ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ರಾಜಕಾರಣ ಮಾಡಲು ಬಡವರು, ರೈತರು, ಮಹಿಳೆಯರು, ಕಾರ್ಮಿಕರು, ಮಧ್ಯಮವರ್ಗದವರು ಬೇಕು. ಹಾಗೆಯೇ ಪಕ್ಷಕ್ಕೆ ಕೋಟ್ಯಂತರ ರೂಪಾಯಿ ದೇಣಿಗೆ ನೀಡುವ ಅಶೋಕ್ ಖೇಣಿಯಂತಹ ಉದ್ಯಮಪತಿಗಳೂ ಬೇಕು. ಅಧಿಕಾರಕ್ಕೇರಿದಾಗ ಕಣ್ಣೊರೆಸುವ ತಂತ್ರಕ್ಕೆ ತಲೆಬಾಗುತ್ತಾರೆ; ವಿರೋಧ ಪಕ್ಷದಲ್ಲಿದ್ದಾಗ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಇದು ರಾಜಕಾರಣಿಗಳ 'ನೈಸ್' ರಾಜಕಾರಣ.
‘ನೈಸ್ ಯೋಜನೆಯಲ್ಲಿ ನಡೆದಿರುವ ಅಕ್ರಮಗಳು ಮತ್ತು ಸಾರ್ವಜನಿಕರಿಂದ ಸಂಗ್ರಹಿಸಲಾಗುತ್ತಿರುವ ಅನ್ಯಾಯದ ಟೋಲ್ ವಸೂಲಿಯನ್ನು ಕೂಡಲೇ ತಡೆಹಿಡಿದು, ಇಡೀ ಯೋಜನೆಯನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಬೇಕು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದು ಒತ್ತಾಯಿಸಿದ್ದಾರೆ.
ಆ ಪತ್ರಕ್ಕೆ ಅವರು ಘನತೆವೆತ್ತ ಉಚ್ಚ ನ್ಯಾಯಾಲಯದ ‘ನೈಸ್ ಯೋಜನೆ ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣುತ್ತಿದೆ’ ಎಂಬ ಅಭಿಪ್ರಾಯವನ್ನು ಗುರಾಣಿಯಂತೆ ಬಳಸಿಕೊಂಡಿದ್ದಾರೆ. ಆ ಮೂಲಕ ಸರ್ಕಾರವನ್ನು ಹಣಿಯಲು, ರೈತರ ಮನ ಗೆಲ್ಲಲು ಹವಣಿಸುತ್ತಿದ್ದಾರೆ. ಕುಮಾರಸ್ವಾಮಿಯವರ ನಿಲುವಿಗೆ ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ ಮತ್ತು ಆರ್. ಅಶೋಕ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ನೈಸ್ ಯೋಜನೆ ವಿಚಾರದಲ್ಲಿ ಕಾನೂನು ಹೇಗೆ ಹೇಳುತ್ತದೋ ಹಾಗೆ ನಡೆದುಕೊಳ್ಳುತ್ತೇವೆ’ ಎಂದಿದ್ದಾರೆ.
ವಿಪರ್ಯಾಸಕರ ಸಂಗತಿ ಎಂದರೆ, ನೈಸ್ ಯೋಜನೆಗೆ ಅಡಿಗಲ್ಲು ಹಾಕಿದ 1996ರಿಂದ ಇಲ್ಲಿಯವರೆಗೆ, ಕಳೆದ 30 ವರ್ಷಗಳಲ್ಲಿ ಬಂದುಹೋದ ಸರ್ಕಾರಗಳು ಹಾಗೂ ಮುಖ್ಯಮಂತ್ರಿಗಳು ತೆಗೆದುಕೊಂಡ ಕಾನೂನು ಕ್ರಮಗಳನ್ನು ಅವಲೋಕಿಸಿದರೆ- ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್- ಮೂರೂ ಪಕ್ಷಗಳು ಜನವಿರೋಧಿ ಎನ್ನುವುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ.
