ರಜಬ್ ಕುಟುಂಬ ಮತ್ತು ಸಿಬ್ಬಂದಿಯ ಹತ್ಯೆಗೆ ವಿಶ್ವಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಚಿತ್ರವು ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದಿದ್ದಲ್ಲದೆ, ಆಸ್ಕರ್ ಪ್ರಶಸ್ತಿಯ ‘ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ’ ವಿಭಾಗಕ್ಕೂ ನಾಮನಿರ್ದೇಶನಗೊಂಡಿತ್ತು. ಅಮೆರಿಕ, ಬ್ರಿಟನ್ ಸೇರಿದಂತೆ ಇಸ್ರೇಲ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಹಲವು ರಾಷ್ಟ್ರಗಳಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಆದರೆ, ಭಾರತದಲ್ಲಿ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ತಡೆ ನೀಡಲಾಗಿದೆ
2024ರ ಗಾಜಾ ಯುದ್ಧದಲ್ಲಿ ಇಸ್ರೇಲಿ ಪಡೆಯ ದಾಳಿಗೆ ಬಲಿಯಾದ 6 ವರ್ಷದ ಪ್ಯಾಲೆಸ್ಟೀನ್ ಮಗು ಹಿಂದ್ ರಜಬ್‌ಳ ಕರುಣಾಜನಕ ಅಂತ್ಯದ ಆಧಾರಿತ, ಆಸ್ಕರ್ ಆಧಾರಿತ, ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ (The Voice of Hind Rajab) ಚಿತ್ರದ ಪ್ರದರ್ಶನಕ್ಕೆ ಭಾರತದಲ್ಲಿ ನಿಷೇಧಿಸಲಾಗಿದೆ. ಈ ಚಿತ್ರದ ಬಿಡುಗಡೆಯಿಂದ ‘ಭಾರತ-ಇಸ್ರೇಲ್ ಸಂಬಂಧಕ್ಕೆ ಧಕ್ಕೆಯಾಗಬಹುದು’ ಎಂಬ ಕಾರಣವೊಡ್ಡಿ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (CBFC) ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ ಎಂದು ಚಿತ್ರದ ಭಾರತೀಯ ವಿತರಕರು ಆರೋಪಿಸಿದ್ದಾರೆ. ಇದು ವಾಕ್ ಸ್ವಾತಂತ್ರ್ಯದ ವಿರೋಧದ ಚರ್ಚೆಗೆ ಗ್ರಾಸವಾಗಿದ್ದು, ಇಸ್ರೇಲನ್ನು ಮೆಚ್ಚಿಸುವ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಯಾರು ಈ ಹಿಂದ್ ರಜಬ್? ಆ ಕರಾಳ ದಿನ ನಡೆದಿದ್ದೇನು?
ಹಿಂದ್ ರಜಬ್, ಗಾಜಾದಲ್ಲಿ ವಾಸಿಸುತ್ತಿದ್ದ ಕೇವಲ 6 ವರ್ಷದ ಕಂದಮ್ಮ. ಜನವರಿ 29, 2024ರಂದು ಇಸ್ರೇಲ್ ಸೇನೆಯ ಸೂಚನೆಯ ಮೇರೆಗೆ ಗಾಜಾ ನಗರವನ್ನು ಖಾಲಿ ಮಾಡಲು ಆಕೆಯ ಕುಟುಂಬ ಮುಂದಾಗಿತ್ತು. ಹಿಂದ್, ತನ್ನ ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಅವರ ನಾಲ್ವರು ಮಕ್ಕಳೊಂದಿಗೆ ಕಪ್ಪು ಬಣ್ಣದ ಕಾರಿನಲ್ಲಿ ಸುರಕ್ಷಿರ ಸ್ಥಳದತ್ತ ಪ್ರಯಾಣಿಸುತ್ತಿದ್ದಳು. ಈ ವೇಳೆ ವಾಹನದ ಮೇಲೆ ಇಸ್ರೇಲಿ ಪಡೆಗಳು ಗುಂಡಿನ ಮಳೆಗರೆದವು. ಪರಿಣಾಮವಾಗಿ ಹಿಂದ್‌ಳ ಚಿಕ್ಕಪ್ಪ ಮತ್ತು ಮೂವರು ಮಕ್ಕಳು ಸ್ಥಳದಲ್ಲೇ ಮೃತಪಟ್ಟರು. ಕಾರಿನಲ್ಲಿ ಬದುಕುಳಿದದ್ದು ಕೇವಲ ಹಿಂದ್ ಮತ್ತು ಆಕೆಯ 15 ವರ್ಷದ ಸೋದರಿ ಲಯನ್ ಹಮದೆ ಮಾತ್ರ.
