ದೇಶದ ಶೇ.70ಕ್ಕೂ ಹೆಚ್ಚು ಜನಸಂಖ್ಯೆ ಇಂದು ಪ್ರೊಟೀನ್ ಮತ್ತು ಸೂಕ್ಷ್ಮ ಪೋಷಕಾಂಶ (Micronutrients)ಗಳ ಕೊರತೆಯಿಂದ ಸಾಯುತ್ತಿರುವಾಗ, ಆರ್ಥಿಕ ಅಸಮಾನತೆಯ ಅಂತರ ಹಿಗ್ಗುತ್ತಲೇ ಇರುವಾಗ, ಭಾರತವನ್ನು ‘ವಿಶ್ವಗುರು’ ಅಥವಾ ‘ಆರ್ಥಿಕ ಸೂಪರ್ ಪವರ್’ ಎಂದು ಹೇಳಿಕೊಂಡು ಜಾಗತಿಕ ವೇದಿಕೆಗಳಲ್ಲಿ ಹಲ್ಲು ಬಿಡುವುದು ಆತ್ಮವಂಚನೆಯಾಗುತ್ತದೆ. ಅದು ಬಡವರ ಹಸಿವಿನ ಮತ್ತು ಅವರ ಶ್ರಮದ ತಟ್ಟೆಯ ಮೇಲಿನ ಕ್ರೂರಾತಿಕ್ರೂರ ಅಣಕ.
ದಿನವಿಡೀ ಸಿಮೆಂಟ್ ಮೂಟೆ ಹೊರುವ, ಇಟ್ಟಿಗೆ ಭಟ್ಟಿಯಲ್ಲಿ ಬೆವರಿಳಿಸುವ, ಗಾರ್ಮೆಂಟ್ಸ್‌ನಲ್ಲಿ ದುಡಿಯುವ, ಬೀದಿಯಲ್ಲಿ ಕೂತು ಹತ್ತಿಪ್ಪತ್ತು ರೂಪಾಯಿ ವ್ಯಾಪಾರ ಮಾಡುವ ಶ್ರಮಜೀವಿಗಳ ಕಷ್ಟ ಕಣ್ಣೀರುಗಳು ‘ಡಿಜಿಟಲ್ ಇಂಡಿಯಾ’ದ ಕಣ್ಣು ಕುಕ್ಕುವ ಜಾಹೀರಾತುಗಳ ಬೆಳಕಿನ ಪ್ರಖರತೆಯಲ್ಲಿ ಕಳೆದೇ ಹೋಗುತ್ತದೆ. ಉಳ್ಳವರು ಇಲ್ಲದವರ ಬದುಕನ್ನು ಇಣುಕಿ ನೋಡುವ ಗೋಜಿಗೆ ಹೋಗುವುದಿಲ್ಲ. ದೇಶದ ಜಿಡಿಪಿ (GDP) ದಾಖಲೆ ಬರೆಯುತ್ತಿದೆಯಂತೆ, ಆದರೆ ಬಡತನ ಮತ್ತು ಆರ್ಥಿಕ ಅಸಮಾನತೆಗಳು ಜಿಡಿಪಿ ಹೆಚ್ಚಳದ ದಾಖಲೆಯನ್ನು ಮುಳುಗಿಸಿವೆ! ಕೇಂದ್ರದ ನೀತಿಗಳು ಕಾರ್ಪೊರೇಟ್ ಅಭಿವೃದ್ಧಿಯ ಬೆನ್ನತ್ತಿರುವಾಗಲೇ, ಅತ್ತ ಮಧ್ಯಪ್ರಾಚ್ಯದ ಯುದ್ಧಗಳು ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಮತ್ತು ರಸಗೊಬ್ಬರಗಳ ಬೆಲೆಯ ರಾಕೆಟ್ ಬುಡಕ್ಕೆ ಬೆಂಕಿ ಇಟ್ಟಿವೆ. ಇದರಿಂದ ಹೆಚ್ಚಾಗಿರುವ ಬೆಲೆ ಏರಿಕೆ ಭಾರತದ ದಾರಿದ್ರ್ಯದ ಗಾಯಕ್ಕೆ ಉಪ್ಪು ಉಜ್ಜಿದೆ. ಬೆಲೆ ಏರಿಕೆಯ ಬರೆ ಬಿದ್ದಿರುವುದು