ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದರೂ ಮೊಬೈಲ್ ಮೂಲಕ ತಂದೆ ಎಚ್.ಡಿ.ರೇವಣ್ಣ, ತಾಯಿ ಭವಾನಿ ರೇವಣ್ಣ, ಸ್ನೇಹಿತರು ಸೇರಿದಂತೆ ಹಲವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜೈಲಿನ ಹೈ-ಸೆಕ್ಯುರಿಟಿ ಬ್ಯಾರಕ್‌ನಲ್ಲಿ ಅಕ್ರಮವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಆಂಡ್ರಾಯ್ಡ್ ಮೊಬೈಲ್, ಚಾರ್ಜರ್, ಪೆನ್‌ಡ್ರೈವ್ ಹಾಗೂ ನೋಟ್‌ಬುಕ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ಪ್ರಜ್ವಲ್ ರೇವಣ್ಣ ಮತ್ತು ಅದೇ ಬ್ಯಾರಕ್‌ನಲ್ಲಿದ್ದ ಮತ್ತೊಬ್ಬ ಕೈದಿ ಪ್ರತಾಪ್ ರಾಯ್ ವಿರುದ್ಧ ಪ್ರಕರಣ ದಾಖಲಾಗಿದೆ.
ಜಪ್ತಿ ಮಾಡಿರುವ ಮೊಬೈಲ್ ಹಾಗೂ ಸಿಮ್‌ನ ಕರೆ ವಿವರಗಳನ್ನು (ಸಿಡಿಆರ್) ಪರಿಶೀಲಿಸಿದಾಗ ಪ್ರಜ್ವಲ್ ರೇವಣ್ಣ ಜೈಲಿನಿಂದಲೇ ತಂದೆ, ತಾಯಿ ಹಾಗೂ ಆಪ್ತ ಸ್ನೇಹಿತರೊಂದಿಗೆ ಹಲವು ಬಾರಿ ದೂರವಾಣಿ ಸಂಪರ್ಕ ನಡೆಸಿರುವುದು ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಜೈಲಿನ ಬ್ಯಾರಕ್‌ನಲ್ಲಿ ಪತ್ತೆಯಾಗಿದ್ದ ಪಾಕೆಟ್ ನೋಟ್‌ಬುಕ್‌ನಲ್ಲೂ 30ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳು ದೊರೆತಿವೆ ಎನ್ನಲಾಗಿದೆ. ಕೆಲವು ಸಂಖ್ಯೆಗಳ ಎದುರು ಕುಟುಂಬ ಸದಸ್ಯರು ಹಾಗೂ ಆಪ್ತರನ್ನು ಗುರುತಿಸಲು ಸಾಧ್ಯವಾಗುವ ರೀತಿಯಲ್ಲಿ ಹೆಸರುಗಳನ್ನು ನಮೂದಿಸಲಾಗಿತ್ತು. ಈ ಎಲ್ಲ ಸಂಖ್ಯೆಗಳ ಕರೆ ವಿವರಗಳನ್ನು ತನಿಖಾ ತಂಡ ಪರಿಶೀಲಿಸುತ್ತಿದೆ.
ಪ್ರಜ್ವಲ್ ಬಳಸುತ್ತಿದ್ದ ಎರಡು ಸಿಮ್ ಕಾರ್ಡ್‌ಗಳನ್ನು ಬೇರೆಯವರ ಹೆಸರಿನಲ್ಲಿ ಪಡೆಯಲಾಗಿತ್ತು ಎನ್ನಲಾಗಿದ್ದು, ಅವುಗಳಲ್ಲಿ ಒಂದು ಸಿಮ್ ಆಂಧ್ರಪ್ರದೇಶದಲ್ಲಿ ಸಕ್ರಿಯಗೊಳಿಸಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ.
ಜೈಲಿಗೆ ಅಕ್ರಮವಾಗಿ ಸಿಮ್ ಮತ್ತು ಮೊಬೈಲ್ ತಲುಪಿದ ಜಾಲದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಳೆದ ಎಂಟು ತಿಂಗಳಲ್ಲಿ 300ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಹಲವು ಸಿಮ್‌ಗಳು ಆಂಧ್ರಪ್ರದೇಶದಲ್ಲಿ ಸಕ್ರಿಯಗೊಳಿಸಲ್ಪಟ್ಟಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಕಾರಾಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜ್ವಲ್‌ಗೆ ಮೊಬೈಲ್ ಪೂರೈಸಿದ ಆರೋಪದಡಿ ಬಾಣಸವಾಡಿ ನಿವಾಸಿ ನವೀನ್‌ನನ್ನು ತನಿಖಾ ತಂಡ ವಿಚಾರಣೆ ನಡೆಸುತ್ತಿದೆ. ಈ ಹಿಂದೆ ಜೈಲು ಶಿಕ್ಷೆ ಅನುಭವಿಸಿದ್ದ ಸಂದರ್ಭದಲ್ಲಿ ಪ್ರಜ್ವಲ್‌ಗೆ ಪ್ರತಾಪ್ ರಾಯ್ ಪರಿಚಯವಾಗಿತ್ತು ಎನ್ನಲಾಗಿದ್ದು, ಜೈಲಿನಿಂದ ಹೊರಬಂದ ಬಳಿಕ ಪ್ರತಾಪ್ ರಾಯ್‌ಗೆ ನವೀನ್ ಅಕ್ರಮವಾಗಿ ಮೊಬೈಲ್ ತಲುಪಿಸಿದ್ದ ಎಂಬ ಶಂಕೆಯೂ ತನಿಖಾ ತಂಡಕ್ಕಿದೆ.
