ಭಾರತಿರಾಜ ಕೇವಲ ನಿರ್ದೇಶಕರಾಗಿರಲಿಲ್ಲ. ಮಣ್ಣಿನ ತತ್ವಜ್ಞಾನಿ, ಗ್ರಾಮೀಣ ಬದುಕಿನ ಕವಿ, ಸಾಮಾಜಿಕ ಚಿಂತಕ ಮತ್ತು ಮಾನವೀಯತೆಯ ಕಥೆಗಾರರಾಗಿದ್ದರು. ಅವರ ಚಿತ್ರಗಳಲ್ಲಿನ ಹೊಲಗಳು ಇನ್ನೂ ಹಸಿರಾಗಿವೆ. ಅವರ ಪಾತ್ರಗಳು ಇನ್ನೂ ಮಾತನಾಡುತ್ತಿವೆ. ಅವರ ಪ್ರೇಮಿಗಳು ಇನ್ನೂ ಕನಸು ಕಾಣುತ್ತಿದ್ದಾರೆ. ಅವರ ಮಹಿಳಾ ಪಾತ್ರಗಳು ಇನ್ನೂ ಬದುಕಿನ ಹೋರಾಟವನ್ನು ಮುಂದುವರಿಸುತ್ತಿವೆ. ಅವರ ಕ್ಯಾಮೆರಾ ಕಂಡ ಹಳ್ಳಿಗಳು ಇನ್ನೂ ನಮ್ಮ ಸ್ಮೃತಿಗಳಲ್ಲಿ ಉಸಿರಾಡುತ್ತಿವೆ...
ತಮಿಳು ಚಿತ್ರರಂಗದ ಇತಿಹಾಸದಲ್ಲಿ ಕೆಲವು ಹೆಸರುಗಳು ಕೇವಲ ನಿರ್ದೇಶಕರ ಹೆಸರಾಗಿ ಉಳಿಯುವುದಿಲ್ಲ; ಅವು ಒಂದು ಯುಗದ, ಒಂದು ಪಂಥದ, ಒಂದು ದೃಷ್ಟಿಯ ಮತ್ತು ಒಂದು ಸಾಂಸ್ಕೃತಿಕ ಕ್ರಾಂತಿಯ ಸಂಕೇತಗಳಾಗಿ ಉಳಿಯುತ್ತವೆ. ಅಂಥ ನಿರ್ದೇಶಕರು ಚಲನಚಿತ್ರರಂಗದಲ್ಲಿ ತಾಂತ್ರಿಕ ಕುಶಲತೆಯೂ ಸೇರಿದಂತೆ, ನಿಂತ ನೀರಾಗಿ ಜಡಗಟ್ಟಿದ್ದ ಕಥಾವಸ್ತು, ನಿರೂಪಣೆ, ಕಲಾವಿದರ ಅಭಿನಯ ಶೈಲಿ ಮುಂತಾದವುಗಳಿಗೆ ಸಂಚಲನ ಸೃಷ್ಟಿಸುತ್ತಾರೆ. ಕಾಲಕಾಲಕ್ಕೆ ಸಂಭವಿಸುವ ಈ ವಿದ್ಯಮಾನವು ಮುಂದಿನ ತಲೆಮಾರನ್ನು ಗಾಢವಾಗಿ ಪ್ರಭಾವಿಸುತ್ತದೆ. ಹೊಸ ಹೊಸ ನಿರೂಪಣೆಗಳ ಕ್ರಿಯಾಶೀಲ ನಿರ್ದೇಶಕರ ಜೊತೆಯಲ್ಲಿ ಹೊಸ ಹೊಸ ಕಲಾವಿದರು, ಪ್ರತಿಭಾವಂತ ತಂತ್ರಜ್ಞರು ತೆರೆಗೆ ಆಗಮಿಸುತ್ತಾರೆ. ಹಳೆಯ ಕಲಾವಿದರು ಇಂಥ ಹೊಸ ನಿರ್ದೇಶಕರ ಸ್ಪರ್ಶದಿಂದ ಹೊಸ ದಿಕ್ಕು ಕಂಡುಕೊಳ್ಳುತ್ತಾರೆ.
ಈ ವಿದ್ಯಮಾನಕ್ಕೆ ಕೆಲವು ಉದಾಹರಣೆಗಳೆಂದರೆ, ಜಾನಪದ ಮತ್ತು ಪೌರಾಣಿಕ ಚಿತ್ರಗಳ ಸಿದ್ಧ ಮಾದರಿಗಳ ಜಾಡಿನಲ್ಲಿ ರಂಜನಾ ಪ್ರಧಾನವಾದ ಚಿತ್ರಗಳೇ ತಯಾರಾಗುತ್ತಿದ್ದ 1930- 49ರ ದಶಕದಲ್ಲಿ ಕೆ. ಸುಬ್ರಮಣ್ಯಂ ಅವರು ಸಾಮಾಜಿಕ ಜಾತಿ, ವಿಧವಾ ಸಮಸ್ಯೆಗಳ ಕಥಾವಸ್ತುಗಳನ್ನು ತೆರೆಗೆ ತಂದು ದೊಡ್ಡ ಸಂಚಲನವನ್ನು ಹುಟ್ಟುಹಾಕಿದರು. ಅನಂತರ ಎಸ್.ಎಸ್. ವಾಸನ್ ಅವರ ಪ್ರಯೋಗಶೀಲತೆ, ಎ. ಭೀಮ್ ಸಿಂಗ್ ಮತ್ತು ಕೃಷ್ಣನ್ ಪಂಜು ಅವರು ಸಾಮಾಜಿಕ ಚಿತ್ರಗಳಿಗೆ ತಂದ ವಿಶಿಷ್ಟ ನಿರೂಪಣೆಯು ತಮಿಳು ಚಿತ್ರಗಳನ್ನು ನಿರ್ದೇಶಿಸಿ ದೇಶದ ಗಮನ ಸೆಳೆದರು. ಜಾನಪದ, ಪೌರಾಣಿಕ, ಸಾಮಾಜಿಕ ಚಿತ್ರಗಳ ಜೊತೆಗೆ ಜನಪ್ರಿಯ ನಟರದೇ ಮೇಲುಗೈ ಪಡೆದಿದ್ದ 1960ರ ದಶಕದ ತಮಿಳು ಚಿತ್ರರಂಗದ ಚರ್ವಿತಚರ್ವಣ ಸಿನೆಮಾ ಪಂಥವು ಹೊರಳುಹಾದಿ ಹಿಡಿಯಲು ಕಾರಣವಾದವರು ನಿರ್ದೇಶಕ ಸಿ.ವಿ. ಶ್ರೀಧರ್ ಮತ್ತು ಕೆ. ಬಾಲಚಂದರ್.
