- ಮೈಸೂರು ಕೋರ್ಟ್ ಎದುರಿನ ಗಾಂಧಿ ಪ್ರತಿಮೆ ಬಳಿ ಸತ್ಯಾಗ್ರಹ
- ಬಿಜೆಪಿ ಪಕ್ಷದ ಜನ ವಿರೋಧಿ ನೀತಿ ಖಂಡಿಸಿ ಧರಣಿ ನಡೆಸಿದ ಹಳ್ಳಿಹಕ್ಕಿ
ಭಾರತೀಯ ಜನತಾ ಪಕ್ಷ ಸೇರಿ ಸೇರಿ ತಪ್ಪು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ ಬಿಜೆಪಿ ನಾಮನಿರ್ದೇಶಿತ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪಶ್ಚಾತ್ತಾಪ ಸತ್ಯಾಗ್ರಹ ಮಾಡಿದರು.
ಮೈಸೂರು ನ್ಯಾಯಾಲಯದೆದುರಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಸತ್ಯಾಗ್ರಹ ಹಮ್ಮಿಕೊಂಡಿದ್ದ ಅಡಗೂರು ಎಚ್ ವಿಶ್ವನಾಥ್ ಬಿಜೆಪಿಯ ಕೆಟ್ಟ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪಶ್ಚಾತ್ತಾಪದ ದಿನ ಎಂಬ ಹೆಸರಿನಲ್ಲಿ ಬಿಜೆಪಿ ಸರ್ಕಾರವನ್ನು ಅಣಕಿಸಿದ ಎಚ್ ವಿಶ್ವನಾಥ್, ಬಿಜೆಪಿ ಸರ್ಕಾರ ಮಾಡುತ್ತಿರುವ ಬೆಲೆ ಏರಿಕೆ, ಅಲ್ಪಸಂಖ್ಯಾತರ ಮೀಸಲಾತಿ ಹಾಗೂ ಭ್ರಷ್ಟಾಚಾರದ ಬಗ್ಗೆ ಪ್ರತಿಭಟಿಸಿದರು. ಧರಣಿಯಲ್ಲಿ ವಿಶ್ವನಾಥ್ ಬೆಂಬಲಿಗರು ಪಾಲ್ಗೊಂಡಿದ್ದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಮಾಜದಲ್ಲಿ ಬದಲಾವಣೆ ಉಂಟಾಗುತ್ತದೆ ಎಂದು ನಂಬಿದ್ದೆ.
ಹೀಗಾಗಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣಕರ್ತನಾದೆ. ಆದರೆ ಬಿಜೆಪಿ ಸರ್ಕಾರ ಸಾರ್ವಜನಿಕವಾಗಿ ಸಾಲು ಸಾಲು ಅನ್ಯಾಯಗಳನ್ನು ಮಾಡುತ್ತಿರುವುದು ಬೇಸರದ ಸಂಗತಿ. ಇಂತಹ ಭ್ರಷ್ಟ ಸರ್ಕಾರಕ್ಕೆ ನಾನು ಬೆಂಬಲ ನೀಡಿದೆ.
ಈ ಸರ್ಕಾರದ ಸೃಷ್ಟಿಗೆ ನಾನು ಕಾರಣನಾದೆನಲ್ಲ ಎಂಬ ವಿಚಾರಕ್ಕೆ ಪಶ್ಚಾತ್ತಾಪವಾಗಿದೆ. ಹೀಗಾಗಿ ಇಂದು ನಾನು ಪಶ್ಚಾತ್ತಾಪ ಸತ್ಯಾಗ್ರಹವನ್ನು ನ್ಯಾಯಾಲಯದ ಮುಂಭಾಗ ಹಮ್ಮಿಕೊಂಡಿದ್ದೆ ಎಂದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮಾತಿಗೆ ಬೆಲೆಕೊಟ್ಜು ನಾನು ಜೆಡಿಎಸ್ ಸೇರ್ಪಡೆಯಾದೆ. ಶಾಸಕನಾಗಿದ್ದ ನನ್ನನ್ನು ಆ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಜೆಡಿಎಸ್-ಕಾಂಗ್ರೆಸ್ಸಿನ ಮೈತ್ರಿಯಲ್ಲಿ ರಾಕ್ಷಸಿ ಸರ್ಕಾರ ನಡೆಯುತ್ತಿದೆ ಎಂದೆನಿಸಿ ನಾನು ಮತ್ತೊಂದು ಅನಿವಾರ್ಯ ಹೆಜ್ಜೆ ಇಟ್ಟೆ.
ನನಗೆ ಮಂತ್ರಿಗಿರಿ ಸಿಗದ ಕಾರಣದಿಂದ ನಾನು ಜೆಡಿಎಸ್ ತೊರೆಯಲಿಲ್ಲ. ಮಂತ್ರಿಗಿರಿಗೆ ನಾನೆಂದಿಗೂ ಆಸೆಪಟ್ಟವನಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ಧುದರಿಂದ, ರಾಜ್ಯದಲ್ಲೂ ಅದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಒಳಿತಾಗಲಿದೆಯೆಂದು ಸಮಾನ ಮನಸ್ಕರೊಡನೆ ಸೇರಿ ಚರ್ಚಸಿ ಬಿಜೆಪಿ ಸರ್ಕಾರ ತರಲು ಕೈ ಜೋಡಿಸಿದೆವು ಎಂದು ಅಡಗೂರು ವಿಶ್ವನಾಥ್ ಹೇಳಿದರು.
ಮುಂದೆ ಅಧಿಕಾರಕ್ಕೆ ಬಂದ ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ಆಗುವ ಕನಸು ಕಂಡಿದ್ದೆವು. ಆದರೆ ಅದೆಲ್ಲವೂ ನುಚ್ಚುನೂರಾದವು. ಇದೊಂದು ಐತಿಹಾಸಿಕ ಪರಮ ಭ್ರಷ್ಟ ಸರ್ಕಾರವೆಂಬ ಟೀಕೆಗೆ ಗುರಿಯಾಯಿತು. ಇದರಿಂದ ನನಗೆ ಪಶ್ಚಾತ್ತಾಪವಾಗಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರಲು ಕೈ ಜೋಡಿಸಿದ್ದಕ್ಕೆ ಅತೀವ ಬೇಸರವಿದೆ, ನೋವಿದೆ. ನನ್ನ ಅಂತರಾತ್ಮವೇ ನನ್ನನ್ನು ತಿವಿಯುತ್ತಿದೆ.
ಈ ಪಾಪದ ಹೊರೆಯನ್ನು ಇಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ನನ್ನ ಮುಂದಿತ್ತು. ಈ ಕಾರಣದಿಂದ ನಾನು ಈ ಸತ್ಯಾಗ್ರಹ ನಡೆಸಿದೆ ಎಂದು ವಿಶ್ವನಾಥ್ ತಿಳಿಸಿದರು.
ಈ ಸುದ್ದಿ ಓದಿದೀರಾ? :ಬಿಎಸ್‌ವೈ ತವರಲ್ಲಿ ಬಿಜೆಪಿಗೆ ಬಂಡಾಯದ ಬಿಸಿ : ಈಶ್ವರಪ್ಪ…
ಈ ಬಾರಿಯ ಚುನಾವಣೆಯಲ್ಲಿ ನನಗೆ ತಾಯಿಯಂತಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇನೆ. ನಾನು ರಾಜ್ಯಪಾಲರಿಂದ ನಾಮಕರಣಗೊಂಡ ಸದಸ್ಯನಾದುದರಿಂದ ಸ್ವತಂತ್ರನಾಗಿದ್ದೇನೆ. ನಾನು ಯಾವುದೇ ಪಕ್ಷದ ಸಿದ್ಧಾಂತಕ್ಕೂ ಸೇರಿದವನಲ್ಲ. ನಾನೀಗ ಸಂಪೂರ್ಣ ಸ್ವತಂತ್ರ. ನಾನೀಗ ಸ್ವಚ್ಛಂದವಾಗಿ ಹಾರಾಡುವ ಅಪ್ಪಟ ಹಳ್ಳಿಹಕ್ಕಿ ಎಂದು ವಿಶ್ವನಾಥ್ ಹೇಳಿದರು.