ಕಬ್ಬಿನ ನಾಡು ಎಂದು ಹೆಸರಾದ ಕರ್ನಾಟಕದಲ್ಲಿ ಇಂದು ಸಕ್ಕರೆ ಖರೀದಿಸುವುದೇ ಗ್ರಾಹಕನಿಗೆ ಕಹಿ ಎನಿಸಬಹುದು. ಒಂದು ಕೆಜಿ ಸಕ್ಕರೆಗೆ 75 ರೂಪಾಯಿ ದಾಟಿದ್ದು, ಕೆಲವೆಡೆ ಮಾರುಕಟ್ಟೆಗಳಲ್ಲಿ 80 ರೂಪಾಯಿ ಮುಟ್ಟಿದೆ. ಒಂದು ತಿಂಗಳ ಹಿಂದೆ 45 ರಿಂದ 55 ರೂಪಾಯಿ ಇದ್ದ ಸಕ್ಕರೆ ಬೆಲೆ ಹಬ್ಬದ ಸೀಸನ್‌ನಲ್ಲಿ ದಿಢೀರ್ ಗಗನಕ್ಕೇರಿದೆ.
ಸಕ್ಕರೆಯ ಜೊತೆಗೆ ಬೆಲ್ಲದ ಬೆಲೆಯಲ್ಲೂ ಏರಿಕೆಯಾಗಿದ್ದು, 70 ರೂಪಾಯಿ ಸುತ್ತಮುತ್ತವಿದೆ. ಹಬ್ಬಗಳ ಸರಣಿ ಬಂದಾಗಲೇ ಈ ಹಠಾತ್ ಏರಿಕೆ ಆಗಿರುವುದರಿಂದ ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳು ಹೆಚ್ಚು ತಾಪತ್ರಯಕ್ಕೆ ಸಿಲುಕಬಹುದು. ಮಾರುಕಟ್ಟೆಗೆ ಹೋದರೆ ವ್ಯಾಪಾರಿಗಳು “ಬೆಲೆ ಹೆಚ್ಚಾಗಿದೆ, ಇನ್ನೂ ಹೆಚ್ಚಾಗಬಹುದು” ಎಂದು ಹೇಳುತ್ತಿದ್ದು, ಗ್ರಾಹಕರು ಪೇಚುಮೋರೆ ಹಾಕುವಂತಾಗಿದೆ.
ಏರಿಕೆಯ ಹಿಂದಿನ ಅಸಲಿಯತ್ತು?
ಹವಾಮಾನ ವೈಪರೀತ್ಯದಿಂದ ಎಲ್ ನೀನೊ ಪರಿಣಾಮ, ಹೆಚ್ಚುವರಿ ಮಳೆಯಿಂದ ಕಬ್ಬು ಹೊಲಗಳಲ್ಲಿ ನೀರು ನಿಂತು ಹೋಗುವುದು, ರೆಡ್ ರಾಟ್ ಮತ್ತು ಟಾಪ್ ಬೋರರ್ ರೋಗಗಳು ಕಬ್ಬಿನ ಇಳುವರಿಯನ್ನು ಕುಗ್ಗಿಸಿವೆ. ಉತ್ಪಾದನೆ ನಿರೀಕ್ಷೆಗಿಂತ ಕಡಿಮೆಯಾಗಿದೆ. ದೇಶಾದ್ಯಂತ ದಾಸ್ತಾನು ಕಡಿಮೆಯಾಗಿರುವುದು ಬೆಲೆಗಳನ್ನು ಮೇಲಕ್ಕೆ ತಳ್ಳಿದೆ. ಕೆಲವರು ಕೃತಕ ಅಭಾವ ಸೃಷ್ಟಿ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಾರೆ. ಸಕ್ಕರೆ ಬದಲು ಎಥೆನಾಲ್‌ಗೆ ಕಬ್ಬಿನ ರಸ ಹೆಚ್ಚು ಬಳಕೆಯಾಗುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆದರೆ ಕೇಂದ್ರ ಸರ್ಕಾರ ಇದನ್ನು ನಿರಾಕರಿಸಿದೆ. ಉತ್ಪಾದನಾ ಕುಸಿತ, ಹಬ್ಬದ ಬೇಡಿಕೆ, ಜಾಗತಿಕ ಪೂರೈಕೆ ಕೊರತೆ ಮತ್ತು ಕೆಲವು ವಲಯಗಳಲ್ಲಿ ಸಂಗ್ರಹಣೆ ಇವುಗಳೇ ಮುಖ್ಯ ಕಾರಣ ಎಂದು ಹೇಳಿದೆ.
ಕರ್ನಾಟಕದಲ್ಲಿ ಕಳೆದ ಸಾಲಿನಲ್ಲಿ ಸುಮಾರು 7.5 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆದು ಸುಮಾರು 50 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ತಯಾರಾಗಿದೆ. ಆದರೂ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ.
ಸಕ್ಕರೆ ಬೆಲೆ ಏರಿದರೆ ಕೇವಲ ಅಡುಗೆಮನೆಯ ವೆಚ್ಚ ಹೆಚ್ಚಾಗುವುದಿಲ್ಲ. ಲಡ್ಡು, ಜಿಲೇಬಿ, ಮೈಸೂರುಪಾಕ್, ಪೇಡಾ, ಬರ್ಫಿ, ರಸಗುಲ್ಲಾ, ಕುಂದಾ, ಕರದಂಟು ಮುಂತಾದ ಸಿಹಿ ತಿನಿಸುಗಳು, ಬಿಸ್ಕಿಟ್, ಕೇಕ್, ಪೇಸ್ಟ್ರಿ, ಬ್ರೆಡ್, ಐಸ್‌ಕ್ರೀಂ, ಜ್ಯೂಸ್, ಚಾಕೊಲೇಟ್, ತಂಪು ಪಾನೀಯಗಳೆಲ್ಲದರ ಬೆಲೆಯೂ ಜಿಗಿಯುವ ಸಾಧ್ಯತೆ ಇದೆ. ಚಹಾ-ಕಾಫಿ ಅಂಗಡಿಗಳೂ ಬೆಲೆ ಏರಿಕೆಯ ಬಿಸಿ ಮುಟ್ಟಲಿದೆ.
ಕೇಂದ್ರ ಸರ್ಕಾರ 10 ಲಕ್ಷ ಟನ್ ಕಚ್ಚಾ ಸಕ್ಕರೆ ಸುಂಕರಹಿತವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ಸ್ಟಾಕ್ ಮಿತಿಗಳನ್ನೂ ವಿಧಿಸಿದೆ. ಆದರೆ ಇನ್ನೂ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುತ್ತಿಲ್ಲ. ಗ್ರಾಹಕರು ಮತ್ತು ಸಣ್ಣ ವ್ಯಾಪಾರಿಗಳು ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ.




