ಹೊಳೆನರಸೀಪುರ ಕ್ಷೇತ್ರ | ರೇವಣ್ಣರ  ಗೆಲುವಿಗೆ ಅವರ `ಬಾಯಿ’ ತೊಡಕಾಗಲಿದೆಯೇ?

Date:

ಈ ಬಾರಿಯ ಚುನಾವಣೆ ರೇವಣ್ಣನವರ ಏಕಚಕ್ರಾಧಿಪತ್ಯಕ್ಕೆ ಕೊನೆಯಾಡಲಿದೆ ಎನ್ನುವುದು ಹೊಳೆನರಸೀಪುರ ಕ್ಷೇತ್ರದ ಜನತೆಯ ಮಾತಾಗಿದೆ. ಏಕೆಂದರೆ ಅಧಿಕಾರವೆಲ್ಲ ತಮ್ಮ ಕುಟುಂಬದಲ್ಲೇ ಇರುವಂತೆ ನೋಡಿಕೊಂಡಿರುವುದು ಕ್ಷೇತ್ರದ ಜನತೆಯ ಅಸಹನೆಗೆ ಕಾರಣವಾಗಿದೆ. ಅದಕ್ಕಿಂತ ಹೆಚ್ಚಾಗಿ ರೇವಣ್ಣರ `ಬಾಯಿ’ ಬೇಸರ ತರಿಸಿದೆ.

ಹೊಳೆನರಸೀಪುರ ಎಚ್.ಡಿ ದೇವೇಗೌಡ ಅಭ್ಯರ್ಥಿಯಾಗಿದ್ದ ಕಾಲದಲ್ಲಿ, ಕಾಂಗ್ರೆಸ್ ಮತ್ತು ಜನತಾದಳದ ನಡುವಿನ ಜಿದ್ದಾಜಿದ್ದಿನ ಕ್ಷೇತ್ರವಾಗಿತ್ತು. ದೇವೇಗೌಡರ ಒಳ-ಹೊರಗನ್ನು ಅರಿತಿದ್ದ, ಅವರ ಚುನಾವಣಾ ಚಮತ್ಕಾರಗಳನ್ನು ಅರಗಿಸಿಕೊಂಡಿದ್ದ ಜಿ.ಪುಟ್ಟಸ್ವಾಮಿಗೌಡ, ಗೌಡರನ್ನು ತೊರೆದು ಕಾಂಗ್ರೆಸ್ ಗೆ ಹೋದ ನಂತರ, ಕ್ಷೇತ್ರ ನಿಜಕ್ಕೂ ಕುರುಕ್ಷೇತ್ರವಾಗಿತ್ತು.

ಆದರೆ 1994ರಲ್ಲಿ ದೇವೇಗೌಡರು ಕ್ಷೇತ್ರವನ್ನು ಪುತ್ರ ಎಚ್.ಡಿ ರೇವಣ್ಣಗೆ ಬಳುವಳಿಯಾಗಿ ಬಿಟ್ಟುಕೊಟ್ಟು ದೂರದ ರಾಮನಗರದತ್ತ ತೆರಳಿದ ನಂತರ, ಜಿ. ಪುಟ್ಟಸ್ವಾಮಿಗೌಡರು ಲೋಕಸಭಾ ಸದಸ್ಯರಾದ ಮೇಲೆ, ಹೊಳೆನರಸೀಪುರ ರೇವಣ್ಣರ ಪಾಲಾಯಿತು. 1994ರಿಂದ ಇಲ್ಲಿಯವರೆಗೆ, ರೇವಣ್ಣರ ಬಾಯಿಗೆ, ಒರಟಾಟಕ್ಕೆ, ದಬ್ಬಾಳಿಕೆ-ದೌರ್ಜನ್ಯಕ್ಕೆ ಎದುರಾಡುವವರೇ ಇಲ್ಲವಾಯಿತು. ಹೊಳೆನರಸೀಪುರವಷ್ಟೇ ಅಲ್ಲ, ಇಡೀ ಹಾಸನ ಜಿಲ್ಲೆಯೇ ರೇವಣ್ಣ ಆಟದ ಮೈದಾನವಾಯಿತು ಎಂದು ದೂರುತ್ತಾರೆ ಮತದಾರರು.    

