ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಪ್ರಸಿದ್ಧ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ದಾರುಣ ಘಟನೆಯೊಂದು ನಡೆದಿದೆ. ತಂದೆಯೊಬ್ಬ ತನ್ನ ಇಬ್ಬರು ಚಿಕ್ಕ ಹೆಣ್ಣುಮಕ್ಕಳನ್ನು ಭೀಕರವಾಗಿ ಕೊಲೆ ಮಾಡಿ, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟ್ಯಾಕ್ಸಿ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 35 ವರ್ಷದ ಎಸ್.ಜಿ. ಇಮ್ರಾನ್ ಎಂಬಾತ ತನ್ನ 10 ಮತ್ತು 5 ವರ್ಷದ ಅಪ್ರಾಪ್ತ ಮಕ್ಕಳೊಂದಿಗೆ ಹೋಟೆಲ್‌ಗೆ ಬಂದಿದ್ದಾನೆ. ಹೋಟೆಲ್ ಕೊಠಡಿಯಲ್ಲಿ ಇಬ್ಬರು ಮಕ್ಕಳನ್ನೂ ಕೊಂದಿದ್ದಾನೆ. ಅಲ್ಲದೆ, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹೋಟೆಲ್ ಸಿಬ್ಬಂದಿ ಕೊಠಡಿಗೆ ತೆರಳಿದಾಗ, ಬಾಲಕಿಯರು ಶವವಾಗಿ ಪತ್ತೆಯಾಗಿದ್ದಾರೆ. ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಮ್ರಾನ್‌ನನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಸ್ತುತ ಆತನ ಸ್ಥಿತಿ ಚೇತರಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್ ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಮ್ರಾನ್ ಭಾನುವಾರ ಸಂಜೆ 7 ಗಂಟೆಗೆ ಮಕ್ಕಳೊಂದಿಗೆ ಹೋಟೆಲ್‌ಗೆ ಚೆಕ್-ಇನ್ ಆಗಿದ್ದು, ಸೋಮವಾರ ಮಧ್ಯಾಹ್ನ 12 ಗಂಟೆಗೆ ಕೊಠಡಿ ಖಾಲಿ ಮಾಡಬೇಕಿತ್ತು. ಆದರೆ, ಮಧ್ಯಾಹ್ನ 4.30 ಆದರೂ ಕೊಠಡಿಯಿಂದ ಯಾರೂ ಹೊರಬಾರದಿದ್ದಾಗ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಕೊಠಡಿ ಬಾಗಿಲು ತೆರೆದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ.
ಸ್ಥಳದಲ್ಲಿ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಇಮ್ರಾನ್ ತನ್ನ ಪತ್ನಿಯ ನಡತೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾನೆ. ಪತ್ನಿಯ ನಂಬಿಕೆದ್ರೋಹದಿಂದ ಬೇಸತ್ತು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.



