ಯಾವ ಮಾಧ್ಯಮಗಳಿಗೆ ಎಷ್ಟೆಷ್ಟು ಕೋಟಿ ರೂಪಾಯಿಗಳ ಸಾರ್ವಜನಿಕ ಸಂಪತ್ತು ಸಂದಾಯವಾಗಿದೆ ಎಂಬುದು ಬಹಿರಂಗವಾದರೆ, ಸರ್ಕಾರದ ಪರವಾಗಿ ಸುಳ್ಳು ವರದಿಗಳನ್ನು ಬಿತ್ತರಿಸುವ ಮಾಧ್ಯಮಗಳ ಅಸಲಿ ಮುಖವಾಡ ಕಳಚಿಬೀಳುತ್ತದೆ.
ಕಳೆದ 12 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವವನ್ನು ‘ವೀರ’, ‘ಧೀರ’, ‘ಶೂರ’, ‘ಚೌಕಿದಾರ’ ಎಂದೆಲ್ಲ ಅತಿಶಯೋಕ್ತಿಯಿಂದ ಬಿಂಬಿಸಲಾಗುತ್ತಿದೆ. ಮೋದಿಯನ್ನು ನಾನಾ ಭಂಗಿಯಲ್ಲಿ ಬಣ್ಣಿಸಿ, ಕೊಂಡಾಡಲು ಮುಖ್ಯವಾಹಿನಿಯ ಮಾಧ್ಯಮಗಳು ಹಗಲಿರುಳು ದುಡಿಯುತ್ತಿವೆ. ಆದರೆ, ಮಾಧ್ಯಮಗಳು ಕೊಂಡಾಡುತ್ತಿರುವ ಈ ಅಪರಂಜಿ ಬಿಂಬವು ವಾಸ್ತವದಲ್ಲಿ ಗಾಜಿನ ಮೇಲೆ ಬಿಡಿಸಿದ ಕೃತಕ ಚಿತ್ರದಷ್ಟೇ ನಾಜೂಕಾದ ಪ್ರಹಸನ. ಮೋದಿ ಎಂಬ ಬಲೂನಿಗೆ ಮತ್ತಷ್ಟು ಗಾಳಿ ತುಂಬಲು ಮಾಧ್ಯಮಗಳು ಪತ್ರಿಕೋದ್ಯಮದ ನೈತಿಕತೆಯನ್ನೇ ಆರ್ಥಿಕ ಆಮಿಷಕ್ಕೆ ಬಲಿಕೊಟ್ಟಿವೆ. ಸಾರ್ವಜನಿಕರ ತೆರಿಗೆ ಹಣವನ್ನು ನೀರಿನಂತೆ ಹರಿಸಿ ಮಾಧ್ಯಮಗಳ ಧ್ವನಿಯನ್ನು ಖರೀದಿಸುವ ಮೂಲಕ ಸೃಷ್ಟಿಸಲಾಗಿರುವ ಈ ಕೃತಕ ಪ್ರಭಾವಳಿಯ ಅಸಲಿ ಮುಖವಾಡ ಈಗ ಅಂಕಿಅಂಶಗಳ ಸಮೇತ ಜಗಜ್ಜಾಹೀರಾಗಿದೆ.
ಟಿಎಂಸಿ ಸಂಸದ ಸಾಕೇತ್ ಗೋಖಲೆ ಅವರು ಆರ್‌ಟಿಐ ಮೂಲಕ ಪಡೆದ ಮಾಹಿತಿಯು ಆಘಾತಕಾರಿ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಕೇಂದ್ರ ಸರ್ಕಾರವು ಕಳೆದ ಐದೂವರೆ ವರ್ಷಗಳಲ್ಲಿ, ಅಂದರೆ, 2020ರಿಂದ 2026ರವರೆಗೆ ಮೋದಿ ಅವರ ವರ್ಚಸ್ಸನ್ನು ಹೊಳಪುಗೊಳಿಸಲು ಮಾಧ್ಯಮಗಳ ಜಾಹೀರಾತುಗಳಿಗಾಗಿ ಬರೋಬ್ಬರಿ 2,586 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಅಂದಹಾಗೆ, ಇದು ಕೇವಲ ಕೇಂದ್ರ ಸರ್ಕಾರದ ಜಾಹೀರಾತು ಏಜೆನ್ಸಿಯಾದ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ (CBC) ಮಾಡಿದ ವೆಚ್ಚ ಮಾತ್ರ. ಇತರ ಸಚಿವಾಲಯಗಳು, ಸಾರ್ವಜನಿಕ ವಲಯದ ಉದ್ಯಮಗಳು ಹಾಗೂ ಬಿಜೆಪಿ ಪಕ್ಷ ವ್ಯಯಿಸಿರುವ ಜಾಹೀರಾತು ವೆಚ್ಚಗಳನ್ನು ಸೇರಿಸಿದರೆ ಈ ಮೊತ್ತ ಇನ್ನೂ ಬೃಹತ್ ಪ್ರಮಾಣದ್ದಾಗಿದೆ.
ನಾವು ನೋಡಬೇಕಾದ್ದು, 2,586 ಕೋಟಿ ರೂ. ಎಂಬುದು ಕೇವಲ ಅಂಕಿ ಅಂಶವಲ್ಲ. ಇದು ಸಾರ್ವಜನಿಕ ಹಣವನ್ನು ಒಬ್ಬ ನಾಯಕನ ವರ್ಚಸ್ಸು ಹೆಚ್ಚಿಸಲು ಮಾಡಲಾದ ದುಂದುವೆಚ್ಚ. ಅರ್ಥಾತ್ ದುರ್ವಿನಿಯೋಗ/ದುರ್ಬಳಕೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಹೊಣೆಗಾರಿಕೆ ಎನ್ನುವುದು ಕೇವಲ ಕಾಗದದ ಮೇಲಿನ ನಿಯಮವಲ್ಲ; ಅದು ಸಾರ್ವಜನಿಕರ ಪ್ರತಿಯೊಂದು ಪೈಸೆಗೂ ಉತ್ತರದಾಯಿಯಾಗಿರಬೇಕಾದ ನೈತಿಕ ಜವಾಬ್ದಾರಿಯೂ ಹೌದು. ಆದರೆ, ಮೋದಿ ಸರ್ಕಾರ ಸಾರ್ವಜನಿಕ ಕಲ್ಯಾಣ ಮತ್ತು ನೈಜ ಅಭಿವೃದ್ಧಿಗಿಂತ ಹೆಚ್ಚಾಗಿ ವೈಯಕ್ತಿಕ ಪ್ರಚಾರಕ್ಕೆ ಆದ್ಯತೆ ನೀಡಿದೆ ಎಂಬುದು ಇಂದಿನ ಕಠೋರ ಸತ್ಯ.
ಆರ್‌ಟಿಐ ಮಾಹಿತಿ ಪ್ರಕಾರ, ಈ ಇಡೀ ಪ್ರಚಾರ ಜಾಲದಲ್ಲಿ ಅತಿ ದೊಡ್ಡ ಮೊತ್ತವನ್ನು ದೃಶ್ಯ ಮತ್ತು ಶ್ರಾವ್ಯ (ರೇಡಿಯೋ) ಮಾಧ್ಯಮಗಳಿಗೆ ಧಾರೆ ಎರೆಯಲಾಗಿದೆ. ಟಿವಿ ಮತ್ತು ರೇಡಿಯೋ ಮಾಧ್ಯಮಗಳ ಮೂಲಕ ಜನರಲ್ಲಿ ಮೋದಿಯನ್ನು ದೈತ್ಯನನ್ನಾಗಿ ಬಿಂಬಿಸಲು ಬರೋಬ್ಬರಿ 936 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ಜನರ ಕಣ್ಣಿಗೆ ಮತ್ತು ಕಿವಿಗೆ ಮೋದಿ ಕುರಿತ ಪ್ರಚಾರವೇ ಬೀಳುವಂತೆ ಮಾಡಲು ಈ ಹೂಡಿಕೆ ನೆರವಾಗಿದೆ. ಇನ್ನು ಸಾಂಪ್ರದಾಯಿಕ ಮುದ್ರಣ ಮಾಧ್ಯಮಗಳಾದ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಪುಟಗಳಲ್ಲಿ ಮೋದಿ ಚಿತ್ರವನ್ನು ಅಚ್ಚುಹಾಕಲು, ಓದುಗರ ಕಣ್ಣಿನಲ್ಲಿ ರಾರಾಜಿಸುವಂತೆ ಮಾಡಲು 796 ಕೋಟಿ ರೂ.ಗಳನ್ನು ಬಳಸಿಕೊಳ್ಳಲಾಗಿದೆ. ದೇಶದ ಪ್ರಮುಖ ನಗರಗಳಿಂದ ಹಿಡಿದು ಗ್ರಾಮೀಣ ಭಾಗದ ಮೂಲೆ ಮೂಲೆಗಳವರೆಗಿನ ರಸ್ತೆಗಳಲ್ಲಿ ಬೃಹತ್ ಫ್ಲೆಕ್ಸ್, ಬ್ಯಾನರ್ ಹಾಗೂ ಹೋರ್ಡಿಂಗ್‌ಗಳ ಮೂಲಕ ಮೋದಿಯ ಮುಖವನ್ನು ದಿನವಿಡೀ ಪ್ರದರ್ಶಿಸಲು 584 ಕೋಟಿ ರೂ.ಗಳನ್ನು ನೀರಿನಂತೆ ಹರಿಸಲಾಗಿದೆ. ಇವೆಲ್ಲದರ ಜೊತೆಗೆ, ಇತ್ತೀಚಿನ ಯುವ ಪೀಳಿಗೆಯನ್ನು ತಲುಪಲು ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ವೇದಿಕೆಗಳನ್ನು ಬಳಸಿಕೊಳ್ಳಲಾಗಿದ್ದು, ಅದಕ್ಕಾಗಿ 270 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಈ ಬೃಹತ್ ವರ್ಗೀಕರಣವು ದೇಶದ ನಾಗರಿಕರಲ್ಲಿ ನಿರಂತರವಾಗಿ ಒಂದು ರೀತಿಯ ಕೃತಕ ಭ್ರಮೆಯನ್ನು ಜೀವಂತವಾಗಿಡಲು ಸಾರ್ವಜನಿಕ ನಿಧಿಯನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರುತ್ತದೆ.
ಇಲ್ಲಿ ಗಮನಿಸಬೇಕಾದ ಆತಂಕಕಾರಿ ವಿಷಯವೆಂದರೆ, ಆರ್‌ಟಿಐನಲ್ಲಿ ಬಹಿರಂಗವಾಗಿರುವ ಈ 2,586 ಕೋಟಿ ರೂ.ಗಳ ಮೊತ್ತವು ಕೇವಲ ‘ಸಿಬಿಸಿ’ ಒಂದೇ ಮಾಡಿರುವ ಖರ್ಚು ಮಾತ್ರ. ಇದು ಇಡೀ ಪ್ರಚಾರ ಸಾಮ್ರಾಜ್ಯದ ಹಿಮನದಿಯ ಕೇವಲ ಒಂದು ಮೇಲ್ಮೈ ತುದಿಯಷ್ಟೇ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ರೈಲ್ವೆ, ರಕ್ಷಣೆ, ಪೆಟ್ರೋಲಿಯಂ, ರಸ್ತೆ ಸಾರಿಗೆಯಂತಹ ಹತ್ತಾರು ಪ್ರಮುಖ ಸಚಿವಾಲಯಗಳು ತಮ್ಮದೇ ಆದ ಪ್ರತ್ಯೇಕ ಬಜೆಟ್‌ಗಳ ಮೂಲಕ ಮೋದಿ ಅವರ ಫೋಟೋ ಇರುವ ಬೃಹತ್ ಜಾಹೀರಾತುಗಳನ್ನು ನಿರಂತರವಾಗಿ ಪ್ರಕಟಿಸಿವೆ. ಜೊತೆಗೆ, ದೊಡ್ಡ ದೊಡ್ಡ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಆಡಳಿತ ಪಕ್ಷವು ಸ್ವತಃ ತನ್ನ ಚುನಾವಣಾ ಪ್ರಚಾರಕ್ಕಾಗಿ ಮಾಡುವ ಸಹಸ್ರಾರು ಕೋಟಿ ರೂ.ಗಳ ವೆಚ್ಚಗಳು ಈ ಆರ್‌ಟಿಐ ಮಾಹಿತಿಯಲ್ಲಿ ಒಳಗೊಂಡಿಲ್ಲ.
