ಭಾನುವಾರ (ಜೂ.21) ನಡೆದ NEET ಪರೀಕ್ಷೆಗೆ ಕೆಲ ವಿದ್ಯಾರ್ಥಿಗಳು ತಡವಾಗಿ ಆಗಮಿಸಿ ಪರೀಕ್ಷೆಯಿಂದ ವಂಚಿತರಾದ ಘಟನೆಗೆ ಕಾಂಗ್ರೆಸ್‌ನ ‘ಸಂಕಲ್ಪ ಸಮಾವೇಶ’ವೇ ಕಾರಣ ಎಂಬ ಆರೋಪಕ್ಕೆ ಬೆಂಗಳೂರು ಸಂಚಾರ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಈ ಕುರಿತು ‘ಫ್ಯಾಕ್ಟ್ ಚೆಕ್’ ವರದಿಯನ್ನು ಬಿಡುಗಡೆ ಮಾಡಿದ್ದು, ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿ ಈ ವರದಿಯನ್ನು ಸಿದ್ಧಪಡಿಸಿದ್ದಾರೆ. “ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಪರೀಕ್ಷಾರ್ಥಿಯು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ನಿಗದಿಪಡಿಸಿದ್ದ ಕಟ್-ಆಫ್ ಸಮಯಕ್ಕೆ ಕೇವಲ 33 ನಿಮಿಷಗಳ ಮೊದಲು ಮನೆಯಿಂದ ಹೊರಟಿರುವುದು ಕಂಡುಬಂದಿದೆ. ಅಂದು ನಗರದಲ್ಲಿ ಸಂಚಾರ ಪರಿಸ್ಥಿತಿ ಸಾಮಾನ್ಯವಾಗಿತ್ತು. ಯಾವುದೇ ಸಾರ್ವಜನಿಕ ಕಾರ್ಯಕ್ರಮ ಅಥವಾ ರ‍್ಯಾಲಿಯಿಂದಾಗಿ ಟ್ರ್ಯಾಫಿಕ್ ಜಾಮ್ ಉಂಟಾಗಿರಲಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ಪರೀಕ್ಷಾರ್ಥಿಗಳ ಚಲನೆಯನ್ನು ಸುಗಮಗೊಳಿಸಲು ಅಗತ್ಯ ಸಹಕಾರ ನೀಡಿದ್ದಾರೆ ಎಂದು ವರದಿ ಹೇಳಿದೆ. ಅಲ್ಲದೆ, ಪರೀಕ್ಷಾರ್ಥಿಯು ತಡವಾಗಿ ಕೇಂದ್ರವನ್ನು ತಲುಪಲು ಆತ/ಆಕೆ ಆಯ್ಕೆ ಮಾಡಿಕೊಂಡ ದೀರ್ಘ ಮಾರ್ಗವೇ ಕಾರಣ ಎಂದು ಸಿಸಿಟಿವಿ ದೃಶ್ಯಗಳು ದೃಢಪಡಿಸಿವೆ.
NEET ಪರೀಕ್ಷೆಯ ನಂತರ, ಬೆಂಗಳೂರಿನ ಪರೀಕ್ಷಾ ಕೇಂದ್ರವೊಂದರ ಮುಂದೆ ಮೂವರು ವಿದ್ಯಾರ್ಥಿನಿಯರು ತಡವಾಗಿ ಬಂದ ಕಾರಣ ಪ್ರವೇಶ ನಿರಾಕರಿಸಲ್ಪಟ್ಟು ಅಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದನ್ನು ಉಲ್ಲೇಖಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು, ಕಾಂಗ್ರೆಸ್‌ನ ಸಮಾವೇಶದಿಂದ ಉಂಟಾದ ಟ್ರ್ಯಾಫಿಕ್ ಕಾರಣದಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದ್ದರು.
ಇದನ್ನೂ ಓದಿ: ಕೇವಲ ಒಂದೇ ಇಮೇಲ್ ಮೂಲಕ ಸಾವಿರಾರು ಉದ್ಯೋಗಿಗಳಿಗೆ ಶಾಕ್ ನೀಡಿದ ‘ಆರಕಲ್’
ಈ ಆರೋಪವನ್ನು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರವಾಗಿ ಖಂಡಿಸಿದ್ದು, ಇದು ಆಧಾರ ರಹಿತ ಎಂದಿದ್ದರು. ಬೆಂಗಳೂರಿನ ಆರ್.ಸಿ. ಕಾಲೇಜು ಕೇಂದ್ರಕ್ಕೆ ಮೂವರು ವಿದ್ಯಾರ್ಥಿಗಳು ಮಾತ್ರ ತಡವಾಗಿ ಬಂದಿದ್ದರು ಮತ್ತು ಪರೀಕ್ಷಾ ನಿಯಮಗಳ ಪ್ರಕಾರವೇ ಅವರನ್ನು ಒಳಗೆ ಬಿಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.




