ಚಿನ್ನದ ಬೆಲೆ 10 ಗ್ರಾಂಗೆ 6 ಲಕ್ಷ 65 ಸಾವಿರಕ್ಕೂ ಹೆಚ್ಚಾಗಿರುವ ಸಂದರ್ಭದಲ್ಲಿ ಸಿಕ್ಕ ಬಂಗಾರವನ್ನು ಪ್ರಯಾಣಿಕರಿಗೆ ಹಿಂದಿರುಗಿಸುವ ಮೂಲಕ ವಿಜಯನಗರ ಜಿಲ್ಲೆ ಕೊಟ್ಟೂರು ಬಸ್ ಚಾಲಕ ಮತ್ತು ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಉಜ್ಜಿನಿ ನಿಲ್ದಾಣದಲ್ಲಿ ಇಳಿಯುವ ವೇಳೆ ತಮ್ಮ ಪರ್ಸ್ ಅನ್ನು ಬಸ್ ಸೀಟಿನಲ್ಲೇ ಮರೆತು ಹೋಗಿದ್ದರು. ಪರ್ಸ್‌ನಲ್ಲಿ 10 ಗ್ರಾಂ ಚಿನ್ನದ ಆಭರಣ ಮತ್ತು ಒಂದು ಸಾವಿರ ರೂಪಾಯಿ ನಗದು ಹಣವಿತ್ತು ಎಂದು ತಿಳಿದು ಬಂದಿದೆ.
ಬಸ್ ನಿರ್ವಾಹಕ ಬಸವರಾಜ್ ಅವರು ಪರ್ಸ್ ಕಂಡು ತಕ್ಷಣವೇ ಅದರಲ್ಲಿದ್ದ ಚಿನ್ನ ಮತ್ತು ಹಣವನ್ನು ಜೋಪಾನವಾಗಿ ಇಟ್ಟುಕೊಂಡು ಮಹಿಳೆಯನ್ನು ಹುಡುಕಿ ಹಿಂದಿರುಗಿಸಿದ್ದಾರೆ. ಬಸ್ ಚಾಲಕ ಕೊಟ್ರೇಶ್ ಅವರೂ ಈ ಕಾರ್ಯದಲ್ಲಿ ಸಹಕರಿಸಿದ್ದಾರೆ.
ಇದನ್ನೂ ಓದಿ>ದಕ್ಷಿಣ ಕನ್ನಡ | ಬತ್ತಿದ ತುಂಬೆ, ಶಾಂಭವಿ, ಗುರುಪುರ ಜಲಾಶಯ; ಕುಡಿಯುವ ನೀರಿಗೂ ಹಾಹಾಕಾರ
ಈ ಅಪರೂಪದ ಪ್ರಾಮಾಣಿಕ ಕೃತಿಗೆ ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಇಂದಿನ ದಿನಗಳಲ್ಲಿ ಇಂತಹ ಪ್ರಾಮಾಣಿಕತೆ ಅಪರೂಪ. ಇವರಿಬ್ಬರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಗೌರವ ತಂದಿದ್ದಾರೆ” ಎಂದು ಪ್ರಯಾಣಿಕರು ಶ್ಲಾಘಿಸಿದ್ದಾರೆ.
ಚಿನ್ನದ ಬೆಲೆ ಗಗನಕ್ಕೇರಿದ ಸಮಯದಲ್ಲಿ ಇವರೀರ್ವರ ಪ್ರಾಮಾಣಿಕ ನಡತೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.




