ರಸ್ತೆ ಬದಿಯ ಮರಕ್ಕೆ ಬುಲೆಟ್ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಹೆರ್ಗ ಗ್ರಾಮದ ಕೆಳಪರ್ಕಳ ಇಳಿಜಾರಿನಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿ ಆ.11ರಂದು ನಸುಕಿನ ಜಾವ ಸುಮಾರು 1.25ಕ್ಕೆ ನಡೆದಿದೆ.
ಮೃತರನ್ನು ಆತ್ರಾಡಿ ನಿವಾಸಿ ಸನತ್ (21) ಎಂದು ಗುರುತಿಸಲಾಗಿದೆ. ಸನತ್ ಅವರು ಗೆಳೆಯರೊಂದಿಗೆ ಮಣಿಪಾಲದಲ್ಲಿ ರಾತ್ರಿ ಊಟ ಮುಗಿಸಿ, ಸ್ನೇಹಿತ ಆಶಿಶ್ ಅವರ ಬುಲೆಟ್ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ.
ಮಣಿಪಾಲ ಕಡೆಯಿಂದ ಪರ್ಕಳದತ್ತ ತೆರಳುತ್ತಿದ್ದ ವೇಳೆ ಕೆಳಪರ್ಕಳ ಇಳಿಜಾರಿನಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸಮೇತ ಸನತ್ ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಸನತ್ ಅವರ ಸ್ನೇಹಿತರು ಅವರು ತಮ್ಮೊಂದಿಗೆ ಬಾರದಿರುವುದನ್ನು ಗಮನಿಸಿ ಈಶ್ವರನಗರದಿಂದ ಪರ್ಕಳದವರೆಗೆ ಹುಡುಕಾಟ ನಡೆಸಿದಾಗ ಅಪಘಾತ ಸಂಭವಿಸಿರುವುದು ತಿಳಿದುಬಂದಿದೆ ಎನ್ನಲಾಗಿದೆ.
ಸನತ್ ಅವರ ತಂದೆ ಹಾಗೂ ತಾಯಿ ಇಬ್ಬರೂ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸನತ್ ಸ್ನೇಹಿತರೊಂದಿಗೆ ಪ್ರವಾಸ ತೆರಳಿದ್ದರು ಎನ್ನಲಾಗಿದೆ.
ಅಪಘಾತಕ್ಕೆ ಕಡಿವಾಣ ಯಾವಾಗ?
ಕೆಳಪರ್ಕಳದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿಯ ತಿರುವು ಹಾಗೂ ಇಳಿಜಾರಿನ ಪ್ರದೇಶದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದು, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ಕಿರಿದಾಗಿರುವುದು, ತಿರುವು ಮತ್ತು ಇಳಿಜಾರು ಅಪಾಯಕಾರಿಯಾಗಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬ ಸ್ಥಳೀಯರ ಆರೋಪವಿದೆ.
ಈ ಭಾಗದ ರಸ್ತೆಯನ್ನು ಅಗಲೀಕರಣಗೊಳಿಸುವಂತೆ ಹಲವು ಬಾರಿ ಒತ್ತಾಯಿಸಲಾಗಿದ್ದರೂ, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗಿದೆ. ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ಕಾರಣ ನೀಡಲಾಗುತ್ತಿದೆ. ಈ ಹಿಂದೆ ಪರಿಹಾರಕ್ಕಾಗಿ ₹8 ಕೋಟಿ ಹಣವಿದೆ ಎಂದು ಸಂಸದರು ಹೇಳಿದ್ದರೂ, ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಈ ಭಾಗದ ರಸ್ತೆ ಸಮಸ್ಯೆ ಕುರಿತು ವರದಿಗಳು ಪ್ರಕಟವಾದ ಬಳಿಕವೂ ಹೊಂಡಗಳನ್ನು ಮುಚ್ಚುವಂತಹ ಕನಿಷ್ಠ ಕ್ರಮಗಳೂ ಸಮರ್ಪಕವಾಗಿ ನಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ.
“ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?” ಎಂಬ ಪ್ರಶ್ನೆ ಇದೀಗ ಸ್ಥಳೀಯರನ್ನು ಕಾಡುತ್ತಿದೆ. ಪದೇಪದೇ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ರಸ್ತೆ ಸುರಕ್ಷತೆಗೆ ತುರ್ತು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