ಕೋಟ್ಯಂತರ ರೂಪಾಯಿಗಳ ಸಬ್ಸಿಡಿ ಕದಿಯುವ ಕಾರ್ಪೊರೇಟ್ ಕುಬೇರರ ಮೇಲಲ್ಲ, ಬದುಕಿನ ಬಂಡಿ ತಳ್ಳುವುದಕ್ಕೂ ಅಶಕ್ತರಾದ ಶ್ರಮಜೀವಿಗಳ ಮನೆಯ ಒಲೆಗಳ ಮೇಲೆ. ಜೀವ ಉಳಿಸಿಕೊಳ್ಳಲು ಪಡಿತರ ಸಿಗುತ್ತದಂತೆ, ಆದರೆ ದುಡಿಯುವ ದೇಹಕ್ಕೆ ಬೇಕಾದ ಶಕ್ತಿ ಯಾವುದರಿಂದ ಸಿಗಬೇಕು? ಹೊಟ್ಟೆ ತುಂಬಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿರುವಾಗ ಪೌಷ್ಟಿಕಾಂಶ ಕನಸಿನ ಮಾತು.
ಭಾರತದಲ್ಲಿ ಸಿರಿತನ ಮತ್ತು ಬಡತನದ ನಡುವಿನ ಆರ್ಥಿಕ ಅಸಮಾನತೆಯ ಅಂತರ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಟ್ಟಕ್ಕೆ ಹಿಗ್ಗುತ್ತಲೇ ಸಾಗುತ್ತಿದೆ. ಇತ್ತೀಚಿನ ‘ವರ್ಲ್ಡ್ ಇನ್ಇಕ್ವಾಲಿಟಿ ಲ್ಯಾಬ್’ (World Inequality Lab – WIL) ಬಿಡುಗಡೆ ಮಾಡಿರುವ ಜಾಗತಿಕ ವರದಿಯ ಅಂಕಿ-ಅಂಶಗಳು ಈ ಅನ್ಯಾಯವನ್ನು ಬಿಚ್ಚಿಟ್ಟಿವೆ. ವರದಿಯ ಪ್ರಕಾರ, ಪ್ರಸ್ತುತ ಭಾರತದ ಒಟ್ಟು ರಾಷ್ಟ್ರೀಯ ಸಂಪತ್ತಿನ ಶೇಕಡಾ 40ಕ್ಕೂ ಅಧಿಕ ಪಾಲು ಕೇವಲ ಶೇ. 1 ರಷ್ಟು ಇರುವ ಶ್ರೀಮಂತ ಮಹಾನುಭಾವರ ಕೈಯಲ್ಲಿದೆ. ಬ್ರಿಟಿಷರ ‘ಕಾಲೋನಿಯಲ್ ರಾಜ್’ ಆಡಳಿತಾವಧಿಗಿಂತಲೂ ಭೀಕರವಾಗಿರುವ ಈ ಅಸಮಾನತೆ ಬ್ಯಾಂಕ್ ಬ್ಯಾಲೆನ್ಸ್‌ಗಳಲ್ಲಿ ಅಥವಾ ಐಷಾರಾಮಿ ಮಾಲ್‌ಗಳಲ್ಲಿ ಕಾಣಿಸುವುದಿಲ್ಲ; ಈ ದೇಶದ ಪ್ರತಿ ಬಡ ಕಾರ್ಮಿಕನ ಊಟದ ತಟ್ಟೆಯಲ್ಲಿ ಕಾಣಿಸುತ್ತದೆ. ಶ್ರೀಮಂತರ ತಟ್ಟೆಯಲ್ಲಿ ಪೌಷ್ಟಿಕಾಂಶಕ್ಕೂ ವೈವಿಧ್ಯತೆ, ವಿಲಾಸಿ ಆಹಾರ.. ತಿಂದಿದ್ದಕ್ಕಿಂತ ಟೇಸ್ಟ್ ಮಾಡಿದ್ದೇ ಹೆಚ್ಚು. ಬಡವನ ತಟ್ಟೆಯಲ್ಲಿ ನುಚ್ಚಕ್ಕಿ ಅನ್ನ!

