"ದಲಿತ ಮನುಷ್ಯನಿಗೆ ಆರ್‌ಎಸ್‌ಎಸ್ ವಿಚಾರ ಏಕೆ ಬೇಕು, ಆರ್‌ಎಸ್‌ಎಸ್ ತಂಟೆಗೆ ಹೋದವರು ಯಾರೂ ಉಳಿದಿಲ್ಲ" ಎಂದು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿರುವ ಬಿಜೆಪಿಯ ಹಿರಿಯ ಸಂಸದರಾದ ರಮೇಶ್ ಜಿಗಜಿಣಗಿ ಅವರನ್ನು 'ಈದಿನ ಡಾಟ್ ಕಾಮ್' ಸಂಪರ್ಕಿಸಿದೆ. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಜಿಗಜಿಣಗಿ ಅವರು "ಇದನ್ನು ದೊಡ್ಡದು ಮಾಡಬೇಡಿ" ಎಂಬ ನಿಲುವಿಗೆ ಬಂದರು.
“ದಲಿತ ಮನುಷ್ಯನಿಗೆ ಆರ್‌ಎಸ್‌ಎಸ್ ವಿಚಾರ ಏಕೆ ಬೇಕು, ಆರ್‌ಎಸ್‌ಎಸ್ ತಂಟೆಗೆ ಹೋದವರು ಯಾರೂ ಉಳಿದಿಲ್ಲ” ಎಂದು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿರುವ ಬಿಜೆಪಿಯ ಹಿರಿಯ ಸಂಸದರಾದ ರಮೇಶ್ ಜಿಗಜಿಣಗಿ ಅವರು, “ಆ ವಿಚಾರ ದೊಡ್ಡದು ಮಾಡಬೇಡಿ, ನಾನು ಆ ಅರ್ಥದಲ್ಲಿ ಹೇಳಿಲ್ಲ” ಎಂದು ಮನವಿ ಮಾಡಿದ್ದಾರೆ.
ರಾಜ್ಯ ಗೃಹಸಚಿವ ಪ್ರಿಯಾಂಕ್ ಖರ್ಗೆಯವರು ಆರ್‌ಎಸ್‌ಎಸ್‌ಗೆ ಪತ್ರ ಬರೆದ ಬಳಿಕ ಜಿಗಜಿಣಗಿ ಹೇಳಿಕೆ ನೀಡಿದ್ದರು. ವಿವಾದ ಸೃಷ್ಟಿಯಾದ ಹಿನ್ನಲೆಯಲ್ಲಿ ಜಿಗಜಿಣಗಿ ಅವರ ಪ್ರತಿಕ್ರಿಯೆ ಪಡೆಯಲು ‘ಈದಿನ. ಕಾಮ್’ ಕರೆ ಮಾಡಿದಾಗ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಜಿಗಜಿಣಗಿ ಅವರು “ಇದನ್ನು ದೊಡ್ಡದು ಮಾಡಬೇಡಿ” ಎಂಬ ನಿಲುವಿಗೆ ಬಂದರು.
ಇದನ್ನೂ ಓದಿ: ನಾನು ಬಾಬಾಸಾಹೇಬರ ಸಿದ್ಧಾಂತದವನು, ಹೆದರುವ ಮಾತೇ ಇಲ್ಲ: ರಮೇಶ್ ಜಿಗಜಿಣಗಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಈದಿನ: ನಿಮ್ಮ ಹೇಳಿಕೆ ಸಂಬಂಧ ಚರ್ಚೆಯಾಗುತ್ತಿದೆ. ಪ್ರಿಯಾಂಕ್ ಖರ್ಗೆಯವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆರ್‌ಎಸ್‌ಎಸ್ ವಿರುದ್ಧ ದಲಿತರು ಮಾತನಾಡಲೇಬಾರದಾ ಅಂತ ನಿಮ್ಮನ್ನು ಪ್ರಶ್ನೆ ಮಾಡಲಾಗುತ್ತಿದೆ. ಆರ್‌ಎಸ್‌ಎಸ್ ಬಗ್ಗೆ ಖರ್ಗೆಯವರು ಎತ್ತಿರುವ ಪ್ರಶ್ನೆಗಳು ತಪ್ಪಾಗಿವೆಯೇ? ನೀವು ಈ ರೀತಿ ಏಕೆ ಹೇಳಿಕೆ ಕೊಟ್ಟಿರಿ? ದಲಿತ ಸಮುದಾಯದ ಹಿರಿಯ ನಾಯಕರಾಗಿದ್ದು, ದಲಿತರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿತ್ತಲ್ಲವೇ? ಎಂಬ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ನಿಮ್ಮ ಪ್ರತಿಕ್ರಿಯೆ ಏನು?