ಹರದನಹಳ್ಳಿಯ ಬಡ ಕೃಷಿಕ ಕುಟುಂಬದಿಂದ ಬಂದ ಎಚ್.ಡಿ ದೇವೇಗೌಡ 1962ರಿಂದ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಬೆಳೆದು ನಾಡಿಗೆ ಕೀರ್ತಿ ತಂದವರು. ಹಳ್ಳಿಯಿಂದ ದಿಲ್ಲಿಗೆ ಎಂಬ ವ್ಯಾಖ್ಯಾನಕ್ಕೆ, ಪ್ರಜಾಪ್ರಭುತ್ವಕ್ಕೆ ಬೆಲೆ ತಂದವರು. ಆದರೆ ರಾಜಕೀಯವಾಗಿ ನೆಲೆಯೂರುತ್ತಲೇ ತಾವು ಗೆದ್ದುಬಂದ ಹೊಳೆನರಸೀಪುರ ಕ್ಷೇತ್ರವನ್ನು ಪುತ್ರ ಎಚ್.ಡಿ ರೇವಣ್ಣರಿಗೆ ಬಿಟ್ಟುಕೊಡುವ ಮೂಲಕ ವಂಶ ಪಾರಂಪರ್ಯ ರಾಜಕಾರಣಕ್ಕೂ ನಾಂದಿಯಾಡಿದರು. ರೇವಣ್ಣ ಐದು ಬಾರಿ ಗೆಲ್ಲುವ ಮೂಲಕ, ಕ್ಷೇತ್ರವನ್ನು ಜೆಡಿಎಸ್ ನ ಭದ್ರಕೋಟೆಯನ್ನಾಗಿಸಿದರು. ಬಲಿಷ್ಠ ರೇವಣ್ಣರನ್ನು ಮಣಿಸಲು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಸಮರ್ಥರಿಲ್ಲದ ಕಾರಣ, ಪ್ರತಿ ಚುನಾವಣೆಯಲ್ಲಿಯೂ ರೇವಣ್ಣ ಗೆಲುವಿನ ದಾಖಲೆ ನಿರ್ಮಿಸುತ್ತಾ ಸಾಗಿದರು. ನಿರಂತರ ಗೆಲುವೇ ಅವರಿಗೆ ಸರ್ವಾಧಿಕಾರಿಯನ್ನಾಗಿ ಮಾಡಿತು ಎನ್ನುತ್ತಾರೆ ಮತದಾರರು.  

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ ಈ ಬಾರಿಯ ಚುನಾವಣೆ ರೇವಣ್ಣನವರ ಏಕಚಕ್ರಾಧಿಪತ್ಯಕ್ಕೆ ಕೊನೆಯಾಡಲಿದೆ ಎನ್ನುವುದು ಹೊಳೆನರಸೀಪುರ ಕ್ಷೇತ್ರದ ಜನತೆಯ ಮಾತಾಗಿದೆ. ಏಕೆಂದರೆ, ರೇವಣ್ಣನವರನ್ನು ಬಿಟ್ಟರೆ ಜೆಡಿಎಸ್ ನಲ್ಲಿ ಎರಡನೇ ಹಂತದ ನಾಯಕರೇ ಇಲ್ಲ. ದೇವೇಗೌಡರ ಕಾಲದಿಂದಲೂ ಕುಟುಂಬ ಬಿಟ್ಟು ಬೇರೊಬ್ಬರನ್ನು ಬೆಳೆಸಲೇ ಇಲ್ಲ. ರೇವಣ್ಣ ಶಾಸಕರಾದರೆ, ಪುತ್ರರಾದ ಪ್ರಜ್ವಲ್ ಸಂಸದ, ಸೂರಜ್ ವಿಧಾನ ಪರಿಷತ್ತಿನ ಸದಸ್ಯ. ಅಧಿಕಾರವೆಲ್ಲ ತಮ್ಮ ಕುಟುಂಬದಲ್ಲೇ ಇರುವಂತೆ ನೋಡಿಕೊಂಡಿರುವುದು ಕ್ಷೇತ್ರದ ಜನತೆಯ ಅಸಹನೆಗೆ ಕಾರಣವಾಗಿದೆ. ಅದಕ್ಕಿಂತ ಹೆಚ್ಚಾಗಿ ರೇವಣ್ಣರ `ಬಾಯಿ’ ಬೇಸರ ತರಿಸಿದೆ. ಇತ್ತೀಚೆಗೆ ರೇವಣ್ಣನವರ ಮನೆಗೆ ಬೆಳ್ಳಂಬೆಳಗ್ಗೆ ಏನೋ ಸಮಸ್ಯೆ ಹೇಳಿಕೊಂಡು ಬಂದ ದಲಿತರ ಬಗ್ಗೆ ರೇವಣ್ಣರು ಆಡಿದ ಮಾತು, ಕ್ಷೇತ್ರದಾದ್ಯಂತ ಸುದ್ದಿಯಾಗಿದೆ. ಒಳಗೊಳಗೇ ಇದ್ದ ಅಸಮಾಧಾನ ಭುಗಿಲೆದ್ದಿದೆ. ಅದು ಚುನಾವಣೆಯ ಫಲಿತಾಂಶದಲ್ಲಿ ಗೋಚರಿಸಲಿದೆ ಎನ್ನುತ್ತಾರೆ ಕ್ಷೇತ್ರದ ದಲಿತ ನಾಯಕರು.

