ಈ ದಿನ ಸಂಪಾದಕೀಯ | ಬಿಡದಿ ಟೌನ್ ಶಿಪ್ ಯೋಜನೆ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರದ ದಂಧೆ?

Date:

ಈ ಉದ್ದೇಶಿತ ಟೌನ್ ಶಿಪ್ ಯೋಜನೆಯ ಸುತ್ತಮುತ್ತ ಭೂಸ್ವಾಧೀನಕ್ಕೆ ಒಳಪಡದ ಜಮೀನುಗಳ ಬೆಲೆ ಹಠಾತ್ತನೆ ಎಕರೆಗೆ ಐದು ಕೋಟಿ ರುಪಾಯಿಗೆ ಜಿಗಿದಿದೆ. ಭೂಸ್ವಾಧೀನ ಅಧಿಸೂಚನೆಯ ನಿರೀಕ್ಷೆಯಲ್ಲಿ ಎಕರೆಗೆ ಐದು ಕೋಟಿ ರುಪಾಯಿಯಂತೆ ಸುಮಾರು 586 ಎಕರೆ ಕ್ರಯವಿಕ್ರಯ ವ್ಯವಹಾರ ಜರುಗಿರುವ ಸೂಚನೆಗಳಿವೆ.

- Advertisement -

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅತ್ಯಂತ ಆಸ್ಥೆ ವಹಿಸಿರುವ ಬಿಡದಿ ಟೌನ್ ಶಿಪ್ ಯೋಜನೆಯು ರೈತರು ಮತ್ತು ರಾಜಕೀಯ ವಿರೋಧಿಗಳಿಂದ ತೀವ್ರ ಆಕ್ಷೇಪ ಎದುರಿಸಿದೆ. ವಿವಾದದ ಸ್ವರೂಪ ತಳೆಯುತ್ತಲಿದೆ. ರಾಜಕೀಯ ಕೆಸರೆರಚಾಟ ನಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ಹಾಲಿ ಮತ್ತು ಮಾಜಿ ಪಾಳೆಯಪಟ್ಟುಗಳಲ್ಲಿ ನಡೆದಿರುವ ಮುಸುಕಿನ ಯುದ್ಧಗಳಲ್ಲಿ ಬಿಡದಿ ಟೌನ್ ಶಿಪ್ ಯೋಜನೆಯೂ ಸೇರಿದೆ. ಈ ಯೋಜನೆಯಲ್ಲಿ ವ್ಯಕ್ತಿಗತ ಹಿತಾಸಕ್ತಿಗಳು ಮತ್ತು ಭಾರೀ ದಂಧೆಯ ವಾಸನೆ ಬಡಿದಿದೆ.

ರೈತರಿಗೆ ಅನ್ಯಾಯವಾಗುತ್ತಿದೆ ಎಂಬುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎತ್ತಿದ್ದಾರೆ. ಈ ಹಿಂದೆ ತಾವು ಮುಖ್ಯಮಂತ್ರಿ ಆಗಿದ್ದಾಗ ಎಚ್.ಡಿ.ಕುಮಾರಸ್ವಾಮಿ ಕೂಡ ಬಿಡದಿ ಟೌನ್ ಯೋಜನೆಗೆ ಮುಂದಡಿ ಇಟ್ಟಿದ್ದುಂಟು. ಕಾಂಗ್ರೆಸ್ಸಿನವರು ಸತ್ಯಶೋಧನಾ ವರದಿ ತಂದು ಅಡ್ಡಿಪಡಿಸಿದರು ಎಂದು ದೇವೇಗೌಡರು ಹೇಳಿದ್ದಾರೆ.

