ಹತ್ತಾರು ನೋವು ಹೊತ್ತು ಬಂದ ಜನರಿಗೆ ಸಿಎಂ ಸ್ಪಂದನೆ

Date:

“ನನ್ನದು ಚಿಕ್ಕನಾಯಕನಹಳ್ಳಿ. ನನ್ನ ಅಪ್ಪ ನಿವೃತ್ತ ಅಧಿಕಾರಿ. ಆದ್ರೆ ಅವರನ್ನು ಹೊನ್ನೇಬಾಗಿ ಗ್ರಾಮದಲ್ಲಿ ಕೂಡಿಹಾಕಿ ಚಿತ್ರ ಹಿಂಸೆ ಕೊಡಲಾಗುತ್ತಿದೆ. ಯಾವುದೇ ಪೊಲೀಸ್ ಅಧಿಕಾರಿಯ ಬಳಿ ಹೋದರೂ ನನಗೆ ಪರಿಹಾರ ಸಿಗುತ್ತಿಲ್ಲ. ನನ್ನ ಅಪ್ಪನನ್ನು ಭೇಟಿಯಾಗಲು ಆಗ್ತಾ ಇಲ್ಲ ಸಾರ್‌. ನನ್ನ ಅಪ್ಪ ಅಂದ್ರೆ ನನಗೆ ಜೀವ. ಅವರನ್ನು ಬಿಡಿಸಿಕೊಡಿ”- ಹೀಗೆ ಪಂಕಜಾ ಎಂಬ ಮಹಿಳೆ ದುಃಖ ತೋಡಿಕೊಂಡರು.

“ನನ್ನ ಸಹೋದರನು ನನ್ನ ತಂದೆಗೂ ನನಗೂ ಬಹಳ ಚಿತ್ರ ಹಿಂಸೆ ಕೊಡುತ್ತಿದ್ದಾನೆ. ನೀವೇನೋ ಉಚಿತವಾಗಿ ಬಸ್ ಬಿಟ್ಟು ಪ್ರಯಾಣ ಮಾಡಲು ಅವಕಾಶ ಕೊಟ್ರಿ. ಆದ್ರೇ ನಾನು ಊರಿಗೆ ಹೋದರೂ ನಮ್ಮಪ್ಪನನ್ನು ನೋಡಲು ಆಗ್ತಾ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ತುಮಕೂರಿನಿಂದ ಬಂದ ಜೈನ ಸಮುದಾಯದ ಮಹಿಳೆಯರು ’ಈದಿನ.ಕಾಂ’ನೊಂದಿಗೆ ಮಾತನಾಡುತ್ತಾ, “ನಾವು ಶ್ರೀಮಂತರೆಂದು ಎಷ್ಟೋ ಜನ ಭಾವಿಸಿದ್ದಾರೆ. ಆದರೆ ನಾವು ಮಾರ್ವಾಡಿ ಜೈನರಲ್ಲ. ದಿಗಂಬರ ಪಂಥದ ಅನುಯಾಯಿಗಳಾದ ನಮಗೆ ಇಂದಿಗೂ ಮನೆಗಳಿಲ್ಲ. ಹೂ ಮಾರಾಟ, ಆಟೋ ಚಾಲನೆ, ಮನೆಗಳಲ್ಲಿ ಕ್ಲೀನಿಂಗ್‌ ಮಾಡುತ್ತಾ ಅಥವಾ ಕೂಲಿ ಕೆಲಸ ಹೋಗಿ ಬದುಕು ಸಾಗಿಸುತ್ತಾ ಇದ್ದೇವೆ. ಬಡ ಜೈನರ ಕುರಿತು ಸರ್ಕಾರ ಗಮನ ಹರಿಸಬೇಕು” ಎಂದು ಕೋರಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೀಗೆ ತರಹೇವಾರಿ ದೂರುಗಳನ್ನು ರಾಜ್ಯದ ಮೂಲೆಮೂಲೆಗಳಿಂದ ಹೊತ್ತು ತಂದ ಜನರು, ವಿಧಾನಸೌಧದ ಮುಂದೆ ನಡೆದ ’ಸಿಎಂ ಜನಸ್ಪಂದನ’ ಕಾರ್ಯಕ್ರಮದಲ್ಲಿ ತಮ್ಮ ನೋವುಗಳನ್ನು ಬಿಚ್ಚಿಟ್ಟರು.

