“ಒಬ್ಬರಿಂದಲೇ ಕಾಂಗ್ರೆಸ್ ಪಕ್ಷ ನಡೆಯುವುದಿಲ್ಲ, ಸಿದ್ದಾಂತಗಳಿಂದ ನಡೆಯುತ್ತದೆ. ಪಕ್ಷಕ್ಕೆ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯವಲ್ಲ. ಸಿದ್ದಾಂತಗಳೇ ಮುಖ್ಯ. ಸಚಿವ ಜಮೀರ್ ಅವರಿಗೆ ಕೇರಳದ ಸ್ಟಾರ್ ಪ್ರಚಾರಕ ಮತ್ತು ಚುನಾವಣಾ ಜವಾಬ್ದಾರಿ ವಹಿಸಿದ್ದು, ಅಲ್ಲಿನ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇಲ್ಲಿ ಪ್ರಚಾರಕ್ಕಾಗಿ ಪಕ್ಷ ಜವಾಬ್ದಾರಿ ನೀಡಿದ್ದು ಬರಲಿದ್ದಾರೆ” ಎಂದು ಮಾರ್ಮಿಕವಾಗಿ ತಿರುಗೇಟು ನೀಡಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕಾಗಿ ದಾವಣಗೆರೆಗೆ ಆಗಮಿಸಿದ ವೇಳೆ ಎಂಬಿಎ ಕಾಲೇಜು ಆವರಣದ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಬೇರೆ ಬೇರೆ ಅವಕಾಶ ನೀಡಿದೆ. ಅಲ್ಪಸಂಖ್ಯಾತರಿಗೆ 16 ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಿದೆ. ದಾವಣಗೆರೆಯ ಅಬ್ದುಲ್ ಜಬ್ಬಾರ್ ಸಾಬ್ ಪರಿಷತ್ ಸದಸ್ಯ ಸ್ಥಾನ ಸೇರಿದಂತೆ ಹಲವು ಅವಕಾಶ ನೀಡಿದೆ. ಇದನ್ನೇ ಗುರಿಯಾಗಿಸಿ ಬಿಜೆಪಿ ಟೀಕೆ ಮಾಡಿದರೂ ನಾವು ಹಿಂಜರಿಯದೇ ಅವಕಾಶ ನೀಡುವ ಮೂಲಕ ಕಾಂಗ್ರೆಸ್ ಅಲ್ಪಸಂಖ್ಯಾತರ ಪರವಿದೆ” ಎಂದು ಸಮರ್ಥಿಸಿಕೊಂಡರು.

“ಪ್ರತಿ ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದ ಕಣದಲ್ಲಿ ಹಲವು ಮುಸ್ಲಿಂ ಅಭ್ಯರ್ಥಿಗಳು ಇರುತ್ತಾರೆ. ಈ ಬಾರಿ ಹನ್ನೊಂದು ಮಂದಿ ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಯಾವುದೇ ತೊಡಕಾಗುವುದಿಲ್ಲ. ನಾವು ಆಂತರಿಕವಾಗಿ ಸಮೀಕ್ಷೆ ನಡೆಸಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ.79ರಷ್ಟು ಮಂದಿ ಕಾಂಗ್ರೆಸ್ ಪರವಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅತಿ ಹೆಚ್ಚಿನ ಅಂತರದಿಂದ ಸಮರ್ಥ್ ಶಾಮನೂರು ಗೆಲ್ಲಲಿದ್ದಾರೆ, ಶಾಮನೂರು ಶಿವಶಂಕರಪ್ಪನವರ ದಾನಧರ್ಮ, ಉತ್ತಮ ಕಾರ್ಯಗಳು ಗೆಲುವಿಗೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ದಸಂಸ ಪ್ರತಿಭಟನೆ
ಈ ವೇಳೆ ಯುವಕಾಂಗ್ರೆಸ್ ಮುಖಂಡ ಮಹಮದ್ ನಲಪಾಡ್, ಕಲಾವಿದ ಸಾಧುಕೋಕಿಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಬಿ ಮಂಜಪ್ಪ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಬೆಂಬಲಿಗರು ಹಾಜರಿದ್ದರು.





