ಬಹುಶಃ ಜಾತಿಯ ಬಗ್ಗೆ ಯಾವುದೇ ಮುಖವಾಡವಿಲ್ಲದೆ, ಎಲ್ಲರಿಗೂ ಇಷ್ಟವಾಗುವ ಹಿತವಾದ ಭಾಷೆಯನ್ನು ಬಳಸದೇ ನೇರವಾಗಿ ಮಾತನಾಡುವ ಅತ್ಯಂತ ಅಪರೂಪದ ಕನ್ನಡ ಚಿತ್ರಗಳಲ್ಲಿ ʼಹೆಬ್ಬುಲಿ ಕಟ್ʼ ಒಂದು. ಚಿತ್ರವು ಎಲ್ಲೂ ಬೋಧನೆಗೆ ಇಳಿಯುವುದಿಲ್ಲ. ಅದೇ ಈ ಚಿತ್ರದ ಹೆಗ್ಗಳಿಕೆ.
‘ಹೆಬ್ಬುಲಿ ಕಟ್’ ಕನ್ನಡ ಸಿನೆಮಾವನ್ನು ನಿನ್ನೆ ಆಕಸ್ಮಿಕವಾಗಿ ನೋಡಿದೆ. ಬಿಡುಗಡೆಯಾದ ಸಮಯದಲ್ಲಿ ಅದಕ್ಕೆ ಸಿಕ್ಕ ವಿಮರ್ಶಾಲೋಕದ ಹೊಗಳಿಕೆಯ ಮಾತುಗಳನ್ನು ಗಮನಿಸಿ ಥೀಯೇಟರ್‌ನಲ್ಲಿ ನೋಡುವ ಮೊದಲೇ ಹೊರಟು ಹೋಗಿತ್ತು. ಗೆಳೆಯ ಎನ್.ಎಸ್. ಶಂಕರ್ ಈ ಚಿತ್ರವನ್ನು ಮೆಚ್ಚಿ fbಯಲ್ಲಿ ಬರೆದ ಬರಹ ಆ ಚಿತ್ರವನ್ನು ನೋಡಲೇಬೇಕೆಂಬ ಹಂಬಲ ಉಳಿಸಿತ್ತು. ಸನ್ ನೆಟ್ OTT platformನಲ್ಲಿ ನೋಡಿದ ನಂತರ ಒಂದು ಅಪ್ಪಟ ಚಿತ್ರವನ್ನು ನೋಡಿದ ಅನುಭವವಾಯಿತು. ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಹಿನ್ನೆಲೆಯಲ್ಲಿ ದಲಿತ ಬಾಲಕನ ಕನಸು ಮತ್ತು ಬದುಕುಗಳ ಲೋಕವು ಛಿದ್ರವಾಗುವುದನ್ನು ಉದ್ವೇಗಕ್ಕೆ ಎಡೆಯಿಲ್ಲದೇ ನಿರೂಪಿಸಿರುವ ಮತ್ತು preachy ಆಗದಂತೆ ಮಂಡಿಸಿರುವ ವಿಧಾನ ನೋಡಿದರೆ ಇದು ನಿರ್ದೇಶಕ ಭೀಮರಾವ್ ಅವರ ಮೊದಲ ಪ್ರಯತ್ನ ಎಂದು ನಂಬಲು ಕಷ್ಟವಾಗುತ್ತದೆ.