ಹತ್ತಾರು ವರ್ಷಗಳಿಂದ ಮನೆ ಇಲ್ಲ, ಮಳೆ ಬಿಸಿಲಿಗೆ ಸಿಲುಕಿ ನಲುಗಿದ್ದೇವೆ,  ನಮಗೆ ಆಧಾರ್‌ ಕಾರ್ಡ್, ರೇಷನ್ ಕಾರ್ಡ್ ಇಲ್ಲ, ಗುತ್ತಿಗೆ ನೌಕರಿಯಿಂದ ಕಿತ್ತು ಬೀಸಾಡಿದ್ದಾರೆ, ಸರಿಯಾದ ಸಮಯಕ್ಕೆ ಪಿಂಚಣಿ ಬರುತ್ತಿಲ್ಲ, ಆಸ್ಪತ್ರೆಗೆ ರೊಕ್ಕ ಕಟ್ಟಲು ಆಗ್ತಾ ಇಲ್ಲ- ಹೀಗೆ ತಮ್ಮ ನೋವುಗಳನ್ನು ಹಂಚಿಕೊಂಡರು. ಅಧಿಕಾರಿ ವರ್ಗ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ಸಾಮಾನ್ಯ ಆರೋಪವಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯನವರು, “ನವೆಂಬರ್‌ 27 ರಂದು ನಡೆದ ಮೊದಲ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅರ್ಜಿಗಳ ಪೈಕಿ ಶೇ. 98 ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಿ, ಜನರಿಗೆ ಪರಿಹಾರಗಳನ್ನು ಒದಗಿಸಲಾಗಿದೆ” ಎಂದರು.

“ಸರ್ಕಾರವನ್ನು ಜನರ ಬಳಿಗೇ ಒಯ್ಯಬೇಕೆಂಬುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೆ ಒಟ್ಟು 108 ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ” ಎಂದು ತಿಳಿಸಿದರು.

“ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿಯೂ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇಲ್ಲಿ ಬಗೆಹರಿಯದ ಸಮಸ್ಯೆಗಳನ್ನು ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ಸಲ್ಲಿಸಬಹುದಾಗಿದೆ. ಕಾನೂನುಬದ್ಧವಾದ ಸಮಸ್ಯೆಗಳಿಗೆ ನಮ್ಮ ಸರ್ಕಾರ ಪರಿಹಾರ ಒದಗಿಸಲಿದೆ” ಎಂದು ಹೇಳಿದರು.

“ಸಮಸ್ಯೆ ಬಗೆಹರಿಸಲು ಕಾನೂನು ತೊಡಕು ಇದ್ದಲ್ಲಿ, ಈ ಕುರಿತು ಅರ್ಜಿದಾರರಿಗೆ ಕಾರಣ ಸಹಿತ ಹಿಂಬರಹ ನೀಡಲಾಗುವುದು. ಜನಸ್ಪಂದನದಲ್ಲಿ ಸ್ವೀಕರಿಸಲಾದ ಅರ್ಜಿಗಳಿಗೆ ಮೂರು ತಿಂಗಳೊಳಗೆ ವಿಲೇವಾರಿ ಮಾಡಬೇಕು; ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ” ಎಂದರು.

“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳೊಳಗಾಗಿ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಯೋಜನೆ ಜಾರಿಗೊಳಿಸಿದಾಗ ವಿರೋಧ ಪಕ್ಷಗಳ ನಾಯಕರು ಈಗ ಯೋಜನೆ ಜಾರಿಗೊಳಿಸಿ ಆಮೇಲೆ ನಿಲ್ಲಿಸುತ್ತಾರೆ ಎಂದು ತಿಳಿಸಿದ್ದಾರೆ. ಆದರೆ ಇಂತಹ ಅಪಪ್ರಚಾರಗಳಿಗೆ ಕಿವಿಗೊಡಬಾರದು” ಎಂದು ಸಿಎಂ ಮನವಿ ಮಾಡಿದರು.

