‘“ಎಡಪಂಥೀಯರು ಅತ್ಯಂತ ಅಪಾಯಕಾರಿ’ ಎಂದು ಮಾಜಿ ಎಡಿಸಿ ಎಚ್.ಎಲ್ ನಾಗರಾಜ್ ಅಲಿಯಾಸ್ ಹಾಲಿ ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ವಿಶ್ವ ಜನಸಂಖ್ಯಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಡಪಂಥೀಯ ವಿಚಾರಧಾರೆ ಕುರಿತು ವಿವಾದಾತ್ಮಕ ಟೀಕೆಗಳನ್ನು ಮಾಡಿದ್ದಾರೆ. “ಲೆಫ್ಟಿಸ್ಟ್ಗಳು ಮೋಸ್ಟ್ ಡೇಂಜರಸ್. ಎಡಪಂಥೀಯರು ದೇಶದಲ್ಲಿ ಬೆಂಕಿ ಹಚ್ಚುವ, ದೇಶಕ್ಕೆ ಅವಮಾನ ಮಾಡುವ ಹಾಗೂ ದೇಶವನ್ನು ಅಧೋಗತಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ” ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ಮುಂದುವರೆದು, “ನಮ್ಮ ಆಪ್ತ ವಲಯದಲ್ಲೇ ಏಳೆಂಟು ಮಂದಿ ಎಡಪಂಥೀಯರಿದ್ದು ಅವರನ್ನು ಹತ್ತಿರದಿಂದ ನೋಡಿದ್ದೇನೆ. ಎಲ್ಲರೂ ಕಳ್ಳರು, ಬಕೆಟ್ ಹಿಡಿಯುತ್ತಾರೆ, ಸ್ವಾರ್ಥಿಗಳು” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸ್ವಾಮೀಜಿಯ ಈ ಹೇಳಿಕೆಯ ವಿರುದ್ಧ ಸಿಪಿಐಎಂ ಹಾಸನ ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಎಡಪಂಥ ಎಂದರೆ ಕೇವಲ ಒಂದು ಪಕ್ಷವೋ, ಕೆಲವು ವ್ಯಕ್ತಿಗಳ ಗುಂಪೋ ಅಲ್ಲ; ಪ್ರಗತಿಪರರು, ಜಾತ್ಯತೀತವಾದಿಗಳು, ಪ್ರಜಾಪ್ರಭುತ್ವವಾದಿಗಳು, ಸಂವಿಧಾನ ಪರ ಹೋರಾಟಗಾರರು, ದಲಿತ-ರೈತ-ಕಾರ್ಮಿಕ-ಮಹಿಳಾ ಹಕ್ಕುಗಳ ಪರ ಹೋರಾಟಗಾರರು, ಮಾನವ ಹಕ್ಕು ಕಾರ್ಯಕರ್ತರು, ಪತ್ರಕರ್ತರು, ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರನ್ನು ಒಳಗೊಂಡ ವಿಶಾಲ ವೈಚಾರಿಕ ಪರಂಪರೆ” ಎಂದು ಹೇಳಿದ್ದಾರೆ.
“ಆಡಳಿತ ವ್ಯವಸ್ಥೆಯ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವುದು ಮತ್ತು ದುಡಿಯುವ ವರ್ಗದ ಹಕ್ಕುಗಳಿಗಾಗಿ ಹೋರಾಡುವುದು ಎಡಪಂಥೀಯ ಚಳವಳಿಗಳ ಮೂಲಭೂತ ಸ್ವಭಾವ. ಎಡಪಂಥೀಯರು ಸ್ವಾರ್ಥಕ್ಕಾಗಿ ಜನರ ಹಿತವನ್ನು ಬಲಿ ಕೊಡುವವರು ಅಲ್ಲ. ಬದಲಾಗಿ ಅಸ್ಪೃಶ್ಯತೆ, ಜಾತಿವಾದ, ಕೋಮುವಾದ ಮತ್ತು ಶೋಷಣೆಯ ವಿರುದ್ಧ ಹೋರಾಡಿ ತಮ್ಮ ಬದುಕನ್ನೇ ತ್ಯಾಗ ಮಾಡಿದವರ ದೊಡ್ಡ ಪರಂಪರೆ ಇದೆ” ಎಂದು ಅವರು ಹೇಳಿದ್ದಾರೆ.
