ಸುಮಾರು ಒಂದು ಕೋಟಿಯಷ್ಟು ಜನರನ್ನು ಹಕ್ಕು ವಂಚಿತರನ್ನಾಗಿ ಮಾಡಿ, ತರಾತುರಿಯಲ್ಲಿ ನಡೆಸುವ ಯಾವುದೇ ಚುನಾವಣೆಯನ್ನು ‘ನ್ಯಾಯಯುತ’ ಹಾಗೂ ‘ಪಾರದರ್ಶಕ’ ಎಂದು ಒಪ್ಪಿಕೊಳ್ಳಲು ಯಾವ ಕಾರಣಕ್ಕೂ ಸಾಧ್ಯವಿಲ್ಲ. ಜನರನ್ನು ಹೊರಗಿಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಲಾಗದು.
ದೇಶದ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಚುನಾವಣಾ ಪ್ರಕ್ರಿಯೆಯು ಇದೀಗ ತೀವ್ರ ಸ್ವರೂಪದ ವಿವಾದಕ್ಕೆ ಸಿಲುಕಿದೆ. ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಕೇಂದ್ರ ಚುನಾವಣಾ ಆಯೋಗವು ಬರೋಬ್ಬರಿ 91 ರಿಂದ 92 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ದಿಢೀರನೆ ಕೈಬಿಟ್ಟಿದೆ. ಏಕಾಏಕಿ ಇಷ್ಟು ಬೃಹತ್ ಪ್ರಮಾಣದ ಜನರ ಹಕ್ಕು ಕಿತ್ತುಕೊಂಡು ನಡೆಸುವ ಯಾವುದೇ ಚುನಾವಣೆಯನ್ನು ‘ನ್ಯಾಯಯುತ’ ಎಂದು ಕರೆಯಲು ಹೇಗೆ ಸಾಧ್ಯ. ಇದೊಂದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಗಿಂತಲೂ ಪ್ರಜಾಪ್ರಭುತ್ವದ ಆಶಯಗಳಿಗೆ ಮಾಡಿರುವ ಘಾಸಿ ಎಂಬ ತೀವ್ರ ಆತಂಕ ಎಲ್ಲಡೆ ವ್ಯಕ್ತವಾಗಿದೆ.
ಅಧಿಕೃತ ಅಂಕಿಅಂಶಗಳ ಕಡೆ ಗಮನ ಹರಿಸಿದರೆ ಈ ಆಘಾತಕಾರಿ ಬೆಳವಣಿಗೆಯ ಸ್ಪಷ್ಟ ಚಿತ್ರಣ ದೊರೆಯುತ್ತದೆ. ‘ವಿಶೇಷ ತೀವ್ರ ಪರಿಷ್ಕರಣೆ’ (Special intensive Revision – SIR) ಎಂಬ ಹೆಸರಿನಲ್ಲಿ ನಡೆದ ಈ ವಿವಾದಾತ್ಮಕ ಪ್ರಕ್ರಿಯೆಯ ಮೂಲಕ ರಾಜ್ಯದ ಒಟ್ಟು ಮತದಾರರ ಪ್ರಮಾಣದಲ್ಲಿ ಬರೋಬ್ಬರಿ ಶೇಕಡ 12ರಷ್ಟು ಕುಸಿತವಾಗಿದೆ. ಅಕ್ಟೋಬರ್ 2025ರ ವೇಳೆಗೆ 7.66 ಕೋಟಿಯಷ್ಟಿದ್ದ ಒಟ್ಟು ಮತದಾರರ ಸಂಖ್ಯೆ, ಇದೀಗ ಕೇವಲ 6.75 ಕೋಟಿಗೆ ಇಳಿಕೆಯಾಗಿದೆ. 2021ರ ಚುನಾವಣೆಯಲ್ಲಿ ಈ ಸಂಖ್ಯೆ 7.34 ಕೋಟಿ ಇತ್ತು. ಕೇಲವೇ ತಿಂಗಳುಗಳಲ್ಲಿ ಸುಮಾರು ಒಂದು ಕೋಟಿಯಷ್ಟು ಜನರನ್ನು ಪಟ್ಟಿಯಿಂದ ಅಳಿಸಿಹಾಕಿರುವುದು ಸ್ವತಂತ್ರ ಭಾರತದ ಚುನಾವಣಾ ಇತಿಹಾಸದಲ್ಲೇ ಅತ್ಯಂತ ಅಚ್ಚರಿಯ ಹಾಗೂ ಅನುಮಾನಾಸ್ಪದ ಬೆಳವಣಿಗೆಯಾಗಿದೆ.
ಈ ಕಡಿತದ ಹಿಂದಿನ ಅಸಲಿ ಸ್ವರೂಪವು ಮತ್ತಷ್ಟು ಕಳವಳಕಾರಿಯಾಗಿದೆ. ಈ ಮತದಾರರ ಪಟ್ಟಿ ಪರಿಷ್ಕರಣೆಯು ನಿರ್ದಿಷ್ಟ ಸಮುದಾಯಗಳನ್ನು ಹಾಗೂ ಗಡಿಭಾಗದ ಜಿಲ್ಲೆಗಳ ಜನರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡು ನಡೆದಿದೆ ಎಂಬ ಗಂಭೀರ ಆರೋಪಗಳಿವೆ. ಉದಾಹರಣೆಗೆ, ಅತಿಹೆಚ್ಚು ಅಲ್ಪಸಂಖ್ಯಾತರಿರುವ ಮುರ್ಷಿದಾಬಾದ್, ಉತ್ತರ 24 ಪರಗಣ ಹಾಗೂ ಮಾಲ್ಡಾ ಜಿಲ್ಲೆಗಳಲ್ಲಿ ಅತಿ ಹೆಚ್ಚು ಹೆಸರುಗಳನ್ನು ಕೈಬಿಡಲಾಗಿದೆ. ಇದು ಕೇವಲ ತಾಂತ್ರಿಕ ದೋಷವಾಗಿರದೆ, ಒಂದು ನಿರ್ಷಿಷ್ಟ ವರ್ಗದ ಮತಗಳನ್ನು ಕಸಿದುಕೊಳ್ಳುವ, ಕೇಂದ್ರ ಸರ್ಕಾರದ ಪ್ರಭಾವದಡಿಯ ರಾಜಕೀಯ ಪ್ರೇರಿತ ಹುನ್ನಾರವಾಗಿದೆ ಎಂಬ ಕಟು ಟೀಕೆಗಳು ದೇಶಾದ್ಯಂತ ಕೇಳಿಬರುತ್ತಿವೆ.
ಕೇವಲ ಹೆಸರುಗಳನ್ನು ತೆಗೆದುಹಾಕುವುದಷ್ಟೇ ಅಲ್ಲದೆ, ಈ ಪ್ರಕ್ರಿಯೆಯಲ್ಲಿನ ಗೊಂದಲಗಳು ಜನಸಾಮಾನ್ಯರನ್ನು ಹೈರಾಣಾಗಿಸಿವೆ. ಕರಡು ಪಟ್ಟಿಯಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ಮತದಾರರ ಮಾಹಿತಿಗಳಲ್ಲಿ ‘ತಾರ್ಕಿಕ ವ್ಯತ್ಯಾಸಗಳಿವೆ’ ಎಂದು ಗುರುತಿಸಿ, ಅವರನ್ನು ಅತಂತ್ರ ಸ್ಥಿತಿಗೆ ನೂಕಲಾಗಿತ್ತು. ನ್ಯಾಯಾಂಗ ಪರಿಶೀಲನೆ ಹಂತದಲ್ಲಿ 27 ಲಕ್ಷಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ತಮ್ಮ ಪೌರತ್ವ ಹಾಗೂ ಮತದಾನದ ಹಕ್ಕನ್ನು ಸಾಬೀತುಪಡಿಸಲು ದಿನಗೂಲಿ ನಂಬಿ ಬದುಕುವ ಜನಸಾಮಾನ್ಯರ ಮೇಲೆ ವಿಪರೀತ ಹೊರೆ ಹೇರಲಾಗಿದೆ.
ಈ ಗೊಂದಲಮಯ ಮತ್ತು ದೋಷಪೂರಿತ ಪ್ರಕ್ರಿಯೆಯು ಚುನಾವಣಾ ಆಯೋಗದ ನಿರ್ಲಕ್ಷ್ಯ ಮತ್ತು ಜನರ ಮೇಲಿನ ಅಸಡ್ಡೆಯನ್ನು ಎತ್ತಿತೋರಿಸುತ್ತದೆ. ನ್ಯಾಯಯುತ ಚುನಾವಣೆ ಎಂದರೆ ಕೇವಲ ಯಂತ್ರಗಳ ಬಳಕೆಯಲ್ಲ, ಬದಲಾಗಿ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕನ್ನು ಖಚಿತಪಡಿಸುವುದು. ಪಾರದರ್ಶಕತೆಯ ಕೊರತೆ ಮತ್ತು ಏಕಪಕ್ಷೀಯವಾಗಿ ತೆಗೆದುಕೊಂಡ ಈ ನಿರ್ಧಾರಗಳು ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಪಾತಾಳಕ್ಕೆ ತಳ್ಳಿವೆ. ಇವೆಲ್ಲ ನಡೆಗಳು ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ಕಳವಳ ವ್ಯಕ್ತಪಡಿಸುತ್ತವೆ.
ಈ ಬೃಹತ್ ಮತದಾರರ ಕಡಿತವು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗಿ ಉಳಿದಿಲ್ಲ, ಬದಲಾಗಿ ಇದು ಕೇಂದ್ರ ಸರ್ಕಾರ ಮತ್ತು ಆಡಳಿತರೂಢ ಪಕ್ಷದ ರಾಜಕೀಯ ಲಾಭದ ಲೆಕ್ಕಾಚಾರವಾಗಿದೆ. ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ ಮತ್ತು ಚುನಾವಣೆಯ ಫಲಿತಾಂಶವನ್ನು ಮೊದಲೇ ತಮ್ಮ ಪರವಾಗಿ ನಿರ್ಧರಿಸುವ ನಿಟ್ಟಿನಲ್ಲಿ ಇಂತಹ ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂಬ ಆಕ್ರೋಶ ದೇಶಾದ್ಯಂತ ಭುಗಿಲೆದ್ದಿದೆ. ಇದು ನೇರವಾಗಿ ಸಾಂವಿಧಾನಿಕ ಪ್ರಕ್ರಿಯೆಯ ಮೇಲಿನ ಹಲ್ಲೆಯಾಗಿದೆ.
ಇದನ್ನು ಓದಿದ್ದೀರಾ? ಸಾಮ್ರಾಜ್ಯಶಾಹಿಯ ಅಟ್ಟಹಾಸಕ್ಕೆ ಪ್ರತಿರೋಧದ ಕಿಚ್ಚು: ಅಮೆರಿಕ-ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಲೆಬನಾನ್
ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಸುಪ್ರೀಂ ಕೋರ್ಟ್ ಕೂಡ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಾಗಿ ಬಂತು. ಚುನಾವಣಾ ಪ್ರಕ್ರಿಯೆಗೆ ತಡೆಯೊಡ್ಡಲು ನಿರಾಕರಿಸಿದರೂ, ಪರಿಷ್ಕರಣಾ ಪ್ರಕ್ರಿಯೆಯಲ್ಲಿನ ದೂರುಗಳನ್ನು, ದಾಖಲೆಗಳ ಸುಡುವಿಕೆಯಂತಹ ಗಂಭೀರ ಆರೋಪಗಳನ್ನು ನ್ಯಾಯಾಲಯವು ಗಣನೆಗೆ ತೆಗೆದುಕೊಂಡಿದೆ. ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಿದ್ದ ಚುನಾವಣಾ ಆಯೋಗವು ತನ್ನ ಜವಾಬ್ದಾರಿಯನ್ನು ಮರೆತು, ಅಂತಿಮವಾಗಿ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಭಾರತದ ಚುನಾವಣಾ ವ್ಯವಸ್ಥೆಯ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿದೆ.