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಮೂರು ವರ್ಷಗಳ ಹಿಂದೆ, ಬಿಜೆಪಿ ಸರ್ಕಾರವಿತ್ತು. ಎಂಟು ವರ್ಷಗಳ ಹಿಂದೆ ಜೆಡಿಎಸ್‌ನ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಗಳಾಗಿದ್ದರು. ಈಗ ರೈತರ ಪರ ಧ್ವನಿ ಎತ್ತುತ್ತಿರುವ ಕುಮಾರಸ್ವಾಮಿಯವರು ನಿಜವಾಗಲೂ ಮಣ್ಣಿನ ಮಗನಾಗಿದ್ದರೆ, ರೈತರ ಬಗ್ಗೆ ಕಾಳಜಿ ಕಳಕಳಿ ಹೊಂದಿದ್ದರೆ, ಅಂದೇ ನೈಸ್ ಯೋಜನೆಯ ಅಕ್ರಮಗಳಿಗೆ ಇತಿಶ್ರೀ ಹಾಡಬಹುದಿತ್ತಲ್ಲವೇ?
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬದಲಾದ ಗಾಳಿಯ ದಿಕ್ಕು ಕಂಡು ಕಂಗಾಲಾಗಿದ್ದಾರೆ ಪ್ರಧಾನಿ ಮೋದಿ
ಅಷ್ಟೇಕೆ, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು ಮನಸ್ಸು ಮಾಡಿದರೆ, ತಮ್ಮ ಇಡೀ ಕುಟುಂಬವನ್ನು, ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಡಿಲಿಗೆ ಹಾಕಿ, ಅವರ ಕೃಪಾಕಟಾಕ್ಷಕ್ಕೆ ಒಳಗಾಗಿರುವ ಈ ಹೊತ್ತಿನಲ್ಲಿ, ನೈಸ್ ಯೋಜನೆಯ ಅಕ್ರಮಗಳನ್ನು ತನಿಖೆಗೊಳಪಡಿಸಿ, ಬಡವರಿಗೆ ಭೂಮಿ ಕೊಡಿಸಿ ಕಳಂಕದಿಂದ ಮುಕ್ತರಾಗಬಹುದಲ್ಲವೇ?
1996ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು, ಬೆಂಗಳೂರು-ಮೈಸೂರು ನಡುವೆ ಸಂಪರ್ಕ ಕಲ್ಪಿಸುವ ನೈಸ್ ಯೋಜನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದು ಕಾರ್ಯರೂಪಕ್ಕಿಳಿಯುವ ಹೊತ್ತಿಗೆ ಅವರು ದೇಶದ ಪ್ರಧಾನಿಯಾಗಿ ದೆಹಲಿಗೆ ತೆರಳಿದ್ದರು. ಗೌಡರು ಅತ್ತ ತೆರಳುತ್ತಿದ್ದಂತೆ ಇತ್ತ ಅಶೋಕ್ ಖೇಣಿ ಜಾತಿ ಕಾರಣಕ್ಕೆ ಮುಖ್ಯಮಂತ್ರಿ ಜೆ.ಎಚ್. ಪಟೇಲರಿಗೆ ಹತ್ತಿರವಾದರು. ಆಗ ಚೀಫ್ ಸೆಕ್ರೆಟರಿಯಾಗಿದ್ದ ಬಿ.ಎಸ್. ಪಾಟೀಲ್, ಖೇಣಿಯ ಮಾರ್ಗದರ್ಶಕರಾದರು.
ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳ ಸಂಪರ್ಕಕ್ಕೆ ಬಂದ ಖೇಣಿ, ಸರಕಾರದ ಸಹಕಾರದಿಂದ, ಜನ ಕೊಟ್ಟ ಜಮೀನಿನ್ನೇ ಬ್ಯಾಂಕಿಗೆ ಅಡವಿಟ್ಟು, ಅದರಿಂದ ಬಂದ ಹಣದಿಂದ ರಸ್ತೆ ಮಾಡಿ, ಟೋಲ್ ಸಂಗ್ರಹಕ್ಕಿಳಿದರು. ಗಣಿಗಾರಿಕೆ-ರಿಯಲ್ ಎಸ್ಟೇಟ್ ವ್ಯವಹಾರಕ್ಕಿಳಿದರು. ತಮ್ಮ ಅಕ್ರಮಗಳ ವಿರುದ್ಧ ಕೂಗಾಡುವವರಿಗೆ ಕೊಸರು ಕೊಟ್ಟು, ಕ್ರಿಕೆಟು-ಸಿನೆಮಾ ಶೋಕಿಗಾಗಿ ದುಪ್ಪಟ್ಟು ಸುರಿಯುತ್ತಾ, ಭಾರೀ ಬ್ಯುಸಿನೆಸ್ ಮನ್ ಆಗಿ ಬೆಳೆದು ನಿಂತರು. ತನ್ನ ಅಕ್ರಮ ವ್ಯವಹಾರಗಳನ್ನು ಮುಚ್ಚಿಕೊಳ್ಳಲು ರಾಜಕಾರಣಕ್ಕೆ ಧುಮುಕಿ, ಕಾಂಗ್ರೆಸ್ ಪಕ್ಷ ಸೇರಿ ಶಾಸಕರಾದರು.
ಅಶೋಕ್ ಖೇಣಿ ಬೆನ್ನಿಗೆ ಬಹುಸಂಖ್ಯಾತ ಲಿಂಗಾಯತ ಜಾತಿ ಇದೆ, ರಕ್ಷಣೆಗೆ ಕಾಂಗ್ರೆಸ್ ಪಕ್ಷವಿದೆ, ನಿವೃತ್ತ ಐಎಎಸ್ ಅಧಿಕಾರಿಗಳ ಮಾರ್ಗದರ್ಶನವಿದೆ. ಖೇಣಿ ಕೂಡ ಈಗ ಎಲ್ಲರಂತೆ ಉದ್ಯಮಿ ಕಮ್ ರಾಜಕಾರಣಿಯಾಗಿದ್ದಾರೆ.
2012ರಲ್ಲಿಯೇ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ, ನೈಸ್ ಯೋಜನೆಯ ಅಕ್ರಮ ಕುರಿತು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಅದರಲ್ಲಿ ಅವರು ರಾಜ್ಯದ 103 ರಾಜಕಾರಣಿಗಳು ಮತ್ತು 57 ಐಎಎಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದನ್ನು ದಾಖಲೆಗಳ ಸಮೇತ ಕೋರ್ಟಿನ ಮುಂದಿಟ್ಟಿದ್ದರು. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 156/3ರಡಿ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ಆದೇಶ ನೀಡಿತ್ತು. ಪರಿಹಾರ ಸಿಗದ ರೈತರಿಂದ ವಿವಿಧ ಕೋರ್ಟ್‌ಗಳಲ್ಲಿ 374 ಭೂವ್ಯಾಜ್ಯ ಪ್ರಕರಣಗಳು ದಾಖಲಾಗಿದ್ದವು. ಆನಂತರ, ನೈಸ್ ಯೋಜನೆ ಕುರಿತು 2016ರಲ್ಲಿ ಅಂದಿನ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ, ಟಿ.ಬಿ. ಜಯಚಂದ್ರರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಿತ್ತು.
