- 2019ರ ಮಾರ್ಚ್ 4ರಂದು ಮೊದಲಬಾರಿಗೆ ಎನ್‌ಸಿಎಂಸಿ ಕಾರ್ಡ್ ಬಿಡುಗಡೆ
- ಕಾರ್ಡ್ ಬಳಸಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿ ಕೂಡ ಮಾಡಬಹುದು
ಮಾರ್ಚ್ 30ರಿಂದ ಬೆಂಗಳೂರಿನ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ನ್ಯಾಷನಲ್ ಕಾಮನ್ ಮೊಬಲಿಟಿ ಕಾರ್ಡ್ (ಎನ್‌ಸಿಎಂಸಿ) ಅನ್ನು ಮೆಟ್ರೋ ಪ್ರಯಾಣಿಕರು ಪಡೆಯಬಹುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ.
ಏನಿದು ಎನ್‌ಸಿಎಂಸಿ ಕಾರ್ಡ್?
ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಒಂದು ಇಂಟರ್ ಆಪರೇಟಿವ್ ಕಾರ್ಡ್ ಆಗಿದ್ದು, ಇದನ್ನು 2019ರ ಮಾರ್ಚ್ 4ರಂದು ಮೊದಲಬಾರಿಗೆ ಬಿಡುಗಡೆ ಮಾಡಲಾಗಿದೆ. ಇದನ್ನು ಸಾರಿಗೆ ಕಾರ್ಡ್ ರೂಪದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ಕಾರ್ಡ್ ಅನ್ನು ಬಳಸಿ ಪ್ರಯಾಣಿಕರು ಯಾವುದೇ ಸಾರಿಗೆ ಮೂಲಕ ಪ್ರಯಾಣ ಬೆಳೆಸಬಹುದು. ಈ ಕಾರ್ಡ್ ಅನ್ನು ಬಳಸಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿ ಕೂಡ ಮಾಡಬಹುದು.
ದಿಲ್ಲಿ ಮೆಟ್ರೋ ವಿಮಾನ ನಿಲ್ದಾಣ ಮಾರ್ಗದಲ್ಲಿ 2020ರ ಡಿಸೆಂಬರ್‌ನಲ್ಲಿ ಮೊಬಿಲಿಟಿ ಕಾರ್ಡ್ ಬಳಕೆಗೆ ಚಾಲನೆ ನೀಡಲಾಗಿದೆ. ಎನ್‌ಸಿಎಂಸಿ ಕಾರ್ಡ್ ಅನ್ನು ಕೇವಲ ನಮ್ಮ ಮೆಟ್ರೋ ಮಾತ್ರವಲ್ಲದೆ ದೇಶದಲ್ಲಿರುವ ಇನ್ಯಾವುದೇ ರಾಜ್ಯದ ಮೆಟ್ರೋದಲ್ಲಿಯೂ ಬೇಕಾದರೂ ಬಳಸಬಹುದಾಗಿದೆ. ಈ ಕಾರ್ಡ್‌ನ ಸಹಾಯದಿಂದಾಗಿ ಜನರು ಯಾವುದೇ ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಸೇವೆಗಳಿಗೆ ಪಾವತಿ ಮಾಡಲು ಸುಲಭವಾಗಿದೆ. ಬಸ್, ಪಾರ್ಕಿಂಗ್, ಎಲ್ಲ ಕಡೆಯ ಮೆಟ್ರೋ ಸಂಪರ್ಕ, ರೀಟೇಲ್ ಶಾಪಿಂಗ್‌ಗಳಲ್ಲಿ ಈ ಒಂದೇ ಕಾರ್ಡ್ ಮೂಲಕ ವ್ಯವಹರಿಸಬಹುದಾಗಿದೆ.
ಶನಿವಾರ ಎನ್‌ಸಿಎಂಸಿ ಕಾರ್ಡ್ ಪರಿಚಯ ಆಗಿದೆ. ಮಾ.30ರಿಂದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಎನ್‌ಸಿಎಂಸಿ ಕಾರ್ಡನ್ನು ಖರೀದಿಸಬಹುದು ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.