ಉತ್ತರ ಕರ್ನಾಟಕದ ದೊಡ್ಡ ಹಳ್ಳಿಯೊಂದರಲ್ಲಿ ಹಲವು ತಿಂಗಳುಗಳ ಅವಧಿಯಲ್ಲಿ ನಡೆಯುವ ಕಥೆಯನ್ನು ಗ್ರಾಮೀಣ ಬದುಕಿನ ಸೊಬಗು ಮತ್ತು ಕ್ರೌರ್ಯದ ಸ್ವರೂಪವನ್ನು ತಣ್ಣಗೆ ಹೇಳುವ ಹೆಬ್ಬುಲಿ ಕಟ್ ಚಿತ್ರವು ಕನ್ನಡದಲ್ಲಿ ಇತ್ತೀಚೆಗೆ ಬಂದ ಚಿತ್ರಗಳಲ್ಲೇ ವಿಶಿಷ್ಟವಾದದ್ದು. ಕಪ್ಪೆಯೊಂದು ಮೊಟ್ಟೆಗಳನ್ನು ಉರುಚುವ ಹಾಗೆ ವರ್ಷಕ್ಕೆ ನಾಲ್ಕುನೂರಕ್ಕೂ ಅಧಿಕ ಚಿತ್ರಗಳು ಕನ್ನಡದಲ್ಲಿ ತಯಾರಾದರೂ ಅವುಗಳ ಕಳಪೆ ವಸ್ತು, ಗುಣಮಟ್ಟವು ಅವಹೇಳನಕ್ಕೆ ಗುರಿಯಾಗುತ್ತಿರುವ ಕಾಲದಲ್ಲಿ ಹೆಬ್ಬುಲಿ ಕಟ್, ಹದಿನೇಳೆಂಟು, ವಲವಾರದಂಥ ಚಿತ್ರಗಳೇ ಚಿತ್ರರಂಗ ತಲೆಯೆತ್ತಿ ನಡೆಯಲು ಊರುಗೋಲಾಗತ್ತಿವೆ.
ಸರಳವೂ ನೇರವೂ ಆದ ಚಿತ್ರದ ಕತೆಯು ‘ಹೆಬ್ಬುಲಿ’ ಚಿತ್ರದಲ್ಲಿ ನಾಯಕ ನಟ ಸುದೀಪ್ ಅವರ ಹೇರ್‌ಕಟ್‌ನಂತೆ ತಾನೂ ವಿಭಿನ್ನವಾಗಿ ಕೇಶವಿನ್ಯಾಸ ಮಾಡಿಸಿಕೊಳ್ಳಬೇಕೆಂಬ ಒಬ್ಬ ಹುಡುಗನ ಆಸೆ ಮತ್ತು ಅದನ್ನು ಪಡೆಯಲು ಅವನು ಸಾಗುವ ಹಾದಿಯಲ್ಲಿ ಸಂಭವಿಸುವ ಘಟನೆಗಳಿಗೆ ಸಂಬಂಧಿಸಿದೆ. ಆದರೆ ಈ ಸರಳ ಕಥೆಯ ಆಳದಲ್ಲಿ ಒಬ್ಬ ವ್ಯಕ್ತಿ ತನ್ನ ಗೌರವದ ಹುಡುಕಾಟದಲ್ಲಿರುವಾಗಲೂ, ಸಮಾಜ ಮತ್ತು ಅದರ ವರ್ಗ ಹಾಗೂ ಜಾತಿ ವ್ಯಾಮೋಹವು ಅವನ ಉತ್ಸಾಹವನ್ನು ಹಂತ ಹಂತವಾಗಿ ಚಿವುಟಿ ಹಾಕುವ ದುರಂತವನ್ನು, ಅಲ್ಲಿನ ತಣ್ಣನೆಯ ಕ್ರೌರ್ಯವನ್ನು ಎಲ್ಲ ವಿವರಗಳೊಡನೆ ಅನಾವರಣಗೊಳಿಸುತ್ತದೆ. ನಿರ್ದೇಶಕರು ಹೆಣೆದಿರುವ ಬಿಗಿಯಾದ ಚಿತ್ರಬಂಧ, ಸಾಮಾಜಿಕ ವಿವರಗಳು, ಕಲಾವಿದರ ಅಮೋಘ ಎನ್ನಬಹುದಾದ ಅಭಿನಯ, ಈ ಚಿತ್ರವನ್ನು ಅನುಭವವಾಗಿ ಪ್ರೇಕ್ಷಕರಿಗೆ ದಾಟಿಸುವಷ್ಟು ಶಕ್ತವಾಗಿ ಮೂಡಿ ಬಂದಿವೆ.
ಇದನ್ನು ಓದಿದ್ದೀರಾ?: ಸಾಮಾನ್ಯ ಮನುಷ್ಯನ ಲೋಕವನ್ನು ತೆರೆಗೆ ತಂದ ಕೆ. ಭಾಗ್ಯರಾಜ್
ಬಹುಶಃ ಜಾತಿಯ ಬಗ್ಗೆ ಯಾವುದೇ ಮುಖವಾಡವಿಲ್ಲದೆ, ಎಲ್ಲರಿಗೂ ಇಷ್ಟವಾಗುವ ಹಿತವಾದ ಭಾಷೆಯನ್ನು ಬಳಸದೇ ನೇರವಾಗಿ ಮಾತನಾಡುವ ಅತ್ಯಂತ ಅಪರೂಪದ ಕನ್ನಡ ಚಿತ್ರಗಳಲ್ಲಿ ಇದೂ ಒಂದು. ಆದರೆ, ಚಿತ್ರವು ಎಲ್ಲೂ ಬೋಧನೆ ಮಾಡುವಂತೆ ತೋರದೆ ಇರುವುದು ಇದರ ಹೆಗ್ಗಳಿಕೆ.
