಮ್ಯವಾದ ಜೀವನಪ್ರೀತಿ, ಸಂಘರ್ಷ, ಹಿಡಿ ಪ್ರೀತಿಗಾಗಿ ತಹತಹಿಸಿದ ಯಾತನೆಗಳೆಲ್ಲವೂ ಎಲ್ಲೋ ಒಂದು ಕಡೆ ನಮ್ಮೆಲ್ಲರದೂ ಆಗಿಬಿಡುವ ಅನನ್ಯತೆಯಲ್ಲೇ ಅಮೃತಾ ಆಪ್ತವಾಗುತ್ತಾರೆ. ಅಗಸ್ಟ್ 31 ಅವರ ಹುಟ್ಟುಹಬ್ಬ. ನಮಗೆ ನೆನಪಿನ ಹಬ್ಬ.. ಶುಭಾಶಯಗಳು ಅಮೃತಾ ಜೀ…
.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ



