ತಮ್ಮ ಸಾವಿನ ಬಗ್ಗೆ ಎಐ ಬಳಸಿ ಚಿತ್ರ ಸೃಷ್ಟಿಸಿ ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳ ವಿರುದ್ಧ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
‘Public Friend News’ ಎಂಬ ಫೇಸ್‌ಬುಕ್ ಎಂಬ ಫೇಸ್‌ಬುಕ್ ಖಾತೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಚಿತ್ರ ಸೃಷ್ಟಿಸಿ ದೊಡ್ಡಣ್ಣ ಮೃತಪಟ್ಟಿದ್ದಾರೆ ಎಂಬ ಶ್ರದ್ಧಾಂಜಲಿ ಪೋಸ್ಟ್ ಅನ್ನು ಹರಿಬಿಡಲಾಗಿತ್ತು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನು ಓದಿದ್ದೀರಾ? ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ
ಈ ಸುಳ್ಳು ಸುದ್ದಿ ಹರಡುತ್ತಿದ್ದಂತೆ ನಟ ದೊಡ್ಡಣ್ಣ ಅವರು ಸ್ವತಃ ವಿಡಿಯೋ ಮೂಲಕ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಿದ್ದರು. “ನಾನು ಆರೋಗ್ಯವಾಗಿದ್ದೇನೆ. ಮನೆಯಲ್ಲೇ ಇದ್ದೇನೆ. ವದಂತಿಗಳನ್ನು ನಂಬಬೇಡಿ” ಎಂದು ತಿಳಿಸಿದ್ದರು.
ಇದೀಗ ಬದುಕಿರುವಾಗಲೇ ಸಾವಿನ ಸುದ್ದಿ ಹಬ್ಬಿಸಿ ವಿಕೃತ ಆನಂದ ಪಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೊಡ್ಡಣ್ಣ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸುಳ್ಳು ಸುದ್ದಿಯಿಂದಾಗಿ ದೊಡ್ಡಣ್ಣ ಹಾಗೂ ಅವರ ಕುಟುಂಬದವರಿಗೆ ತೀವ್ರ ಮಾನಸಿಕ ಆಘಾತ, ನೋವುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಸೈಬರ್ ಕ್ರೈಂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸುಳ್ಳು ಸುದ್ದಿ ಪೋಸ್ಟ್ ಮಾಡಿದ ಫೇಸ್‌ಬುಕ್ ಖಾತೆಯ ಐಪಿ ವಿಳಾಸ ಹಾಗೂ ಆರೋಪಿಗಳ ಮೂಲವನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಳಿಸಿದ್ದಾರೆ.