ಒಂದು ವೇಳೆ ಈ ಎಲ್ಲ ಸಚಿವಾಲಯಗಳು, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಹಾಗೂ ಸಂಸ್ಥೆಗಳು ಕೇವಲ ಒಬ್ಬ ವ್ಯಕ್ತಿಯ ವರ್ಚಸ್ಸು ಹೆಚ್ಚಿಸಲು ಮಾಡಿದ ಒಟ್ಟು ವೆಚ್ಚವನ್ನು ಕ್ರೋಡೀಕರಿಸಿದರೆ, ಆ ಅಂತಿಮ ಮೊತ್ತವು 10,000 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದರೂ ಅಚ್ಚರಿಯಿಲ್ಲ. ದೇಶದ ಆಸ್ಪತ್ರೆಗಳು, ಶಾಲೆಗಳು, ರಸ್ತೆಗಳು ಹಾಗೂ ಉದ್ಯೋಗ ಸೃಷ್ಟಿಯಂತಹ ಮೂಲಭೂತ ಅಗತ್ಯಗಳಿಗೆ ಹಣದ ಕೊರತೆಯಿದೆ ಎಂದು ಹೇಳುವ ಸರ್ಕಾರ, ಮೋದಿ ಎಂಬ ಭ್ರಾಂತಿ ಸೃಷ್ಟಿಗಾಗಿ ಇಷ್ಟೊಂದು ಬೃಹತ್ ಮೊತ್ತವನ್ನು ವಿನಿಯೋಗಿಸಿದೆ. ಜನರ ಕಣ್ಣಿಗೆ ಮಣ್ಣೆರಚಿದೆ.
ಮತ್ತೊಂದು ಗಂಭೀರ ವಿಚಾರವೆಂದರೆ, ಯಾವಾಗ ಒಬ್ಬ ನಾಗರಿಕ ಅಥವಾ ಜನಪ್ರತಿನಿಧಿ ಸಾರ್ವಜನಿಕ ಹಣದ ಬಳಕೆಯ ಬಗ್ಗೆ ವಿವರಗಳನ್ನು ಕೇಳುತ್ತಾರೋ, ಆಗ ಪಾರದರ್ಶಕವಾಗಿ ಉತ್ತರಿಸುವುದು ಸರ್ಕಾರದ ಕರ್ತವ್ಯ. ಆದರೆ, ಇಲ್ಲಿ, ಸಾರ್ವಜನಿಕರ ಹಣವನ್ನು ಬಳಸಿಕೊಂಡು ಯಾರಿಗೆ ಲಾಭ ಮಾಡಿಕೊಡಲಾಗಿದೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಿಲ್ಲ. ಈ ಬೃಹತ್ 2,586 ಕೋಟಿ ರೂ.ಗಳ ನಿಧಿಯನ್ನು ಯಾವ ಮಾಧ್ಯಮ ಸಂಸ್ಥೆಗಳಿಗೆ, ಯಾವ ಟಿವಿ ಚಾನೆಲ್‌ಗಳಿಗೆ ಅಥವಾ ಯಾವ ಖಾಸಗಿ ಜಾಹೀರಾತು ಏಜೆನ್ಸಿಗಳಿಗೆ ಹಂಚಿಕೆ ಮಾಡಲಾಗಿದೆ ಎಂಬ ನಿರ್ದಿಷ್ಟ ಮಾಹಿತಿ ನೀಡುವಂತೆ ಸಾಕೇತ್ ಗೋಖಲೆ ಕೇಳಿದ್ದರು. ಆದರೆ, ಆ ಮಾಹಿತಿ ನೀಡಲು ಕೇಂದ್ರ ಸಂವಹನ ಬ್ಯೂರೋ ನಿರಾಕರಿಸಿದೆ. ಅದಕ್ಕೆ ಅವರು ನೀಡಿದ ನೆಪ ‘ವಾಣಿಜ್ಯ ವಿಶ್ವಾಸಾರ್ಹತೆ’.