ಬಾಲಕ ವಿನಯಾ ಈ ಚಿತ್ರದ ಹೃದಯ ಮತ್ತು ಆತ್ಮ. ತನ್ನ ಭರವಸೆ, ಸಂತೋಷ, ಹುಸಿಮುನಿಸು, ಸಂಕೋಚ ಮತ್ತು ನಾಚಿಕೆಯ ನಗುಗಳ ಮೂಲಕ ಎಲ್ಲರ ಬಾಲ್ಯವನ್ನು ನೆನಪಿಗೆ ತರುತ್ತಾನೆ. ಪಾದರಕ್ಷೆಗಳನ್ನು ದುರಸ್ತಿ ಮಾಡುವ ಕಾಯಕದಲ್ಲಿರುವ ತಂದೆ ಮಲ್ಲಣ್ಣ ಮತ್ತು ತಾಯಿ ಕನಕಮ್ಮ ಆತನ ಪೋಷಕರು. ತನ್ನ ತರಗತಿಯಲ್ಲೇ ಓದುವ ದೊಡ್ಡ ಗೌಡರ ಮನೆಯ ರೇಖಾ ಬಗ್ಗೆ ಅವನಿಗೆ ಬಾಲ್ಯದಲ್ಲಿ ಎಲ್ಲರಿಗೂ ಸ್ಫುರಿಸುವ ಹೇಳಲಾಗದ ನವಿರು ಭಾವನೆಯೊಂದು ಕಾಡುತ್ತದೆ. ಅವಳ ಒಂದು ನೋಟಕ್ಕಾಗಿ ಹಂಬಲಿಸುತ್ತಾನೆ. ಮನಗೆಲ್ಲುವ ದಾರಿಗಳನ್ನು ಹುಡುಕುತ್ತಾನೆ. ಆದರೆ ಅವನ ಹಿನ್ನೆಲೆ ದಾಟಲಾಗದ ಬೇಲಿಯಾಗಿದೆ.
‘ನಾವು ಯಾರು ಎನ್ನುವುದಕ್ಕಿಂತ ನಾವು ಹೇಗಿದ್ದೇವೆ ಎಂದು ತೋರಿಸಿಕೊಂಡರೆ ಜನರ ಗಮನ ಸೆಳೆಯಲು ತಾವು ಯಾರು ಎನ್ನುವ ಹಿನ್ನೆಲೆಗಿಂತ ತಾವು ಹೇಗೆ ಕಾಣಿಸಿಕೊಳ್ಳುತ್ತೇವೆ ಎಂಬುದೇ ಮುಖ್ಯ’ ಎಂದ ಹಿರಿಯ ಗೆಳೆಯ ರಫೀಕನ ಮಾತಿನಿಂದ ಅವನಿಗೆ ಭರವಸೆ ಮೂಡುತ್ತದೆ. ವಿನಯಾ ತನ್ನ ಉದ್ದ ಕೂದಲಿಗೆ ಹೆಬ್ಬುಲಿ ಕಟ್ ವಿನ್ಯಾಸ ನೀಡುವ ಹಂಬಲವು ತಿಳಿನೀರಿನಂತೆ ನಿಶ್ಚಲವಾಗಿ ಕಾಣುತ್ತಿದ್ದ ಹಳ್ಳಿಯ ಕೊಳದ ಬಗ್ಗಡವನ್ನು ತೆರೆದು ತೋರಿಸಲಾರಂಭಿಸುತ್ತದೆ.