ಜಿಗಜಿಣಗಿ: ‘ಕಾಂಗ್ರೆಸ್ ಪಾರ್ಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಇಷ್ಟು ವರ್ಷ ದುಡಿದಿದ್ದಾರೆ, ಅವರು ಮುಖ್ಯಮಂತ್ರಿಯಾದರೆ ಖುಷಿಯಾಗುತ್ತದೆ’ ಎಂದು ನಾನೇ ಮೊದಲು ಹೇಳಿದ್ದು. ಅದನ್ನೆಲ್ಲ ಅವರು ಮರೆತ್ತಿದ್ದಾರೆ. ಆರ್‌ಎಸ್‌ಎಸ್ ಶಾಖೆಗೆ ನಾನು ಹೋಗುತ್ತಿದ್ದೆ ಎಂದು ಹಿಂದೊಮ್ಮೆ ಖರ್ಗೆಯವರು ಹೇಳಿದ್ದರು. ಅದನ್ನೆಲ್ಲ ಅವರು ಮರೆತ್ತಿದ್ದಾರೆ. ನಿಮ್ಮ ತಂದೆಯವರು ಕಾಂಗ್ರೆಸ್ ಅಧ್ಯಕ್ಷರೆನ್ನುವ ಕಾರಣಕ್ಕೆ ಸಣ್ಣವಯಸ್ಸಲ್ಲೇ ನಿಮಗೆ ಗೃಹ ಖಾತೆ ಕೊಟ್ಟಿದ್ದಾರೆ. ಆ ಕೆಲಸವನ್ನು ಮಾಡೋದು ಬಿಟ್ಟು, ನಾವು ದಲಿತರೇಕೆ ಈ ಸಂಘಪರಿವಾರವನ್ನು ಎದುರು ಹಾಕಿಕೊಳ್ಳೋದು ಅಂತ ಹೇಳಿದ್ದೇನೆ. ಇದು ತಪ್ಪಾ?
ಈದಿನ: ನೀವು ಹೇಳಿದಂತಹ ದಾಟಿ ಮತ್ತು ಹೇಳಿದಂತಹ ಸಂದರ್ಭವನ್ನು ಗಮನಿಸಬೇಕಾಗುತ್ತದೆ. ಅದು ಹೇಗೆ ಬಿಂಬಿತವಾಗಿದೆ ಅಂದರೆ- ದಲಿತರಾದವರು ಆರ್‌ಎಸ್‌ಎಸ್ ವಿರುದ್ಧ ಮಾತನಾಡುವಂತಿಲ್ಲ ಎನ್ನುವಂತಿದೆ. ಆರ್‌ಎಸ್‌ಎಸ್ ವಿರುದ್ಧ ಮಾತನಾಡಿ ಉಳಿಯಲು ಸಾಧ್ಯವಿಲ್ಲ ಎಂಬ ಮಾತನ್ನೂ ನೀವು ಹೇಳಿದ್ದೀರಿ.
ಜಿಗಜಿಣಗಿ: ಅದು ಹುಟ್ಟಿಸಿಕೊಂಡು ಮಾಡಿರುವ ಆರೋಪವಾಗಿದೆ. ನಾನು ಈ ವಿಷಯಕ್ಕೆ ಸಂಬಂಧಪಟ್ಟಂತೆ ಈ ಮಾತು ಹೇಳಿಲ್ಲ. ಈ ಹಿಂದೆ ಬೇರೆ ಯಾವುದೋ ವಿಷಯಕ್ಕೆ ಸಂಬಂಧಪಟ್ಟಂತೆ ಈ ಮಾತು ಹೇಳಿದ್ದೀನಿ. ದಲಿತರನ್ನು ಉದ್ದೇಶಿಸಿ ಮಾತ್ರ ಆ ಮಾತು ಹೇಳಿಲ್ಲ. ಸಂಘಪರಿವಾರದ ವಿರುದ್ಧ ಇದ್ದ ಯಾರೇ ಆದರೂ ರಾಜಕಾರಣದಲ್ಲಿ ಉಳಿಯುವುದು ಕಷ್ಟವೆಂದು ಹೇಳಿದ್ದೇನೆ. ಈ ಹಿಂದೆ ಹೇಳಿದ್ದನ್ನು ಈಗಿನ ಘಟನೆಗೆ ತಂದು ಜೋಡಿಸಿದರೆ ನಾನೇನು ಮಾಡಲಿ ಮಾರಾಯ?