ಅದೇ ರೀತಿ ಎಪ್ಪತ್ತರ ದಶಕದಲ್ಲಿ ಜೆ. ಮಹೇಂದ್ರನ್, ಭಾರತಿರಾಜ ಮತ್ತು ಬಾಲುಮಹೇಂದ್ರ ಚಿತ್ರರಂಗಕ್ಕೆ ಹೊಸ ದಾರಿಯನ್ನು ನಿರ್ದೇಶಿಸಿದ ಪ್ರಮುಖರು. ತಮಿಳು ಚಲನಚಿತ್ರಂಗದಲ್ಲಿ ನಡೆಸಿದ ಈ ಮೂವರ ಪ್ರಯೋಗಗಳು ಹೊಸ ಕಲಾವಿದರು, ತಂತ್ರಜ್ಞರು ಮತ್ತು ಕಲಾವಿದರಿಗೆ ದೊಡ್ಡ ಬಾಗಿಲು ತೆರೆದವು. ಮುಂದೆ ನಿಂತ ನೀರಿಗೆ ಸಂಚಲನ ಮೂಡಿಸಿ ಹರಿಯುವಂತೆ ಮಾಡುವ ಈ ಪರಂಪರೆಯನ್ನು ಮಣಿರತ್ನಂ, ಭಾಗ್ಯರಾಜ್ ಅವರಂಥ ಅನೇಕ ನಿರ್ದೇಶಕರು ಮುಂದುವರೆಸಿದರು. ಈಗ ಬಾಲಾ, ವೆಟ್ರಿಮಾರನ್, ಪಾ. ರಂಜಿತ್, ಮಾರಿ ಸೆಲ್ವರಾಜ್ ಮೊದಲಾದ ಹೊಸ ನಿರ್ದೇಶಕರು ಅದೇ ಪರಂಪರೆಯ ಕೊಂಡಿಯಾಗಿ ಹಲವಾರು ಪ್ರಯೋಗಗಳ ಮೂಲಕ ತಮಿಳು ಚಲನಚಿತ್ರರಂಗವನ್ನು ಹಲವು ದಿಕ್ಕುಗಳಲ್ಲಿ ಮುನ್ನಡೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ?: A Foggy Tale: ಇತಿಹಾಸದ ಮಂಜಿನೊಳಗೆ ಮಾನವೀಯತೆಯ ಹುಡುಕಾಟ
ತಮಿಳು ನಿರ್ದೇಶಕರು ಹುಟ್ಟುಹಾಕಿದ ಈ ಪರಂಪರೆಯ ವಿಶಿಷ್ಟತೆ ಎಂದರೆ ಜನಪ್ರಿಯ ಕಲಾವಿದರನ್ನು ಬಳಸಿಕೊಂಡರೂ ಅವರನ್ನು ಭಿನ್ನವಾದ ದಾರಿಯಲ್ಲಿ ನಡೆಸಿ ಅವರ ಅಭಿನಯ ಕೌಶಲ್ಯಕ್ಕೆ ಸಾಣೆ ಹಿಡಿದಿರುವುದು. ಹೊಸ ಕಲಾವಿದರು ಮತ್ತು ತಂತ್ರಜ್ಞರನ್ನು ಶೋಧಿಸಿ ಅವರ ವೃತ್ತಿ ಬೆಳಗಲು ಕಾರಣವಾದ ವಿಶಿಷ್ಟ ವಿದ್ಯಮಾನ. ಈ ಪಂಥದ ಹಲವು ಚಿತ್ರ ನಿರ್ದೇಶಕರು ಸಮಕಾಲೀನ ಸಂಗತಿಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನಗಳಲ್ಲಿ ಯಶಸ್ಸು ಪಡೆದಿರುವುದು ಮೂರನೆಯ ವಿಶೇಷ. ವಾಣಿಜ್ಯ ಅಂಶಗಳ ಜೊತೆಗೆ ಕಲಾತ್ಮಕ ನಿರೂಪಣೆಯನ್ನು ಹದವಾಗಿ ಬೆರೆಸಿ ಬೆಚ್ಚನೆ ಅನುಭವ ನೀಡುವ ಚಿತ್ರಗಳನ್ನು ತಯಾರಿಸಿದ ಸಾಹಸಿಗರು ಇವರು. ಚಲನಚಿತ್ರರಂಗ ಸಮೃದ್ಧವಾಗಿ ಬೆಳೆಯಲು ಕಾರಣವಾದ ವಿದ್ಯಮಾನವಿದು.
ಈ ಪರಂಪರೆಗೆ ಸೇರಿದ ಅಪರೂಪದ ನಿರ್ದೇಶಕರಲ್ಲಿ ಭಾರತಿರಾಜ ಅವರದು ಎದ್ದು ಕಾಣುವ ಪ್ರತಿಭೆ. ತಮಿಳು ಸಿನಿಮಾವನ್ನು ಸ್ಟುಡಿಯೋಗಳ ಕೃತಕ ಗೋಡೆಗಳಿಂದ ಹೊರಗೆ ಕರೆತಂದು, ಹಳ್ಳಿಯ ಧೂಳು, ಗದ್ದೆಯ ಹಸಿರು, ಮನುಷ್ಯರ ನಿಜವಾದ ಬದುಕು ಮತ್ತು ಮಣ್ಣಿನ ವಾಸನೆಯನ್ನು ಬೆಳ್ಳಿತೆರೆಯ ಮೇಲೆ ಜೀವಂತಗೊಳಿಸಿದ ಮಹಾನ್ ಕಲಾವಿದ ಅವರು. 1970ರ ದಶಕದ ಉತ್ತರಾರ್ಧದಲ್ಲಿ ಅವರು ಚಿತ್ರರಂಗಕ್ಕೆ ಬಂದಾಗ, ತಮಿಳು ಸಿನೆಮಾ ಬಹುತೇಕ ಸ್ಟುಡಿಯೋಗಳ ಕೃತಕ ವಾತಾವರಣಕ್ಕೆ ಸೀಮಿತವಾಗಿತ್ತು. ಕಥೆಗಳು ನಗರ ಕೇಂದ್ರಿತವಾಗಿದ್ದವು; ಅಭಿನಯ ಮತ್ತು ದೃಶ್ಯ ವಿನ್ಯಾಸಗಳಲ್ಲಿ ನಾಟಕೀಯತೆ ಮೇಲುಗೈ ಸಾಧಿಸಿತ್ತು. ಭಾರತಿರಾಜರು ಕ್ಯಾಮೆರಾವನ್ನು ಹಳ್ಳಿಗಳತ್ತ ಕೊಂಡೊಯ್ದರು. ಗ್ರಾಮೀಣ ಬದುಕನ್ನು ಕೇವಲ ಹಿನ್ನೆಲೆಯಾಗಿ ಅಲ್ಲ, ಕಥೆಯ ಮುಖ್ಯ ವಿಷಯವಾಗಿಯೇ ರೂಪಿಸಿದರು. ಹೀಗೆ ಅವರು ತಮಿಳು ಸಿನೆಮಾಕ್ಕೆ ಹೊಸ ದೃಶ್ಯ ಭಾಷೆಯನ್ನೂ, ಹೊಸ ಸಾಮಾಜಿಕ ಕಲ್ಪನೆಯನ್ನೂ ನೀಡಿದರು.
ಭಾರತಿರಾಜ ಅವರು 1941 ಜುಲೈ 17ರಂದು ತಮಿಳುನಾಡಿನ ಥೇನಿ ಜಿಲ್ಲೆಯ ಅಳ್ಳಿನಗರಂ ಎಂಬ ಗ್ರಾಮದಲ್ಲಿ ಜನಿಸಿದರು(ಕೆಲವು ಕಡೆ 1942ರ ಆಗಸ್ಟ್ 23 ಎಂದೂ ಉಲ್ಲೇಖವಿದೆ). ಅವರ ಮೂಲ ಹೆಸರು ಚಿನ್ನಸಾಮಿ ಪೆರಿಯಾಮಯ ತೇವರ್. ರೈತ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ಬಾಲ್ಯದಲ್ಲೇ ಹಳ್ಳಿಯ ಬದುಕಿನ ಕಷ್ಟ-ಸುಖಗಳನ್ನುಹತ್ತಿರದಿಂದ ಕಂಡಿದ್ದರು. ಹಳ್ಳಿಯ ಸೊಗಡು, ಗ್ರಾಮೀಣ ಬದುಕಿನ ಸಂಕಷ್ಟ-ಸಂಭ್ರಮಗಳು, ಅಲ್ಲಿನ ಸಂಸ್ಕೃತಿ ಅವರ ಕಣ್ಣುಗಳಲ್ಲಿ ಸದಾ ಅಚ್ಚೊತ್ತಿದ್ದವು. ಇದೇ ಅನುಭವಗಳು ಮುಂದೆ ಅವರ ಸಿನೆಮಾಗಳ ಭಾಗವಾಗಿ ಅಭಿವ್ಯಕ್ತಿ ಪಡೆದವು.
ಇದನ್ನು ಓದಿದ್ದೀರಾ?: ಮಧುರ ಗಾನಸಂಪತ್ತಿನ ಸುಮನ್ ಕಲ್ಯಾಣಪುರ್
ಸಿನೆಮಾ ಮೇಲಿನ ಅಪಾರ ಆಸಕ್ತಿ ಅವರನ್ನು ಚೆನ್ನೈಗೆ ಕರೆತಂದಿತು. ಸಿನೆಮಾ ಹೊರತು ತನಗೆ ಬದುಕಿಲ್ಲ ಎಂದೇ ಅವರು ಗಾಢವಾಗಿ ಸಿನೆಮಾವನ್ನು ಪ್ರೀತಿಸುತ್ತಿದ್ದರು. ಆದರೆ ಅದು ಸುಲಭದ ಹಾದಿಯಲ್ಲ. ಅನೇಕ ಸಂಕಷ್ಟಗಳು, ನಿರಾಕರಣೆಗಳು ಮತ್ತು ಹೋರಾಟಗಳನ್ನು ಎದುರಿಸಿದರು. ಆರಂಭದಲ್ಲಿ ನಾಟಕಗಳಲ್ಲಿ ನಟಿಸುತ್ತಾ, ಕಥೆಗಳನ್ನು ಬರೆಯುತ್ತಾ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಸಾಕಷ್ಟು ಹೋರಾಟ ಮಾಡಿದರು. ಹಿರಿಯ ನಿರ್ದೇಶಕರಾದ ಕನ್ನಡದ ಪುಟ್ಟಣ್ಣ ಕಣಗಾಲ್ ಅವರೂ ಸೇರಿದಂತೆ ತೆಲುಗಿನ ಪಿ. ಪುಲ್ಲಯ್ಯ, ಮಲಯಾಳಂನ ಎಂ. ಕೃಷ್ಣನ್ ನಾಯರ್, ತಮಿಳಿನ ಎ. ಜಗನ್ನಾಥನ್ ಅವರ ಹತ್ತಿರ ನಿರ್ದೇಶನ ವಿಭಾಗದಲ್ಲಿ ಸಹಾಯಕರಾಗಿ ದುಡಿದು ಅನುಭವ ಗಳಿಸಿದರು. ಪುಟ್ಟಣ್ಣ ಕಣಗಾಲ್ ಅವರ ಸಿನಿಮಾ ಶೈಲಿಯಿಂದ ಪ್ರಭಾವಿತರಾಗಿದ್ದ ಭಾರತಿರಾಜ ತಾವೂ ಅವರಂತೆಯೇ ಚಿತ್ರರಂಗದಲ್ಲಿ ಹೊಸದೊಂದು ಹಾದಿ ನಿರ್ಮಿಸಲು ಸಂಕಲ್ಪ ತೊಟ್ಟರು.

1977ರಲ್ಲಿ ಬಿಡುಗಡೆಯಾದ ‘ಪದಿನಾರು ವಯದಿನಿಲೆ’ ಚಿತ್ರದ ಮೂಲಕ ಭಾರತಿರಾಜ ಸ್ವತಂತ್ರ ನಿರ್ದೇಶಕರಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. ಅದು ತಮಿಳು ಸಿನೆಮಾದ ಇತಿಹಾಸವನ್ನೇ ಬದಲಿಸಿತು. ಇದು ಕೇವಲ ಒಂದು ಯಶಸ್ವಿ ಚಿತ್ರವಾಗಿರಲಿಲ್ಲ; ಅದು ಒಂದು ಸಾಂಸ್ಕೃತಿಕ ಕ್ರಾಂತಿಯಾಗಿತ್ತು. ಮುಂದೆ ತಮಿಳು ಚಿತ್ರರಂಗದ ಇತಿಹಾಸವನ್ನು ‘ಭಾರತಿರಾಜ ಅವರ ಮುನ್ನ’ ಮತ್ತು ‘ಭಾರತಿರಾಜ ಅವರ ನಂತರ’ ಎಂದು ಎರಡು ಭಾಗವಾಗಿ ವರ್ಗೀಕರಣ ಮಾಡುವಷ್ಟು ಗಾಢವಾದ ಪ್ರಭಾವವನ್ನು ಈ ಚಿತ್ರವು ಬೀರಿತು.
ಆಗ ಕನ್ನಡದಲ್ಲಿ ಹೊಸ ಹಾದಿ ನಿರ್ಮಿಸಿದ್ದ ಕಲಾತ್ಮಕ ಚಿತ್ರಗಳಂತೆ ಅಲ್ಪ ಬಜೆಟ್ನ ಚಿತ್ರವನ್ನು ನಿರ್ದೇಶಿಸಲು ಭಾರತಿರಾಜ ಒಲವಿತ್ತು. ಚಿತ್ರಕಥೆಯನ್ನು ತಾವೇ ರಚಿಸಿಕೊಂಡು ಆಗತಾನೇ ಉದಯೋನ್ಮುಖ ಕಲಾವಿದರಾಗಿದ್ದ ಕಮಲ ಹಾಸನ್, ಶ್ರೀದೇವಿ ಮತ್ತು ರಜನೀಕಾಂತ್ ಅವರನ್ನು ಕಡಿಮೆ ಸಂಭಾವನೆಗೆ ಒಪ್ಪಿಸಿದರು. ಗಾಂಧಿಮತಿಯಂಥ ಹಿರಿಯ ಕಲಾವಿದೆಯನ್ನು ಹೊರತುಪಡಿಸಿದರೆ ನಿರ್ಮಾಣದ ಬೇರೆ ಬೇರೆ ವಿಭಾಗದಲ್ಲಿ ತೊಡಗಿಸಿಕೊಂಡವರು ಮತ್ತು ಚಿತ್ರೀಕರಣ ನೋಡಲು ಬಂದವರನ್ನೇ ಪಾತ್ರಧಾರಿಗಳಾಗಿಸಿದರು. ಅಂಥ ಆರ್ಥಿಕ ಮಿತಿಯಲ್ಲಿ ತೆಗೆದ ಚಿತ್ರವು ತಮಿಳು ಚಿತ್ರರಂಗ ಹೊಸ ಹಾದಿಗೆ ಹೊರಳುವಂತೆ ಮಾಡಿತು.
ಇದನ್ನು ಓದಿದ್ದೀರಾ?: ಅಕಿರಾ ಕುರೊಸಾವಾನ ‘ಡೆರ್ಸು ಉಜಾಲಾ’ ಎಂಬ ಕಾಡಿನ ಸಂತನೂ, ಕಾಡುವ ಚಿತ್ರವೂ
‘ಪದಿನಾರು ವಯದಿನಿಲೆ’ ಚಿತ್ರದಲ್ಲಿ ಹಳ್ಳಿಯ ಬದುಕು, ಸಾಮಾನ್ಯ ಜನರ ಭಾಷೆ, ಅವರ ಕನಸುಗಳು ಮತ್ತು ದುರಂತಗಳು ಅತ್ಯಂತ ಸಹಜವಾಗಿ ಮೂಡಿಬಂದವು. ಚಿತ್ರವು ಹಳ್ಳಿಯ ಪರಿಸರವನ್ನೇ ಜೀವಂತ ಭಿತ್ತಿಯಾಗಿಸಿತು. ಕ್ಯಾಮೆರಾ ಅಲ್ಲಿನ ಗದ್ದೆಯ ಕೋಗುಗಳಲ್ಲಿ ಸಂಚರಿಸಿ ಹಸಿರನ್ನು ಕಣ್ಣಿನಲ್ಲಿ ಇಳಿಸಿತು. ಸಂತೆಯ ಗದ್ದಲವನ್ನು, ನದಿಯ ನೀರಿನ ಕಲರವವನ್ನು, ಹಬ್ಬದ ಸಂಭ್ರಮಗಳ ಪುಳಕವನ್ನು, ಉಡಾಳ ಜನರ ಕಾಡು ಹರಟೆಯ ಸುಖವನ್ನು, ಮನುಷ್ಯರ ರಾಗ-ದ್ವೇಷಗಳನ್ನು ಸಜೀವವಾಗಿ ತೆರೆಗೆ ತಂದಿತು. ಇಲ್ಲಿನ ಮುಖ್ಯ ಪಾತ್ರಧಾರಿಗಳೆಲ್ಲ ದಿನನಿತ್ಯ ಸಿಗುವಂಥ ಸಾಮಾನ್ಯ ಜನರೇ! ಕೊಳಕನಂತೆ ಬದುಕುವ, ಅನಾಥ ಕುಂಟ ಚಪ್ಪಾಣಿ, ನಾಗರಿಕತೆಯ ಸುಖವನ್ನು ಬಯಸುವ ಮಯಿಲ್ ಮತ್ತು ಊರಿನ ಉಡಾಳ ಪರಟ್ಟೈಯನ್ನಂಥ ಸಾಮಾನ್ಯ ಪಾತ್ರಗಳನ್ನು ಕಂಡ ಆಗಿನ ಪ್ರೇಕ್ಷಕರು ಮೊದಲ ಬಾರಿಗೆ ತಮ್ಮದೇ ಬದುಕನ್ನು ತೆರೆ ಮೇಲೆ ನೋಡಿದರು. ಚಿತ್ರರಂಗವು ಸಹ ಮೊದಲ ಬಾರಿಗೆ ಹಳ್ಳಿಯ ಮಣ್ಣಿನ ಘಮಲಿನಲ್ಲಿ ಮಿಂದೆದ್ದಿತು.