ಭಯಭೀತಳಾಗಿದ್ದ ಲಯನ್ ತಕ್ಷಣವೇ ‘ಪ್ಯಾಲೆಸ್ಟೀನ್ ರೆಡ್ ಕ್ರಿಸೆಂಟ್ ಸೊಸೈಟಿ’ (PRCS) ಸಹಾಯವಾಣಿಗೆ ಕರೆ ಮಾಡಿ, “ನಮ್ಮ ವಾಹನದ ಮೇಲೆ ಗುಂಡು ಹಾರಿಸಲಾಗುತ್ತಿದೆ, ಟ್ಯಾಂಕ್‌ಗಳು ನಮ್ಮತ್ತ ಬರುತ್ತಿವೆ” ಎಂದು ಅಂಗಲಾಚಿದಳು. ರೆಡ್ ಕ್ರಿಸೆಂಟ್ ಬಿಡುಗಡೆ ಮಾಡಿರುವ ಆಡಿಯೋದಲ್ಲಿ, ಗುಂಡಿನ ಭೀಕರ ಸದ್ದು ಮತ್ತು ಲಯನ್ಳ ಆಕ್ರಂದನ ಸ್ಪಷ್ಟವಾಗಿ ಕೇಳಿಸುತ್ತದೆ. ನಂತರ ಲಯನ್ ಕೂಡ ಗುಂಡೇಟಿಗೆ ಬಲಿಯಾಗುತ್ತಾಳೆ. ಸ್ವಲ್ಪ ಸಮಯದ ಬಳಿಕ ರೆಡ್ ಕ್ರಿಸೆಂಟ್ ಸಿಬ್ಬಂದಿ ಮರಳಿ ಸಂಪರ್ಕಿಸಿದಾಗ, ಫೋನ್ ಎತ್ತಿದ 6 ವರ್ಷದ ಹಿಂದ್, “ನಾನೊಬ್ಬಳೇ ಬದುಕಿದ್ದೇನೆ, ದಯವಿಟ್ಟು ನನ್ನನ್ನು ಕಾಪಾಡಿ” ಎಂದು ಬೇಡಿಕೊಳ್ಳುತ್ತಾಳೆ.
ರೆಡ್ ಕ್ರಿಸೆಂಟ್ ಕಾರ್ಯಕರ್ತರು ಗಂಟೆಗಳ ಕಾಲ ಹಿಂದ್‌ಳೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಲೇ, ಅವಳನ್ನು ಸಮಾಧಾನಪಡಿಸುವ ಯತ್ನ ಮಾಡಿದರು. ಜೊತೆಗೆ, ಇಸ್ರೇಲಿ ಪಡೆಗಳೊಂದಿಗೆ ಸಂಧಾನ ನಡೆಸಿ, ಮಗುವಿನ ರಕ್ಷಣೆಗಾಗಿ ಆಂಬುಲೆನ್ಸ್ ಒಂದನ್ನು ಕಳುಹಿಸಿದರು. ಆದರೆ, ಆಂಬುಲೆನ್ಸ್ ಘಟನಾ ಸ್ಥಳವನ್ನು ಸಮೀಪಿಸುತ್ತಿದ್ದಂತೆಯೇ, ಹಿಂದ್ ಮತ್ತು ಆಂಬುಲೆನ್ಸ್ ಸಿಬ್ಬಂದಿ ಇಬ್ಬರೊಂದಿಗಿನ ಸಂಪರ್ಕವೂ ಏಕಾಏಕಿ ಕಡಿತಗೊಂಡಿತು.
ಇದನ್ನು ಓದಿದ್ದೀರಾ? ಅಸ್ಸಾಂ ವಿಧಾನಸಭಾ ಚುನಾವಣೆ: ಪಕ್ಷಾಂತರಿಗಳಿಗೆ ಪಾಠ ಕಲಿಸುತ್ತಾರೆಯೇ ಮತದಾರರು?
