ಗುಜರಾತ್ ಬಿಜೆಪಿ ಘಟಕದ ಅಧ್ಯಕ್ಷ ಜಗದೀಶ್ ವಿಶ್ವಕರ್ಮ ಅವರು ಕಾಂಗ್ರೆಸ್ ಸಂಸದೆ ಗೆನಿಬೆನ್ ಠಾಕೋರ್ ಅವರ ಕುರಿತು ನೀಡಿರುವ ‘ಸೆರಗು’ (ಪಲ್ಲು) ಕುರಿತಾದ ಹೇಳಿಕೆಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿಯು ‘ನಾರಿ ವಂದನೆ’ಯ ಮುಖವಾಡ ಧರಿಸಿದ್ದು, ಅದರ ಹಿಂದೆ ‘ಮನುವಾದಿ ಮತ್ತು ಮಹಿಳಾ ವಿರೋಧಿ’ ಮನಸ್ಥಿತಿ ಅಡಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಗುಜರಾತ್ ಬಿಜೆಪಿ ಅಧ್ಯಕ್ಷರು ನಮ್ಮ ಮಹಿಳಾ ಸಂಸದೆ ಗೆನಿಬೆನ್ ಠಾಕೋರ್ ಅವರ ಬಗ್ಗೆ ಅಸಭ್ಯವಾದ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರ ‘ನಾರಿ ವಂದನೆ’ಯ ಮುಖವಾಡ ಕಳಚಿ ಬಿದ್ದಿದೆ. ಇದು ಕೇವಲ ನಾಚಿಕೆಗೇಡಿನ ಸಂಗತಿಯಲ್ಲ, ಬದಲಿಗೆ ಬಿಜೆಪಿಯ ಮಹಿಳಾ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ,” ಎಂದು ಕಿಡಿಕಾರಿದ್ದಾರೆ. ಮಹಿಳೆಯರಿಗೆ ಹಕ್ಕು ಮತ್ತು ಗೌರವ ನೀಡುವಲ್ಲಿ ಬಿಜೆಪಿಯ ಬದ್ಧತೆಯನ್ನು ಅವರು ಇದೇ ವೇಳೆ ಪ್ರಶ್ನಿಸಿದ್ದಾರೆ.
ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಮಹಿಳೆಯರನ್ನು ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ರಾಹುಲ್, ಇಂತಹ ಹೇಳಿಕೆಗಳು ಅವರ ‘ವಿಕೃತ ಮನೋಭಾವ’ವನ್ನು ಎತ್ತಿ ತೋರಿಸುತ್ತವೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಿದ ಅವರು, ಮಹಿಳೆಯರನ್ನು ಗೌರವಿಸುವ ಕುರಿತು ಬಿಜೆಪಿ ತನ್ನ ಹಳೆಯ ಮಾತುಗಳನ್ನು ನೆನಪಿಸಿಕೊಳ್ಳಲಿ ಎಂದು ಎಚ್ಚರಿಸಿದ್ದಾರೆ. ಇಂತಹ ಅಪಮಾನಗಳಿಗೆ ಗುಜರಾತ್ ಸೇರಿದಂತೆ ದೇಶದ ಮಹಿಳೆಯರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕ ಮಹಿಳಾ ಕ್ರಿಕೆಟ್ ಸಾಗಬೇಕಾದ ಹಾದಿ ಯಾವುದು? KSCA ತೋರಿಸಬೇಕಿದೆ ದಿಕ್ಕು
ಕಳೆದ ಗುರುವಾರ ಬನಸ್ಕಾಂತದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಜಗದೀಶ್ ವಿಶ್ವಕರ್ಮ, “ಬಿಜೆಪಿಯು 30 ವರ್ಷಗಳ ನಂತರ ಠಾಕೋರ್ ಅವರ ಸೀರೆಯ ‘ಸೆರಗಿ’ನಿಂದ (Pallu) ಜಿಲ್ಲಾ ಪಂಚಾಯತ್ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ” ಎಂದು ಹೇಳಿದ್ದರು. ಈ ಹೇಳಿಕೆಯು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಮಹಿಳೆಯರನ್ನು ಅವಹೇಳನ ಮಾಡಿದಂತಾಗಿದೆ ಎಂದು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಇದೇ ವಿಷಯವಾಗಿ ಈಗಾಗಲೇ ಹಲವು ಕಾಂಗ್ರೆಸ್ ನಾಯಕರು ವಿಶ್ವಕರ್ಮ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳಾ ಸಂಸದೆಯ ಕುರಿತು ಇಂತಹ ಕೀಳುಮಟ್ಟದ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದು ಟೀಕಿಸಿದ್ದಾರೆ.




