ಈ ದಿನ ಸಂಪಾದಕೀಯ | ಮೋದಿ @ 12- ಮೆರೆದದ್ದೇ ಸಾಧನೆ, ಸುಳ್ಳಾಡಿದ್ದೇ ದಾಖಲೆ

Date:

ಮೋದಿ, ಚುನಾವಣೆಗಳನ್ನು ಗೆಲ್ಲುತ್ತಿರಬಹುದು, ಅಧಿಕಾರದಲ್ಲಿ ಮುಂದುವರೆಯುತ್ತಿರಬಹುದು. ಆದರೆ, ಈ ದೇಶ ಕಂಡ ಮಹಾನ್‌ ನಾಯಕನಲ್ಲ, ರಾಜಕಾರಣಿಯಲ್ಲ, ಮುತ್ಸದ್ದಿಯಲ್ಲ- ಕೇವಲ ವ್ಯಾಪಾರಿ. ಇಂತಹ ವ್ಯಾಪಾರಿ 12 ವರ್ಷಗಳಲ್ಲ, 24 ವರ್ಷ ಅಧಿಕಾರದಲ್ಲಿದ್ದರೂ ನೆಹರೂ ಆಗುವುದು ಸಾಧ್ಯವಿಲ್ಲ. ಮೋದಿಯವರನ್ನು ದೇವರೆಂದು ಭ್ರಮಿಸುವವರಿಗೆ ಭಜನೆ ಬಿಟ್ಟರೆ ಬೇರೇನೂ ಸಿಗುವುದಿಲ್ಲ.

ಭಾರತದ ರಾಜಕೀಯ ಇತಿಹಾಸದಲ್ಲಿ ನಿರಂತರವಾಗಿ 12 ವರ್ಷಗಳ ಕಾಲ ಪ್ರಧಾನಿಯಾಗಿ ಅಧಿಕಾರದಲ್ಲಿರುವುದು ಅಪರೂಪದ ಸಾಧನೆ. 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರು ಜೂನ್ 10, 2026ಕ್ಕೆ ತಮ್ಮ ಆಡಳಿತದ ಹನ್ನೆರಡನೇ ವರ್ಷವನ್ನು ಪೂರ್ಣಗೊಳಿಸಿದ್ದಾರೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ 4,398 ದಿನಗಳ ಕಾಲ ಆಡಳಿತದಲ್ಲಿದ್ದರು. ಮೋದಿ ಆಡಳಿತಕ್ಕೆ ಬಂದು 4,399 ದಿನಗಳನ್ನು ಪೂರೈಸಿದ್ದಾರೆ. ಆ ಮೂಲಕ ನೆಹರೂರವರ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ, ಭಾರತೀಯ ಜನತಾ ಪಕ್ಷ ಮತ್ತು ಸಂಘಪರಿವಾರ ಸಂಭ್ರಮಿಸುತ್ತಿದೆ.

- Advertisement -

ಭಾರತೀಯ ಜನತಾ ಪಕ್ಷ ಮತ್ತು ಸಂಘಪರಿವಾರಕ್ಕೆ ಇದು ಸಂಭ್ರಮಿಸುವ ಸಮಾಚಾರವಾಗಿರಬಹುದು. ಆದರೆ, ದೇಶದ ಜನ ಸಂಭ್ರಮಿಸುವ ಸಂದರ್ಭ ಸೃಷ್ಟಿಯಾಗಿಲ್ಲ. ಏಕೆಂದರೆ, ಮೋದಿಯವರ 12 ವರ್ಷಗಳ ಆಡಳಿತದಿಂದ ದೇಶದಲ್ಲಾದ ಬದಲಾವಣೆಗಳೇನು ಎನ್ನುವುದರತ್ತ ಗಮನ ಹರಿಸಿದರೆ, ದುಗುಡ-ಖಿನ್ನತೆ ಆವರಿಸುತ್ತದೆ. ಆದರೂ ದೇಶದ ಮಾಧ್ಯಮಗಳು ಮೋದಿಯವರನ್ನು ನೆಹರೂ ಅವರ ದಾಖಲೆ ಮುರಿದರು, ನೆಹರೂ ಮಾಡದಿದ್ದುದನ್ನು ಮೋದಿ ಮಾಡಿದರು ಎಂದು ಕೊಂಡಾಡುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ಸ್ವತಂತ್ರ ಭಾರತದ ಮೊದಲ ಪ್ರಧಾನಿ ನೆಹರೂ ಕಾಲಘಟ್ಟದ ಭಾರತವೇ ಬೇರೆ, ಮೋದಿಯವರ ಕಾಲದ ಭಾರತವೇ ಬೇರೆ ಎನ್ನುವುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಆಮೇಲೆ, ಅಧಿಕಾರವೆಂಬ ಅಪೂರ್ವ ಅವಕಾಶವನ್ನು ದೇಶಕ್ಕಾಗಿ, ಜನಕ್ಕಾಗಿ ನೆಹರೂ ಬಳಸಿದ ಬಗೆಯನ್ನು ಬಗೆದು ನೋಡಬೇಕು. ಆಗ ನಿಜನಾಯಕ ಯಾರು ಎನ್ನುವುದು ತಿಳಿಯುತ್ತದೆ.

ಕುತೂಹಲಕರ ಸಂಗತಿ ಎಂದರೆ, ಪ್ರಭುತ್ವವನ್ನು ಪ್ರಶ್ನಿಸಬೇಕಾದ ದೇಶದ ಮಾಧ್ಯಮಗಳು ಮೋದಿಯ ಹಣ ಮತ್ತು ಅಧಿಕಾರಕ್ಕೆ ತಲೆಬಾಗಿವೆ. ಮಾರಿಕೊಂಡಿವೆ. ಮೋದಿ ಭಜನೆಯಲ್ಲಿ ನಿರತವಾಗಿವೆ. ಬೇರೆಯದೇ ಆದ ಚಿತ್ರಣವನ್ನು ದೇಶದ ಮುಂದಿಡುತ್ತಿವೆ. ವಿಚಿತ್ರವೆಂದರೆ, ದೇಶದ ಜನತೆ ಮೋದಿಯನ್ನು ಮೆಚ್ಚುವುದು, ಪರ ವಹಿಸಿ ಮಾತನಾಡುವುದು, ಲೀಟರ್‌ ಪೆಟ್ರೋಲ್‌ಗೆ 500 ರೂಪಾಯಿ ಆದರೂ ಕೊಡುತ್ತೇವೆ ಎನ್ನುವುದನ್ನೂ ಕಾಣುತ್ತಿದ್ದೇವೆ.