ದೂರದ ಮಧ್ಯಪ್ರಾಚ್ಯದಲ್ಲಿ ಯುದ್ಧದ ಬಿಕ್ಕಟ್ಟು ಆರಂಭವಾಗುವುದಕ್ಕೂ ಮುನ್ನ, ಇಡೀ ಜಗತ್ತು ಕೋವಿಡ್ ಮಹಾಮಾರಿಯ ಆರ್ಥಿಕ ಆಘಾತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿತ್ತು. ಮಾರುಕಟ್ಟೆಯಲ್ಲಿ ಇಂಧನ ದರಗಳು, ರಸಗೊಬ್ಬರಗಳ ಬೆಲೆಗಳು ಮತ್ತು ಸಾರಿಗೆ ವೆಚ್ಚ ತಕ್ಕಮಟ್ಟಿಗೆ ಸ್ಥಿರವಾಗಿದ್ದವು. ಭಾರತದ ಬಡವರು ಮತ್ತು ಮಧ್ಯಮ ವರ್ಗದ ಜನರೂ ಸಹ ತಮ್ಮ ದಿನನಿತ್ಯದ ಗಳಿಕೆಯಲ್ಲಿ ಕನಿಷ್ಠ ಪ್ರಮಾಣದ ಬೇಳೆಕಾಳು, ತರಕಾರಿಗಳನ್ನು ಕೊಂಡು ತಟ್ಟೆಗೆ ಬಡಿಸಿಕೊಳ್ಳುವ ಶಕ್ತಿ ಹೊಂದಿದ್ದರು. ಆದರೆ ಈಗಿರುವ ಅಸಮಾನತೆಯ ತಕ್ಕಡಿ ಹಸಿವು, ಅಪೌಷ್ಟಿಕತೆ ಹೆಚ್ಚಾಗಿ ಬಡತನದ ಕಡೆಗೇ ಜೋತುಬಿದ್ದಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟು ತೀವ್ರಗೊಂಡ ತಕ್ಷಣ ಜಾಗತಿಕ ಇಂಧನ ಮಾರುಕಟ್ಟೆ ತಲ್ಲಣಿಸಿತು. ಕಚ್ಚಾ ತೈಲದ ದರಗಳು ಏರಿದವು, ಜಲಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಧಕ್ಕೆಯಾಯಿತು. ಪರಿಣಾಮವಾಗಿ ಅಂತಾರಾಷ್ಟ್ರೀಯ ಸಾರಿಗೆ ವೆಚ್ಚಗಳು ಬರೋಬ್ಬರಿ ಶೇ. 300ರಷ್ಟು ದುಬಾರಿಯಾದವು. ಕೃಷಿಗೆ ಬೇಕಾದ ರಸಗೊಬ್ಬರಗಳ ಆಮದು ವೆಚ್ಚ ದುಪ್ಪಟ್ಟಾಗಿ, ಇತ್ತ ಸಾರಿಗೆ ವೆಚ್ಚವೂ ಏರಿದ್ದರಿಂದ ಮಾರುಕಟ್ಟೆಯಲ್ಲಿ ದಿನಸಿ ವಸ್ತುಗಳ ಬೆಲೆ ಸಾಮಾನ್ಯ ಗ್ರಾಹಕನ ಕೈಗೆಟುಕದೆ ಆಕಾಶದೆತ್ತರಕ್ಕೆ ಜಿಗಿಯಿತು. ಬಡವರ ಆದಾಯ ಒಂದು ರೂಪಾಯಿಯೂ ಹೆಚ್ಚಾಗಲಿಲ್ಲ, ಆದರೆ ಬದುಕುವ ವೆಚ್ಚ ಮಾತ್ರ ದುಪ್ಪಟ್ಟಾಯಿತು. ಈಗಾಗಲೇ ಪೈಸೆ ಪೈಸೆಗೂ ಲೆಕ್ಕ ಹಾಕಿ ಬದುಕುತ್ತಿದ್ದ ಕೂಲಿ ಕಾರ್ಮಿಕರಿಗೆ ಈಗ ‘ಉಪ್ಪು-ಖಾರದಪುಡಿ ಅನ್ನ’, ‘ಹಸಿ ಮೆಣಸು-ಒಣ ರೊಟ್ಟಿ’ಯೇ ಗತಿ. ಇದು ಅಂತಿಂಥ ಹಣದುಬ್ಬರವಲ್ಲ, ಅಕ್ಷರಶಃ ಬಡವರ ರಕ್ತ ಹೀರುತ್ತಿರುವ ಹಣದುಬ್ಬರ!