ಪ್ರಜ್ವಲ್ ಮತ್ತು ಪ್ರತಾಪ್ ರಾಯ್ ಒಂದೇ ಹೈ-ಸೆಕ್ಯುರಿಟಿ ಬ್ಯಾರಕ್‌ನಲ್ಲಿ ಇದ್ದ ಸಂದರ್ಭದಲ್ಲಿ, ಪ್ರತಾಪ್ ರಾಯ್ ಬಳಿಯಿದ್ದ ಮೊಬೈಲ್ ಅನ್ನು ಪ್ರಜ್ವಲ್ ಕೂಡ ಬಳಸುತ್ತಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಜಪ್ತಿ ಮಾಡಲಾದ 5ಜಿ ರೆಡ್‌ಮಿ ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೊದಂತಹ ಆ್ಯಪ್‌ಗಳು ಇದ್ದವು ಎಂದು ವರದಿಯಾಗಿದೆ. ಹಲವು ಆ್ಯಪ್‌ಗಳು ಪಾಸ್‌ವರ್ಡ್ ರಕ್ಷಿತವಾಗಿದ್ದವು. ಪೆನ್‌ಡ್ರೈವ್‌ನಲ್ಲೂ ಆಕ್ಷೇಪಾರ್ಹ ವಿಡಿಯೊಗಳು ಪತ್ತೆಯಾಗಿದ್ದವು ಎಂದು ತನಿಖಾ ಮೂಲಗಳು ತಿಳಿಸಿವೆ.
ಮೊಬೈಲ್ ಬಳಕೆ ಪ್ರಕರಣ ಬೆಳಕಿಗೆ ಬಂದ ಬಳಿಕ ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನಲ್ಲಿದ್ದ ವಿಶೇಷ ಸೌಲಭ್ಯಗಳಿಗೂ ಕಡಿವಾಣ ಹಾಕಲಾಗಿದೆ. ಅವರನ್ನು ವಿಐಪಿ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದ್ದು, ಇತರ ಕೈದಿಗಳೊಂದಿಗೆ ಇರಿಸಲಾಗಿದೆ. ಜೈಲಿನ ನಿಯಮಿತ ಸಮವಸ್ತ್ರ ಧರಿಸುವಂತೆ ಹಾಗೂ ಜೈಲು ಗ್ರಂಥಾಲಯದಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಪ್ರಜ್ವಲ್ ಇದ್ದ ಹೈ-ಸೆಕ್ಯುರಿಟಿ ಬ್ಯಾರಕ್‌ಗೆ ಮೊಬೈಲ್ ಹೇಗೆ ತಲುಪಿತು ಎಂಬ ಪ್ರಶ್ನೆ ಕಾರಾಗೃಹ ಇಲಾಖೆಯ ಮೇಲೂ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪದ ಆರೋಪದಡಿ ಜೈಲಿನ ಸಹಾಯಕ ಅಧೀಕ್ಷಕರೊಬ್ಬರನ್ನು ಅಮಾನತುಗೊಳಿಸಲಾಗಿದ್ದು, ಜೈಲು ಅಧೀಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: ಅತ್ಯಾಚಾರಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ; ಶಾಸಕ ಮುನಿರತ್ನಗೂ ಕಾದಿದೆಯಾ ಜೈಲು?
ಮೊಬೈಲ್‌ನ ಸಿಮ್ ಮಾರ್ಚ್‌ನಿಂದಲೇ ಸಕ್ರಿಯವಾಗಿತ್ತು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಹೀಗಾಗಿ ಜೈಲಿನೊಳಗೆ ಇಷ್ಟು ದಿನ ಮೊಬೈಲ್ ಬಳಕೆಯಾಗಿದ್ದರೂ ಪತ್ತೆಯಾಗದಿರುವುದು ಹೇಗೆ ಎಂಬುದರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
2025ರ ಆಗಸ್ಟ್‌ನಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ಪ್ರಜ್ವಲ್ ರೇವಣ್ಣ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅತ್ಯಾಚಾರ, ಪುನರಾವರ್ತಿತ ಅತ್ಯಾಚಾರ, ಲೈಂಗಿಕ ಕಿರುಕುಳ, ವಾಯರಿಸಂ, ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಆರೋಪಗಳಲ್ಲಿ ಅವರನ್ನು ದೋಷಿ ಎಂದು ನ್ಯಾಯಾಲಯ ಪರಿಗಣಿಸಿತ್ತು. ಶಿಕ್ಷೆಯನ್ನು ಪ್ರಶ್ನಿಸಿ ಪ್ರಜ್ವಲ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಇದೀಗ ಜೈಲಿನೊಳಗಿಂದಲೇ ಮೊಬೈಲ್ ಬಳಕೆ, ಹಲವು ಮಂದಿಯೊಂದಿಗೆ ದೂರವಾಣಿ ಸಂಪರ್ಕ ಹಾಗೂ ಅಕ್ರಮವಾಗಿ ಮೊಬೈಲ್ ಮತ್ತು ಸಿಮ್ ಪೂರೈಕೆಯ ಜಾಲದ ಕುರಿತು ತನಿಖೆ ಚುರುಕುಗೊಂಡಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.