ಇದನ್ನು ಓದಿದ್ದೀರಾ?: ಮುಖ್ಯಮಂತ್ರಿಗೆ ಚೆಲ್ಲಾಟ – ರೈತರಿಗೆ ಪ್ರಾಣ ಸಂಕಟ

ಈ ಪರಿಯ ಭಕ್ತಿಗೆ ಕಾರಣವೂ ಇದೆ. ಭಾರತ ದೇವರುಗಳ ದೇಶ, ನಂಬಿಕೆಗಳ ನೆಲ. ದೇಶದ ಜನತೆ ಮೋದಿಯವರನ್ನು ದೇವರನ್ನಾಗಿ ನೋಡುತ್ತದೆ, ಬಲವಾಗಿ ನಂಬಿದೆ. ನಂಬಿಸುವಂತಹ ನಟನೆಯಲ್ಲಿ ಮೋದಿ ನೈಪುಣ್ಯತೆ ಪಡೆದಿದ್ದಾರೆ. ಮೊದಲಿಗೆ, ಅವರು ಒಬ್ಬಂಟಿಯಾಗಿರುವುದು, ಹೆಂಡತಿ-ಮನೆ-ಮಕ್ಕಳು ಇಲ್ಲದಿರುವುದು ಜನರ ನಂಬಿಕೆಗೆ ಬಲ ತುಂಬಿದೆ. ಅವರು ಎಲ್ಲ ರಾಜಕಾರಣಿಗಳಂತಲ್ಲ, ಭ್ರಷ್ಟರಲ್ಲ, ವಂಶ ಪಾರಂಪರ್ಯ ರಾಜಕಾರಣ ಮಾಡುವುದಿಲ್ಲ ಎನ್ನುವುದು ಅವರಿಗಿರುವ ಬಹಳ ದೊಡ್ಡ ಪ್ಲಸ್‌ ಪಾಯಿಂಟ್ ಆಗಿದೆ. ಮೋದಿ ಏನೇ ಮಾಡಿದರೂ, ದೇಶದ ಒಳಿತಿಗಾಗಿ ಎನ್ನುವವರಿದ್ದಾರೆ. ಮೋದಿ ಇಲ್ಲದಿದ್ದರೆ, ಇವತ್ತು ದೇಶ ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ ಎಂದು ವಾದ ಮಾಡುವವರಿದ್ದಾರೆ. ಅಷ್ಟೇ ಅಲ್ಲ, ಮೋದಿ ತಪ್ಪು ಮಾಡಿದರೂ ಮನ್ನಿಸುವವರಿದ್ದಾರೆ. ತಪ್ಪನ್ನು ತಮ್ಮದು ಎಂದು ಭಾವಿಸಿ, ಸಮರ್ಥಿಸಿ ಮಾತನಾಡುವವರಿದ್ದಾರೆ.

ಇದೇ ಮೋದಿಯವರ ಬಹಳ ದೊಡ್ಡ ಆಸ್ತಿ. ಇದರ ಬಲದಿಂದ ತುಘಲಕ್‌ನನ್ನೂ ಮರೆಸುವ, ಮೀರಿಸುವ ದರ್ಬಾರು ನಡೆಸುತ್ತಿದ್ದಾರೆ. ಪ್ರಧಾನಿ ಕುರ್ಚಿ ಉಳಿಸಿಕೊಳ್ಳಲಿಕ್ಕಾಗಿ, ದೇಶವನ್ನೇ ಅಂಬಾನಿ-ಅದಾನಿಗಳಿಗೆ ಮಾರುತ್ತಿದ್ದಾರೆ. ಅವರಿಗೆ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ.

ವಿಪರ್ಯಾಸಕರ ಸಂಗತಿ ಎಂದರೆ, 2014ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದಾಗ- ಅಚ್ಚೇ ದಿನ್, ಭ್ರಷ್ಟಾಚಾರ ಮುಕ್ತ ಭಾರತ, ವರ್ಷಕ್ಕೆ ಎರಡು ಕೋಟಿ ಉದ್ಯೋಗ, ರೈತರ ಆದಾಯ ದ್ವಿಗುಣ, ಕಪ್ಪುಹಣ ವಾಪಸ್, ಕನಿಷ್ಠ ಸರ್ಕಾರ-ಗರಿಷ್ಠ ಆಡಳಿತ, ಅಭಿವೃದ್ಧಿಯ ಹೊಸ ಯುಗದ ಕನಸು ಬಿತ್ತಿ, ಜನರ ನಿರೀಕ್ಷೆಗಳನ್ನು ಆಕಾಶಕ್ಕೇರಿಸಿದ್ದರು. ಇಂದು, 12 ವರ್ಷಗಳ ಆಡಳಿತದ ನಂತರ, ಆ ಭರವಸೆಗಳು ಸುಳ್ಳುಗಳ ಲೆಕ್ಕಕ್ಕೆ ಜಮೆಯಾಗಿವೆ.