ಈ ಹಸಿವಿನ ಮತ್ತು ಪೌಷ್ಟಿಕಾಂಶದ ಕೊರತೆಯ ಅಸಲಿ ಮುಖವನ್ನು ಖ್ಯಾತ ಪೌಷ್ಟಿಕಾಂಶ ತಜ್ಞೆ ಡಾ. ಸಿಲ್ವಿಯಾ ಕರ್ಪಗಂ ಅವರ ಅಧ್ಯಯನಗಳು ಬಿಚ್ಚಿಡುತ್ತವೆ. ಅವರ ಪ್ರಕಾರ ಭಾರತದಲ್ಲಿ ದಲಿತರು, ಹಿಂದುಳಿದವರು, ಆದಿವಾಸಿಗಳು ಮತ್ತು ವಲಸೆ ಕಾರ್ಮಿಕರ ತಟ್ಟೆಗಳಿಂದ ಪ್ರೊಟೀನ್ ಅಂಶಗಳನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳಲಾಗುತ್ತಿದೆ. ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ಬೆಲೆ ಕೆಜಿಗೆ 150 ರಿಂದ 200 ರೂಪಾಯಿ ದಾಟಿದೆ. ಇನ್ನು ಬಡವರಿಗೆ ತೀರಾ ಸುಲಭವಾಗಿ ಹಾಗೂ ಅತ್ಯಂತ ಅಗ್ಗದ ದರದಲ್ಲಿ ಸಿಗುತ್ತಿದ್ದ ಮೊಟ್ಟೆ, ಮಾಂಸದಂತಹ ಪ್ರಾಣಿಜನ್ಯ ಪ್ರೊಟೀನ್‌ಗಳ ಮೇಲಿನ ಮೇಲ್ವರ್ಗದ ಸಾಂಸ್ಕೃತಿಕ-ರಾಜಕೀಯ ಹೇರಿಕೆಗಳು ಮತ್ತು ಮಾರುಕಟ್ಟೆಯ ನಿಯಂತ್ರಣವಿಲ್ಲದ ಹಣದುಬ್ಬರ ಶ್ರಮಜೀವಿಗಳ ದೇಹವನ್ನು ಪೌಷ್ಟಿಕಾಂಶದ ದಾರಿದ್ರ್ಯಕ್ಕೆ ದೂಡಿದೆ. ಬಡತನ ಎಂದರೆ ಕೇವಲ ಕೈಯಲ್ಲಿ ಹಣವಿಲ್ಲದಿರುವುದಲ್ಲ ಅಥವಾ ಹಸಿವಿನಿಂದ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳುವುದಲ್ಲ. ಹೊಟ್ಟೆ ತುಂಬ ಉಂಡರೂ ದೇಹದ ಜೀವಕೋಶಗಳಿಗೆ ಸಿಗಬೇಕಾದ ಅಗತ್ಯ ಪೋಷಕಾಂಶಗಳು ಸಿಗದೇ ಇರುವುದು ಕೂಡ ಒಂದು ರೀತಿಯ ಕಣ್ಣಿಗೆ ಕಾಣದ ಹಸಿವೇ ಆಗಿದೆ. ಪ್ರೊಟೀನ್ ಕೊರತೆಯು ಮನುಷ್ಯನ ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವುದಲ್ಲದೆ, ದೈಹಿಕ ಸಾಮರ್ಥ್ಯವನ್ನು ಒಳಗೊಳಗೇ ಹಿಂಡುತ್ತದೆ.
