ಕೊಡಗು ಜಿಲ್ಲೆ, ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದ ಬಳಿ ಎಸ್ಐಆರ್ (Special Intensive Revision) ವಿರೋಧಿ ಒಕ್ಕೂಟದ ಮುಖಂಡರು ಎಸ್ಐಆರ್ ವಿರೋಧಿ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಜಾಗೃತಿ ಮೂಡಿಸಿದರು.
ಈ ವೇಳೆ ನಡೆದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಯುನೈಟೆಡ್ ಕಿಸಾನ್ ಸಭಾ ರಾಜ್ಯಾಧ್ಯಕ್ಷರು ಹಾಗೂ ಸಿಪಿಐ(ಎಂಎಲ್) ಮಾಸ್ ಲೈನ್ ಕೇಂದ್ರ ಸಮಿತಿ ಸದಸ್ಯರಾದ ಡಿ.ಎಸ್. ನಿರ್ವಾಣಪ್ಪ, ಎಸ್ಐಆರ್ ಪ್ರಕ್ರಿಯೆಯಿಂದ ಸಮಾಜದ ದುರ್ಬಲ ವರ್ಗಗಳ ಮತದಾನ ಹಕ್ಕಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೊಡಗು ಸೇರಿದಂತೆ ರಾಜ್ಯದ ಹಲವೆಡೆ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂದರ್ಭದಲ್ಲಿ ಇವರ ಹೆಸರುಗಳು ಕೈಬಿಡಲ್ಪಡುವ ಭೀತಿ ಎದುರಾಗಿದೆ ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆ ಜಾರಿಯಾದ ಸಂದರ್ಭದಲ್ಲಿ ಉಂಟಾದ ಗೊಂದಲಗಳು ಹಾಗೂ ಮತದಾರರ ಹೆಸರು ಕೈಬಿಟ್ಟಿರುವ ಆರೋಪಗಳು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿವೆ. ಇದೇ ಮಾದರಿಯ ಪ್ರಕ್ರಿಯೆ ಕರ್ನಾಟಕದಲ್ಲೂ ಆರಂಭವಾದರೆ ತಳಮಟ್ಟದ ಹಾಗೂ ಬಡ ವರ್ಗದ ಜನರೇ ಹೆಚ್ಚು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅಭಿಪ್ರಾಯಪಟ್ಟರು.
ಮೂಲನಿವಾಸಿಗಳು ಹಾಗೂ ಅರ್ಹ ಮತದಾರರ ಮತದಾನ ಹಕ್ಕನ್ನು ಯಾವುದೇ ಕಾರಣಕ್ಕೂ ಕಸಿದುಕೊಳ್ಳಬಾರದು. ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕವಾಗಿ ಹಾಗೂ ಕಾನೂನುಬದ್ಧವಾಗಿ ನಡೆಯಬೇಕು. ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆಯಾಗದಂತೆ ಸರ್ಕಾರ ಮತ್ತು ಚುನಾವಣಾ ಆಯೋಗ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಮತದಾನ ಎಂಬುದು ದೇಶದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ನೀಡಿರುವ ಮೂಲಭೂತ ಹಕ್ಕಾಗಿದ್ದು, ಎಸ್ಐಆರ್ (Special Intensive Revision) ಪ್ರಕ್ರಿಯೆಯ ಮೂಲಕ ಆ ಹಕ್ಕನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ನಗರಸಭೆ ಸದಸ್ಯ ಅಮೀನ್ ಮೋಹಿಸಿನ್ ಆರೋಪಿಸಿದರು.

ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವ ನುಸುಳುಕೋರರನ್ನು ಪತ್ತೆಹಚ್ಚಿ ಮತದಾರರ ಪಟ್ಟಿಯಿಂದ ಹೊರಗಿಡಲು ಎಸ್ಐಆರ್ ಅಗತ್ಯ ಎಂದು ಕೆಲವರು ಸಮರ್ಥಿಸುತ್ತಿದ್ದಾರೆ. ಆದರೆ ಅಕ್ರಮ ವಲಸಿಗರನ್ನು ಗುರುತಿಸಿ ಕ್ರಮ ಕೈಗೊಳ್ಳಲು ಈಗಾಗಲೇ ಪ್ರತ್ಯೇಕ ಕಾನೂನುಗಳು ಹಾಗೂ ವ್ಯವಸ್ಥೆಗಳು ಅಸ್ತಿತ್ವದಲ್ಲಿವೆ ಎಂದು ಹೇಳಿದರು.
ನುಸುಳುಕೋರರನ್ನು ಪತ್ತೆಹಚ್ಚುವ ಉದ್ದೇಶವೇ ಇದ್ದರೆ, ಅದಕ್ಕಾಗಿ ಇರುವ ಕಾನೂನುಗಳ ಮೂಲಕವೇ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಅದನ್ನು ಬಿಟ್ಟು ಮತದಾರರ ಪಟ್ಟಿಯನ್ನೇ ಪರಿಷ್ಕರಿಸುವ ಹೆಸರಿನಲ್ಲಿ ಲಕ್ಷಾಂತರ ಮತದಾರರ ಹಕ್ಕಿನ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಅವರು ಟೀಕಿಸಿದರು.