ಇದನ್ನು ಓದಿದ್ದೀರಾ?: ಮಹಿಳಾ ಲೋಕದ ಅನನ್ಯ ಕಥನಕಾರ ಗಿರೀಶ್ ಕಾಸರವಳ್ಳಿ
ವಿನಯಾ ತಾನು ಯಾರ ಮಗ ಎಂದು ಹೇಳಿಕೊಳ್ಳುವಾಗ ಕೇವಲ ತಂದೆಯ ಹೆಸರನ್ನಷ್ಟೇ ಅಲ್ಲ, ತಾನು ಯಾವ ಮಲ್ಲಣ್ಣನ ಮಗ ಎಂಬುದನ್ನು ಹೇಳಬೇಕಾದ ಅವಮಾನವನ್ನು ಎದುರಿಸುತ್ತಾನೆ. ಕೇಳಲಾಗುವ ಪ್ರತಿಯೊಂದು ಪ್ರಶ್ನೆಯೂ ಅವನಿಗೆ ಅವನ ಸ್ಥಾನ ಮತ್ತು ಜಾತಿಯನ್ನು ನೆನಪಿಸುವ ಪ್ರಯತ್ನವಾಗಿರುತ್ತದೆ. ಪ್ರತಿಯೊಂದು ಪ್ರಶ್ನೆಯೂ ಅವನ ಆತ್ಮವಿಶ್ವಾಸವನ್ನು ಅಳಿಸಿಹಾಕಲು ಯತ್ನಿಸುತ್ತದೆ. ಜಾತಿಯ ಲೆಕ್ಕಾಚಾರಗಳಲ್ಲಿ ತನಗಿರುವ ಬದುಕುವ ಅವಕಾಶದ ಮಿತಿ ಮತ್ತು ನಿರಾಕರಿಸಲಾದ ಅವಕಾಶಗಳು ಅವನಿಗೆ ಅರ್ಥವಾಗುವುದಿಲ್ಲ. ದಮನಿತ ವರ್ಗದ ಪ್ರತಿಯೊಬ್ಬ ವ್ಯಕ್ತಿ ತನ್ನ ಬಾಲ್ಯವನ್ನು ದಾಟಿ ದೊಡ್ಡವರ ಹಂತಕ್ಕೆ ತಲುಪುವ ಹಾದಿಯಲ್ಲಿ ಅನುಭವಿಸಲೇಬೇಕಾದ ಎಲ್ಲ ನೋವು ಸಂಕಟಗಳು ನೋಡಗರನ್ನು ಇರಿಯುತ್ತವೆ. ತಮ್ಮದೇ ಧರ್ಮದ ಜನರ ದೌರ್ಜನ್ಯಕ್ಕೆ ಒಳಗಾದ ವಿನಯ ನಡೆದು ಹೋಗುವ ರಸ್ತೆಯಲ್ಲಿ ‘…ನಾವೆಲ್ಲ ಒಂದು’ ಗೋಡೆ ಬರಹ ವರ್ತಮಾನದ ವಿರೋಧಾಭಾಸಗಳಿಗೆ ಕನ್ನಡಿ ಹಿಡಿಯುತ್ತದೆ.

ನಿರ್ದೇಶಕ ಭೀಮರಾವ್ ಅವರು ಸೂಕ್ಷ್ಮವಾದ ವಿವರಗಳ ಮೂಲಕ ಭಿನ್ನವಾದ ಚಿತ್ರವನ್ನು ರೂಪಿಸಿದ್ದಾರೆ. ಹಲವು ದೃಶ್ಯಗಳಲ್ಲಿ ಅವರ ಕೈಚಳಕ ಎದ್ದುಕಾಣುತ್ತದೆ. ಸಮಕಾಲೀನ ಟ್ರೆಂಡ್‍ಆದ ಗಮನ ಸೆಳೆಯುವ ಸೊಗಸಾದ ಕೇಶವಿನ್ಯಾಸವನ್ನು (ಹೆಬ್ಬುಲಿ ಕಟ್) ಸ್ವಾಭಿಮಾನ ಮತ್ತು ಗೌರವದ ಸಂಕೇತವಾಗಿ ಬಳಸಿಕೊಂಡಿದ್ದಾರೆ. ಗರಿಗಟ್ಟುತ್ತಿರುವ ಕೋಮುವಾದವನ್ನು ಅಬ್ಬರವಿಲ್ಲದೇ ಅಡಕಗೊಳಿಸಿದ್ದಾರೆ. ದೊಡ್ಡವರ ಪ್ರಪಂಚದ ವಿಕಾರಗಳಿಂದ ಮುಕ್ತವಾದ ಬಾಲಕ/ಬಾಲಕಿಯರ ಮುಗ್ಧ ಪ್ರಪಂಚದ ಸೊಬಗನ್ನು ಚಲನೆ, ಕೇಕೆ, ಹುಸಿ ಕಿತ್ತಾಟಗಳಲ್ಲಿ ಹೆಣೆದಿದ್ದಾರೆ. ಜಾತಿ ದೌರ್ಜನ್ಯ ಎಸಗುವವರು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಕಟ್ಟುಪಾಡುಗಳನ್ನು