ಆ ಸುಳ್ಳನ್ನು ಮರೆಮಾಚಲು ಮೋದಿಯವರ ಬೆಂಬಲಿಗರು ಹೆದ್ದಾರಿಗಳು, ಡಿಜಿಟಲ್ ಪಾವತಿಗಳು, ಮೂಲಸೌಕರ್ಯ ಅಭಿವೃದ್ಧಿ, ವಿದೇಶಾಂಗ ಕ್ಷೇತ್ರದಲ್ಲಿನ ಭಾರತದ ಪ್ರಭಾವ, ಕೋವಿಡ್ ಲಸಿಕಾ ಕಾರ್ಯಕ್ರಮದಂತಹ ಸಾಧನೆಗಳನ್ನು ಉಲ್ಲೇಖಿಸುತ್ತಾರೆ. ಆದರೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಸರ್ಕಾರದ ಮೌಲ್ಯಮಾಪನ ಕೇವಲ ಪ್ರಚಾರದ ಆಧಾರದ ಮೇಲೆ ಆಗುವುದಿಲ್ಲ. ಅದು ಜನರ ಬದುಕಿನ ವಾಸ್ತವ ಸ್ಥಿತಿಗತಿಗಳ ಆಧಾರದ ಮೇಲೆ ಆಗಬೇಕು.

ಇದನ್ನು ಓದಿದ್ದೀರಾ?: ಗೋವು ರಾಷ್ಟ್ರೀಯ ಪ್ರಾಣಿಯಲ್ಲ, ತಾಯಿಯಲ್ಲ; ಬಿಜೆಪಿಯ ಮತಬ್ಯಾಂಕ್

ಉದ್ಯೋಗ ಸೃಷ್ಟಿಯೇ ಮೋದಿ ಸರ್ಕಾರದ ಅತಿದೊಡ್ಡ ಭರವಸೆ. ಆದರೆ 12 ವರ್ಷಗಳ ನಂತರವೂ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿಲ್ಲ. ಲಕ್ಷಾಂತರ ಯುವಕರು ಸರ್ಕಾರಿ ಉದ್ಯೋಗ ಪರೀಕ್ಷೆಗಳಿಗಾಗಿ ವರ್ಷಗಟ್ಟಲೆ ಕಾಯುತ್ತಿದ್ದಾರೆ. ಪದವೀಧರರು ಸಣ್ಣಪುಟ್ಟ ಉದ್ಯೋಗಗಳಿಗೆ ಮೈಲುಗಟ್ಟಲೆ ಕ್ಯೂ ನಿಂತು ಅರ್ಜಿ ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಸಮಸ್ಯೆ ಇವತ್ತಿಗೂ ಪರಿಹಾರ ಕಾಣದಾಗಿದೆ.

2016ರ ನೋಟು ಅಮಾನ್ಯೀಕರಣವನ್ನು ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧದ ಐತಿಹಾಸಿಕ ಕ್ರಮ ಎಂದರು. ಸಣ್ಣ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಆರ್ಥಿಕತೆ ದೊಡ್ಡ ಹೊಡೆತಕ್ಕೆ ಸಿಲುಕಿತು. ಆದರೆ ಬಿಜೆಪಿ ಭ್ರಷ್ಟರನ್ನು ರೆಡ್ ಕಾರ್ಪೆಟ್ ಹಾಸಿ ಬರಮಾಡಿಕೊಂಡಿತು. ಕಪ್ಪುಹಣ ಚಲಾವಣೆಯನ್ನೂ ತಡೆಯಲಾಗಲಿಲ್ಲ, ಭ್ರಷ್ಟಾಚಾರವನ್ನೂ ನಿಯಂತ್ರಿಸಲಾಗಲಿಲ್ಲ. ಇದಕ್ಕಿಂತ ಆಡಳಿತ ವೈಫಲ್ಯ ಇನ್ನೊಂದಿಲ್ಲ.

ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಗಳತ್ತರು. ಆದರೆ ಕೃಷಿ ವೆಚ್ಚಗಳ ಏರಿಕೆ ತಡೆಯಲಾಗಲಿಲ್ಲ. ಇದರ ನಡುವೆಯೇ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಹವಣಿಸಿದರು. ರೈತರು ಪ್ರತಿಭಟನೆಗಿಳಿದಾಗ ಅವರನ್ನು ಭಯೋತ್ಪಾದಕರೆಂದು ದೂರಿದರು. ಏಳುನೂರಕ್ಕೂ ಹೆಚ್ಚು ರೈತರು ಸಾವಿಗೀಡಾದಾಗ, ತಿರುಗಿಯೂ ನೋಡದಾದರು. ಕೊನೆಗೆ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕಾಯಿತು. ಇದು ಹಳ್ಳ ಹಿಡಿದ ಆಡಳಿತದ ಸಂಕೇತದಂತೆ ಕಾಣತೊಡಗಿತು.