‘ಬೆಂಗಳೂರು ವಾಹನ ದಟ್ಟಣೆ ಕಡಿಮೆ ಮಾಡಬೇಕೆಂದು ಕುಮಾರಸ್ವಾಮಿ ಐದು ಟೌನ್‌ಶಿಪ್ ಮಾಡಲು ತೀರ್ಮಾನ ಮಾಡಿದ್ದರು. ಮಾಗಡಿ, ಹೊಸಕೋಟೆ ಸೇರಿದಂತೆ ಬೆಂಗಳೂರು ಅಕ್ಕಪಕ್ಕದಲ್ಲಿ ಟೌನ್‌ಶಿಪ್ ಮಾಡಲು ಮುಂದಾದರು. ಬಿಡದಿ ಟೌನ್‌ಶಿಪ್‌ಗೆ 400 ಕೋಟಿ ರೂಪಾಯಿ ಠೇವಣಿ ಕೂಡ ಇಡಲಾಗಿತ್ತು. ಪ್ರಾಜೆಕ್ಟ್ ಸಲ್ಲಿಕೆಯೂ ಆಗಿತ್ತು’. ಆದರೆ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಎಂದು ಮಾಡಿ ಜನರನ್ನು ಎತ್ತಿಕಟ್ಟಿದ್ರು ಟೌನ್‌ಶಿಪ್ ಜಾಗವನ್ನು ಕುಮಾರಸ್ವಾಮಿ ಹೊಡೆಯಲು ಹೊರಟಿದ್ದಾರೆ ಅಂತ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ರಚನೆ ಮಾಡಿತು. ನಿಮ್ಮ ಭೂಮಿ ಕಬಳಿಸ್ತಾನೆ ಅಂತ ಜನರನ್ನು ಎತ್ತಿಕಟ್ಟಿದ್ರು. ರೈತರು ಹಾಗೂ ಸಾರ್ವಜನಿಕ ವಿರೋಧ ಬಂದ ಹಿನ್ನೆಲೆ ಕುಮಾರಸ್ವಾಮಿ ಐದು ಟೌನ್‌ಶಿಪ್ ಯೋಜನೆ ಕೈಬಿಟ್ಟರು. ಗೆಜೆಟ್ ನೋಟಿಫಿಕೇಶನ್ ಮಾಡಿ ಭೂಮಿ ಖರೀದಿ ಕೈಬಿಟ್ಟರು’ ಎಂಬ ದೊಡ್ಡ ಗೌಡರ ಕುದಿಯ ಹಿಂದಿನ ಮರ್ಮವೇನು?

‘ಈಗಿನ ಕಾಂಗ್ರೆಸ್ ಸರ್ಕಾರ ಮಾಡ್ತಿರೋದು ಏನು? ಅಂದು ರೈತರ ಭೂಮಿ ಕಬಳಿಸ್ತಾರೆ ಅಂದವರು ಈಗ ರೈತರ ಭೂಮಿಯನ್ನ ಕಬಳಿಸ್ತಿದರಲ್ಲವಾ? ಈಗ ಬೆಂಗಳೂರು ಜವಾಬ್ದಾರಿ, ನೀರಾವರಿ ಇಲಾಖೆ ಜವಾಬ್ದಾರಿ, ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಜವಾಬ್ದಾರಿ ಹೊತ್ತಿರುವ ಸಂದರ್ಭದಲ್ಲಿ ಸಿಎಂ ಆಗಬೇಕು ಅಂತ ಒಡಂಬಡಿಕೆ ಆಗಿದೆ ಎಂದು ಮನರಂಜನೆ ಕಾರ್ಯಕ್ರಮ ಮಾಡ್ತಿದ್ದಾರೆ’ ಎಂಬ ಅವರ ಮಾತುಗಳ ಹಿಂದಿನ ಅರ್ಥವನ್ನು ಗ್ರಹಿಸಬೇಕಿದೆ.

ರೈತರು ಕಲ್ಲೇಟು ಹೊಡೆದರೂ, ಅಂಗಿ ಹರಿದರೂ ಈ ಟೌನ್ ಶಿಪ್ ಯೋಜನೆಯನ್ನು ನಾನು ಕೈಬಿಡುವುದಿಲ್ಲ ಎಂಬ ಉಪಮುಖ್ಯಮಂತ್ರಿಯವರ ದೃಢಸಂಕಲ್ಪದ ಒಳಾರ್ಥವೇನೆಂದು ಪ್ರಶ್ನಿಸಬೇಕಿದೆ.

ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ರೈತರು, ಕಳೆದ ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಬೈರಮಂಗಲ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಫಲವತ್ತಾದ ಕೃಷಿ ಭೂಮಿಯನ್ನು ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್ ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು ರಾಜ್ಯ ಸರಕಾರ ವಾಪಸ್ ಪಡೆಯಬೇಕು ಮತ್ತು ಸುಮಾರು 9,640 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹಿಸಿದೆ.

ರಾಮನಗರ ಜಿಲ್ಲೆ ಬಿಡದಿ ಹೋಬಳಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 25 ಗ್ರಾಮಗಳ ಸುಮಾರು 9,640 ಎಕರೆ ಕೃಷಿ ಭೂಮಿಯು ನೀರಾವರಿ ಹೊಂದಿರುವ ತೆಂಗು, ಅಡಿಕೆ, ಬಾಳೆ, ಮಾವು ಸೇರಿದಂತೆ ವಿವಿಧ ರೀತಿಯ ತೋಟಗಾರಿಕೆ ಬೆಳೆಗಳನ್ನು, ಬೆಳೆಯುತ್ತಿರುವ ಸಮೃದ್ಧ ಹಸಿರು ಪ್ರದೇಶವಾಗಿದೆ ಎಂಬುದು ವಾಸ್ತವಾಂಶ.

ಸಂಯುಕ್ತ ಹೋರಾಟ ಕರ್ನಾಟಕ ಪದಾಧಿಕಾರಿಗಳಾದ ಬಡಗಲಪುರ ನಾಗೇಂದ್ರ, ಸಿದ್ದನಗೌಡ ಪಾಟೀಲ, ನೂರ್ ಶ್ರೀಧರ್, ಟಿ.ಯಶವಂತ, ಪಿ.ಪಿ.ಅಪ್ಪಣ್ಣ, ಪ್ರಕಾಶ್ ಸೇರಿದಂತೆ ರೈತ ಮುಂದಾಳುಗಳು-ಹೋರಾಟಗಾರರು ಈ ಭೂಸ್ವಾಧೀನದ ತೀರ್ಮಾನವನ್ನು ತಕ್ಷಣವೇ ವಾಪಸು ಪಡೆಯುವ ಬೇಡಿಕೆ ಇಟ್ಟಿದ್ದಾರೆ.

ಈ ಪ್ರದೇಶವು ಜಿಬಿಎ ಗಡಿಗೆ ಹೊಂದಿಕೊಂಡಂತೆ ಇದ್ದು ಬೆಂಗಳೂರು ಮಹಾನಗರಕ್ಕೆ ಹಾಲು, ಹಣ್ಣು, ತರಕಾರಿ ಮುಂತಾದ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಅಮೂಲ್ಯ ಆಹಾರದ ಕಣಜವಾಗಿದೆ. ಇಲ್ಲಿನ ಎಲ್ಲ ಕೃಷಿ ಕುಟುಂಬಗಳು ತಮ್ಮ ಸಣ್ಣ ಹಿಡುವಳಿಯಲ್ಲೇ ಮಿಶ್ರ ಬೆಳೆ ಪದ್ದತಿಯನ್ನು ಅಳವಡಿಸಿಕೊಂಡು ಅಡಿಕೆ ತಟ್ಟೆ ತಯಾರಿಕೆ ಮುಂತಾದ ಕೃಷಿ ಆಧಾರಿತ ಸಣ್ಣ ಉದ್ದಿಮೆಗಳನ್ನು ಕಟ್ಟಿಕೊಂಡು ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡಿದ್ದಾರೆ. ಇಂತಹ ಸುಸ್ಥಿರ ಬದುಕಿನ ಮೇಲೆ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎನ್ನುತ್ತಾರೆ ಹೋರಾಟಗಾರರು.