ಒಬ್ಬ ವಯಸ್ಕ ಕೂಲಿ ಕಾರ್ಮಿಕನ ದೇಹಕ್ಕೆ ನಿತ್ಯವೂ ಕನಿಷ್ಠ 3000 ದಿಂದ 3500 ಕ್ಯಾಲೋರಿ ಶಕ್ತಿ ಮತ್ತು 50 ರಿಂದ 60 ಗ್ರಾಂ ಪ್ರೊಟೀನ್ ಬೇಕಿರುತ್ತದೆ. ಆದರೆ, ಇಂದಿನ ಭಾರತದ ಒಬ್ಬ ಶ್ರಮಜೀವಿಗೆ ದಿನಕ್ಕೆ ಸಿಗುತ್ತಿರುವುದು ಕೇವಲ 1800 ರಿಂದ 2200 ಕ್ಯಾಲೋರಿ ಹಾಗೂ ಕೇವಲ 35 ರಿಂದ 45 ಗ್ರಾಂನಷ್ಟು ಅರೆಬರೆ ಸಸ್ಯಜನ್ಯ ಪ್ರೊಟೀನ್ ಮಾತ್ರ! ಅಂದರೆ, ದಿನಕ್ಕೆ ಬೇಕಾದ ಅಗತ್ಯ ಶಕ್ತಿಯಲ್ಲಿ ಸುಮಾರು ಶೇಕಡಾ 40 ರಷ್ಟು ಪೌಷ್ಟಿಕಾಂಶದ ಕೊರತೆಯೊಂದಿಗೆ ಶ್ರಮಿಕರು ಬದುಕುತ್ತಿದ್ದಾರೆ. ಇಂಧನವೇ ಇಲ್ಲದ ಬಂಡಿ ಎಳೆದಂತೆ ದೇಶದ ದುಡಿಯುವ ವರ್ಗದ ದೇಹಗಳು ದಿನದಿಂದ ದಿನಕ್ಕೆ ಸವೆದು ಹೋಗುತ್ತಿವೆ. ‘Road Scholarz’ ಸಂಸ್ಥೆಯ ಸಂಶೋಧನೆಗಳ ಪ್ರಕಾರ, ಲಾಕ್‌ಡೌನ್ ಸೃಷ್ಟಿಸಿದ ಆರ್ಥಿಕ ಆಘಾತದಿಂದ ಭಾರತದ ಗ್ರಾಮೀಣ ಭಾಗದ ನೈಜ ಕೂಲಿ ಪ್ರಮಾಣ ಇಂದಿಗೂ ಚೇತರಿಸಿಕೊಂಡೇ ಇಲ್ಲ. ಹಾಲು, ಹಣ್ಣು, ತರಕಾರಿಗಳು ಇವರಿಗೆ ಕನಸಿನ ವಸ್ತು. ಹವಾಮಾನ ವೈಪರೀತ್ಯ ಮತ್ತು ಜಾಗತಿಕ ಯುದ್ಧಗಳು ಬೆಲೆ ಏರಿಕೆಗೆ ಕಾರಣ ಎಂದು ರಾಜಕಾರಣಿಗಳು ಮತ್ತು ಆಡಳಿತಗಾರರು ಸುಲಭವಾಗಿ ನುಣುಚಿಕೊಳ್ಳಲು ಕಲಿತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ರೈತ ಕಣ್ಣೀರು ಹಾಕುತ್ತಿದ್ದರೂ, ಇತ್ತ ಕಾಸು ಕೊಟ್ಟು ಕೊಳ್ಳುವ ಬಡ ಗ್ರಾಹಕನಿಗೂ ಅಗ್ಗವಾಗಿ ಸಿಗದೆ ಮಧ್ಯವರ್ತಿಗಳು ಹಾಗೂ ಕಾರ್ಪೊರೇಟ್ ಕಮಿಷನ್ ದಲ್ಲಾಳಿಗಳು ಜನರ ರಕ್ತ ಹೀರಲು ಬಿಟ್ಟಿರುವುದು ವ್ಯವಸ್ಥೆಯ ದಿವಾಳಿತನವನ್ನು ತೋರಿಸುತ್ತದೆ.