ನಿಶ್ಚಲಾನಂದನಾಥ ಸ್ವಾಮೀಜಿಯ ಸಾಮಾಜಿಕ ಪಾತ್ರವನ್ನೂ ಪ್ರಶ್ನಿಸಿರುವ ಸಿಪಿಐಎಂ, “ಬಡವರು, ರೈತರು ಮತ್ತು ಕಾರ್ಮಿಕರ ಸಂಕಷ್ಟಗಳ ಬಗ್ಗೆ ನೀವು ಎಷ್ಟು ಬಾರಿ ಮಾತನಾಡಿದ್ದೀರಿ? ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ದುಡಿಯುವ ವರ್ಗದ ವಿರುದ್ಧ ತಂದ ನೀತಿಗಳನ್ನು ಯಾವಾಗ ವಿರೋಧಿಸಿದ್ದೀರಿ” ಎಂದು ಪ್ರಶ್ನಿಸಿದೆ.
“ಸ್ವಾಮೀಜಿಯ ಹೇಳಿಕೆ ಸಂವಿಧಾನದ ಸಮಾಜವಾದಿ, ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಎಡಪಂಥೀಯರನ್ನು ‘ಡೇಂಜರಸ್’ ಎಂದು ಸಾಮಾನ್ಯೀಕರಿಸುವ ಮೂಲಕ ಶೋಷಕ ಆಳುವ ವರ್ಗ ಮತ್ತು ಬಲಪಂಥೀಯ ರಾಜಕಾರಣದ ಪರವಾಗಿ ನಿಂತಂತಿದೆ” ಎಂದು ಹೇಳಿದೆ.
“ಸ್ವಾಮೀಜಿ ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು. ಕಾರ್ಯಕ್ರಮದ ಆಯೋಜಕರೂ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಮತ್ತು ಸ್ವಾಮೀಜಿಯ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳಬೇಕು” ಎಂದು ಸಿಪಿಐಎಂ ಹಾಸನ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಸಾಮಾಜಿಕ ಜಾಲತಾಣದಲ್ಲಿಯೂ ಸ್ವಾಮೀಜಿ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿದೆ. “ಸ್ವತಃ ಬಡ ಒಕ್ಕಲಿಗ ವಿರೋಧಿ, ಸ್ವಜನಪಕ್ಷಪಾತಿ ಆಗಿರುವ ಮಾಜಿ ADC ನಾಗರಾಜು ಅಲಿಯಾಸ್ ನಿಶ್ಚಲನಂದಸ್ವಾಮಿಜೀ ಯವರಿಗೆ ಮಾರ್ಕ್ಸ್ ಮೂಲ ಚಿಂತನೆಯ ಅರಿವಿಲ್ಲದೆ ಇರುವುದು ಬೌದ್ಧಿಕ ದಿವಾಳಿತನದ ಸೂಚಕ” ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಅಂದಹಾಗೆ, ನಿಶ್ಚಲಾನಂದನಾಥ ಸ್ವಾಮೀಜಿಯ ಪೂರ್ವಾಶ್ರಮದ ಹೆಸರು ಡಾ. ಎಚ್.ಎಲ್. ನಾಗರಾಜ್. ಅವರು ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಹಾಸನ ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ನಾಗಮಂಗಲ ತಾಲೂಕಿನಲ್ಲಿ ತಹಸೀಲ್ದಾರ್ ಆಗಿದ್ದ ಅವರು 2011ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿ ಆದಿಚುಂಚನಗಿರಿ ಮಠ ಸೇರಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ನಂತರ, ದೀಕ್ಷೆ ತೊರೆದು ಹುದ್ದೆಗೆ ಮರಳಿದ್ದರು. ಆ ಬಳಿಕ, 2024ರ ಡಿಸೆಂಬರ್ನಲ್ಲಿ ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಉತ್ತರಾಧಿಕಾರಿಯಾಗಿ ಪಟ್ಟಾಧಿಕಾರ ಸ್ವೀಕರಿಸಿ ನಿಶ್ಚಲಾನಂದನಾಥ ಸ್ವಾಮೀಜಿ ಎಂಬ ಹೆಸರಿಟ್ಟುಕೊಂಡರು.