ಈ ಚಿತ್ರದ ಮೂಲಕ ಕಮಲ ಹಾಸನ್, ಶ್ರೀದೇವಿ ಮತ್ತು ರಜನೀಕಾಂತ್ ಅವರ ಪ್ರತಿಭೆಗೆ ಹೊಸ ಆಯಾಮ ದೊರೆಯಿತು. ನಿರ್ಮಾಣದಲ್ಲಿ ತೊಡಗಿಕೊಂಡು ಸಣ್ಣ ಪುಟ್ಟ ಪಾತ್ರಕ್ಕೆ ಬಣ್ಣ ಹಚ್ಚಿದ ಗೌಂಡಮಣಿ ಮತ್ತು ಭಾಗ್ಯರಾಜ್, ಮೊದಲಾದವರು ಮುಂದೆ ತಮಿಳು ನಾಡಿನ ಹೆಸರಾಂತ ಕಲಾವಿದರೂ ನಿರ್ದೇಶಕರಾಗಿಯೂ ಬೆಳಗಿದರು. ತಮಿಳು ಸಿನೆಮಾದಲ್ಲಿ “ಗ್ರಾಮೀಣ ವಾಸ್ತವಿಕತೆ” ಎಂಬ ಹೊಸ ಅಧ್ಯಾಯ ಈ ಚಿತ್ರದಿಂದಲೇ ಆರಂಭವಾಯಿತು.
‘ಪದಿನಾರು ವಯದಿನಿಲೆ’ ಮೂಲಕ ಯಶಸ್ಸಿನ ಅಲೆಯನೇರಿದ ಭಾರತಿರಾಜ ಅವರು ತಮ್ಮ ವೃತ್ತಿ ಬದುಕಿನ ನಾಲ್ಕೂವರೆ ದಶಕದಲ್ಲಿ ಒಟ್ಟು 42 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ 34 ತಮಿಳು ಚಿತ್ರಗಳು ಜೊತೆಗೆ ತಮಿಳು ಆವೃತ್ತಿಯಲ್ಲಿ ಯಶಸ್ಸು ಕಂಡ ಐದು ಚಿತ್ರಗಳನ್ನು ಹಿಂದಿಯಲ್ಲೂ, ಮೂರು ಚಿತ್ರಗಳನ್ನು ತೆಲುಗು ಭಾಷೆಯ ಅವತರಣಿಕೆಗಳನ್ನು ಅವರೇ ನಿರ್ದೇಶಿಸಿದ್ದಾರೆ.
ಭಾರತಿರಾಜ ಅವರ ಒಟ್ಟು ಚಲನಚಿತ್ರಗಳಲ್ಲಿ ಗ್ರಾಮೀಣ ಬದುಕಿನ ಸುಖ ದುಃಖ, ಪ್ರೇಮ ಕಥಾನಕಗಳ ಜೊತೆಗೆ, ಪತ್ತೇದಾರಿ, ಸೇಡಿನ ಕಥೆಯ ಥ್ರಿಲ್ಲರ್ ಮಾದರಿಯ ಮತ್ತು ಸಮಕಾಲೀನ ಸಾಮಾಜಿಕ ಸಂಗತಿಗಳನ್ನು ಆಧರಿಸಿದ ಚಿತ್ರಗಳು ಸೇರಿವೆ. ಆದರೂ ಗ್ರಾಮೀಣ ಭಿತ್ತಿಯಲ್ಲಿ ಹೆಣೆದ ಕಥಾನಕಗಳೆ ಹೆಚ್ಚಿರುವ ಕಾರಣದಿಂದ ಅವರು ಗ್ರಾಮೀಣ ಪರಿಸರದ ಸಂಸ್ಕೃತಿಯನ್ನು ತೆರೆಯ ಮೇಲೆ ಜೀವಂತವಾಗಿಸಿರುವುದಕ್ಕೆ ಹೆಚ್ಚು ಪ್ರಸಿದ್ಧರಾಗಿದ್ದಾರೆ.
ಇದನ್ನು ಓದಿದ್ದೀರಾ?: ಅಮೂರ್ತ ಮತ್ತು ಅಸಂಗತ ಸಿನೆಮಾಗಳು
ಭಾರತಿರಾಜ ಅವರು ಗ್ರಾಮೀಣ ಭಿತ್ತಿಯಲ್ಲಿ ತೆಗೆದ ಬಹುತೇಕ ಚಿತ್ರಗಳು ಪ್ರೇಮಿಗಳ ಹೋರಾಟಗಳ ಹೆಣಿಗೆಯನ್ನು ಹೊಂದಿದ್ದರೂ, ಹಳ್ಳಿ ಬದುಕಿನ ವಿಕಾರಗಳನ್ನು, ಅಲ್ಲಿನ ಜನರ ಔದಾರ್ಯವನ್ನು, ಕೇಡಿತನವನ್ನು ಹೇಳುವ ಕಾರಣದಿಂದ ಭಿನ್ನವಾಗಿ ನಿಲ್ಲುತ್ತವೆ. ಅವರ ಚಿತ್ರಗಳ ಮಹತ್ವವೆಂದರೆ ಅವರು ಹಳ್ಳಿಯನ್ನು ಕೇವಲ ಹಿನ್ನೆಲೆಯಾಗಿ ಬಳಸಲಿಲ್ಲ; ಹಳ್ಳಿಯೇ ಅವರ ಚಿತ್ರಗಳಲ್ಲಿ ಒಂದು ಜೀವಂತ ಪಾತ್ರವಾಗಿತ್ತು. ‘ಪದಿನಾರು ವಯದಿನಿಲೆ’ ಜೊತೆಗೆ ‘ಕಿಳಕ್ಕೇ ಪೋಗುಂ ರೈಲ್’, ‘ಅಲೈಗಳ್ ಓಯ್ವದಿಲ್ಲೈ’, ‘ಮಣ್ ವಾಸನೈ’, ‘ಪುದುಮೈ ಪೆಣ್’, ‘ಕಡಲೋರ ಕವಿದೆಗಳ್’, ‘ಮುದಲ್ ಮರಿಯಾದೈ’, ‘ವೇದಂ ಪುದಿದು’, ‘ಕರುತ್ತಮ್ಮ’ ಮುಂತಾದವು ತಮಿಳು ಸಿನೆಮಾದ ಅಮೂಲ್ಯ ಸಂಪತ್ತಾಗಿವೆ. ಈ ಚಿತ್ರಗಳಲ್ಲಿ ಅವರು ಪ್ರೀತಿ, ಜಾತಿ, ಬಡತನ, ಮಹಿಳೆಯರ ಸ್ಥಿತಿ, ಸಾಮಾಜಿಕ ಅಸಮಾನತೆ, ಗ್ರಾಮೀಣ ಜೀವನದ ಸೌಂದರ್ಯ ಮತ್ತು ದುರಂತಗಳನ್ನು ಅಸಾಮಾನ್ಯ ಸಂವೇದನೆಯೊಂದಿಗೆ ಚಿತ್ರಿಸಿದ್ದಾರೆ.

ಮೊದಲ ಎರಡು ಚಿತ್ರಗಳಲ್ಲಿ ಗ್ರಾಮೀಣ ಬದುಕಿನ ಕಥೆಗಳನ್ನು ಸಹಜ ರೀತಿಯಲ್ಲಿ ಬಿಂಬಿಸಿ ಯಶಸ್ಸು ಪಡೆದ ಬಾರತಿರಾಜ ಅವರು ತಮ್ಮ ಮುಂದಿನ ‘ಸಿಗಪ್ಪು ರೋಜಾಕ್ಕಳ್’ ಚಿತ್ರದಲ್ಲಿ ಸ್ತ್ರೀದ್ವೇಷಿ ಸೈಕೋಪಾತ್ ಒಬ್ಬನ ವಿಕೃತವನ್ನು ತೆರೆಯ ಮೇಲೆ ತಂದು ಅಚ್ಚರಿ ಮೂಡಿಸಿದರು. ತಾಂತ್ರಿಕ ನಿಪುಣತೆ ಮತ್ತು ನಿರೂಪಣೆಯಲ್ಲಿ ಹಾಲಿವುಡ್ನ ಥ್ರಿಲ್ಲರ್ಗಳನ್ನು ನೆನಪಿಗೆ ತರುವಷ್ಟು ಬಿಗಿಯಾದ ಚಿತ್ರಕತೆ, ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ದೃಶ್ಯಗಳು ಮತ್ತು ಕಲಾವಿದರ ಸಹಜಾಭಿನಯದಿಂದ ಈ ವರ್ಗದ ಅವರ ಚಿತ್ರಗಳು ಭಾರೀ ಯಶಸ್ಸು ಕಂಡವು. ‘ಸಿಗಪ್ಪು ರೋಜಾಕ್ಕಳ್’, ‘ಟಿಕ್ ಟಿಕ್ ಟಿಕ್, ‘ಒರು ಕೈದಿಯಿನ್ ಡೈರಿ’ ಮತ್ತು ‘ಬೊಮ್ಮಲಾಟಂ’ ಚಿತ್ರಗಳು ಭಾರತಿರಾಜ ಅವರ ನಿರ್ದೇಶನ ಕುಶಲತೆಯಲ್ಲಿ ರೋಮಾಂಚಕ ಚಿತ್ರಗಳಾಗಿ ಅರಳಿದವು.
ಭಾರತಿರಾಜ ಅವರ ಅನೇಕ ಚಿತ್ರಗಳು ಸಾಮಾಜಿಕ ಮಿತಿಗಳನ್ನು ಮೀರುವ ಮಾನವ ಸಂಬಂಧಗಳನ್ನು ಅನ್ವೇಷಿಸುವ ಮತ್ತು ಜಾತಿ, ಧರ್ಮದಂಥ ಸಾಂಸ್ಥಿಕ ರೂಢಿಗಳನ್ನು ಪ್ರಶ್ನಿಸುವ ಮತ್ತು ಪ್ರತಿರೋಧ ಒಡ್ಡುವ ಕಾರಣಕ್ಕಾಗಿಯೂ ಸಹ ಮಹತ್ವ ಪಡೆದುಕೊಂಡಿವೆ. ಜಾತಿ ಮತ್ತು ಧರ್ಮದ ಕಟ್ಟುಪಾಡುಗಳ ಕರಾಳತೆಗಳನ್ನು ಅವರು ತೆರೆಯ ಮೇಲೆ ತರುವ ಧೈರ್ಯ ಮಾಡಿ ಗೆದ್ದರು. ಚಿತ್ರಗಳಲ್ಲಿ ಆಮಾನ್ಯವಾಗಿ ಮೇಲ್ಜಾತಿ, ಕೆಳಜಾತಿ ಎಂಬ ಸಾಮಾನ್ಯ ವರ್ಗೀಕರಣದ ಮುಸುಕನ್ನು ಕಿತ್ತು ಬಿಸಾಡಿ ಪಾತ್ರಗಳ ನಿಜವಾದ ಜಾತಿಯನ್ನು, ಕಸುಬನ್ನು ತೋರಿಸಿ ಬೆಚ್ಚಿ ಬೀಳಿಸಿದರು. ಈಗಾಗಿಯೇ ‘ಕಿಳಕ್ಕು ಪೋಗುಂ ರೈಲ್’ನಲ್ಲಿ ಕ್ಷೌರಿಕ ಗಂಡು ಮತ್ತು ತೇವರ್ ಹೆಣ್ಣು, ‘ಅಲೈಗಳ್ ಓಯ್ವದಿಲ್ಲೈ’ ಚಿತ್ರದಲ್ಲಿ ಬ್ರಾಹ್ಮಣ ಹುಡುಗ ಮತ್ತು ಕ್ರೈಸ್ತ ಹುಡುಗಿ, ‘ಮುದಲ್ ಮರಿಯಾದೈ’ ಚಿತ್ರದಲ್ಲಿ ತೇವರ್ ಗಂಡು ಮತ್ತು ಬೆಸ್ತಕುಲದ ಹೆಣ್ಣು ನಡುವೆ ಅರಳುವ ಪ್ರೇಮದ ಕಥೆಗಳನ್ನು ತೆರೆಗೆ ತಂದು ಪ್ರೇಕ್ಷಕರಲ್ಲಿ ಅಚ್ಚರಿ, ಅಭಿಮಾನ ಮೂಡಿಸಿದರು.
‘ವೇದಂ ಪುದಿದು’ ಚಿತ್ರದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಪ್ರಬಲ ಪ್ರಶ್ನೆಗಳನ್ನು ಎತ್ತಿದರು. ಬ್ರಾಹ್ಮಣ ಕುಲದ ಬಾಲಕ ತನ್ನನ್ನು ಸಲಹಿದ ತೇವರ್ ಕುಲದ ಹಿರಿಯನ ಅಂತ್ಯ ಸಂಸ್ಕಾರವನ್ನು ನೆರವೇರಿಸುವ ಕತೆಯು ಆ ಕಾಲದಲ್ಲಿ ಅತ್ಯಂತ ಧೈರ್ಯಶಾಲಿ ಪ್ರಯತ್ನವಾಗಿತ್ತು. ‘ನಿಳಲ್ಗಳ್’ ಚಿತ್ರದಲ್ಲಿ ಅವರು ವಿದ್ಯಾವಂತ ಯುವಜನತೆಯ ನಿರುದ್ಯೋಗ ಸಮಸ್ಯೆ, ಬಡತನ, ತರುಣರ ಕನಸುಗಳು, ನಿರಾಸೆಗಳು, ಕೈಗೂಡದ ಪ್ರೀತಿ ಮತ್ತು ಸಾಮಾಜಿಕ ಉಪೇಕ್ಷೆಯು ಉಂಟು ಮಾಡುವ ದುಷ್ಪರಿಣಾಮಗಳನ್ನು ಪರಿಣಾಮಕಾರಿಯಾಗಿ ದಾಟಿಸಿದ್ದಾರೆ. ‘ಕರುತ್ತಮ್ಮ’ ಚಿತ್ರದಲ್ಲಿ ಹೆಣ್ಣು ಶಿಶು ಹತ್ಯೆಯಂತಹ ಭೀಕರ ಸಾಮಾಜಿಕ ಸಮಸ್ಯೆಯನ್ನು ಅವರು ಅತ್ಯಂತ ಪರಿಣಾಮಕಾರಿಯಾಗಿ ತೆರೆಗೆ ತಂದರು. ಅನೇಕರು ಆ ಚಿತ್ರವನ್ನು ಒಂದು ಸಾಮಾಜಿಕ ಚಳವಳಿಯಂತೆ ಕಂಡರು. ಸರ್ಕಾರವು ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಕಾನೂನು ಜಾರಿಗೊಳಿಸಲು ಈ ಚಿತ್ರ ಪ್ರೇರಣೆಯಾಗಿತ್ತು. ಹಾಗಾಗಿ ಅವರ ಸಿನೆಮಾ ಕೇವಲ ಕಥೆ ಹೇಳುವುದಕ್ಕೆ ಸೀಮಿತವಾಗದೆ ಸಾಮಾಜಿಕ ಚಿಂತನೆಗೆ ಪ್ರೇರಣೆಯೊದಗಿಸುವುದಕ್ಕೂ ವಿಸ್ತರಿಸಿತ್ತು.
ಇದನ್ನು ಓದಿದ್ದೀರಾ?: ತಾಯ್ ಕಿಳವಿ: ಮನರಂಜನೆಗಾಗಿ ಅಲ್ಲ, ಸಾಮಾಜಿಕ ಅರಿವಿಗಾಗಿ ನೋಡಬೇಕಾದ ಚಿತ್ರ
ಭಾರತಿರಾಜರ ಅತ್ಯಂತ ಮಹತ್ವದ ಸಾಧನೆ ಎಂದರೆ ಸಿನೆಮಾದ ಭೌಗೋಳಿಕ ವ್ಯಾಪ್ತಿಯನ್ನು ಪ್ರಜಾಪ್ರಭುತ್ವಗೊಳಿಸಿದ್ದು. ತಮಿಳು ಸಿನೆಮಾದ ಹಳ್ಳಿಗಳನ್ನು ಭಾರತಿರಾಜ ಅವರು ನೈಜ ಹಳ್ಳಿಗಳಲ್ಲಿ ಚಿತ್ರೀಕರಣ ನಡೆಸಿ ಆ ಮೊದಲು ಬಹುತೇಕ ಸ್ಟುಡಿಯೋಗಳಲ್ಲಿ ಕೃತಕ ಜಗತ್ತುಗಳಾಗಿದ್ದ ಹಳ್ಳಿಗಳನ್ನು ಜೀವಂತವಾಗಿ ತೆರೆಯ ಮೇಲೆ ಮೂಡಿಸಿದರು. ಅವರಿಂದ ಹಳ್ಳಿ ಕೇವಲ ದೃಶ್ಯ ಹಿನ್ನೆಲೆ ಆಗಿರದೆ, ಜೀವಂತ ಸಾಮಾಜಿಕ ಪ್ರಪಂಚವಾಯಿತು. ಅವರ ಬಹುತೇಕ ಹಳ್ಳಿಗಳ ಚಿತ್ರೀಕರಣವು ಕರ್ನಾಟಕದ ಹಳ್ಳಿಗಳಲ್ಲೇ ಎಂಬುದು ಬೇರೆಯ ವಿಷಯ!
