ಸತತ ವೈಫಲ್ಯದಿಂದ ಟೀಮ್ ಇಂಡಿಯಾದ ಉಪನಾಯಕನ ಪಟ್ಟ ಕಳೆದುಕೊಂಡ ಬೆನ್ನಲ್ಲೇ ಬಿಸಿಸಿಐ, ಕೆ ಎಲ್ ರಾಹುಲ್‌ಗೆ ಮತ್ತೊಂದು ಶಾಕ್ ಕೊಟ್ಟಿದೆ. 2022-23 ಸಾಲಿನ ಕೇಂದ್ರೀಯ ಒಪ್ಪಂದ ಹೊಂದಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಕನ್ನಡಿಗ ಕೆ ಎಲ್ ರಾಹುಲ್ ಎ+ ಶ್ರೇಣಿಯಿಂದ ‘ಬಿ’ ಗುಂಪಿಗೆ ಹಿಂಬಡ್ತಿಪಡೆದಿದ್ದಾರೆ.
ಗಾಯದ ಕಾರಣ ಆರು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದು, ಆಸ್ಟ್ರೇಲಿಯ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅಮೋಘ ಕಮ್‌ಬ್ಯಾಕ್ ಮಾಡಿದ್ದ ಸ್ಟಾರ್ ಆಲ್‌ರೌಂಡರ್ ಜಡೇಜಾಗೆ ಬಿಸಿಸಿಐ ಎ+ ಶ್ರೇಣಿಗೆ ಮುಂಬಡ್ತಿ ನೀಡಿದೆ.
ಬಿಸಿಸಿಐನ ಹೊಸ ಒಪ್ಪಂದದ ಪಟ್ಟಿಯಲ್ಲಿ ಅತ್ಯುನ್ನತ ವೇತನ ಶ್ರೇಣಿ (ಎ+) ಪಟ್ಟಿಯಲ್ಲಿ ಏಕದಿನ-ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ ಜೊತೆಗೆ ಜಡೇಜಾ ಸ್ಥಾನ ಪಡೆದಿದ್ದಾರೆ. ಹಿರಿಯ ಆಟಗಾರ ಶಿಖರ್ ಧವನ್ ಮತ್ತು ಸಂಜು ಸ್ಯಾಮ್ಸನ್ ʻಸಿʼ ಶ್ರೇಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಈ ಇಬ್ಬರು ಆಟಗಾರರು ಸ್ಥಾನ ಪಡೆಯುವ ಸಾಧ್ಯತೆಯ ಸುಳಿವನ್ನು ಬಿಸಿಸಿಐ ನೀಡಿದೆ.
ವಿವಿಧ ವೇತನ ಶ್ರೇಣಿಗಳಲ್ಲಿ ಇರುವ ಆಟಗಾರರ ಪಟ್ಟಿ
ಎ+ (₹7 ಕೋಟಿ): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ ಮತ್ತು ರವಿಂದ್ರ ಜಡೇಜಾ.
ಎ (₹5 ಕೋಟಿ): ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್.
ಬಿ (₹3 ಕೋಟಿ): ಚೇತೇಶ್ವರ್ ಪೂಜಾರ, ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್ ಮತ್ತು ಶುಭಮನ್ ಗಿಲ್.
ಸಿ (₹1 ಕೋಟಿ): ಶಿಖರ್ ಧವನ್, ಶಾರ್ದುಲ್ ಠಾಕೂರ್, ಇಶಾನ್ ಕಿಶನ್, ದೀಪಕ್ ಹೂಡ, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್ ಮತ್ತು ಕೆ ಎಸ್ ಭರತ್.