ಜಿಬಿಎ ಅನುಷ್ಠಾನಗೊಳಿಸುತ್ತಿರುವ ಬಿಡದಿ ಸಮಗ್ರ ಉಪ ನಗರ ಯೋಜನೆಗಾಗಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಕಲಂ 17(1)ರ ಅಡಿಯಲ್ಲಿ 2025ರ ಮಾ.13 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ತಕ್ಷಣವೇ ಸುಮಾರು 3,500ಕ್ಕೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು ಈ ಭೂ ಸ್ವಾಧೀನಕ್ಕೆ ಒಪ್ಪಿಗೆ ಇಲ್ಲ ಎಂದು ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಇದುವರೆಗೂ ಈ ಯಾವ ರೈತರ ಆಕ್ಷೇಪಣೆಗಳನ್ನು ಸರಕಾರ ಆಲಿಸಿಲ್ಲ ಎಂಬುದು ಅವರ ಆಕ್ರೋಶ.

ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲ್ಲೂಕಿನ ಒಂಬತ್ತು ಗ್ರಾಮಗಳ ಸುಮಾರು 7,481 ಎಕರೆ 21.08 ಗುಂಟೆ ಪ್ರದೇಶ ಈ ಯೋಜನೆಯ ವ್ಯಾಪ್ತಿಗೆ ತುತ್ತಾಗಲಿದೆ. ಕೈಗಾರಿಕೆ, ವಾಣಿಜ್ಯ ಹಾಗೂ ವಸತಿ ಸಮುಚ್ಚಯಗಳನ್ನು ಒಳಗೊಳ್ಳಲಿದೆ. ಜನಸಂಖ್ಯೆ ಮತ್ತು ಆರ್ಥಿಕ ಚಟುವಟಿಕೆಗಳನ್ನು ಪರ್ಯಾಯ ನಗರ ಪ್ರದೇಶಗಳಿಗೆ ವಿಕೇಂದ್ರೀಕರಿಸಲು ಈ ಯೋಜನೆ ನೆರವಾಗುವುದು ಸಂಚಾರ ದಟ್ಟಣೆ, ವಾಯು-ಶಬ್ದ ಮಾಲಿನ್ಯವನ್ನು ಕೂಡ ತಡೆಗಟ್ಟಬಹುದು ಎಂಬುದು ರಾಜ್ಯ ಕಾಂಗ್ರೆಸ್ ಸರ್ಕಾರದ ಸಮರ್ಥನೆ.

ಶೇ.80ರಷ್ಟು ಮಂದಿ ಜಮೀನು ಒಡೆಯರು ಭೂಸ್ವಾಧೀನಕ್ಕೆ ಒಪ್ಪಿದ್ದಾರೆಂಬುದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ. ಆದರೆ ಸರ್ಕಾರ ನೀಡುವ ನಗದು ಪರಿಹಾರವನ್ನು ಒಪ್ಪಿಕೊಂಡು ಮತ್ತೊಂದೆಡೆ ಜಮೀನು ಖರೀದಿ ಸಾಧ್ಯವಿಲ್ಲ ಎಂಬುದು ಸಾಕಷ್ಟು ರೈತರ ದೂರಾಗಿದೆ. ಬಿಡದಿಯ 50 ಕಿಲೋಮೀಟರು ಫಾಸಲೆಯಲ್ಲಿ ಎಕರೆಗೆ ಎರಡೂವರೆ ಕೋಟಿ ರುಪಾಯಿ ದರಕ್ಕೆ ಜಮೀನು ಎಲ್ಲಿಯೂ ಸಿಗುವುದಿಲ್ಲ ಎಂಬುದು ಪರಿಹಾರದಿಂದ ಪುನಃ ಜಮೀನು ಖರೀದಿ ಉದ್ದೇಶವಿರುವ ರೈತರ ಆಳಲು.

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಬೈರಮಂಗಲ, ಬನ್ನಿಗಿರಿ, ಹೊಸೂರು, ಕೆ.ಜೆ.ಗೊಲ್ಲರ ಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನ ಪಾಳ್ಯ, ಮಂಡಲಹಳ್ಳಿ, ಹಾರೋಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಭಾಗಶಃ ಈ ಯೋಜನೆಗೆ ಜಮೀನು ಒದಗಿಸಬೇಕಿದೆ.

ಭೂಸ್ವಾಧೀನಕ್ಕೆ ಪರಿಹಾರವಾಗಿ ಪ್ರತಿ ಎಕರೆಗೆ 9,693 ಚದರ ಅಡಿಗಳಷ್ಟು ಅಭಿವೃದ್ಧಿಪಡಿಸಿದ ನಿವೇಶನ ನೀಡಲಾಗುವುದು. ನಗದು ಪರಿಹಾರ ಬಯಸುವವರಿಗೆ ಎಕರೆಗೆ 2.50 ಕೋಟಿ ರುಪಾಯಿ ನಿಗದಿ ಮಾಡಲಾಗಿದೆ.

ಈ ಉದ್ದೇಶಿತ ಟೌನ್ ಶಿಪ್ ಯೋಜನೆಯ ಸುತ್ತಮುತ್ತ ಭೂಸ್ವಾಧೀನಕ್ಕೆ ಒಳಪಡದ ಜಮೀನುಗಳ ಬೆಲೆ ಹಠಾತ್ತನೆ ಎಕರೆಗೆ ಐದು ಕೋಟಿ ರುಪಾಯಿಗೆ ಜಿಗಿದಿದೆ. ಭೂಸ್ವಾಧೀನ ಅಧಿಸೂಚನೆಯ ನಿರೀಕ್ಷೆಯಲ್ಲಿ ಎಕರೆಗೆ ಐದು ಕೋಟಿ ರುಪಾಯಿಯಂತೆ ಸುಮಾರು 586 ಎಕರೆ ಕ್ರಯವಿಕ್ರಯ ವ್ಯವಹಾರ ಜರುಗಿರುವ ಸೂಚನೆಗಳಿವೆ.

ಈ ಐದು ಕೋಟಿ ರುಪಾಯಿಗಳಿಗೆ ಕಾಲಾನುಕ್ರಮದಲ್ಲಿ ನೂರು ಕೋಟಿ ಲಾಭ ಗಳಿಸುವ ವ್ಯವಹಾರವನ್ನು ಬಲ್ಲವರೇ ಈ ಭೂಮಿಯನ್ನು ಖರೀದಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಾರ್ವಜನಿಕರ ನಂಬಿಕೆಗೆ ಪಾತ್ರವಾಗುವ ಕೆಲಸ ಮಾಡಿರುವುದು ವಿರಳಾತಿವಿರಳ. ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಕೂಡ ನಿವೇಶನ ಬಯಸುವ ಜನಸಾಮಾನ್ಯರು ಮತ್ತು ಜಮೀನು ಕಳೆದುಕೊಳ್ಳುವ ರೈತರು ಈ ಪ್ರಾಧಿಕಾರವನ್ನು ಯಾತಕ್ಕಾಗಿ ನಂಬಬೇಕು ಎಂಬ ಪ್ರಶ್ನೆ ಇದ್ದೇ ಇದೆ. ಶಿವರಾಮ ಕಾರಂತ ಬಡಾವಣೆ, ಕೆಂಪೇಗೌಡ ಬಡಾವಣೆ ಮುಂತಾದ ಅನೇಕ ಬಡಾವಣೆಗಳಿಗೆ ಮೂಲಸೌಲಭ್ಯಗಳ ನಿರ್ಮಾಣ ಈಗಲೂ ಆಗಿಲ್ಲ.

ಹೀಗೆ ಬಿಡಿಎ ಎಕರೆಗೆ 2.50 ಕೋಟಿ ರುಪಾಯಿಯಂತೆ ತಾನು ಸ್ವಾಧೀನಪಡಿಸಿಕೊಳ್ಳುವ 781 ಎಕರೆ ಜಮೀನನ್ನು ಚದರಡಿಗಳಿಗೆ ವಿಭಾಗಿಸಿ ಲೆಕ್ಕ ಹಾಕಿದರೆ. ಬಿಡಿಎ ಲೆಕ್ಕಕ್ಕೆ ಜಮೆಯಾಗುವ ಚದರಡಿಗಳ ಸಂಖ್ಯೆ ಸುಮಾರು 18 ಕೋಟಿ. ಈ ಪೈಕಿ ಶೇ.45ರಷ್ಟನ್ನು ರಸ್ತೆ ಮತ್ತು ಉದ್ಯಾನವನ ಮತ್ತಿತರೆ ಸಾರ್ವಜನಿಕ ಸೌಲಭ್ಯಗಳಿಗೆ ಮೀಸಲಿಡಬೇಕಾದೀತು. ಅಭಿವೃದ್ಧಿಪಡಿಸಿ ಮಾರಾಟ ಮಾಡಲು ಉಳಿಯಬಹುದಾದ ಪ್ರಮಾಣ ಶೇ.55. ವಾಣಿಜ್ಯ ಮತ್ತು ವಸತಿ ನಿವೇಶನಗಳನ್ನು ಮಾಡಿ ಚದರಡಿಗೆ ನಾಲ್ಕು ಸಾವಿರ ರುಪಾಯಿ ದರಕ್ಕೆ ಮಾರಿದರೂ ಹತ್ತಾರು ಸಾವಿರ ಕೋಟಿ ರುಪಾಯಿಗಳ ಲಾಭ ಗಳಿಸಬೇಕು. ಯೋಜನೆ ಮುಗಿಯುವ ಹೊತ್ತಿಗೆ ಸಾಲ ಇಲ್ಲವೇ ಬರಿಗೈ ತೋರಿಸುತ್ತೆ. ಬಿಡಿಎ ನಿರಂತರ ನಷ್ಟ. ಕುಖ್ಯಾತಿ ಹತ್ತಾರು ವರ್ಷಗಳು ಕಳೆದರೂ ನೀರು, ವಿದ್ಯುಚ್ಛಕ್ತಿ, ಪಾರ್ಕ್ ಪೂರ್ಣವಾಗಿರುವುದಿಲ್ಲ. ಸಾರ್ವಜನಿಕ ಸೌಲಭ್ಯಗಳ ಜಾಗವನ್ನೂ ಕಾಲಕ್ರಮೇಣ ನುಂಗಲಾಗುತ್ತದೆ.

ಭೂಸ್ವಾಧೀನ ಯೋಜನೆಗಳಲ್ಲಿ ಸರ್ಕಾರಕ್ಕೆ ಜಮೀನು ಒಪ್ಪಿಸಿ ರೈತರು ಪಡೆಯುವ ಪರಿಹಾರ ಜಮೀನಿನಂತೆ ಅವರ ಕೈಯಲ್ಲಿ ಬಹುಕಾಲ ನಿಲ್ಲುವುದಿಲ್ಲ. ನಗದು ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ನಿವೇಶನಗಳು ಎರಡನ್ನೂ ನೀಡಬೇಕೆಂಬ ಬೇಡಿಕೆಯನ್ನು ಬಿಡದಿಯ ರೈತರು ಸರ್ಕಾರದ ಮುಂದಿಟ್ಟಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬೇಡಿಕೆಯನ್ನು ತಕ್ಷಣವೇ ಒಪ್ಪಿಕೊಂಡಿಲ್ಲ. ಯೋಚನೆ ಮಾಡುವುದಾಗಿ ಹೇಳಿದ್ದಾರೆ.