ಅವರು ತಮಿಳು ಸಿನೆಮಾಕ್ಕೆ ಹಲವಾರು ಹೊಸ ಸಂಪ್ರದಾಯಗಳನ್ನು ಪರಿಚಯಿಸಿದರು. ನೈಜ ಸ್ಥಳಗಳಲ್ಲಿ ಚಿತ್ರೀಕರಣ; ಸಿನೆಮಾಗಳಲ್ಲಿ ಬಳಕೆಯಾಗುತ್ತಿದ್ದ ‘ಶುದ್ಧ ಸಿನೆಮಾ ತಮಿಳು ನುಡಿ’ಯ ಸ್ಥಾನದಲ್ಲಿ ಪ್ರಾದೇಶಿಕ ಉಪಭಾಷೆಗಳ ಬಳಕೆ; ನಿಸರ್ಗದ ವಿವಿಧ ಭಿತ್ತಿಗಳನ್ನು ಕಥೆಯ ಸಕ್ರಿಯ ಅಂಶವನ್ನಾಗಿ ಬಳಕೆ; ವೈಯಕ್ತಿಕ ಕಥೆಗಳೊಳಗೆ ಸಾಮಾಜಿಕ ಸಮಸ್ಯೆಗಳನ್ನು ಹೆಣೆಯುವ ವಿಧಾನಗಳಿಂದ ಭಾರತಿರಾಜರು ಕೇವಲ ಯಶಸ್ವಿ ಚಿತ್ರಗಳನ್ನು ನಿರ್ಮಿಸಲಿಲ್ಲ; ಅವರು ತಮಿಳು ಸಿನೆಮಾದ ವ್ಯಾಕರಣವನ್ನೇ ಬದಲಿಸಿದರು.
ಭಾರತಿರಾಜರ ಕಲಾತ್ಮಕ ಶಕ್ತಿಗಳಲ್ಲಿ ಪ್ರಮುಖವಾದುದು ಪ್ರಕೃತಿ ಮತ್ತು ಭೂದೃಶ್ಯದ ಬಳಕೆ. ಹೊಲಗಳು, ನದಿಗಳು, ಕಾಡುಗಳು, ಹಳ್ಳಿಯ ದಾರಿಗಳು, ಮಳೆ ಮತ್ತು ಗಾಳಿ ಅವರ ಚಿತ್ರಗಳಲ್ಲಿ ಕೇವಲ ಹಿನ್ನೆಲೆಗಳಲ್ಲ. ಅವು ಪಾತ್ರಗಳಂತೆ ಕಾರ್ಯನಿರ್ವಹಿಸುತ್ತವೆ. ಮಾನವ ಭಾವನೆಗಳು ಮತ್ತು ಪ್ರಕೃತಿ ಪರಸ್ಪರ ಬೆರೆತು ಹೋಗುತ್ತವೆ. ಸಿನೆಮಾದ ಆಶಯಗಳಿಗೆ ಪೂರಕವಾಗಿ ಅವರು ಸಂಗೀತ ಮತ್ತು ಹಾಡುಗಳ ಬಳಕೆಯಲ್ಲೂ ವಿಶಿಷ್ಟತೆಯನ್ನು ತೋರಿದರು. ಹಾಗಾಗಿ ಅವರ ಕ್ಯಾಮೆರಾ ಮಣ್ಣನ್ನೇ ಹಾಡುತ್ತಿರುವಂತೆ ಭಾಸವಾಗುತ್ತದೆ.

ಆದರೆ, ಎಲ್ಲ ಮಹಾನ್ ಕಲಾವಿದರಂತೆ ಭಾರತಿರಾಜ ಅವರ ಸಿನೆಮಾವೂ ವಿರೋಧಾಭಾಸಗಳಿಂದ ಕೂಡಿದೆ ಎಂದು ಹಲವು ವಿಮರ್ಶಕರು ತಕರಾರು ಎತ್ತಿದ್ದಾರೆ. ಅವರ ವಿರುದ್ಧದ ಅತ್ಯಂತ ಸಾಮಾನ್ಯ ಟೀಕೆ ಎಂದರೆ ಅವರು ಹಳ್ಳಿಯನ್ನು ಕೆಲವೊಮ್ಮೆ ಆದರ್ಶೀಕೃತ (ಐಡಿಯಲ್) ರೂಪದಲ್ಲಿ ಚಿತ್ರಿಸುತ್ತಾರೆ ಎಂಬುದು. ಅವರ ಚಿತ್ರಗಳಲ್ಲಿ ಬಡತನ, ಹಿಂಸೆ ಮತ್ತು ಜಾತಿ ಶೋಷಣೆ ಕಂಡುಬಂದರೂ, ಅದೇ ವೇಳೆ ಹಳ್ಳಿಯನ್ನು ಪರಿಶುದ್ಧ ಪರಿಸರದ, ಮಾನವೀಯ ಮತ್ತು ಸಾಂಸ್ಕೃತಿಕ ನೈಜತೆಯ ತಾಣವಾಗಿ ಚಿತ್ರಿಸುವ ಪ್ರವೃತ್ತಿಯೂ ಇರುತ್ತದೆ. ಹೀಗಾಗಿ ಅವರ ಹಳ್ಳಿ ಕೆಲವೊಮ್ಮೆ ಸಾಮಾಜಿಕ ವಾಸ್ತವಿಕತೆಗಿಂತಲೂ ಸಾಂಸ್ಕೃತಿಕ ಕನಸಿನಂತಾಗುತ್ತದೆ.
ವಾಸ್ತವಿಕತೆ, ಸಾಮಾಜಿಕ ಜಾಗೃತಿ ಮತ್ತು ಭಾವನಾತ್ಮಕ ಪರಿಣಾಮಕ್ಕಾಗಿ ಪ್ರಶಂಸಿಸಲ್ಪಟ್ಟ ಅವರ ಚಿತ್ರಗಳೇ, ಕೆಲವೊಮ್ಮೆ ಗ್ರಾಮೀಣ ಬದುಕಿನ ರೊಮ್ಯಾಂಟೀಕರಣ, ಜಾತಿ ವ್ಯವಸ್ಥೆಯ ಪುನರುತ್ಪಾದನೆ ಮತ್ತು ಮಹಿಳೆಯರ ಪಿತೃಪ್ರಭುತ್ವದ ಚಿತ್ರಣಕ್ಕಾಗಿ ಟೀಕೆಗೆ ಒಳಗಾಗಿವೆ.
ಇದನ್ನು ಓದಿದ್ದೀರಾ?: ಸ್ಥಿರಚಿತ್ರಕ್ಕೆ ಚಲನೆಯ ಜೀವ: ಚಿತ್ರಕಲೆ ಮತ್ತು ಸಿನಿಮಾದ ಬೆಸುಗೆ
ಭಾರತಿರಾಜರು ಜಾತಿ ಪ್ರಶ್ನೆಯನ್ನು ಮುಖ್ಯವಾಹಿನಿ ಸಿನೆಮಾದಲ್ಲಿ ಚರ್ಚೆಗೆ ತಂದದ್ದು ಮಹತ್ವದ ಸಾಧನೆ. ಆದರೆ ಅವರ ಅನೇಕ ಚಿತ್ರಗಳಲ್ಲಿ ಜಾತಿ ವಿರೋಧಿ ಸಂದೇಶಗಳಿದ್ದರೂ, ಕಥೆಗಳು ಹೆಚ್ಚಾಗಿ ಪ್ರಬಲ ಜಾತಿಗಳ ಪಾತ್ರಗಳ ದೃಷ್ಟಿಕೋನದಿಂದ ನಿರೂಪಿಸಿದ್ದು ಅಲಕ್ಷಿತ ಮತ್ತು ದಲಿತ ಸಮುದಾಯಗಳ ಅನುಭವಗಳು ಕಥೆಯ ಕೇಂದ್ರವಾಗುವುದಿಲ್ಲ. ಇತ್ತೀಚಿನ ಪಾ.ರಂಜಿತ್, ಮಾರಿ ಸೆಲ್ವರಾಜ್ ಮುಂತಾದ ನಿರ್ದೇಶಕರ ಚಿತ್ರಗಳೊಂದಿಗೆ ಹೋಲಿಸಿದರೆ, ಭಾರತಿರಾಜರದು ಸುಧಾರಣಾವಾದಿಯ ದೃಷ್ಟಿಕೋನವೇ ಹೊರತು ಕ್ರಾಂತಿಕಾರಿಯಲ್ಲ ಎಂಬ ಅಭಿಪ್ರಾಯವಿದೆ. ಆದರೆ ಇಂಥ ಟೀಕೆಗಳು, ಸಾಮಾಜಿಕ ಅನಿಷ್ಟಗಳನ್ನು ಗಟ್ಟಿ ದನಿಯಲ್ಲಿ ತೆರೆಗೆ ತಂದ ಭಾರತಿರಾಜ ಅವರ ಮಹತ್ವವನ್ನೇನೂ ಕುಗ್ಗಿಸದು.