ಮುಖ್ಯಮಂತ್ರಿಯವರು ತಮ್ಮ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ಥಳದಲ್ಲೇ ಅನೇಕರಿಗೆ ಪರಿಹಾರವನ್ನು ಒದಗಿಸಿದರು.

ಡಬ್ಬಲ್ ಡಿಗ್ರಿ ಮುಗಿಸಿರುವ ಬೆಂಗಳೂರಿನ ನಿವಾಸಿ ವಿಶಿಷ್ಠ ಚೇತನ ನವ್ಯಶ್ರೀ ಅವರು ತಾಯಿ ರಮಾಮಣಿ ಅವರ ಜತೆ ಬಂದು ಉದ್ಯೋಗಕ್ಕಾಗಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು. ಉದ್ಯೋಗ ಮೇಳದ ವೇಳೆ ಈ ಅರ್ಜಿಯನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಶಿಷ್ಟ ಚೇತನ ಸತ್ಯನಾರಾಯಣ ಅವರು ತಮ್ಮ ಡಯಾಲಿಸಿಸ್ ಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಕೊಡಿಸುವಂತೆ ಮುಖ್ಯಮಂತ್ರಿಗಳಿಗೆ  ಮನವಿ ಮಾಡಿದರು. ಅರ್ಜಿ ಪರಿಶೀಲಿಸಿ ಚಿಕಿತ್ಸೆಗೆ ನೆರವು ನೀಡುವಂತೆ ತಿಳಿಸಿದರು.

ಬೆಂಗಳೂರಿನ ಜೆ.ಜೆ ನಗರ ನಿವಾಸಿ ಎಂ.ಶ್ರೀಧರ್ ಅವರ ಎರಡೂ ಮೂತ್ರಪಿಂಡಗಳು ವಿಫಲವಾಗಿದ್ದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸಿದರು. ಮುಖ್ಯಮಂತ್ರಿಗಳು ಇವರ ಸಮಸ್ಯೆಗೆ ಕೂಡಲೇ ಸ್ಪಂದಿಸಿ ಪರಿಹಾರ ನೀಡುವ ಭರವಸೆ ನೀಡಿದರು.

ರಾಯಚೂರಿನ ಮೂರು ವರ್ಷದ ಶುಶಾಂತ್ ಥಲೆಸ್ಸೆಮಿಯಾ ಕಾಯಿಲೆ ಗೆ ತುತ್ತಾಗಿದ್ದಾನೆ. ಈತನನ್ನು  ಜನಸ್ಪಂದನ ಕಾರ್ಯಕ್ರಮಕ್ಕೆ ಕರೆತಂದ ತಾಯಿ ಲಲಿತಾ ಅವರು  ಆರ್ಥಿಕ ಸಹಾಯವನ್ನು ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಮುಖ್ಯಮಂತ್ರಿಗಳು ಪರಿಹಾರ ನಿಧಿಯಿಂದ ನೆರವು ಒದಗಿಸಲಾಗುವುದು ಎಂದು ಅರ್ಜಿಯನ್ನು ಸ್ವೀಕರಿಸಿ ಭರವಸೆ ನೀಡಿದರು.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ  ಬಂತಹಳ್ಳಿ ಗ್ರಾಮದ 50 ವರ್ಷದ ನಾರಾಯಣಸ್ವಾಮಿ ಖಾತೆ ಬದಲಾವಣೆ ಮಾಡಲಾಗಿದ್ದು ಸರಿಪಡಿಸಿಕೊಡಿ ಎಂದು ಮುಖ್ಯಮಂತ್ರಿಗಳನ್ನು ಕೋರಿದರು. ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಪ್ರಕರಣದ ಕುರಿತು ಪರಿಶೀಲಿಸಲು ಅಧಿಕಾರಿಗಳಿಗೆ ಆದೇಶಿಸಿದರು.