ಪಾಲಿಸುವುದರ ಜೊತೆಗೆ ಇತರರನ್ನು ಹೆದರಿಸಲು ತಮ್ಮ ಜಾತಿಯ ಮೊಹರನ್ನು ಬಳಸುವ ಪ್ರತಿನಿಧಿಯಾಗಿ ಬಸವನಗೌಡನ ವರ್ತನೆಗಳೇ ಬಿಂಬಿಸುತ್ತವೆ. ತಮ್ಮ ಮೇಲೆ ಹಲವು ಬಗೆಯ ದೌರ್ಜನ್ಯ ಎಸಗುವವರ (ಉದಾ: ತಾನು ಮೆಟ್ಟಿದ ಹೊಲಸನ್ನು ಮಲ್ಲಣ್ಣ ಹಾಸಿದ ಗೋಣಿಗೆ ಜಬರ್‍ದಸ್ತಿನಿಂದ ಬಸವನಗೌಡ ಒರೆಸುವುದು) ವಿರುದ್ಧ ದಮನಿತರ ದನಿ ಎಲ್ಲೂ ಕೇಳಿಸದು, ನಿಜ. ಆದರೆ ಅವರ ವರ್ತನೆಯಲ್ಲಿ ಹೀಗೇಕೆ? ಎಂಬ ಪ್ರಶ್ನೆ ಎದ್ದು ಕಾಣುತ್ತದೆ. ವಿನಯಾ , ಮಲ್ಲಣ್ಣ, ರಫೀಕ್, ಚನ್ನ ಅನುಭವಿಸುವ ನೋವು ನೋಡುಗನಲ್ಲಿ ಆಕ್ರೋಶ ಹುಟ್ಟುಹಾಕುತ್ತವೆ.
ನಿರ್ದೇಶಕ ಭೀಮರಾವ್ ತಮ್ಮ ಪಾತ್ರಗಳನ್ನು ಮತ್ತು ವಿವರಗಳನ್ನು ಆಪ್ತವಾಗಿ ಕಟ್ಟಿದ್ದಾರೆ. ಅವರು ಪರದೆಯ ಮೇಲೆ ಕಾಣಿಸಿಕೊಂಡ ಕೂಡಲೇ ಅವರ ಚರಿತ್ರೆ, ಹಿನ್ನೆಲೆ, ಬೆವರು, ಅನುಮಾನ, ಸಂಕೋಚ ಎಲ್ಲವೂ ಅರ್ಥವಾಗುತ್ತದೆ. ಅನಂತ್ ಶಾಂಡಿಲ್ಯ ಮತ್ತು ಭೀಮರಾವ್ ಅವರ ಚಿತ್ರಕಥೆ ಇದನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುತ್ತದೆ, ಮತ್ತು ಅಭಿ ಸಿಂಧನೂರು ಅವರೊಂದಿಗೆ ಸೇರಿ ಬರೆದ ಸಂಭಾಷಣೆಗಳು ಚಿತ್ರದ ಆಶಯವನ್ನು ಗಟ್ಟಿಗೊಳಿಸುತ್ತವೆ. ಜೊತೆಗೆ ಕಲಾವಿದರ ಗಟ್ಟಿ ಅಭಿನಯ ಚಿತ್ರವನ್ನು ಮತ್ತೊಂದು ಮಜಲಿಗೆ ಒಯ್ಯುತ್ತದೆ. ವಿನಯಾ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ಮೌನೇಶ್ ನಟರಂಗ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾನೆ. ಮಗನ ಬಗ್ಗೆ ಸದಾ ಭಯಪಡುವ ತಂದೆಯಾಗಿ ಮಹದೇವ ಹಡಪದ್ ಅವರ ನಟನೆ ಅಚ್ಚುಕಟ್ಟಾಗಿದೆ. ಕನಕಮ್ಮನ ಪಾತ್ರವನ್ನು ಜೀವಿಸಿರುವ ‘ಸಿನಿಮಾ ಬಂಡಿ’ ಖ್ಯಾತಿಯ ನಟಿ ಉಮಾ ವೈ.ಜಿ ನಿಜಕ್ಕೂ ಒಂದು ಅಪರೂಪದ ಪ್ರತಿಭೆ. ನಿರ್ದೇಶಕರು ಉತ್ತಮ ಪಾತ್ರಗಳಲ್ಲಿ ಅವರನ್ನು ದುಡಿಸಿಕೊಂಡರೆ ಕನ್ನಡ ಚಿತ್ರರಂಗಕ್ಕೆ ಆಕೆ ಒಂದು ಆಸ್ತಿಯಾಗಬಹುದು.
