ದೇಶದ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕು ಎಂದು ಆಗ್ರಹಿಸಿ ‘ರಿಸರ್ವೇಶನ್ ಹಟಾವೋ ಆಂದೋಲನ’ (ಆರ್‌ಎಚ್‌ಎ) ನೇತೃತ್ವದಲ್ಲಿ ನಿನ್ನೆ (ಆ.21) ನವದೆಹಲಿಯ ಜಂತರ್ ಮಂತರ್ನಲ್ಲಿ ಸಾವಿರಾರು ಮೇಲ್ವರ್ಗದ ಮಂದಿ ಪ್ರತಿಭಟನೆ ನಡೆಸಿದರು.
ಸಾರ್ವಜನಿಕ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಯನ್ನು ಸಾಮಾಜಿಕ-ಆರ್ಥಿಕ ವರ್ಗಗಳ ಬದಲಾಗಿ ಆದಾಯದ ಮಾನದಂಡದ ಆಧಾರದಲ್ಲಿ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆ. ‘ಒಂದು ಕುಟುಂಬಕ್ಕೆ ಒಂದು ಮೀಸಲಾತಿ’, ಖಾಲಿ ಉಳಿಯುವ ಮೀಸಲು ಹುದ್ದೆಗಳನ್ನು ಡಿ-ರಿಸರ್ವ್ ಮಾಡುವುದು, ಮೀಸಲಾತಿಗೆ ಗರಿಷ್ಠ ಶೇ.50ರ ಮಿತಿಯನ್ನು ಸ್ಥಗಿತಗೊಳಿಸುವುದು, ರಾಜಕೀಯ ಪಕ್ಷಗಳು ಮೀಸಲಾತಿ ಹೆಚ್ಚಿಸುವ ಭರವಸೆ ನೀಡುವುದಕ್ಕೆ ನಿರ್ಬಂಧ ಹಾಗೂ ಮೀಸಲಾತಿಗೆ ಅಂತಿಮ ಗಡುವು ನಿಗದಿಪಡಿಸುವ ‘ಸನ್ಸೆಟ್ ಕ್ಲಾಸ್’ ಜಾರಿಗೊಳಿಸುವುದು ಸೇರಿದಂತೆ ಐದು ಬೇಡಿಕೆಗಳನ್ನು ಆರ್‌ಎಚ್‌ಎ ಮುಂದಿಟ್ಟಿದೆ.
ಕರ್ನಿ ಸೇನಾ, ರಣಬೀರ್ ಸೇನಾ ಸೇರಿದಂತೆ ಸಾಮಾನ್ಯ ವರ್ಗವನ್ನು ಪ್ರತಿನಿಧಿಸುವ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಗೆ ಜಂತರ್ ಮಂತರ್ನಲ್ಲಿ ಅನುಮತಿ ನೀಡಲಾಗಿಲ್ಲ ಎಂದು ದೆಹಲಿ ಪೊಲೀಸರು ಆರಂಭದಲ್ಲಿ ತಿಳಿಸಿದ್ದರು. ಆದರೆ, ಮಧ್ಯಾಹ್ನದ ವೇಳೆಗೆ ಪ್ರತಿಭಟನೆಗೆ ಅನುಮತಿ ನೀಡಲಾಗಿದ್ದು, ರಾಮಲೀಲಾ ಮೈದಾನದಲ್ಲಿ ನಡೆಸಲು ಸೂಚಿಸಲಾಗಿದೆ ಎಂದು ಪೊಲೀಸರು ಮತ್ತೊಂದು ಹೇಳಿಕೆ ನೀಡಿದರು.
ಆದಾಗ್ಯೂ, ಜಂತರ್ ಮಂತರ್ನಲ್ಲಿ ಈಗಾಗಲೇ ಜಮಾಯಿಸಿದ್ದ ನೂರಾರು ಪ್ರತಿಭಟನಾಕಾರರು ಸ್ಥಳದಿಂದ ತೆರಳಲು ನಿರಾಕರಿಸಿದರು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕೆಲಕಾಲ ಬಿಕ್ಕಟ್ಟು ಉಂಟಾಯಿತು. ಮಧ್ಯಾಹ್ನ 2ರ ಸುಮಾರಿಗೆ ಭದ್ರತಾ ಸಿಬ್ಬಂದಿ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿದ ಬಳಿಕ ಪ್ರತಿಭಟನಾಕಾರರು ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಿದರು. ಬಳಿಕ ‘ಯುಜಿಸಿ ನಿಯಮಗಳನ್ನು ಹಿಂಪಡೆಯಿರಿ’ ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮುಂದುವರಿಸಿದರು. ಸಂಜೆ ವೇಳೆಗೆ ‘ರಿಸರ್ವೇಶನ್ ರಿಫಾರ್ಮ್ ಸತ್ಯಾಗ್ರಹ’ ಎಂಬ ಬ್ಯಾನರ್ನಡಿ ವೇದಿಕೆಯನ್ನೂ ನಿರ್ಮಿಸಲಾಯಿತು.