ಸದನ ಸಮಿತಿ ತನ್ನ ವರದಿಯಲ್ಲಿ, ಅಶೋಕ್ ಖೇಣಿಯ ನೈಸ್ ಸಂಸ್ಥೆ ಅನಧಿಕೃತವಾಗಿ ಸಂಗ್ರಹ ಮಾಡಿರುವ 1,350 ಕೋಟಿ ರೂ.ಗಳನ್ನು ಸರಕಾರ ವಸೂಲಿ ಮಾಡಬೇಕು, ನೋಂದಣಿ ಮತ್ತು ಮುದ್ರಾಂಕ ಶುಲ್ಕದ ವಿನಾಯಿತಿಯನ್ನು 5,688 ಎಕರೆಗೆ ಬದಲಾಗಿ 14,337 ಎಕರೆಗೆ ನೀಡಲಾಗಿರುವುದನ್ನು ಹಿಂಪಡೆಯಬೇಕು, ತಮ್ಮ ಸುಪರ್ದಿಯಲ್ಲಿರುವ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆಯನ್ನು ಉತ್ತೇಜಿಸಿ ಸರಕಾರಕ್ಕೆ 250 ಕೋಟಿ ರೂ. ನಷ್ಟವಾಗಿರುವುದನ್ನು ಸರಕಾರಕ್ಕೆ ಕಟ್ಟಬೇಕು ಎಂದು ಹೇಳಿತ್ತು. ಅಲ್ಲದೆ, ಯೋಜನೆ ಜಾರಿಯ ವೇಳೆ ನಡೆದಿರುವ ಅಕ್ರಮದ ಸಂಪೂರ್ಣ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ, ಕೇಂದ್ರ ಜಾಗೃತ ಆಯೋಗಕ್ಕೆ ಒಪ್ಪಿಸಬೇಕೆಂದು ಸದನ ಸಮಿತಿ 2018ರ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು 2018ರಲ್ಲಿ ಮತ್ತು 2023ರಲ್ಲಿ, ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಸಿದ್ದರಾಮಯ್ಯನವರು ಸಿಎಂ ಕುರ್ಚಿಯಿಂದ ಕೆಳಗಿಳಿದು ಈಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಬಿಡದಿ ಸುತ್ತಮುತ್ತ 7,431 ಎಕರೆ ಭೂಮಿಯಲ್ಲಿ ಅತ್ಯಾಧುನಿಕ ಟೌನ್ ಶಿಪ್ ಮಾಡುವುದಾಗಿ ಘೋಷಿಸಿದ್ದಾರೆ. ಭೂಮಿ ಬಿಟ್ಟುಕೊಡದ ರೈತರು ಹೋರಾಟಕ್ಕಿಳಿದಿದ್ದಾರೆ. ಅವರೊಂದಿಗೆ ಜೆಡಿಎಸ್ ಇಂದು ಬೆಂಗಳೂರಿನಲ್ಲಿ ಹೋರಾಟ ಹಮ್ಮಿಕೊಂಡಿದೆ. ಇದೇ ಸಂದರ್ಭದಲ್ಲಿ ಕುಮಾರಸ್ವಾಮಿಯವರು, ಕೆಐಎಡಿಬಿ ಮೂಲಕ ನೈಸ್ ಸಂಸ್ಥೆಗೆ ನೀಡಲಾಗಿರುವ ಹೆಚ್ಚುವರಿ ಜಮೀನನ್ನು ತಕ್ಷಣವೇ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಬಿಡದಿ ಟೌನ್ ಶಿಪ್ ಸಮಸ್ಯೆಗೆ ಪರಿಹಾರ ಸೂಚಿಸುವ ನೆಪದಲ್ಲಿ ನೈಸ್ ಮತ್ತು ಡಿ.ಕೆ. ಶಿವಕುಮಾರ್ ವ್ಯಾವಹಾರಿಕ ನಂಟನ್ನು ಬಿಚ್ಚಿಟ್ಟಿದ್ದಾರೆ.
