ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡುಗಡೆ ಮಾಡುವ ಸಂಬಂಧ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ ನಗರದಲ್ಲಿ ತಿಳಿಸಿದ್ದಾರೆ.
ಗುರುವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಬೇಸಿಗೆ ಅವಧಿಯಲ್ಲಿ ಮಹಾರಾಷ್ಟ್ರದಿಂದ 2 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಕಳೆದ ಐದಾರು ವರ್ಷಗಳಿಂದ ನೀರು ಬಿಡಲಾಗಿಲ್ಲ. ಹೀಗಾಗಿ ಹಿಂದಿನಂತೆ ನೀರು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮನವಿ ಮಾಡಲಿದ್ದು, ಈ ಬಾರಿ ನೀರು ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿದ ಪರಿಣಾಮ ಸುಮಾರು ಒಂದೂವರೆ ಟಿಎಂಸಿ ನೀರು ನಷ್ಟವಾಗಿದ್ದು, ಸದ್ಯ ಅಲ್ಲಿ ಕೇವಲ 0.08 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಮಹಾರಾಷ್ಟ್ರ ಸರ್ಕಾರವನ್ನು ಮನವೊಲಿಸಿ ನೀರು ಬಿಡುಗಡೆ ಮಾಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಕುಡಿಯುವ ನೀರಿಗೆ ಆತಂಕ ಬೇಡ
ಹಿಡಕಲ್ ಜಲಾಶಯದಲ್ಲಿ ಸದ್ಯ 5.5 ಟಿಎಂಸಿ ನೀರು ಲಭ್ಯವಿದ್ದು, ಅದನ್ನು ಕುಡಿಯುವ ನೀರಿಗಾಗಿ ಮಾತ್ರ ಬಳಸಲಾಗುತ್ತಿದೆ. ಮಲಪ್ರಭಾ ಜಲಾಶಯದಲ್ಲಿ 8 ಟಿಎಂಸಿ ನೀರಿದ್ದು, ಅದರಲ್ಲಿ 5 ಟಿಎಂಸಿ ನೀರು ರಾಜ್ಯದ ನಿಯಂತ್ರಣದಲ್ಲಿದೆ. ಧಾರವಾಡ ಜಿಲ್ಲೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಅಗತ್ಯವಿರುವ ನೀರನ್ನು ಪೂರೈಸಿದ ಬಳಿಕವೂ ಸದ್ಯಕ್ಕೆ ಕುಡಿಯುವ ನೀರಿನ ಕೊರತೆಯ ಆತಂಕ ಇಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಬೆಳಗಾವಿ ನಗರದಲ್ಲಿ ನೀರಿನ ಸಮಸ್ಯೆ ಎದುರಾದರೆ ಖಾಸಗಿ ಬೋರ್‌ವೆಲ್ ಹಾಗೂ ಟ್ಯಾಂಕರ್‌ಗಳನ್ನು ಗುರುತಿಸಿ ಬಾಡಿಗೆ ಆಧಾರದಲ್ಲಿ ಬಳಸಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ‘ತುರ್ತು ನಿಗಾ ಯೋಜನೆ’ ಸಿದ್ಧಪಡಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ನೀರು ಉಳಿತಾಯಕ್ಕೆ ಕರೆ
ಜಿಲ್ಲೆಯಲ್ಲಿ 36 ವಾರಗಳಿಗೆ ಸಾಕಾಗುವಷ್ಟು ಜಾನುವಾರು ಮೇವಿನ ಲಭ್ಯತೆ ಇದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಸಂಕಷ್ಟದ ಸಮಯದಲ್ಲಿ ಹನಿ ನೀರೂ ಅಮೂಲ್ಯವಾಗಿದ್ದು, ಸಾಧ್ಯವಾದಷ್ಟು ನೀರು ಉಳಿತಾಯ ಮಾಡುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮನವಿ ಮಾಡಿದರು.