ಈ ಲೇಖನ ಓದಿದ್ದೀರಾ?: ಮುಖವಾಡ ಮತ್ತು ಜಂಟಿ ಹೊಣೆಗಾರಿಕೆಯ ಇಕ್ಕಟ್ಟು: ಸಂಘಕ್ಕೊಂದು ಸಾಂವಿಧಾನಿಕ ಪಾಠ
ಸಾರ್ವಜನಿಕರು ತಮ್ಮ ರಕ್ತ ಬೆವರಿನ ಗಳಿಕೆಯಿಂದ ಸರ್ಕಾರಕ್ಕೆ ಕಟ್ಟುವ ತೆರಿಗೆ ಹಣ ಯಾರ ಜೇಬಿಗೆ ಹೋಗಿ ಸೇರುತ್ತಿದೆ ಎಂದು ತಿಳಿದುಕೊಳ್ಳುವ ಕನಿಷ್ಠ ಹಕ್ಕು ಈ ದೇಶದ ಜನರಿಗಿದೆ. ಆದರೆ, ಅದನ್ನು ವ್ಯವಸ್ಥಿತವಾಗಿ ಮುಚ್ಚಿಡುವ ಮೂಲಕ ಸರ್ಕಾರವು ತನ್ನ ಉತ್ತರದಾಯಿತ್ವದಿಂದ ನುಣುಚಿಕೊಂಡಿದೆ. ಯಾವ ಮಾಧ್ಯಮಗಳಿಗೆ ಎಷ್ಟೆಷ್ಟು ಕೋಟಿ ರೂಪಾಯಿಗಳ ಸಾರ್ವಜನಿಕ ಸಂಪತ್ತು ಸಂದಾಯವಾಗಿದೆ ಎಂಬುದು ಬಹಿರಂಗವಾದರೆ, ಸರ್ಕಾರದ ಪರವಾಗಿ ಸುಳ್ಳು ವರದಿಗಳನ್ನು ಬಿತ್ತರಿಸುವ ಮಾಧ್ಯಮಗಳ ಅಸಲಿ ಮುಖವಾಡ ಕಳಚಿಬೀಳುತ್ತದೆ.
ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಕರೆಯಲ್ಪಡುವ ಮಾಧ್ಯಮಗಳು ಸಮಾಜದಲ್ಲಿ ಧ್ವನಿ ಇಲ್ಲದವರ ಪರವಾಗಿ ನಿಲ್ಲಬೇಕು. ಆಡಳಿತಗಾರರ ತಪ್ಪುಗಳನ್ನು ನಿರ್ಭೀತವಾಗಿ ಪ್ರಶ್ನಿಸಬೇಕು. ಆದರೆ, ಯಾವಾಗ ಒಂದು ಮಾಧ್ಯಮ ಸಂಸ್ಥೆಯ ಆರ್ಥಿಕ ಉಳಿವು ಮತ್ತು ಲಾಭವು ಸಂಪೂರ್ಣವಾಗಿ ಸರ್ಕಾರದ ಸಾವಿರಾರು ಕೋಟಿ ರೂ.ಗಳ ಜಾಹೀರಾತು ನಿಧಿಯ ಮೇಲೆ ಅವಲಂಬಿತವಾಗುತ್ತದೆಯೋ, ಆಗ ಆ ಮಾಧ್ಯಮವು ತನ್ನ ನೈತಿಕತೆಯನ್ನು ಕಳೆದುಕೊಳ್ಳುತ್ತದೆ. 2,586 ಕೋಟಿ ರೂ.ಗಳ ಈ ಬೃಹತ್ ಆರ್ಥಿಕ ಆಮಿಷ ಮತ್ತು ನಿಯಂತ್ರಣದ ಮೂಲಕ ಕೇಂದ್ರ ಸರ್ಕಾರವು ದೇಶದ ಮುಖ್ಯವಾಹಿನಿಯ ಮಾಧ್ಯಮಗಳನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಇದೇ ಕಾರಣಕ್ಕಾಗಿ ಇಂದು ಭಾರತೀಯ ಮಾಧ್ಯಮ ರಂಗವನ್ನು ‘ಗೋದಿ ಮೀಡಿಯಾ’ ಎಂದು ಟೀಕಿಸಲಾಗುತ್ತಿದೆ.