ಬೆಲೆ ಏರಿಕೆಯಂತೂ ಸಾಮಾನ್ಯ ಜನರ ಬದುಕನ್ನು ನರಕವನ್ನಾಗಿಸಿದೆ. ಅಡುಗೆ ಅನಿಲ, ಆಹಾರ ಪದಾರ್ಥಗಳು, ಶಿಕ್ಷಣ, ಆರೋಗ್ಯ ಮತ್ತು ಮನೆ ನಿರ್ವಹಣೆಯ ವೆಚ್ಚಗಳು ನಿರಂತರವಾಗಿ ಏರುತ್ತಿವೆ. ದುರದೃಷ್ಟಕರ ಸಂಗತಿ ಎಂದರೆ, ಜನರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕಿಂತ ಸರ್ಕಾರದ ಸಮಜಾಯಿಷಿಯೇ ಪ್ರಚಾರ ಪಡೆಯುತ್ತಿದೆ.

ಮೋದಿ ಆಡಳಿತದ ಮತ್ತೊಂದು ಅಧ್ವಾನವೆಂದರೆ, ಮೋದಿ ಕೇಂದ್ರಿತ ದರ್ಬಾರು. ಸರ್ಕಾರದ ಪ್ರತಿಯೊಂದು ಯೋಜನೆಯೂ ಪ್ರಧಾನಿಯ ಹೆಸರಿನೊಂದಿಗೆ ಗುರುತಿಸಿಕೊಳ್ಳುವ, ಪ್ರಚಾರ ಪಡೆಯುವ, ಮಿಕ್ಕ ಮಂತ್ರಿಗಳನ್ನು ಇದ್ದೂ ಇಲ್ಲವಾಗಿಸುವ ಪ್ರಯತ್ನ- ಸರ್ವಾಧಿಕಾರಿಯನ್ನು ನೆನಪಿಸುತ್ತಿದೆ. ಚುನಾವಣೆಗಳನ್ನು ನಿರಂತರವಾಗಿ ಗೆಲ್ಲುತ್ತಿರುವುದು ಅಹಂಕಾರಕ್ಕೆ ಹಾದಿ ಮಾಡಿಕೊಟ್ಟಿದೆ. ಇದು ವ್ಯಕ್ತಿಪೂಜೆಗೆ ಹೆಚ್ಚಿನ ಆದ್ಯತೆ ನೀಡಿ ಪ್ರಜಾಪ್ರಭುತ್ವದ ಆಶಯವನ್ನು ಮಣ್ಣುಗೂಡಿಸಿದೆ.

ಇದನ್ನು ಓದಿದ್ದೀರಾ?: ಏರುತ್ತಿರುವ ಬೆಲೆ ಮತ್ತು ಬದುಕಲು ಕಲಿಸುತ್ತಿರುವ ಮೋದಿ

ಇನ್ನು ಸರ್ಕಾರಿ ಸ್ವಾಯತ್ತ ತನಿಖಾ ಸಂಸ್ಥೆಗಳ ದುರ್ಬಳಕೆ- ವಿರೋಧಿಗಳನ್ನು ಬಗ್ಗುಬಡಿಯಲು ಅಸ್ತ್ರದಂತೆ ಬಳಸಿದ್ದು, ಚುನಾವಣಾ ಬಾಂಡ್ ಮೂಲಕ ಅತಿ ಹೆಚ್ಚು ಹಣ ಸಂಗ್ರಹಿಸಿದ್ದು, ಭ್ರಷ್ಟರನ್ನು ಸೆಳೆದು ವಾಷಿಂಗ್‌ ಮಷೀನ್‌ ಪಕ್ಷ ಎನಿಸಿಕೊಂಡಿದ್ದು, ಭಿನ್ನ ದನಿಗಳನ್ನು ಯುಎಪಿಎ ಕಾಯ್ದೆಗಳ ಮೂಲಕ ಬಗ್ಗುಬಡಿದದ್ದು, ಸರ್ಕಾರವನ್ನು ಟೀಕಿಸುವವರನ್ನು ದೇಶದ್ರೋಹಿಗಳೆಂದು ಬ್ರ್ಯಾಂಡ್‌ ಮಾಡಿದ್ದು, ಪವಿತ್ರವಾದ ನ್ಯಾಯಾಂಗ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದ್ದು- ಮೋದಿಯ ಮಹಾನ್‌ ಸಾಧನೆ ಎಂದೇ ಹೇಳಬೇಕಿದೆ.

ಹೀಗಾಗಿ ಮೋದಿ, ಚುನಾವಣೆಗಳನ್ನು ಗೆಲ್ಲುತ್ತಿರಬಹುದು, ಅಧಿಕಾರದಲ್ಲಿ ಮುಂದುವರೆಯುತ್ತಿರಬಹುದು. ಆದರೆ, ಈ ದೇಶ ಕಂಡ ಮಹಾನ್‌ ನಾಯಕನಲ್ಲ, ರಾಜಕಾರಣಿಯಲ್ಲ, ಮುತ್ಸದ್ದಿಯಲ್ಲ- ಕೇವಲ ವ್ಯಾಪಾರಿ. ಇಂತಹ ವ್ಯಾಪಾರಿ 12 ವರ್ಷಗಳಲ್ಲ, 24 ವರ್ಷ ಅಧಿಕಾರದಲ್ಲಿದ್ದರೂ ನೆಹರೂ ಆಗುವುದು ಸಾಧ್ಯವಿಲ್ಲ. ಮೋದಿಯವರನ್ನು ದೇವರೆಂದು ಭ್ರಮಿಸುವವರಿಗೆ ಭಜನೆ ಬಿಟ್ಟರೆ ಬೇರೇನೂ ಸಿಗುವುದಿಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಷ್ಟ್ರಧ್ವಜ ವಿರುದ್ಧದ RSS ‘ಕುತಂತ್ರ’ ಸೋಲುತ್ತಲೇ ಇರುತ್ತದೆ!

ತ್ರಿವರ್ಣ ರಾಷ್ಟ್ರಧ್ವಜವನ್ನು ತಿರಸ್ಕರಿಸಿ, ಕೇಸರಿ ಧ್ವಜವೇ ಭಾರತದ ನಿಜವಾದ ರಾಷ್ಟ್ರಧ್ವಜವಾಗಬೇಕೆಂದು ಪ್ರತಿಪಾದಿಸುವ...

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

ಈ ದಿನ ಸಂಪಾದಕೀಯ | ಕಹಿ ನುಂಗುತ್ತಿರುವ ಕೃಷಿಕರು, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ದುಷ್ಟರು

ರೈತರು ಆಕ್ರೋಶಗೊಳ್ಳಲು, ಬೀದಿಗೆ ಇಳಿದು ಪ್ರತಿಭಟಿಸಲು ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ...

ಈ ದಿನ ಸಂಪಾದಕೀಯ | ಏರಿದ ಬೆಲೆ; ಇಳಿದ ಜೀವನಮಟ್ಟ; ಇದೇನಾ ಮೋದಿಯವರ ಆರ್ಥಿಕ ಅಭಿವೃದ್ಧಿ?

ಬ್ಲೂಮ್‌ಬರ್ಗ್ ವೇದಿಕೆ ಮೇಲೆ ನಿಂತು ಪ್ರಧಾನಿ ಮೋದಿಯವರು, ಜಿಡಿಪಿ ಶೇ.7.8ರಷ್ಟು ಜಿಗಿದಿದೆ,...