ಇದನ್ನು ಓದಿದ್ದೀರಾ?: ಮಣ್ಣಿನ ವಾಸನೆಯನ್ನು ಬೆಳ್ಳಿತೆರೆಯ ಮೇಲೆ ಹರಡಿದ ನಿರ್ದೇಶಕ ಭಾರತಿರಾಜ
ಹಿಂದೆ ಕೇವಲ ಜಾತಿ ಮಾತ್ರ ಆಳುತ್ತಿದ್ದ ಜಾಗದಲ್ಲಿ ಧರ್ಮ ಮತ್ತು ವಿಭಜನೆ ಹೇಗೆ ನಿಧಾನವಾಗಿ ನುಸುಳುತ್ತದೆ ಎಂಬುದರ ಮೇಲೂ ಭೀಮರಾವ್ ಬೆಳಕು ಚೆಲ್ಲಿದ್ದಾರೆ. ವದಂತಿಯನ್ನು ಹಬ್ಬಿಸಲು ವ್ಯಾಟ್ಸ್ಆಪ್ ದುರ್ಬಳಕೆಯ ಕರಾಳಮುಖವನ್ನೂ ಅನಾವರಣ ಮಾಡಿದ್ದಾರೆ. ಜಾತಿಯ ಕೊಬ್ಬು, ಧರ್ಮದ ಹುಚ್ಚು, ಪೂರ್ವಗ್ರಹಗಳು ಮನುಷ್ಯರನ್ನು ರಾಕ್ಷಸರನ್ನಾಗಿಸುವ ವಿಧಾನಗಳ ಮೇಲೂ ಚಿತ್ರ ಬೆಳಕು ಚೆಲ್ಲುತ್ತದೆ. ಆದರೆ ಇವುಗಳನ್ನು ಎಲ್ಲಿಯೂ ಅಬ್ಬರದ ಘೋಷಣೆಯಾಗಿ ಮಾಡದೆ ತಣ್ಣಗೆ, ಸಹಜವಾಗಿಯೇ ನಿರೂಪಿಸಿರುವುದರಲ್ಲಿ ನಿರ್ದೇಶಕರು ಜಾಣ್ಮೆ ಮೆರೆದಿದ್ದಾರೆ.
ಇದಕ್ಕಾಗಿಯೇ ‘ಹೆಬ್ಬುಲಿ ಕಟ್’ ಅತ್ಯಂತ ಪ್ರಮುಖವಾದ ಕನ್ನಡ ಚಿತ್ರವಾಗಿದೆ. ಪ್ರೇಕ್ಷಕರಿಗೆ ಸುಲಭವಾಗಿ ತಲುಪುತ್ತದೆ. ಪ್ರೇಕ್ಷಕನ ಮನಸ್ಸಿನ ಮೇಲೆ ಏನನ್ನೂ ಹೇರದೆ ಇಡೀ ವ್ಯವಸ್ಥೆಯ ಅನ್ಯಾಯವನ್ನು ನಮಗೆ ಮನವರಿಕೆ ಮಾಡಿಕೊಡುತ್ತದೆ. ವಿನಯಾ, ಮಲ್ಲಣ್ಣ, ರಫೀಕ್, ಚನ್ನ ಮತ್ತು ಕನಕಮ್ಮ ಅವರ ಕಥೆಗಳಲ್ಲಿ ನೋಡುಗ ಲೀನವಾಗುವಂತೆ ಚಿತ್ರ ಸೆಳೆಯುತ್ತದೆ.

ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.