ಕುತೂಹಲಕರ ಸಂಗತಿ ಎಂದರೆ, ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್(ಬಿಎಂಐಸಿ) ಯೋಜನೆಗೆ ಬಳಕೆಯಾಗದೆ ಉಳಿಸಿರುವ ಸುಮಾರು 6,757 ಎಕರೆ ಭೂಮಿಯನ್ನು ಹಿಂಪಡೆದು ಪ್ರಸ್ತಾಪಿತ ಬಿಡದಿ ಟೌನ್ ಶಿಪ್ ಯೋಜನೆಗೆ ಬಳಸಬಹುದೇ ಎಂದು ಪರಿಶೀಲಿಸುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಕೂಡ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಡದಿ ಭೂಸ್ವಾಧೀನಕ್ಕೆ ‘ರೈತರು ಒಪ್ಪಿದ್ದಾರೆ’ ಎಂಬುದು ನಿಜವಲ್ಲ, ಸರ್ಕಾರಕ್ಕೆ ಶೋಭೆ ತರುವುದಿಲ್ಲ
ಇಲ್ಲಿ ಎಲ್ಲವೂ ಕಣ್ಣಿಗೆ ರಾಚುವಷ್ಟು ನಿಚ್ಚಳವಾಗಿದೆ. ನೈಸ್ ಎಂಬುದು ಅಕ್ರಮ, ಅವ್ಯವಹಾರಗಳಿಂದ ಕೂಡಿದ ಯೋಜನೆ ಎಂಬುದು ಎಲ್ಲರಿಗೂ ಗೊತ್ತಿದೆ. ಗೊತ್ತಿದ್ದೂ ಅಶೋಕ್ ಖೇಣಿಯ ವಿರುದ್ಧ ಕ್ರಮ ಕೈಗೊಳ್ಳದೆ ಕೈಚೆಲ್ಲಿದ್ದಾರೆ, ಅರ್ಥಾತ್ ಆತನ ಬೆಂಬಲಕ್ಕೆ ನಿಂತಿದ್ದಾರೆ.
1996ರಿಂದ 2026ರವರೆಗೆ ಬಂದ ಮುಖ್ಯಮಂತ್ರಿಗಳು, ಉನ್ನತಾಧಿಕಾರಿಗಳು ಹಾಗೂ ಎಲ್ಲ ಪಕ್ಷಗಳ ರಾಜಕೀಯ ನಾಯಕರು ರೈತರ ನೂರಾರು ಎಕರೆ ಜಮೀನನ್ನು ಖೇಣಿಗೆ ಕೊಟ್ಟಿದ್ದಾರೆ. ಆತನನ್ನು ಸಾವಿರಾರು ಕೋಟಿಗಳ ಕುಬೇರನನ್ನಾಗಿಸಿದ್ದಾರೆ. ಆತನಿಂದ ಸಿಕ್ಕಷ್ಟು ಕಿತ್ತುಕೊಂಡು ಕಣ್ಮುಚ್ಚಿ ಕೂತಿದ್ದಾರೆ. ಆದರೆ, ನೈಸ್ ಯೋಜನೆಗಾಗಿ ಭೂಮಿ ಬಿಟ್ಟುಕೊಟ್ಟ ಸಾವಿರಾರು ರೈತರು ಬೆಂಗಳೂರು ನಗರದ ಹೋಟೆಲ್‌ಗಳಲ್ಲಿ, ಕ್ಲಬ್‌ಗಳಲ್ಲಿ, ಪೆಟ್ರೋಲ್ ಬಂಕ್‌ಗಳಲ್ಲಿ, ಡಾಬಾಗಳಲ್ಲಿ, ನರ್ಸರಿಗಳಲ್ಲಿ, ಕಂಪನಿಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತ, ದಿಕ್ಕೆಟ್ಟ ದರಿದ್ರ ಬದುಕು ನೂಕುತ್ತಿದ್ದಾರೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ರಾಜಕಾರಣ ಮಾಡಲು ಬಡವರು, ರೈತರು, ಮಹಿಳೆಯರು, ಕಾರ್ಮಿಕರು, ಮಧ್ಯಮವರ್ಗದವರು ಬೇಕು. ಹಾಗೆಯೇ ಪಕ್ಷಕ್ಕೆ ಕೋಟ್ಯಂತರ ರೂಪಾಯಿ ದೇಣಿಗೆ ನೀಡುವ ಅಶೋಕ್ ಖೇಣಿಯಂತಹ ಉದ್ಯಮಪತಿಗಳೂ ಬೇಕು. ಅಧಿಕಾರಕ್ಕೇರಿದಾಗ ಕಣ್ಣೊರೆಸುವ ತಂತ್ರಕ್ಕೆ ತಲೆಬಾಗುತ್ತಾರೆ; ವಿರೋಧ ಪಕ್ಷದಲ್ಲಿದ್ದಾಗ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಇದು ರಾಜಕಾರಣಿಗಳ ‘ನೈಸ್’ ರಾಜಕಾರಣ.