ಮಹಿಳೆಯರ ಕುರಿತ ಭಾರತಿರಾಜರ ದೃಷ್ಟಿಕೋನವೂ ಸಂಕೀರ್ಣವಾಗಿದೆ. ಒಂದು ಕಡೆ ಅವರ ಚಿತ್ರಗಳಲ್ಲಿ ಕೇಂದ್ರದಲ್ಲಿರುವ ಮಹಿಳೆಯರು ತಮ್ಮ ಗಟ್ಟಿ ನಿಲುವಿನಿಂದ ಸ್ಮರಣೀಯವೆನಿಸಿದ್ದಾರೆ. 16 ವಯದಿನಿಲೆಯ ಮಯಿಲ್, ಪುದಮೈ ಪೆಣ್ ಚಿತ್ರದ ಸೀತಾ, ಮುದಲ್ ಮರಿಯಾದೈ ಚಿತ್ರದ ಕುಯಿಲ್ ಮುಂತಾದವು ಅಂಥ ಗಟ್ಟಿ ನಿಲುವಿನ ಪಾತ್ರಗಳು.
ಆದರೆ ಮತ್ತೊಂದು ಕಡೆ, ಅವರ ಚಿತ್ರಗಳಲ್ಲಿ ಹೆಚ್ಚಾಗಿ ತ್ಯಾಗದ ಮೂರ್ತಿಗಳಾಗಿ, ನೋವಿನ ಸಂಕೇತಗಳಾಗಿ, ಪಾವಿತ್ರ್ಯದ ಪ್ರತೀಕಗಳಾಗಿ, ಪ್ರೇಮದ ವಸ್ತುಗಳಾಗಿ ಚಿತ್ರಿತಗೊಳ್ಳುತ್ತಾರೆ. ಹೀಗಾಗಿ ಅವರ ಸಿನೆಮಾ ಒಂದೇ ಸಮಯದಲ್ಲಿ ಪ್ರಗತಿಪರವೂ ಮತ್ತು ಸಂಪ್ರದಾಯಪರವೂ ಆಗಿ ಕಾಣಿಸುತ್ತದೆ.
ಭಾರತಿರಾಜ ಅವರ ಚಿತ್ರಗಳು ಹೆಚ್ಚು ಮೆಲೋಡ್ರಮಾಟಿಕ್ ಅಂದರೆ ಭಾವಾತಿರೇಕದ ಕೃತಿಗಳೆನಿಸುತ್ತವೆ. ಹಾಗಾಗಿ ಅಲ್ಲಿನ ಭೌತಿಕ ವಾಸ್ತವಿಕತೆಯು ಸಾವಯವವಾದ ವಾಸ್ತವಿಕತೆಯಲ್ಲ. ಅವರ ಚಿತ್ರಗಳಲ್ಲಿ ತೀವ್ರ ಭಾವನಾತ್ಮಕ ಮುಖಾಮುಖಿಗಳು, ದುಃಖಭರಿತ ತಿರುವುಗಳು, ಸಂಕೇತಾತ್ಮಕ ದೃಶ್ಯಗಳು, ಭಾವನಾತ್ಮಕ ಉತ್ಕರ್ಷಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಕೆಲವರಿಗೆ ಇದು ಅವರ ಶಕ್ತಿ. ಇನ್ನು ಕೆಲವರಿಗೆ ಇದು ವಾಸ್ತವಿಕತೆಯನ್ನು ದುರ್ಬಲಗೊಳಿಸುವ ಅಂಶ. ಅವರ ಸಿನೆಮಾವನ್ನು “ಕಾವ್ಯಾತ್ಮಕ ಮೆಲೋಡ್ರಾಮಿಕ್ ವಾಸ್ತವಿಕತೆ” ಎಂದು ಕರೆಯಬಹುದು.
ಈ ವಿರೋಧಾಭಾಸಗಳೇ ಭಾರತಿರಾಜರನ್ನು ಕೇವಲ ಯಶಸ್ವಿ ನಿರ್ದೇಶಕರಲ್ಲ, ಭಾರತೀಯ ಸಿನೆಮಾದ ಪ್ರಮುಖ “ಆಟರ್”(Auteur) ನಿರ್ದೇಶಕರನ್ನಾಗಿ ರೂಪಿಸಿವೆ.
1970ರ ದಶಕದ ಕೊನೆಯಿಂದ 1990ರ ದಶಕದ ಮಧ್ಯಭಾಗದವರೆಗೆ ಭಾರತಿರಾಜರ ಸೃಜನಶೀಲತೆ, ಉತ್ತುಂಗದಲ್ಲಿತ್ತು. ನಂತರದ ಚಿತ್ರಗಳಲ್ಲಿ ಪ್ರತಿಭೆಯ ಕಿರಣಗಳು ಕಂಡರೂ, ಮೊದಲಿನ ಚಿತ್ರಗಳ ಹೊಸತನ ಮತ್ತು ಕ್ರಾಂತಿಕಾರಿತನ ಕಡಿಮೆಯಾಯಿತು ಎಂದು ಅನೇಕ ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಅದು ನಿಜವೂ ಹೌದು.
ಭಾರತಿರಾಜ ಅವರ ಚಿತ್ರಗಳ ಬಗ್ಗೆ ಮಾತನಾಡುವಾಗ ಇಳಯರಾಜ ಅವರನ್ನು ಮರೆಯಲು ಸಾಧ್ಯವಿಲ್ಲ. ಇಬ್ಬರ ಸಂಯೋಜನೆಯು ಭಾರತೀಯ ಸಿನಿಮಾದ ಅತ್ಯಂತ ಸ್ಮರಣೀಯ ಅಧ್ಯಾಯಗಳಲ್ಲಿ ಒಂದಾಗಿದೆ. ಇಳಯರಾಜ ಅವರ ಸಂಗೀತ ಮತ್ತು ಭಾರತಿರಾಜ ಅವರ ದೃಶ್ಯಗಳು ಒಂದಕ್ಕೊಂದು ಪೂರಕವಾಗಿದ್ದವು. ಹಸಿರು ಹೊಲಗಳ ನಡುವೆ ಕೇಳಿಬರುವ ಸಂಗೀತ, ಮಳೆ, ಗಾಳಿ, ಪ್ರೇಮ ಮತ್ತು ವಿರಹ- ಇವೆಲ್ಲ ಸೇರಿ ಒಂದು ದೃಶ್ಯಕಾವ್ಯವನ್ನು ರಚಿಸುತ್ತಿದ್ದವು. ಇಳಯರಾಜ ಮತ್ತು ಭಾರತಿರಾಜ ಅವರ ಜೋಡಿ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಜೋಡಿಗಳಲ್ಲಿ ಒಂದು. ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿ ಬಂದ ಹಾಡುಗಳು ಇಂದಿಗೂ ಜನರ ಮನಸ್ಸಿನಲ್ಲಿ ಹಸಿರಾಗಿವೆ. ಗ್ರಾಮೀಣ ಜಾನಪದ ಧಾಟಿಯನ್ನು ಸಿನೆಮಾಗಳಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಭಾರತಿರಾಜ ಅವರ ಸಿನೆಮಾಗಳನ್ನು ನೋಡಿದಾಗ ಕೇವಲ ಕಥೆಗಳಂತೆ ಕಾಣದೆ ಅವು ಹಾಡುವ ಕವಿತೆಗಳಂತೆ ಭಾಸವಾಗುವುದಕ್ಕೆ ಇಳಯರಾಜ ಅವರ ಸಂಗೀತ ಬಹುಮಟ್ಟಿಗೆ ಕಾರಣ. ಇಳಯರಾಜ ಅವರ ಸಂಗೀತವನ್ನು ಕ್ಯಾಮೆರಾಮೆನ್ ನಿವಾಸ್ ಮತ್ತು ಕಣ್ಣನ್ ಅವರ ಸಹಯೋಗದಲ್ಲಿ ಭಾರತಿರಾಜ ಅವರು ಅಕ್ಷರಶಃ ದೃಶ್ಯಕಾವ್ಯಗಳನ್ನು ತೆರೆಯ ಮೇಲೆ ಮೂಡಿಸಿದರು. ಪ್ರೇಕ್ಷಕರ ಅನುಭವ ಸೀಮೆಯನ್ನು, ರಂಜನೆಯ ಲೋಕವನ್ನು ವಿಸ್ತರಿಸಿದರು. ವೈರಮುತ್ತುವಿನಂತಹ ಕವಿ ಅವರ ಶೋಧ ಎಂಬುದು ನೆನಪಿಡಬೇಕಾದ ಅಂಶ.