ಭೂಸ್ವಾಧೀನ ಮಾಡಿಕೊಳ್ಳುವಾಗ ಉಳುಮೆಗೆ ಯೋಗ್ಯವಲ್ಲದ ಖರಾಬು ಜಾಗವೂ ಬಿಡಿಎ ಗೆ ಪುಕ್ಕಟೆ ಸಿಗುತ್ತದೆ. ಅದಕ್ಕೆ ಪರಿಹಾರ ಕೊಡಬೇಕಿಲ್ಲ. ಸರ್ಕಾರಿ ಜಾಗಗಳಾದ ಗೋಮಾಳ, ಗುಂಡುತೋಪುಗಳಲ್ಲಿ ಉಳುಮೆ ಮಾಡಿದವರನ್ನು ಒಕ್ಕಲೆಬ್ಬಿಸಿ ವಶಪಡಿಸಿಕೊಳ್ಳಲಾಗುತ್ತದೆ. ಹೀಗೆ ಅನಾಯಾಸವಾಗಿ ಸಿಗುವ ನೂರಾರು ಎಕರೆ ಭೂಮಿ ಅಧಿಕಾರಿಗಳು ಮತ್ತು ರಾಜಕಾರಣಿಗಳಲ್ಲಿ ಹಂಚಿಕೆಯಾಗುತ್ತದೆಯೇ? ಈ ಟೌನ್ ಶಿಪ್ ನಿರ್ಮಾಣದ ಹತ್ತಾರು ಬಗೆಯ ಗುತ್ತಿಗೆಗಳು ಉಪಗುತ್ತಿಗೆಗಳು ತುಂಡು ಗುತ್ತಿಗೆಗಳು ಯಾರಿಗೆ ಸಿಗುತ್ತವೆ, ಯಾರಿಗೆ ಸಿಗಬೇಕೆಂದು ತೀರ್ಮಾನಿಸುವ ಅಧಿಕಾರ ಯಾರದು, ಈ ಅಧಿಕಾರದಿಂದ ಅವರು ಲಾಭ ಗಳಿಸುವುದಿಲ್ಲವೇ? ರಿಯಲ್ ಎಸ್ಟೇಟ್ ಲೇವಾದೇವಿಯನ್ನು ಹೊಂದಿರುವ ಯೋಜನೆಗಳಿಗೆ ರಾಜಕಾರಣಿಗಳು ಮುಗಿ ಬೀಳುವ ರಹಸ್ಯವೇನು?

ಭೂಸ್ವಾಧೀನಕ್ಕೆ ಮತ್ತೊಂದು ಅಮಾನುಷ ಆಯಾಮವೂ ಇದೆ. ಆಯಾ ಗ್ರಾಮಗಳಲ್ಲಿ ಅಪ್ರತ್ಯಕ್ಷವಾಗಿ ಜಮೀನನ್ನು ನೆಚ್ಚಿ ಬದುಕು ಸಾಗಿಸುವ ಇತರೆ ಉಪವೃತ್ತಿಗಳವರು, ಕೃಷಿ ಕಾರ್ಮಿಕರು ನಿರಾಶ್ರಿತರಾಗುತ್ತಾರೆ. ಅವರಿಗೆ ಯಾವುದೇ ಪರಿಹಾರದ ಅವಕಾಶವಿಲ್ಲ ಕಾನೂನಿನಲ್ಲಿ. ಭೂಸ್ವಾಧೀನದ ಈ ಪರೋಕ್ಷ ಸಾಮಾಜಿಕ ಆರ್ಥಿಕ ಹಾನಿಯನ್ನು ಭರಿಸುವ ಬಗೆಯಿಲ್ಲ.

ಎಕರೆಗೆ ಮೂವತ್ತು ನಲವತ್ತು ವಿಸ್ತೀರ್ಣದ 20 ನಿವೇಶನಗಳನ್ನು ಮಾಡುವ ಸರ್ಕಾರ ರೈತರಿಗೆ ಎಂಟನ್ನು ಪರಿಹಾರವಾಗಿ ನೀಡುವ ಅಂದಾಜು ಕಾಣಬರುತ್ತದೆ. ಉಳಿದ ಹನ್ನೆರಡನ್ನು ತಾನು ಇಟ್ಟುಕೊಳ್ಳುತ್ತದೆ. ಅಭಿವೃದ್ಧಿಪಡಿಸಿದ ಒಂದು ನಿವೇಶನಕ್ಕೆ 50 ಲಕ್ಷ ರುಪಾಯಿ ಬೆಲೆ ನಿಗದಿ ಮಾಡಿದರೂ ಸಂಗ್ರಹವಾಗುವ ಮೊತ್ತ ಭಾರೀ ಎನಿಸಬಹುದಾದದ್ದೇ.

ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ಅಲ್ಲದೆ ಅವರು ಕೇಳುವ ಪರಿಹಾರವನ್ನು ಸರ್ಕಾರ ನೀಡಬೇಕು ಇಲ್ಲವೇ ಭಾರೀ ರಿಯಲ್ ಎಸ್ಟೇಟ್ ಧಂಧೆಯ ಎಲ್ಲ ಸೂಚನೆಗಳನ್ನು ಹೊಂದಿರುವ ಈ ಭೂಸ್ವಾಧೀನವನ್ನು ಕೈಬಿಡಬೇಕು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...