ಆರ್ಥಿಕತೆಯ ವಿಜಯಯಾತ್ರೆಯ ಜಪ ಮಾಡುತ್ತಿರುವ ಮೋದಿ-ಶಾ ಭಾರತ ಇಂದು ಹಸಿವು ಮತ್ತು ಅಪೌಷ್ಟಿಕತೆಯ ವಿಚಾರದಲ್ಲಿ ನಿಂತಿರುವುದು ಜಗತ್ತಿನ ಅತ್ಯಂತ ದರಿದ್ರ ಮತ್ತು ಯುದ್ಧಪೀಡಿತ ದೇಶಗಳ ಸಾಲಿನಲ್ಲಿ. ಇತ್ತೀಚಿನ ಜಾಗತಿಕ ಹಸಿವು ಸೂಚ್ಯಂಕದ (Global Hunger Index) ವರದಿಯ ಪ್ರಕಾರ, ಜಗತ್ತಿನ ಒಟ್ಟು 123 ದೇಶಗಳ ಪಟ್ಟಿಯಲ್ಲಿ ಭಾರತ 102ನೇ ಸ್ಥಾನಕ್ಕೆ ಕುಸಿದಿದೆ. ಸೂಚ್ಯಂಕದ ಮಾನದಂಡಗಳ ಪ್ರಕಾರ ಭಾರತದ ಒಟ್ಟಾರೆ ಸ್ಕೋರ್ 25.8 ರಷ್ಟಿದ್ದು, ಇದನ್ನು ಅತ್ಯಂತ ‘ಗಂಭೀರ’ ಹಸಿವಿನ ಮಟ್ಟ ಎಂದು ವರ್ಗೀಕರಿಸಲಾಗಿದೆ. ತೀವ್ರ ಅಪೌಷ್ಟಿಕತೆಯಿಂದಾಗಿ ಭಾರತ ಎದುರಿಸುತ್ತಿರುವ ಈ ಬಿಕ್ಕಟ್ಟು ಉಪ-ಸಹಾರಾ ಆಫ್ರಿಕಾದ ನೈಜೀರಿಯಾ, ಇಥಿಯೋಪಿಯಾ, ಕೀನ್ಯಾ, ಸುಡಾನ್ ಹಾಗೂ ಯುದ್ಧದಿಂದ ಛಿದ್ರವಾಗಿರುವ ಯೆಮೆನ್ ಮತ್ತು ಅಫ್ಘಾನಿಸ್ತಾನಗಳ ಪರಿಸ್ಥಿತಿಗಿಂತ ಭಿನ್ನವಾಗಿಯೇನೂ ಇಲ್ಲ. ನಾವು ಜಿಡಿಪಿಯಲ್ಲಿ ನಮಗಿಂತ ತೀರಾ ಚಿಕ್ಕದಾಗಿರುವ ನೆರೆಹೊರೆಯ ಬಾಂಗ್ಲಾದೇಶ, ನೇಪಾಳ ಮತ್ತು ಪಾಕಿಸ್ತಾನಗಳಿಗಿಂತಲೂ ಈ ಪಟ್ಟಿಯಲ್ಲಿ ಕೆಳಗಿದ್ದೇವೆ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಮೋದಿ @ 12- ಮೆರೆದದ್ದೇ ಸಾಧನೆ, ಸುಳ್ಳಾಡಿದ್ದೇ ದಾಖಲೆ
ಇದಕ್ಕಿಂತಲೂ ಭೀಕರವಾದುದು ಇನ್ನೊಂದಿದೆ.. ವಿಶ್ವಸಂಸ್ಥೆ (UNICEF) ಮತ್ತು ಭಾರತದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS) ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ 5 ವರ್ಷದೊಳಗಿನ ಮಕ್ಕಳ ಒಟ್ಟು ಸಾವುಗಳಲ್ಲಿ ಶೇಕಡಾ 50ಕ್ಕೂ ಹೆಚ್ಚು ಸಾವುಗಳಿಗೆ ಅಪೌಷ್ಟಿಕತೆಯೇ ಕಾರಣ! ಅಂದರೆ, ದೇಶದಲ್ಲಿ ಪ್ರತಿವರ್ಷ ಸುಮಾರು 6 ರಿಂದ 7 ಲಕ್ಷ ಹಸುಗೂಸುಗಳು ಕೇವಲ ಒಂದು ತುತ್ತು ಪೌಷ್ಟಿಕ ಆಹಾರ ಮತ್ತು ಪ್ರೊಟೀನ್ ಇಲ್ಲದೆ, ರೋಗನಿರೋಧಕ ಶಕ್ತಿ ಕಳೆದುಕೊಂಡು ನ್ಯುಮೋನಿಯಾ ಅಥವಾ ಅತಿಸಾರದಂತಹ ಸಾಮಾನ್ಯ ಕಾಯಿಲೆಗಳಿಗೆ ಬಲಿಯಾಗುತ್ತಿವೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಎತ್ತರಕ್ಕೆ ತಕ್ಕಂತೆ ತೂಕವಿಲ್ಲದ ‘ಚೈಲ್ಡ್ ವೇಸ್ಟಿಂಗ್’ ಪ್ರಮಾಣದಲ್ಲಿ ಜಗತ್ತಿನಲ್ಲೇ ಭಾರತ 2ನೇ ಅತಿ ಹೆಚ್ಚು ದಾರಿದ್ರ್ಯ ಸ್ಥಿತಿಯಲ್ಲಿದೆ. ಜತೆಗೆ, ದೀರ್ಘಕಾಲದ ಅಪೌಷ್ಟಿಕತೆಯಿಂದಾಗಿ ವಯಸ್ಸಿಗೆ ತಕ್ಕ ಎತ್ತರವಿಲ್ಲದ ‘ಚೈಲ್ಡ್ ಸ್ಟಂಟಿಂಗ್’ ಪ್ರಮಾಣ ಶೇ. 32.9 ರಷ್ಟಿದೆ; ಅಂದರೆ ದೇಶದ ಮೂರನೇ ಒಂದು ಭಾಗದಷ್ಟು ಮಕ್ಕಳು ಹುಟ್ಟುತ್ತಲೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಊನರಾಗಿ ಬೆಳೆಯುತ್ತಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 12 ರಷ್ಟು ಜನರಿಗೆ ಇಂದಿಗೂ ದಿನದ ಕನಿಷ್ಠ ಅಗತ್ಯ ಕ್ಯಾಲೋರಿಗಳೇ ಸಿಗುತ್ತಿಲ್ಲ ಎನ್ನುತ್ತದೆ ವರದಿ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ‘ಕ್ಯಾಲೋರಿ’ ತುಂಬಿಸುವ ಅಕ್ಕಿ ಅಥವಾ ಗೋಧಿ ನೀಡಿದರೆ ಸಾಲದು. ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ, ಗೋಧಿಯ ಜತೆಗೆ ಬೇಳೆಕಾಳುಗಳು, ಖಾದ್ಯ ತೈಲ ಮತ್ತು ಮುಖ್ಯವಾಗಿ ಮೊಟ್ಟೆಗಳನ್ನು ಕಡ್ಡಾಯವಾಗಿ ಒದಗಿಸುವ ಮೂಲಕ ‘ನ್ಯೂಟ್ರಿಷನ್ ಸೆಕ್ಯೂರಿಟಿ’ (Nutritional Security) ತರಬೇಕಾದ ತುರ್ತು ಅಗತ್ಯವಿದೆ. ಇದೇನು ಸರ್ಕಾರದ ಭಿಕ್ಷೆಯಲ್ಲ, ನಾಗರಿಕರ ಹಕ್ಕು. ಒಂದು ದೇಶದ ನಿಜವಾದ ಪ್ರಗತಿ ಮತ್ತು ವಿಕಾಸವನ್ನು ಅಲ್ಲಿನ ಜಿಡಿಪಿಯಿಂದ ಅಥವಾ ನಿಯತಕಾಲಿಕೆಗಳಲ್ಲಿ ಪ್ರಕಟವಾಗುವ ಬಿಲಿಯನೇರ್‌ಗಳ ಪಟ್ಟಿಯಿಂದ ಅಳೆಯಲು ಸಾಧ್ಯವಿಲ್ಲ. ಅದು ಅಳೆಯಲ್ಪಡುವುದು ಆ ದೇಶದ ಅತ್ಯಂತ ಕಟ್ಟಕಡೆಯ ಬಡ ಪ್ರಜೆಯ ಊಟದ ತಟ್ಟೆಯಲ್ಲಿರುವ ಆಹಾರದ ಗುಣಮಟ್ಟದಿಂದ ಮತ್ತು ಅವನ ಮಗುವಿನ ಆರೋಗ್ಯದಿಂದ. ದೇಶದ ಶೇ.70ಕ್ಕೂ ಹೆಚ್ಚು ಜನಸಂಖ್ಯೆ ಇಂದು ಪ್ರೊಟೀನ್ ಮತ್ತು ಸೂಕ್ಷ್ಮಪೋಷಕಾಂಶ (Micronutrients)ಗಳ ಕೊರತೆಯಿಂದ ಸಾಯುತ್ತಿರುವಾಗ, ಆರ್ಥಿಕ ಅಸಮಾನತೆಯ ಅಂತರ ಹಿಗ್ಗುತ್ತಲೇ ಇರುವಾಗ, ಭಾರತವನ್ನು ‘ವಿಶ್ವಗುರು’ ಅಥವಾ ‘ಆರ್ಥಿಕ ಸೂಪರ್ ಪವರ್’ ಎಂದು ಹೇಳಿಕೊಂಡು ಜಾಗತಿಕ ವೇದಿಕೆಗಳಲ್ಲಿ ಹಲ್ಲು ಕಿರಿಯುವುದು ಆತ್ಮವಂಚನೆಯಾಗುತ್ತದೆ. ಅದು ಬಡವರ ಹಸಿವಿನ ಮತ್ತು ಅವರ ಶ್ರಮದ ತಟ್ಟೆಯ ಮೇಲಿನ ಕ್ರೂರಾತಿಕ್ರೂರ ಅಣಕ. ಸರ್ಕಾರಗಳು ಕಣ್ಣುಬಿಟ್ಟು ಬೆಲೆ ಏರಿಕೆಗೆ ಬ್ರೇಕ್ ಹಾಕುವ ಮತ್ತು ತಳವರ್ಗದ ಜನರ ಪೌಷ್ಟಿಕಾಂಶದ ಹಕ್ಕನ್ನು ರಕ್ಷಿಸುವ ಜನಪರ ಆರ್ಥಿಕ ನೀತಿಗಳನ್ನು ರೂಪಿಸಬೇಕು. ಇಲ್ಲದಿದ್ದರೆ, ಈ ದೇಶದ ಶ್ರಮಜೀವಿಗಳ ಹಸಿವಿನ ಜ್ವಾಲೆ ಇಡೀ ವ್ಯವಸ್ಥೆಯನ್ನೇ ದಹಿಸಿಬಿಡಬಹುದು, ಎಚ್ಚರ!





