ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಮೇಲ್ವಿಚಾರಕರು ಹಾಗೂ ಸಹಾಯಕರಾಗಿ ಕೇವಲ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ವಲಯದ ಉದ್ದಿಮೆಗಳ (PSU) ಸಿಬ್ಬಂದಿಯನ್ನು ನಿಯೋಜಿಸಿರುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಟಿಎಂಸಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಇಂದು (ಮೇ 2) ನಿರಾಕರಿಸಿದೆ. ಈ ಮೂಲಕ ಫಲಿತಾಂಶಕ್ಕೂ ಮುನ್ನ ಆಡಳಿತಾರೂಢ ಟಿಎಂಸಿಗೆ ಭಾರೀ ಕಾನೂನು ಹಿನ್ನಡೆಯಾಗಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಜಾಯ್ಮಾಲ್ಯ ಬಾಗ್ಚಿ ಅವರಿದ್ದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. “ಮತ ಎಣಿಕೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂಪೂರ್ಣ ಪರಮಾಧಿಕಾರ ಚುನಾವಣಾ ಆಯೋಗಕ್ಕಿದೆ. ಏಪ್ರಿಲ್ 13ರಂದು ಆಯೋಗ ಹೊರಡಿಸಿರುವ ಸುತ್ತೋಲೆಯು ಹಾಲಿ ನಿಯಮಗಳಿಗೆ ವಿರುದ್ಧವಾಗಿಲ್ಲ,” ಎಂದು ಪೀಠವು ಅಭಿಪ್ರಾಯಪಟ್ಟಿದೆ. ಈ ಮುನ್ನ ಕಲ್ಕತ್ತಾ ಹೈಕೋರ್ಟ್ ಏಪ್ರಿಲ್ 30ರಂದು ಟಿಎಂಸಿ ಅರ್ಜಿಯನ್ನು ವಜಾಗೊಳಿಸಿತ್ತು, ಇದನ್ನು ಪ್ರಶ್ನಿಸಿ ಪಕ್ಷವು ಸುಪ್ರೀಂ ಮೆಟ್ಟಿಲೇರಿತ್ತು.
ವಿಚಾರಣೆ ವೇಳೆ ಟಿಎಂಸಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಏಕಪಕ್ಷೀಯವಾಗಿ ಕೇಂದ್ರ ಸಿಬ್ಬಂದಿಯನ್ನು ಮಾತ್ರ ನಿಯೋಜಿಸಿರುವುದು ಮತ ಎಣಿಕೆ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಆತಂಕ ಮೂಡಿಸಿದೆ ಎಂದರು. ಆದರೆ, ಚುನಾವಣಾ ಆಯೋಗದ ಪರ ವಕೀಲ ಡಿ.ಎಸ್. ನಾಯ್ಡು ಅವರು ಈ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದರು. ಆಯೋಗದ ವಾದವನ್ನು ಆಲಿಸಿದ ಪೀಠವು, “ಮತ ಎಣಿಕೆ ಕೊಠಡಿಯಲ್ಲಿ ಅಭ್ಯರ್ಥಿಗಳ ಎಣಿಕೆ ಏಜೆಂಟರು, ಮೈಕ್ರೋ ವೀಕ್ಷಕರು ಹಾಗೂ ಟಿಎಂಸಿ ಪ್ರತಿನಿಧಿಗಳು ಖುದ್ದಾಗಿ ಹಾಜರಿರುತ್ತಾರೆ. ಹೀಗಿರುವಾಗ ಅಕ್ರಮ ನಡೆಯುತ್ತದೆ ಎಂಬ ಆತಂಕಕ್ಕೆ ಆಧಾರವಿಲ್ಲ” ಎಂದು ಸ್ಪಷ್ಟಪಡಿಸಿತು.
ಇದನ್ನು ಓದಿದ್ದೀರಾ? ತಮಿಳುನಾಡಿನ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಕ್ರಿಕೆಟ್ ಅಂಪೈರ್ ರಿತಿಕಾ ಶ್ರೀ – ಸವಾಲು ಮೆಟ್ಟಿ ನಿಂತ ಸಾಧಕಿ
ಚುನಾವಣಾ ಆಯೋಗವು ತನ್ನ ಏಪ್ರಿಲ್ 13ರ ಸುತ್ತೋಲೆಯನ್ನು ಅಕ್ಷರಶಃ ಮತ್ತು ಪ್ರಾಮಾಣಿಕವಾಗಿ ಜಾರಿಗೊಳಿಸಲಿದೆ ಎಂಬ ಆಯೋಗದ ಭರವಸೆಯನ್ನು ನ್ಯಾಯಾಲಯವು ದಾಖಲಿಸಿಕೊಂಡಿತು. ಈ ಸುತ್ತೋಲೆಯಲ್ಲಿ ಕೇಂದ್ರ ಸಿಬ್ಬಂದಿಯ ಜೊತೆಗೆ ಅಗತ್ಯಬಿದ್ದಲ್ಲಿ ರಾಜ್ಯ ಸರ್ಕಾರದ ಸಿಬ್ಬಂದಿಯನ್ನೂ ಬಳಸಿಕೊಳ್ಳುವ ಅವಕಾಶವಿದೆ ಎಂದು ಆಯೋಗ ವಿವರಿಸಿತು. ಆಯೋಗದ ಈ ಸ್ಪಷ್ಟನೆಯ ಬಳಿಕ, ಪ್ರಕರಣದಲ್ಲಿ ಯಾವುದೇ ಹೆಚ್ಚಿನ ಆದೇಶ ಅಥವಾ ನಿರ್ದೇಶನ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಿಲೇವಾರಿ ಮಾಡಿತು.
15 ಮತಗಟ್ಟೆಗಳಲ್ಲಿ ಮರುಮತದಾನ
ಮತ್ತೊಂದೆಡೆ, ವಿದ್ಯುನ್ಮಾನ ಮತಯಂತ್ರಗಳ (EVM) ತಿರುಚುವಿಕೆ ಮತ್ತು ಬೂತ್ ಮಟ್ಟದ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ಆದೇಶದ ಮೇರೆಗೆ ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್ ಮತ್ತು ಫಾಲ್ತಾ ಸೇರಿದಂತೆ ಒಟ್ಟು 15 ಮತಗಟ್ಟೆಗಳಲ್ಲಿ ಶನಿವಾರ ಬಿಗಿ ಭದ್ರತೆಯ ನಡುವೆ ಮರುಮತದಾನ ಪ್ರಕ್ರಿಯೆ ನಡೆಯುತ್ತಿದೆ.