ಸರ್ಕಾರದ ತಪ್ಪು ನಿರ್ಧಾರಗಳು, ಆರ್ಥಿಕ ಬಿಕ್ಕಟ್ಟುಗಳು ಮತ್ತು ಜನರ ಸಂಕಷ್ಟಗಳನ್ನು ವರದಿ ಮಾಡಬೇಕಾದ ಚಾನೆಲ್‌ಗಳು, ದಿನದ ಇಪ್ಪತ್ತನಾಲ್ಕು ಗಂಟೆಯೂ ಮೋದಿಯನ್ನು ಕೊಂಡಾಡುವ, ಅವರ ಸುತ್ತ ಒಂದು ದೈವಿಕ ಭ್ರಮೆಯನ್ನು ಸೃಜಿಸುವ ಭಜನಾ ಮಂಡಳಿಗಳಂತೆ ಕೆಲಸ ಮಾಡುತ್ತಿವೆ. ಇದು ಕೇವಲ ಮಾಧ್ಯಮಗಳ ವೈಫಲ್ಯವಲ್ಲ, ಬದಲಿಗೆ ಆರ್ಥಿಕ ಶಕ್ತಿಯನ್ನು ಬಳಸಿ ಸ್ವತಂತ್ರ ಪತ್ರಿಕೋದ್ಯಮದ ಧ್ವನಿಯನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಮತ್ತು ಸಾರ್ವಜನಿಕರ ಯೋಚನಾ ಶಕ್ತಿಯನ್ನು ದುರ್ಬಲಗೊಳಿಸುವ ಬೃಹತ್ ಷಡ್ಯಂತ್ರವೂ ಕೂಡ.
ದೇಶದ ಮಾಧ್ಯಮಗಳು ತಮ್ಮ ನೈತಿಕತೆ ಮತ್ತು ಪ್ರತಿಕಾ ಸ್ವಾತಂತ್ರವನ್ನು ಮೋದಿಯ ಪದತಲದಲ್ಲಿಟ್ಟು ಶರಣಾಗಿರುವುದರಿಂದಲೇ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು 180 ರಾಷ್ಟ್ರಗಳ ಪೈಕಿ 159ನೇ ಹೀನಾಯ ಸ್ಥಾನಕ್ಕೆ ಕುಸಿದಿದೆ. ಇದೇ ಹೊತ್ತಿನಲ್ಲಿ ನಮ್ಮೆದುರು ಇತ್ತೀಚೆಗೆ, ಮೋದಿ ಅವರನ್ನು ಗಟ್ಟಿಧ್ವನಿಯಲ್ಲಿ ಪ್ರಶ್ನಿಸಿದ್ದ ಪರ್ತಕರ್ತರಿರುವ ನಾರ್ವೆ ಇದೇ ಸೂಚ್ಯಂತದಲ್ಲಿ ಅಗ್ರ ಸ್ಥಾನದಲ್ಲಿದೆ.