ತುಮಕೂರಿನ ಮಾಡಗಶಿರಾ ಗ್ರಾಮದ  ಶಾಂತಿಬಾಯಿ ಅವರ ಬುದ್ಧಿಮಾಂದ್ಯ ಮಗುವಿಗೆ  ಚಿಕಿತ್ಸೆ  ಮಾಡಿಸಲು ನೆರವು ಕೋರಿ  ಮುಖ್ಯ ಮಂತ್ರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಮಗುವಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಮರುಗಿದ ಮುಖ್ಯಮಂತ್ರಿಗಳು ನೆರವು ನೀಡುವ  ಅಭಯ ನೀಡಿದರು.

ನೆಲಮಂಗಲದ ಕ್ಯಾನ್ಸರ್ ರೋಗಿ ಚೌಡೇಶ್ವರಿಗೆ  ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯವಿದ್ದು, ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸಿದರು. ತಾವು ಸ್ವೀಕರಿಸಿದ ಮನವಿಯನ್ನು ಮುಖ್ಯಮಂತ್ರಿಗಳು ಪರಿಹಾರ ನಿಧಿ ಶಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಹೀಗೆ ಸಾವಿರಾರು ಮನವಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸಿದರು. ವಿಧಾನಸೌಧದ ಅಂಗಳ ಕಿಕ್ಕಿರಿದು ತುಂಬಿತ್ತು. ತಿರುಗಾಡಲು ನೂಕುನುಗ್ಗಲು ಉಂಟಾಗಿತ್ತು.

ವಿಶೇಷ ಚೇತನರಾದ ಸಿದ್ಧಪ್ಪನವರು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ ಬಳಿಕ ಈದಿನದೊಂದಿಗೆ ಮಾತನಾಡಿ, “ಆಡಳಿತ ಎಂದರೆ ಹೀಗೆ ಇರಬೇಕು. ಸಾಮಾನ್ಯ ಜನರನ್ನು ಆಡಳಿತ ವ್ಯವಸ್ಥೆ ತಲುಪಬೇಕು. ಎಷ್ಟೋ ಜನಸಾಮಾನ್ಯರಿಗೆ ವಿಧಾನಸೌಧದ ಒಳಗೆ ಬರಲು ಅವಕಾಶವೇ ಸಿಗುವುದಿಲ್ಲ. ಇದೇ ಮೊದಲ ಬಾರಿಗೆ ವಿಧಾನಸೌಧದ ಮೆಟ್ಟಿಲು ಏರಿದೆ” ಎಂದು ಸಂತಸವನ್ನು ವ್ಯಕ್ತಪಡಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ಪಾಕಿಸ್ತಾನ ಜಿಂದಾಬಾದ್‌ | ಮಾಧ್ಯಮಗಳ ವಿಡಿಯೋ ಎಫ್‌ಎಸ್‌ಎಲ್‌ನವರು ಪಡೆಯಲಿದ್ದಾರೆ: ಡಾ. ಜಿ.ಪರಮೇಶ್ವರ್

‌ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ್ದಾರೆ ಎನ್ನಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ...

‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ

ರಾಜ್ಯಸಭಾ ಚುನಾವಣೆ ಫಲಿತಾಂಶದ ಬಳಿಕ ಸಂಭ್ರಮಾಚರಣೆ ಸಂದರ್ಭದಲ್ಲಿ ವಿಧಾನಸೌಧದ ಆವರಣದಲ್ಲಿ ‘ಪಾಕಿಸ್ತಾನ್...

ಮಾಧ್ಯಮದವರಿಗೆ ಪ್ರಿಯಾಂಕ್ ಖರ್ಗೆ ಮಾರ್ಮಿಕ ಪ್ರಶ್ನೆಗಳು

ದೇಶದಲ್ಲಿ ಬಿಜೆಪಿ ಸವಾಲುಗಳನ್ನು ಎದುರಿಸುವ ಸಂದರ್ಭ ಬಂದಾಗಲೆಲ್ಲ ಈ 'ಪಾಕಿಸ್ತಾನ್ ಜಿಂದಾಬಾದ್'...

Go back Shobha | ಕ್ಷೇತ್ರದ ಜನರಿಗೇ ಬೇಡವಾದರೇ ಶೋಭಾ ಕರಂದ್ಲಾಜೆ ? ಷಡ್ಯಂತ್ರ ಮಾಡುತ್ತಿರುವವರು ಯಾರು?

ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕಳೆದ...