ಅಮೆರಿಕ ಮತ್ತು ಇರಾನ್ ನಡುವಿನ ಸುಮಾರು 107 ದಿನಗಳ ಸುದೀರ್ಘ ಯುದ್ಧವನ್ನು ಕೊನೆಗೊಳಿಸುವ ಐತಿಹಾಸಿಕ ಒಪ್ಪಂದವು ಜೂನ್ 15ರಂದು ಅಧಿಕೃತವಾಗಿ ಪ್ರಕಟವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನ ಪ್ರಧಾನಿ ಶಾಬಾಜ಼್ ಷರೀಫ್ ಯುದ್ಧ ಅಂತ್ಯದ ಘೋಷಣೆಯನ್ನು ಮಾಡಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಟ್ಟು, ಯುದ್ಧದ ಭೀತಿ ತಿಳಿಯಾಗಿದ್ದರೂ ಸಹ ಜಾಗತಿಕ ಹಣದುಬ್ಬರ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆ ಸದ್ಯಕ್ಕೆ ತಗ್ಗುವುದಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞರು ಮತ್ತು ಜಾಗತಿಕ ಸಂಸ್ಥೆಗಳು.
ಯುದ್ಧದ ಸಮಯದಲ್ಲಿ ಇರಾನ್ ಜಗತ್ತಿನ ಅತ್ಯಂತ ಪ್ರಮುಖ ತೈಲ ಮಾರ್ಗವಾದ ಹೋರ್ಮುಜ಼್ ಜಲಸಂಧಿ ಅನ್ನು ಬಂದ್ ಮಾಡಿತ್ತು. ಈಗ ಯುದ್ದ ನಿಂತ ಕಾರಣ ಈ ಜಲಸಂಧಿಯನ್ನು ತೆರೆಯಬೇಕಾಗಿದೆ. ಆದರೆ ಆ ಸಮುದ್ರ ಮಾರ್ಗದಲ್ಲಿ ಇಡಲಾಗಿರುವ ಸ್ಫೋಟಕಗಳನ್ನು ತೆರವುಗೊಳಿಸಲು ತಿಂಗಳು ಬೇಕಾಗುತ್ತದೆ. ಅಲ್ಲಿಯವರೆಗೆ ತೈಲ ಮತ್ತು ಅನಿಲ ಸರಬರಾಜು ಮೊದಲಿನ ವೇಗವನ್ನು ಪಡೆದುಕೊಳ್ಳುವುದಿಲ್ಲ.
ಇದನ್ನು ಓದಿದ್ದೀರಾ? ಇರಾನ್-ಇಸ್ರೇಲ್ ಕದನಕ್ಕೆ 100 ದಿನ: ಜಗತ್ತಿನೆದುರು ಅಮೆರಿಕದ ಕಪಟ ನಾಟಕ
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಜಾಗತಿಕವಾಗಿ ರಸಗೊಬ್ಬರ ಉತ್ಪಾದನೆ ಮತ್ತು ರಫ್ತು ಸಂಪೂರ್ಣ ಹದಗೆಟ್ಟಿದೆ. ಕೃಷಿ ವೆಚ್ಚ ಈಗಾಗಲೇ ಹೆಚ್ಚಿರುವುದರಿಂದ, ಯುದ್ಧ ನಿಂತರೂ ಮುಂದಿನ ಕೆಲವು ತಿಂಗಳುಗಳ ಕಾಲ ಆಹಾರ ಧಾನ್ಯಗಳ ಬೆಲೆ ಏರುಗತಿಯಲ್ಲಿಯೇ ಇರಲಿದೆ. ಅಷ್ಟು ಮಾತ್ರವಲ್ಲದೆ ಯುದ್ಧದ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಗೆ ಬರಬೇಕಿದ್ದ ಕೋಟ್ಯಂತರ ಬ್ಯಾರೆಲ್ ಕಚ್ಚಾ ತೈಲದ ಉತ್ಪಾದನೆ ಶಾಶ್ವತವಾಗಿ ನಷ್ಟ ಕಂಡಿದೆ. ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸ್ (IEA) ಪ್ರಕಾರ, ಈ ನಷ್ಟವನ್ನು ಸರಿದೂಗಿಸಲು ಹಲವು ತಿಂಗಳುಗಳೇ ಬೇಕಾಗುತ್ತವೆ. ಈ ಸಂಸ್ಥೆಯು ಇರಾನ್ ಯುದ್ಧವನ್ನು “ಜಾಗತಿಕ ಇಂಧನ ಭದ್ರತೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸವಾಲು” ಎಂದು ಕರೆದಿದೆ.
ಇನ್ನು ಯುದ್ಧದ ಹಿನ್ನೆಲೆಯಲ್ಲಿ ಅಮೆರಿಕದ ಹಣದುಬ್ಬರವು ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ಮಟ್ಟವಾದ ಶೇ. 4.2ಕ್ಕೆ ತಲುಪಿತ್ತು. ಯುದ್ಧ ನಿಂತ ತಕ್ಷಣ ಬ್ಯಾಂಕುಗಳು ಬಡ್ಡಿದರವನ್ನು ಕಡಿಮೆ ಮಾಡಲು ಸಾಧ್ಯವಿಲ್ಲದ ಕಾರಣ, ಮಾರುಕಟ್ಟೆಯಲ್ಲಿ ಹಣದ ಚಲಾವಣೆ ದುಬಾರಿಯಾಗಿಯೇ ಇರಲಿದೆ.
ಆರ್ಥಿಕ ಸಂಶೋಧನಾ ಸಂಸ್ಥೆ ಪೀಟರ್‌ಸನ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್‌ನ್ಯಾಷನಲ್ ಎಕನಾಮಿಕ್ಸ್ (PIIE) ಪ್ರಕಾರ ಮಧ್ಯಪ್ರಾಚ್ಯದ ಇಂಧನ ಮತ್ತು ರಸಗೊಬ್ಬರಗಳ ಮೇಲಿನ ಅವಲಂಬನೆಯಿಂದಾಗಿ ಉಂಟಾಗಿರುವ ಬೆಲೆ ಏರಿಕೆಯು ದೀರ್ಘಕಾಲದವರೆಗೆ ಜಾಗತಿಕ ಜಿಡಿಪಿ ಕುಸಿತಕ್ಕೆ ಮತ್ತು ಹಣದುಬ್ಬರಕ್ಕೆ ಕಾರಣವಾಗಲಿದೆ.
ಇದನ್ನು ಓದಿದ್ದೀರಾ? ಇರಾನ್-ಅಮೆರಿಕ ‘ಕದನ ವಿರಾಮ’ ಒಪ್ಪಂದವಲ್ಲ, ಟ್ರಂಪ್ ಶರಣಾಗತಿ: ಅಮೆರಿಕ ಸಂಸದರ ಟೀಕೆ
ಗ್ಲೋಬಲ್ ಪೀಸ್ ಇಂಡೆಕ್ಸ್ (GPI – 2026 ವರದಿ) ಸಂಸ್ಥೆಯು ತನ್ನ ‘ಹೋರ್ಮುಜ಼್ ಪ್ಯಾರಡಾಕ್ಸ್’ ವಿಶ್ಲೇಷಣೆಯಲ್ಲಿ, ಯುದ್ಧದ ಭೀತಿ ದೂರವಾದರೂ ಮಾರುಕಟ್ಟೆಯಲ್ಲಿನ ಸರಬರಾಜು ಕೊರತೆಯಿಂದಾಗಿ ಉಂಟಾದ ಆರ್ಥಿಕ ಹಾನಿ ಕನಿಷ್ಠ 2ರಿಂದ 3 ವರ್ಷಗಳ ಕಾಲ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಎಚ್ಚರಿಸಿದೆ.
ರಾಯಿಟರ್ಸ್ ಮತ್ತು ದಿ ಗಾರ್ಡಿಯನ್ ಇತ್ತೀಚೆಗೆ ಶಾಂತಿ ಒಪ್ಪಂದದ ಬಳಿಕ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $83 ರ ಆಸುಪಾಸಿಗೆ ಇಳಿದಿದ್ದರೂ, ಯುದ್ಧಕ್ಕೆ ಮುಂಚೆ ಇದ್ದ $72 ರ ಮಟ್ಟಕ್ಕೆ ತಲುಪಿಲ್ಲ. ಈ ವ್ಯತ್ಯಾಸವೇ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಮುಂದುವರಿಯಲು ಕಾರಣ ಎಂದು ಜಾಗತಿಕ ಹೂಡಿಕೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.