ಯಾವುದೇ ರಾಜ್ಯದ ಚುನಾವಣೆಯು ಅಲ್ಲಿನ ಅಭಿವೃದ್ಧಿ, ಉದ್ಯೋಗ, ಮೂಲಸೌಕರ್ಯ ಹಾಗೂ ಆಡಳಿತದ ಆಧಾರದ ಮೇಲೆ ನಡೆಯಬೇಕು. ಆದರೆ, ಚುನಾವಣಾ ಆಯೋಗದ ಈ ವಿವಾದಾತ್ಮಕ ನಡೆಯಿಂದಾಗಿ ಇದೀಗ ಪಶ್ಚಿಮ ಬಂಗಾಳದ ಚುನಾವಣೆಯು ಕೇವಲ ಮತದಾರರ ಗುರುತು ಮತ್ತು ಅಸ್ತಿತ್ವದ ಹೋರಾಟವಾಗಿ ಮಾರ್ಪಟ್ಟಿದೆ. 92 ಲಕ್ಷ ಜನರನ್ನು ವ್ಯವಸ್ಥೆಯಿಂದ ಹೊರಗಿಟ್ಟು, ಅವರ ಧಾರ್ಮಿಕ ಮತ್ತು ಭಾಷಿಕ ಅಸ್ಮಿತೆಯನ್ನು ಪ್ರಶ್ನಿಸುವ ಮೂಲಕ, ಪ್ರಜಾಪ್ರಭುತ್ವದ ಮೂಲ ಉದ್ದೇಶವನ್ನೇ ಬುಡಮೇಲು ಮಾಡಲಾಗಿದೆ. ಆರ್ಥಿಕ ಮತ್ತು ನಾಗರಿಕ ಸಮಸ್ಯೆಗಳನ್ನು ಬದಿಗೊತ್ತಿ, ಅಸ್ಮಿತೆಯ ಆಧಾರದ ಮೇಲೆ ಚುನಾವಣೆ ನಡೆಯುವಂತೆ ಮಾಡಿರುವುದು ಅಪಾಯಕಾರಿ ಮುನ್ಸೂಚನೆಯಾಗಿದೆ.
ಚುನಾವಣಾ ಆಯೋಗವು ಸಂವಿಧಾನದತ್ತವಾದ ಸ್ವಾಯತ್ತತೆಯನ್ನು ಹೊಂದಿರುವ ಉನ್ನತ ಸಂಸ್ಥೆ. ಆದರೆ, ಇತ್ತೀಚಿನ ದಿನಗಳಲ್ಲಿ ಅದರ ಕಾರ್ಯವೈಖರಿಯು ಆಡಳಿತರೂಢ ಕೇಂದ್ರ ಸರ್ಕಾರದ ಪರವಾಗಿ ವಾಲಿಕೊಂಡಿರುವುದು ಮತ್ತು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪಾರದರ್ಶಕತೆಯನ್ನು ಕಾಪಾಡುವ ಬದಲು, ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುವ ಇಂತಹ ಕೃತ್ಯಗಳು ಸಾಂವಿಧಾನಿಕ ಮೌಲ್ಯಗಳಿಗೆ ಬಗೆಯುವ ದ್ರೋಹವಾಗಿದೆ. ಆಯೋಗವು ತನ್ನ ಮೇಲಿನ ವಿಶ್ವಾಸವನ್ನು ಮರಳಿ ಗಳಿಸಲು ವಿಫಲವಾದರೆ, ಭವಿಷ್ಯದಲ್ಲಿ ಚುನಾವಣೆಗಳೆಂಬುದು ಕೇವಲ ಪ್ರಹಸನವಾಗಿ ಉಳಿಯಲಿವೆ.
ಸುಮಾರು ಒಂದು ಕೋಟಿಯಷ್ಟು ಜನರನ್ನು ಹಕ್ಕು ವಂಚಿತರನ್ನಾಗಿ ಮಾಡಿ, ತರಾತುರಿಯಲ್ಲಿ ನಡೆಸುವ ಯಾವುದೇ ಚುನಾವಣೆಯನ್ನು ‘ನ್ಯಾಯಯುತ’ ಹಾಗೂ ‘ಪಾರದರ್ಶಕ’ ಎಂದು ಒಪ್ಪಿಕೊಳ್ಳಲು ಯಾವ ಕಾರಣಕ್ಕೂ ಸಾಧ್ಯವಿಲ್ಲ. ಜನರನ್ನು ಹೊರಗಿಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಲಾಗದು. ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರಗಳು ಈ ಕೂಡಲೇ ಈ ಪ್ರಮಾದಕ್ಕೆ ದೇಶದ ಜನತೆಯ ಮುಂದೆ ಉತ್ತರದಾಯಿಗಳಾಗಬೇಕು. ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸದಿದ್ದರೆ, ಮುಂಬರುವ ಈ ಚುನಾವಣೆಯ ಫಲಿತಾಂಶವು ಕೇವಲ ಒಂದು ಪಕ್ಷದ ತಾಂತ್ರಿಕ ಜಯವಾಗಬಹುದೇ ಹೊರತು, ನೈಜ ಪ್ರಜಾಪ್ರಭುತ್ವದ ಗೆಲುವಾಗಲು ಖಂಡಿತಾ ಸಾಧ್ಯವಿಲ್ಲ.