ಈದಿನ: ನಾವು ಕೂಡ ವಿಡಿಯೋ ನೋಡಿದ್ದೇವೆ. ಆರ್‌ಎಸ್‌ಎಸ್ ವಿರುದ್ಧ ಹೋಗಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದೀರಿ. ನೀವು ಯಾವ ಅರ್ಥದಲ್ಲಿ ಹೇಳಿದ್ದೀರೋ, ಇರಲಿ. ದಲಿತರಾಗಲಿ, ಯಾರೇ ಆಗಲಿ, ಆರ್‌ಎಸ್‌ಎಸ್ ವಿರುದ್ಧ ಮಾತನಾಡಿ ಉಳಿಯುವುದಿಲ್ಲವೇ? ಖರ್ಗೆಯವರು ಆರ್‌ಎಸ್‌ಎಸ್‌ನ ನೋಂದಣಿಯ ವಿಚಾರವಾಗಿ ಪ್ರಶ್ನೆ ಮಾಡಿದ್ದಲ್ಲವೇ?
ಇದನ್ನೂ ಓದಿ: ವಿಜಯಪುರ | ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಕಾಪಾಡಿ, ಪರಿಸರ ಸಂರಕ್ಷಿಸಿ: ಸಂಸದ ರಮೇಶ ಜಿಗಜಿಣಗಿ
ಜಿಗಜಿಣಗಿ: ಆರ್‌ಎಸ್‌ಎಸ್ ವಿರುದ್ಧ ಹೋದರೆ ಯಾರೂ ರಾಜಕಾರಣದಲ್ಲಿ ಉಳಿಯುವುದಿಲ್ಲ ಎಂದು ಯಾವುದೋ ಸಂದರ್ಭದಲ್ಲಿ ಹೇಳಿದ್ದೀನಿ. ಅದನ್ನು ಪ್ರಿಯಾಂಕ್ ಖರ್ಗೆ ಮೇಲೆ ಹಾಕಿಕೊಂಡರೆ ನಾನೇನು ಮಾಡಲಿ ಮಾರಾಯ. ನಾನು ಇದಕ್ಕೆ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ಏನಾದರೂ ಹೇಳಿಕೊಂಡು ಅಡ್ಡಾಡಲಿ. ಎಲ್ಲ ಸಮಾಜವು ಒಟ್ಟಿಗೆ ನಡೆಯಬೇಕು ಎಂಬುದು ನನ್ನ ಜೀವನದಲ್ಲಿ ಇದೆ. ಈ ರೀತಿ ಮಾಡಿದರೆ ಏನು ಮಾಡಲಿ? ಇಷ್ಟು ವರ್ಷವಾದರೂ ನಾನು ಲೆಫ್ಟು- ರೈಟು ಅಂತ ಬೇರ್ಪಡಿಸಿಲ್ಲ.
ಈದಿನ: ನೀವೊಬ್ಬ ಸಜ್ಜನ ರಾಜಕಾರಣಿ, ಸರಿ. ದಲಿತರೇಕೆ ಆರ್‌ಎಸ್‌ಎಸ್ ತಂಟೆಗೆ ಹೋಗಬೇಕು ಎಂಬುದೇ ನಿಮ್ಮ ಅಭಿಪ್ರಾಯವೆಂಬುದು ವಿಡಿಯೋದಲ್ಲಿ ಸ್ಪಷ್ಟ. ಆರ್‌ಎಸ್‌ಎಸ್ ಇತಿಹಾಸ ತೆಗೆದು ನೋಡಿದರೆ, ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಈ ಸಂವಿಧಾನವನ್ನೇ ಆರ್‌ಎಸ್‌ಎಸ್ ವಿರೋಧಿಸಿತ್ತು. ತನ್ನ ಮುಖವಾಣಿಯಾದ ಆರ್ಗನೈಸರ್ ಪತ್ರಿಕೆಯಲ್ಲಿ, ‘ಈ ಸಂವಿಧಾನದಲ್ಲಿ ಭಾರತೀಯತೆ ಇಲ್ಲ’ ಅಂತ ಬರೆದಿತ್ತು. ಇಂತಹ ಒಂದು ಸಂಘಟನೆಯನ್ನು ದಲಿತ ನಾಯಕರಾದ ಜಿಗಜಿಣಗಿಯವರು ಸಮರ್ಥನೆ ಮಾಡುತ್ತಾರೆ ಎಂದಾಗ ಯಾವ ಸಂದೇಶ ಹೋಗುತ್ತದೆ?
ಜಿಗಜಿಣಗಿ: ನಾನಂತೂ ಸ್ಪಷ್ಟವಾಗಿದ್ದೇನೆ. ಲೆಫ್ಟೂ ರೈಟೂ ಎರಡೂ ಸಮುದಾಯಕ್ಕೂ ಸಹಾಯ ಮಾಡುತ್ತಾ ಬಂದಿದ್ದೇನೆ. ಯಾವತ್ತೂ ತೊಂದರೆ ಮಾಡಿಲ್ಲ. ನನ್ನ ಕೈ ನಡೆದಾಗ ಅವರಿಗೂ ಟಿಕೆಟ್ ಕೊಡಿಸಿದ್ದೀನಿ, ಮಂತ್ರಿ ಮಾಡಿದ್ದೀನಿ… ಅವರೇ ಕೂತು ಹಿಂಗೆ ಮಾತನಾಡಿದರೆ ಏನು ಮಾಡಲಿ?
ಈದಿನ: ನೀವಾಗಲಿ, ಖರ್ಗೆಯವರಾಗಲಿ ಸಮಸ್ತ ದಲಿತ ಸಮುದಾಯವನ್ನು ಹೇಗೆ ನೋಡಿದ್ದಾರೆ ಎಂಬುದು ರಾಜಕಾರಣ ಒಳಗೆ ನಡೆಯುವ ಸಂಗತಿ. ಈ ಸಂದರ್ಭದಲ್ಲಿ ಬಂದಿರುವ ಹೇಳಿಕೆಯನ್ನು ನಿರ್ದಿಷ್ಟವಾಗಿ ಪ್ರಶ್ನೆ ಮಾಡಲಾಗುತ್ತಿದೆ.
ಜಿಗಜಿಣಗಿ: ಅದನ್ನೇ ನೀವು ದಯವಿಟ್ಟು ದೊಡ್ಡದು ಮಾಡಬೇಡಿ. ಅದಕ್ಕೆ ದಿನಾಲೂ ಫೋನ್ ಮಾಡ್ತಾ ಇದ್ದಾರೆ.
ಈದಿನ: ನಿಮ್ಮನ್ನು ವೈಯಕ್ತಿಕವಾಗಿ ನಿಂದನೆ ಮಾಡುವ ರೀತಿ, ಫೋನ್ ಮತ್ತು ವಿಡಿಯೋ ಮಾಡುವುದನ್ನು ಪ್ರೋತ್ಸಾಹಿಸುವುದು ತಪ್ಪು. ಆದರೆ ನಿಮ್ಮ ಪ್ರತಿಕ್ರಿಯೆ ಬೇರೆ ಸಂದೇಶವನ್ನು ಕೊಟ್ಟಿದೆ ಎಂದಷ್ಟೇ ಇಲ್ಲಿನ ಪ್ರಶ್ನೆ.
ಜಿಗಜಿಣಗಿ: ಸರಿ ಮಾರಾಯ… ಸರಿ.. ಆ ದೃಷ್ಟಿಕೋನದಲ್ಲಂತೂ ನಾನು ಹೇಳಿಲ್ಲ.
ಈದಿನ: ಪ್ರಿಯಾಂಕ್ ಖರ್ಗೆಯವರು ಆರ್‌ಎಸ್‌ಎಸ್ ನೋಂದಣಿಯ ಪ್ರಶ್ನೆ ಕೇಳಿದ್ದಾರೆ. ಕಾನೂನಾತ್ಮಕವಾಗಿ ಎದ್ದಿರುವ ಪ್ರಶ್ನೆ ಇದು. ಅದರ ಬಗ್ಗೆಯಾದರೂ ಹೇಳುವುದಾದರೆ…
ಜಿಗಜಿಣಗಿ: ಅವರ ತಂಟೆ ಯಾಕೆ? ನಮ್ಮ ಕೆಲಸನಾ ಅದು?
ಈದಿನ: ಅವರು (ಆರ್‌ಎಸ್‌ಎಸ್‌ನವರು) ದಲಿತರ ತಂಟೆಗೆ ಬರುತ್ತಾರೆ. ಉದಾಹರಣೆಗೆ ವಾದಿರಾಜ ಸಾಮರಸ್ಯ ಅಂತ ಆರ್‌ಎಸ್‌ಎಸ್ ಮುಖಂಡರು ಇದ್ದಾರೆ. ಅವರು ದಲಿತರ ವಿಚಾರವಾಗಿ ಮಾತನಾಡುತ್ತಾರೆ. ದಲಿತರೇಕೆ ಆರ್‌ಎಸ್‌ಎಸ್ ವಿಚಾರ ಮಾತಾಡಬಾರದು ಎಂದು ಕೇಳಲಾಗುತ್ತಿದೆ. ಇದಕ್ಕೆ ಏನಂತೀರಿ?
ಜಿಗಜಿಣಗಿ: ಸರಿಯಪ್ಪ. ನಾನು ಏನೂ ಪ್ರತಿಕ್ರಿಯೆ ಕೊಡಲ್ಲ.
ಈದಿನ: ನೀವು ಹೇಳಿದ್ದಷ್ಟನ್ನೇ ಪ್ರಕಟಿಸುತ್ತೇವೆ. ಧನ್ಯವಾದಗಳು.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.