ಬಿಹಾರದ ರಣಬೀರ್ ಸೇನಾ ಮುಖಂಡ ಅಲೋಕ್ ಪ್ರತಾಪ್ ಸಿಂಗ್ ಮಾತನಾಡಿ, ಮೀಸಲಾತಿ ವ್ಯವಸ್ಥೆಯು ರಾಜಕೀಯದ ಪ್ರತಿಯೊಂದು ಕ್ಷೇತ್ರದ ಮೇಲೂ ಪರಿಣಾಮ ಬೀರುವಂತಾಗಿದೆ. ಬಡತನಕ್ಕೆ ಜಾತಿಯಿಲ್ಲ. ಹೀಗಾಗಿ ಜಾತಿಯ ಬದಲಾಗಿ ಆದಾಯದ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಉತ್ತರ ಪ್ರದೇಶದ ಸಹರಾನ್ಪುರದ 27 ವರ್ಷದ ಹಿಮಾನಿ ಸಿಸೋಡಿಯಾ ಮಾತನಾಡಿ, ಸಾಮಾನ್ಯ ವರ್ಗದವರು ಮೀಸಲಾತಿಯಿಂದಾಗಿ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಪ್ರವೇಶ ಪರೀಕ್ಷೆಗಳಿಗೆ ಹೆಚ್ಚಿನ ಶುಲ್ಕ ಪಾವತಿಸಿದರೂ, ಹೆಚ್ಚಿನ ಅಂಕ ಗಳಿಸಿದರೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಅವಕಾಶ ಕಳೆದುಕೊಳ್ಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರ್‌ಎಚ್‌ಎ ಆನ್‌ಲೈನ್ ಅಕೌಂಟ್ ನಿರ್ವಹಿಸುತ್ತಿರುವ ಅನುರಾಧಾ ತಿವಾರಿ, ಮೀಸಲಾತಿ ಸುಧಾರಣೆ ಕುರಿತು ಸರ್ಕಾರಕ್ಕೆ ಶೀಘ್ರದಲ್ಲೇ ಅಧಿಕೃತ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮೀಸಲಾತಿ ವ್ಯವಸ್ಥೆಯ ಸುಧಾರಣೆ ಕುರಿತು ಮಾತನಾಡುವುದೇ ‘ಮುಟ್ಟಲಾರದ ವಿಷಯ’ವಾಗಿದೆ. ಆದರೆ ಈ ಕುರಿತು ಚರ್ಚೆ ನಡೆಯಬೇಕಿದೆ ಎಂದು ಹೇಳಿದರು.
ಎಸ್ಸಿ, ಎಸ್ಟಿ ಮತ್ತು ಒಬಿಸಿ ವರ್ಗಗಳಲ್ಲಿಯೇ ಮೀಸಲಾತಿಯ ಪ್ರಯೋಜನವು ಕೆಲವೇ ಸಮುದಾಯಗಳಿಗೆ ಹೆಚ್ಚು ಸೀಮಿತವಾಗುತ್ತಿದೆ ಎಂಬ ವಾದವನ್ನೂ ಆರ್‌ಎಚ್‌ಎ ಮುಂದಿಟ್ಟಿದೆ. ಇದೇ ಹಿನ್ನೆಲೆಯಲ್ಲಿ ಕ್ರೀಮಿ ಲೇಯರ್ ಮತ್ತು ಉಪವರ್ಗೀಕರಣದಂತಹ ಕ್ರಮಗಳ ಬಗ್ಗೆಯೂ ಚರ್ಚೆ ನಡೆಯಬೇಕೆಂದು ಸಂಘಟನೆ ಒತ್ತಾಯಿಸಿದೆ.
ಇದೇ ವೇಳೆ, ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ನೀಡಲಾಗುವ ಮೀಸಲಾತಿ ಬಡತನ ನಿರ್ಮೂಲನಾ ಯೋಜನೆಯಲ್ಲ. ಹಲವು ತಲೆಮಾರುಗಳಿಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದಿಂದ ಮೀಸಲಾತಿ ಜಾರಿಯಲ್ಲಿದೆ ಎಂಬ ನಿಲುವನ್ನು ಕೇಂದ್ರ ಸರ್ಕಾರ ಈಗಾಗಲೇ ಪುನರುಚ್ಚರಿಸಿದೆ.
ಪ್ರತಿಭಟನೆ ಎಷ್ಟು ದಿನ ಮುಂದುವರಿಯಲಿದೆ ಎಂಬ ಬಗ್ಗೆ ಆರ್‌ಎಚ್‌ಎ ಮುಖಂಡರು ಸ್ಪಷ್ಟನೆ ನೀಡಿಲ್ಲ. ಪ್ರತಿಭಟನೆಗೆ ಯಾವುದೇ ನಿರ್ದಿಷ್ಟ ನಾಯಕತ್ವವಿಲ್ಲ, ಇದು ಸಾಮಾನ್ಯ ವರ್ಗದ ಜನರ ‘ಸ್ವಯಂಸ್ಫೂರ್ತ ಚಳವಳಿ’ ಎಂದು ಅನುರಾಧಾ ತಿವಾರಿ ಹೇಳಿದ್ದಾರೆ. ಪ್ರತಿಭಟನೆ ಮುಂದುವರಿಯಲಿದೆ ಎಂದು ಅನುಮತಿಗಾಗಿ ಪೊಲೀಸರನ್ನು ಸಂಪರ್ಕಿಸಿದ್ದ ಪ್ರತಿಭಟನಾಕಾರ ಅಬಿಷೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ.