ನಾರ್ವೆಯಲ್ಲಿ ಪತ್ರಕರ್ತರಿಗೆ ಬಲವಾದ ರಕ್ಷಣೆ ಮತ್ತು ಸರ್ಕಾರದ ಪಾರದರ್ಶಕತೆ ಇದೆ. ಮಾಧ್ಯಮಗಳು ತಮ್ಮನ್ನು ಮಾರಿಕೊಂಡಿಲ್ಲ. ಅಲ್ಲಿನ ಸರ್ಕಾರವು ತಮ್ಮನ್ನು ಟೀಕಿಸುವ ಮಾಧ್ಯಮಗಳಿಗೂ ಆರ್ಥಿಕ ನೆರವು ನೀಡುತ್ತದೆ. ಪತ್ರಕರ್ತರಿಗೆ ಯಾವುದೇ ಬೆದರಿಕೆಗಳಿಲ್ಲ. ಆದರೆ, ಭಾರತದಲ್ಲಿ ಪ್ರಭುತ್ವವನ್ನು ಪ್ರಶ್ನಿಸುವ ಪತ್ರಕರ್ತರ ಮೇಲೆ ದೇಶದ್ರೋಹದಂತಹ ಕಠಿಣ ಮೊಕದ್ದಮೆಗಳು, ತನಿಖಾ ಸಂಸ್ಥೆಗಳ ದಾಳಿ ಹಾಗೂ ದೈಹಿಕ ದೌರ್ಜನ್ಯಗಳ ಮೂಲಕ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ.
ಪ್ರಭುತ್ವವನ್ನು ಪ್ರಶ್ನಿಸದ, ಪುಸಲಾವಣೆಗಿಳಿದ ಮಾಧ್ಯಮಗಳು ಸರ್ಕಾರದ ಕೋಟ್ಯಂತರ ರೂ.ಗಳ ಜಾಹೀರಾತು ನಿಧಿಯ ಮೇಲೆ ಬದುಕುತ್ತಿವೆ. ಅದಕ್ಕಾಗಿ, ತಮ್ಮನ್ನು ತಾವು ಮಾರಿಕೊಂಡಿವೆ. ಮಾರಿಕೊಂಡ ಮಾಧ್ಯಮಗಳಲ್ಲಿ ಮೋದಿ ಮಹಾನ್ ವ್ಯಕ್ತಿಯಾಗಿದ್ದಾರೆ, ಪ್ರಶ್ನಾತೀತರಾಗಿದ್ದಾರೆ, ದೇಶಕ್ಕೆ ದಿಕ್ಕಾಗಿ ಬಿಂಬಿತರಾಗುತ್ತಿದ್ದಾರೆ.
ನಿಜವಾದ ದೇಶದ ಪ್ರಗತಿ ಎನ್ನುವುದು ದಿನಪತ್ರಿಕೆಗಳ ಮುಖಪುಟದಲ್ಲಿ ಬರುವ ವರ್ಣರಂಜಿತ ಜಾಹೀರಾತುಗಳಲ್ಲಾಗಲಿ ಅಥವಾ ಟಿವಿ ಪರದೆಯ ಮೇಲಿನ ಅಬ್ಬರದ ಚರ್ಚೆಗಳಲ್ಲಾಗಲಿ ಇರುವುದಿಲ್ಲ. ಅದು ದೇಶದ ಸಾಮಾನ್ಯ ನಾಗರಿಕನ ಬದುಕಿನ ಗುಣಮಟ್ಟ ಸುಧಾರಿಸುವುದರಲ್ಲಿ, ಯುವಜನರಿಗೆ ಸಿಗುವ ಉದ್ಯೋಗದಲ್ಲಿ ಮತ್ತು ಹಿಂದುಳಿದ-ತಳ ಸಮುದಾಯಗಳ ಸಬಲೀಕರಣದಲ್ಲಿ ಇರುತ್ತದೆ ಎಂಬುದು ಯಾವತ್ತು ದೇಶದ ಜನರಿಗೆ ಅರ್ಥವಾಗುತ್ತದೋ, ಅಂದು ದೇಶ ದೇಶವಾಗಿ ಉಳಿಯುತ್ತದೆ.