ಬರೋಬ್ಬರಿ 12 ದಿನಗಳ ಹುಡುಕಾಟದ ನಂತರ, ಬಂದೂಕಿನ ಗುಂಡುಗಳಿಂದ ಛಿದ್ರವಾಗಿದ್ದ ಕಾರಿನಲ್ಲಿ ಹಿಂದ್ ಮತ್ತು ಆಕೆಯ 6 ಮಂದಿ ಕುಟುಂಬ ಸದಸ್ಯರ ಮೃತದೇಹಗಳು ಪತ್ತೆಯಾದವು. ಅದಕ್ಕೆ ಸನಿಹದಲ್ಲೇ, ಮಗುವನ್ನು ರಕ್ಷಿಸಲು ಹೋಗಿದ್ದ ಇಬ್ಬರು ಸಿಬ್ಬಂದಿಯ ಸುಟ್ಟು ಕರಕಲಾಗಿದ್ದ ಆಂಬುಲೆನ್ಸ್ ಕೂಡ ಪತ್ತೆಯಾಯಿತು.
ಚಿತ್ರದ ವಸ್ತು ಮತ್ತು ಜಾಗತಿಕ ಮನ್ನಣೆ
ಟುನೀಶಿಯಾದ ನಿರ್ದೇಶಕಿ ಕೌತರ್ ಬೆನ್ ಹಾನಿಯಾ ನಿರ್ದೇಶನದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಚಿತ್ರವು ಇದೇ ನೈಜ ಘಟನೆಯ ಸುತ್ತ ಹೆಣೆಯಲ್ಪಟ್ಟಿದೆ. ರೆಡ್ ಕ್ರಿಸೆಂಟ್ ಸಹಾಯವಾಣಿಗೆ ಬಂದಿದ್ದ ಹಿಂದ್ ಮತ್ತು ಲಯನ್ ಅವರ 70 ನಿಮಿಷಗಳ ನೈಜ ಆಡಿಯೋ ಧ್ವನಿಮುದ್ರಿಕೆಗಳನ್ನು ಬಳಸಿಕೊಂಡು ಈ ಡಾಕ್ಯುಡ್ರಾಮಾವನ್ನು ನಿರ್ಮಿಸಲಾಗಿದೆ. ರಜಬ್ ಕುಟುಂಬ ಮತ್ತು ಸಿಬ್ಬಂದಿಯ ಹತ್ಯೆಗೆ ವಿಶ್ವಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಚಿತ್ರವು ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದಿದ್ದಲ್ಲದೆ, ಆಸ್ಕರ್ ಪ್ರಶಸ್ತಿಯ ‘ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ’ ವಿಭಾಗಕ್ಕೂ ನಾಮನಿರ್ದೇಶನಗೊಂಡಿತ್ತು.
ಅಮೆರಿಕ, ಬ್ರಿಟನ್ ಸೇರಿದಂತೆ ಇಸ್ರೇಲ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಹಲವು ರಾಷ್ಟ್ರಗಳಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಆದರೆ, ಭಾರತದಲ್ಲಿ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ತಡೆ ನೀಡಿದ್ದು, ವಿತರಕ ಮನೋಜ್ ನಂದವಾನಾ ಅವರ ಪ್ರಕಾರ “ಇಸ್ರೇಲ್ ಜೊತೆಗಿನ ಸಂಬಂಧ ಹಾಳಾಗಬಹುದು” ಎಂಬ ಮೌಖಿಕ ಕಾರಣವನ್ನು ನೀಡಲಾಗಿದೆ. ಒಂದು ನೈಜ ಘಟನೆಯನ್ನು ಹೇಳುವ, ಜಾಗತಿಕ ಮನ್ನಣೆ ಪಡೆದ ಚಿತ್ರವನ್ನು ಕೇಂದ್ರ ಸರ್ಕಾರ ತಡೆಹಿಡಿದಿರುವ ಈ ನಡೆಯು ಪ್ರಜಾಪ್ರಭುತ್ವದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದು, ದೇಶಾದ್ಯಂತ ಕಳವಳ ವ್ಯಕ್ತವಾಗಿದೆ.