ಇದನ್ನು ಓದಿದ್ದೀರಾ?: ಹಾಸನ ಕ್ಷೇತ್ರ | ದಾಸ ಒಕ್ಕಲಿಗರ ನಡುವಿನ ಕಾದಾಟವಾದರೂ, ಮುಸ್ಲಿಂ ಮತದಾರರೆ ನಿರ್ಣಾಯಕ

ಇನ್ನು ರೇವಣ್ಣನವರ ಹಿಡಿತದಲ್ಲಿದ್ದ ಕಸಬಾ, ಹಳೆಕೋಟೆ, ದುದ್ದ ಮತ್ತು ದಂಡಿಗನಹಳ್ಳಿ ಹೋಬಳಿಗಳು ಈ ಚುನಾವಣೆಯಲ್ಲಿ ನಿಧಾನವಾಗಿ ಕಾಂಗ್ರೆಸ್‌ನತ್ತ ಜಾರತೊಡಗಿವೆ. ಅದರಲ್ಲೂ ಕೋಡಿಹಳ್ಳಿಯ ಜನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಕರೆದು ಸನ್ಮಾನಿಸಿದ್ದಲ್ಲದೆ, ಜನರೇ ಮುಂದೆ ಬಂದು 5 ಲಕ್ಷ ದೇಣಿಗೆ ನೀಡಿರುವುದು, ಜೆಡಿಎಸ್‌ನ ರೇವಣ್ಣನವರಲ್ಲಿ ಭಯ ಹುಟ್ಟಿಸಿದೆ.

ಜೊತೆಗೆ ಸೂರನಹಳ್ಳಿಯ ಜನರನ್ನು ಮತ ಹಾಕಲಿಲ್ಲವೆಂದು ವಿನಾಕಾರಣ ದ್ವೇಷಿಸುವುದು, ಕುರುಬರು ಮತ ಹಾಕುವುದಿಲ್ಲವೆಂದು ಹಳ್ಳಿಮೈಸೂರು ಹೋಬಳಿಯನ್ನು ಅರಕಲಗೂಡಿಗೆ ಸೇರಿಸಿರುವುದು, ತಮಗೆ ಬೇಕಾದ ಹಾಸನದ ಬಳಿಯ ದುದ್ದ ಮತ್ತು ಶಾಂತಿಗ್ರಾಮವನ್ನು ಹೊಳೆನರಸೀಪುರ ಕ್ಷೇತ್ರಕ್ಕೆ ಸೇರಿಸಿಕೊಂಡಿರುವುದು ಜನತೆಯಲ್ಲಿ ಅಸಮಾಧಾನವನ್ನುಂಟುಮಾಡಿದೆ.

ಹೊರಗಿನಿಂದ ನೋಡಿದವರಿಗೆ ಹೊಳೆನರಸೀಪುರ ಜೆಡಿಎಸ್ ಭದ್ರಕೋಟೆ ಎನಿಸುತ್ತದೆ; ರೇವಣ್ಣ ಕೆಲಸಗಾರ, ಅಭಿವೃದ್ಧಿಯ ಹರಿಕಾರ ಎಂಬ ಮಾತಿದೆ. ಆದರೆ ಕಳೆದ ಐದು ವರ್ಷಗಳಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ರೇವಣ್ಣನವರು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರನ್ನು ಕೇಳಿದರೆ, `ಗೌಡ್ರು ಕಾಲ್ದಲ್ಲಿ ಹೆಂಗಿದ್ವೋ ಇವತ್ತೂ ಹಂಗೇ ಇದೀವಿ, ಒಂಚೂರೂ ಬದಲಾಗಿಲ್ಲ. ಬದಲಾಗಿರದು-ಬೆಳೆದಿರದು ಗೌಡ್ರು ಕುಟುಂಬ’ ಎಂಬ ಮಾರ್ಮಿಕ ಉತ್ತರ ನೀಡುತ್ತಾರೆ.

ಆರನೇ ಬಾರಿಗೆ ಗೆದ್ದು ದಾಖಲೆ ನಿರ್ಮಿಸಲು ಹೊರಟಿರುವ ಜೆಡಿಎಸ್‌ನ ಎಚ್.ಡಿ. ರೇವಣ್ಣನವರಿಗೆ ಎದುರಾಳಿಯಾಗಿ ಕಾಂಗ್ರೆಸ್‌ನ ಶ್ರೇಯಸ್ ಪಟೇಲ್, ಬಿಜೆಪಿಯ ದೇವರಾಜೇಗೌಡ ಕಣದಲ್ಲಿದ್ದಾರೆ. ಇವರಲ್ಲದೆ ಗೀತಾ ಬಿ(ಆಪ್), ತಾರೇಶ್ ಹೆಚ್.ಎಸ್ (ಬಿಎಸ್‌ಪಿ), ಬಿ.ಕೆ ನಾಗರಾಜ(ಕರ್ನಾಟಕ ರಾಷ್ಟ್ರ ಸಮಿತಿ), ಹೆಚ್.ಡಿ ರೇವಣ್ಣ(ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿ) ಹಾಗೂ ಪಕ್ಷೇತರ ಅಭ್ಯರ್ಥಿ ಡಿ.ಆರ್ ರಂಗಸ್ವಾಮಿ ಸೇರಿ ಒಟ್ಟು 8 ಮಂದಿ ಚುನಾವಣಾ ಕಣದಲ್ಲಿದ್ದಾರೆ.

ಮಾಜಿ ಮಂತ್ರಿ ಜಿ. ಪುಟ್ಟಸ್ವಾಮಿಗೌಡರ ಮೊಮ್ಮಗನಾದ ಶ್ರೇಯಸ್‌ಗೆ ರಾಜಕೀಯ ಅನುಭವ ಕಡಿಮೆ. ಚುನಾವಣಾ ರಾಜಕಾರಣವೂ ಹೊಸತು. ಹಣ ಬಲವೂ ಇಲ್ಲ. ಆದರೆ, ಕಳೆದ 20 ವರ್ಷಗಳಿಂದ ವಿರೋಧ ಪಕ್ಷವಾದ ಜೆಡಿಎಸ್‌ ದಬ್ಬಾಳಿಕೆಯನ್ನು ಸಹಿಸಿ ಸಾಕಾಗಿಹೋಗಿರುವ ಕಾಂಗ್ರೆಸ್ ಕಾರ್ಯಕರ್ತರು ಹೊಸ ಉತ್ಸಾಹದಲ್ಲಿದ್ದಾರೆ. ಈ ಬಾರಿ ಬದಲಾವಣೆ ತಂದೇ ತೀರುತ್ತೇವೆಂಬ ಆಶಾಭಾವನೆಯಿಂದ ಓಡಾಡುತ್ತಿದ್ದಾರೆ. ರೇವಣ್ಣನವರ ಕುಟುಂಬದ ಮೇಲಿರುವ ಅಸಹನೆ ಕಾಂಗ್ರೆಸ್ ಪರವಾಗಿ ಮತಪರಿವರ್ತನೆಯಾದರೆ, ಶ್ರೇಯಸ್ ಪಟೇಲ್‌ಗೊಂದು ಛಾನ್ಸ್ ಇದೆ.

ಇನ್ನು ಕ್ಷೇತ್ರದಲ್ಲಿ 2 ಲಕ್ಷದ 19 ಸಾವಿರ ಮತದಾರರಿದ್ದು, ಬಹುಸಂಖ್ಯಾತರು ಒಕ್ಕಲಿಗರಾದರೂ; ಮುಸ್ಲಿಮರು, ಲಿಂಗಾಯತರು, ಕುರುಬರು ಮತ್ತು ಎಸ್ಸಿ ಎಸ್ಟಿ ಮತದಾರರ ಸಂಖ್ಯೆ ಒಕ್ಕಲಿಗರಿಗಿಂತ ಹೆಚ್ಚಾಗಿದೆ. ಪ್ರತಿ ಚುನಾವಣೆಯಲ್ಲೂ ಮುಸ್ಲಿಮರು ಮತ್ತು ದಲಿತರು ಜೆಡಿಎಸ್ ಬೆಂಬಲಕ್ಕೆ ನಿಂತಿದ್ದರು. ಆದರೆ ಈ ಬಾರಿ ಈ ಸಮುದಾಯ ರೇವಣ್ಣ ಮತ್ತವರ ಮಕ್ಕಳ ಅಟಾಟೋಪಕ್ಕೆ ಉತ್ತರ ಕೊಡಲು ಸಿದ್ಧವಾಗಿದೆ. ಇನ್ನು ಲಿಂಗಾಯತ ಮತ್ತು ಕುರುಬ ಸಮುದಾಯ ಯಾವಾಗಲೂ ಜೆಡಿಎಸ್ ವಿರುದ್ಧವೇ ಮತ ಚಲಾಯಿಸಿವೆ. ಹೀಗಾಗಿ, ಈ ಬಾರಿ ದೇವೇಗೌಡರು ಕ್ಷೇತ್ರಕ್ಕೆ ಕಾಲಿಟ್ಟು ಕೊನೆಯ ಕ್ಷಣದ ಚಮತ್ಕಾರವೇನು ನಡೆಯದಿದ್ದರೆ, ಸೋಲಿಲ್ಲದ ಸರದಾರ ರೇವಣ್ಣನವರು ಸೋಲಿನ ರುಚಿ ನೋಡಲಿದ್ದಾರೆ. ಹಾಗೆಯೇ ಹೊಸಮುಖ, ತರುಣ ಶ್ರೇಯಸ್ ಪಟೇಲ್ ಗೆದ್ದು ಬೀಗಲಿದ್ದಾರೆ ಎನ್ನುತ್ತಾರೆ ಹೊಳೆನರಸೀಪುರ ಕ್ಷೇತ್ರದ ಮತದಾರರು.    

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಂಗಾರತಿ‌ ಮಾದರಿಯಲ್ಲೇ ಕೆಆರ್​ಎಸ್ ಜಲಾಶಯದಲ್ಲಿ ಕಾವೇರಿ ಆರತಿ ಕಾರ್ಯಕ್ರಮ: ಡಿ ಕೆ ಶಿವಕುಮಾರ್‌

ಗಂಗಾರತಿ‌ ಮಾದರಿಯಲ್ಲೇ ಕೆಆರ್​ಎಸ್ ಜಲಾಶಯದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು...

ಅಮೆರಿಕ ಚುನಾವಣೆ | ನಿಧಿ ಸಂಗ್ರಹಣೆ ಮತ್ತು ವೆಚ್ಚದಲ್ಲಿ ಟ್ರಂಪ್‌ಗಿಂತ ಬೈಡೆನ್ ಮೇಲುಗೈ

ಜೂನ್‌ನಲ್ಲಿ ನಡೆದ ನಿಧಿ ಸಂಗ್ರಹಣೆ ಮತ್ತು ವೆಚ್ಚದಲ್ಲಿ ಅಮೆರಿಕ ಅಧ್ಯಕ್ಷ ಜೋ...

ಮಹಿಳಾ ಉದ್ಯಮಶೀಲತೆ ಕಾರ್ಯಕ್ರಮಕ್ಕಾಗಿ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕತಂತ್ರಜ್ಞಾನ ಇಲಾಖೆಯು ರಾಜ್ಯದಲ್ಲಿನ...