ಇದನ್ನು ಓದಿದ್ದೀರಾ?: ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!
ಭಾರತಿರಾಜ ಅವರು ಕೆ. ಬಾಲಚಂದರ್ ಅವರಂತೆಯೇ ತಮಿಳು ಚಿತ್ರರಂಗದ ಪ್ರತಿಭೆಗಳ ಕಾರ್ಖಾನೆ. ಅವರ ಚಿತ್ರಗಳ ಮೂಲಕ ಅನೇಕ ನಟ-ನಟಿಯರು ಮತ್ತು ತಂತ್ರಜ್ಞರು ಹೊಸ ಅವಕಾಶಗಳನ್ನು ಪಡೆದರು. ಹಲವಾರು ಕಲಾವಿದರು ತಮ್ಮ ವೃತ್ತಿಜೀವನದ ಮಹತ್ವದ ತಿರುವನ್ನು ಭಾರತಿರಾಜ ಅವರ ಚಿತ್ರಗಳಿಂದಲೇ ಕಂಡರು. ಅವರು ಪ್ರತಿಭೆಯನ್ನು ಹುಡುಕಿದ್ದು ನಗರಗಳಲ್ಲಲ್ಲ; ಸಾಮಾನ್ಯ ಜನರ ಮಧ್ಯೆ. ಅವರ ದೃಷ್ಟಿಯಲ್ಲಿ ಕಲೆಗೆ ಜಾತಿ, ವರ್ಗ ಅಥವಾ ನಗರ-ಹಳ್ಳಿ ಎಂಬ ಭೇದಗಳಿರಲಿಲ್ಲ. ಅವರು ಚಿತ್ರರಂಗಕ್ಕೆ ನೀಡಿದ ನಟ-ನಟಿಯರ ಪಟ್ಟಿ ಅತಿ ದೊಡ್ಡದು. ಕಮಲ್, ರಜನಿ, ಶ್ರೀದೇವಿ ಅವರ ಅಭಿನಯಕ್ಕೆ ಸಾಣೆ ಹಿಡಿದ ಅವರ ಶಾಲೆಯಿಂದ ಸುಧಾಕರ್, ಜನಕರಾಜ್, ಭಾಗ್ಯರಾಜ್, ಗೌಂಡಮಣಿ, ಪಾರ್ಥಿಬನ್, ದಗ್ಗುಬಾಟಿ ರಾಜಾ, ನೆಪೋಲಿಯನ್, ಬಾಬು ತೆಣ್ಣವನ್, ಮನೋಜ್, ವಿಜಯನ್, ಪಾಂಡ್ಯನ್, ನಿಳಲ್ಗಳ್ ರವಿ, ಮಣಿವಣ್ಣನ್, ಮನೋಬಾಲಾ, ಕಾರ್ತಿಕ್, ಕಣ್ಣನ್ (ಸುನೀಲ್ ಕೃಪಲಾನಿ) ಹಾಗೂ ‘ರ’ಕಾರ ಸರಣಿಯ ನಟಿಯರಾದ ರಾಧಿಕಾ, ರತಿ ಅಗ್ನಿಹೋತ್ರಿ, ರೇವತಿ, ರಾಧಾ, ರಂಜಿನಿ, ರಮಾ, ರೇಖಾ, ರಂಜಿತಾ, ರಾಜಶ್ರೀ ನಾಯರ್, ಅವರ ಜೊತೆಗೆ ಸುಕನ್ಯಾ, ಮಹೇಶ್ವರಿ, ಪ್ರಿಯಾಮಣಿ ಮುಂತಾದವರಿದ್ದಾರೆ.
ಭಾರತಿರಾಜ ಅವರು ಚಿತ್ರರಂಗಕ್ಕೆ ಪರಿಚಯಿಸಿದ ಭಾಗ್ಯರಾಜ್, ಮಣಿವಣ್ಣನ್, ಪೊನ್ವಣ್ಣನ್, ಪಾರ್ಥಿಬನ್, ಆರ್.ವಿ. ಉದಯಕುಮಾರ್, ಸೆಲ್ವರಾಜ್, ಪಾಂಡ್ಯರಾಜನ್, ಮನೋಬಾಲಾ ಮುಂತಾದವರು ನಿರ್ದೇಶಕರಾಗಿ ತಮ್ಮದೇ ಪ್ರತ್ಯೇಕ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ.
ತಮ್ಮ ದೀರ್ಘ ವೃತ್ತಿಜೀವನದಲ್ಲಿ ಭಾರತಿರಾಜ ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದರು. ಅವರಿಗೆ ಭಾರತದ ಉನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಕೂಡ ಲಭಿಸಿತು. ಆದರೆ ಅವರ ಅತ್ಯಂತ ದೊಡ್ಡ ಪ್ರಶಸ್ತಿ ಎಂದರೆ ಜನರ ಪ್ರೀತಿ ಮತ್ತು ಅವರ ಚಿತ್ರಗಳ ಶಾಶ್ವತ ಜನಪ್ರಿಯತೆ.

ಭಾರತಿರಾಜ ಅವರ ಜೀವನವನ್ನು ನೋಡಿದಾಗ ಅವರು ಕೇವಲ ನಿರ್ದೇಶಕರಾಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅವರು ಮಣ್ಣಿನ ತತ್ವಜ್ಞಾನಿ, ಗ್ರಾಮೀಣ ಬದುಕಿನ ಕವಿ, ಸಾಮಾಜಿಕ ಚಿಂತಕ ಮತ್ತು ಮಾನವೀಯತೆಯ ಕಥೆಗಾರರಾಗಿದ್ದರು.
ಅವರ ಚಿತ್ರಗಳಲ್ಲಿನ ಹೊಲಗಳು ಇನ್ನೂ ಹಸಿರಾಗಿವೆ. ಅವರ ಪಾತ್ರಗಳು ಇನ್ನೂ ಮಾತನಾಡುತ್ತಿವೆ. ಅವರ ಪ್ರೇಮಿಗಳು ಇನ್ನೂ ಕನಸು ಕಾಣುತ್ತಿದ್ದಾರೆ. ಅವರ ಮಹಿಳಾ ಪಾತ್ರಗಳು ಇನ್ನೂ ಬದುಕಿನ ಹೋರಾಟವನ್ನು ಮುಂದುವರಿಸುತ್ತಿವೆ. ಅವರ ಕ್ಯಾಮೆರಾ ಕಂಡ ಹಳ್ಳಿಗಳು ಇನ್ನೂ ನಮ್ಮ ಸ್ಮೃತಿಗಳಲ್ಲಿ ಉಸಿರಾಡುತ್ತಿವೆ.
ಭಾರತಿರಾಜ ಪರಂಪರೆ ಎಂದರೆ ಕೇವಲ ಕೆಲವು ಯಶಸ್ವಿ ಚಿತ್ರಗಳ ನೆನಪು ಅಲ್ಲ; ಅದು ಭಾರತೀಯ ಸಿನೆಮಾದಲ್ಲಿ ‘ಮಣ್ಣಿ’ಗೆ ಒಂದು ಹೊಸ ದೃಶ್ಯ ಭಾಷೆಯನ್ನು ನೀಡಿದ ಸಾಂಸ್ಕೃತಿಕ ಕ್ರಾಂತಿಯ ನೆನಪು.

ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.