ಇತರ ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆ ಜಾರಿಯಾದ ನಂತರ ನುಸುಳುಕೋರರೆಂದು ಎಷ್ಟು ಜನರನ್ನು ಗುರುತಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ. ಹೀಗಿರುವಾಗ, ಈ ಪ್ರಕ್ರಿಯೆಯನ್ನು ಸಮರ್ಥಿಸಲು ಮುಂದಾಗಿರುವುದು ಜನರಲ್ಲಿ ಅನುಮಾನಗಳನ್ನು ಹುಟ್ಟಿಸಿದೆ ಎಂದು ಹೇಳಿದರು.
“ಬೆಟ್ಟ ಕೊರೆದು ಇಲಿ ಹಿಡಿಯುವ ಕಾರ್ಯದಂತೆಯೇ ಈ ಪ್ರಕ್ರಿಯೆ ಕಾಣುತ್ತಿದೆ. ಆದರೆ ಇದರ ಹಿಂದೆ ರಾಜಕೀಯ ಉದ್ದೇಶಗಳು ಹಾಗೂ ಕೇಂದ್ರ ಸರ್ಕಾರದ ಷಡ್ಯಂತ್ರ ಅಡಗಿದೆ ಎಂಬುದನ್ನು ಜನರು ಮರೆಯಬಾರದು” ಎಂದು ಆರೋಪಿಸಿದರು.
ಪ್ರಜಾಪ್ರಭುತ್ವದ ಮೂಲಾಧಾರವಾದ ಮತದಾನ ಹಕ್ಕನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು, ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆಯಾಗದಂತೆ ಸರ್ಕಾರ ಮತ್ತು ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಹಿರಿಯ ಪತ್ರಕರ್ತ ಡಾ. ಜೆ. ಸೋಮಣ್ಣ ಮಾತನಾಡಿ, ನುಸುಳುಕೋರರ ಸಮಸ್ಯೆ ನಿಜವಾಗಿಯೂ ಗಂಭೀರವಾಗಿದ್ದರೆ ಕಳೆದ 14 ವರ್ಷಗಳಿಂದ ಅವರನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರ ಏನು ಮಾಡುತ್ತಿತ್ತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಕ್ರಮ ವಲಸಿಗರ ಬಗ್ಗೆ ಸರ್ಕಾರಕ್ಕೆ ಸಂಶಯವಿದ್ದ ಸಂದರ್ಭದಲ್ಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ದೇಶದ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿದ್ದರೂ, ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ನುಸುಳುಕೋರರನ್ನು ಗುರುತಿಸುವಲ್ಲಿ ಆಗಿರುವ ವೈಫಲ್ಯವನ್ನು ಮುಚ್ಚಿಹಾಕುವ ಉದ್ದೇಶದಿಂದ ಈಗ ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ಸಾಮಾನ್ಯ ಮತದಾರರ ಮೇಲೆ ಅನಗತ್ಯ ಒತ್ತಡ ಹೇರಲಾಗುತ್ತಿದೆ. ಅರ್ಹ ನಾಗರಿಕರು ತಮ್ಮ ಗುರುತನ್ನು ಮತ್ತೆ ಮತ್ತೆ ಸಾಬೀತುಪಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಮತದಾನ ಹಕ್ಕು ಅತ್ಯಂತ ಮಹತ್ವದ್ದಾಗಿದ್ದು, ಯಾವುದೇ ಪ್ರಕ್ರಿಯೆಯಿಂದ ಅರ್ಹ ಮತದಾರರ ಹಕ್ಕಿಗೆ ಧಕ್ಕೆಯಾಗಬಾರದು. ಈ ಹಿನ್ನೆಲೆಯಲ್ಲಿ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಜೊತೆಗೆ, ಮತದಾರರ ಹಕ್ಕುಗಳಿಗೆ ತೊಂದರೆಯಾಗುವ ಅಂಶಗಳಿದ್ದರೆ ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಿತ ಕಾನೂನು ಮತ್ತು ನಿಯಮಗಳಿಗೆ ಅಗತ್ಯ ತಿದ್ದುಪಡಿ ತರಲು ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಆಗ್ರಹಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಎಸ್ಐಆರ್ ಪ್ರಕ್ರಿಯೆ ಪ್ರಜಾಪ್ರಭುತ್ವಕ್ಕೆ ಸವಾಲು: ಲಕ್ಷಾಂತರ ಮತದಾರರ ಹಕ್ಕು ಕಸಿಯುವ ಹುನ್ನಾರ
ಸಾರ್ವಜನಿಕ ಸಭೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನ ಹನೀಫ್ ಗೋಲ್ತಮಜಲ್, CPI(ML) ಮಾಸ್ ಲೈನ್ ಪಕ್ಷದ ಜಿಲ್ಲಾಧ್ಯಕ್ಷ ಪ್ರಕಾಶ್, ವೈ.ಎಂ. ಸುರೇಶ್ ಸೇರಿದಂತೆ ಎಸ್ಡಿಪಿಐ ಪಕ್ಷದ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಇದ್ದರು.




