ಭೂಮಾಪನ ಇಲಾಖೆಯ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತಿರುವ ಪರವಾನಗಿ ಭೂಮಾಪಕರು, ಸರ್ಕಾರಿ ಭೂಮಾಪಕರಂತೆ ಸಮಾನ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರೂ, ಅವರಿಗೆ ಸರ್ಕಾರಿ ನೌಕರರಿಗೆ ದೊರೆಯುವ ಮೂಲಭೂತ ಸೌಲಭ್ಯಗಳು ಹಾಗೂ ಸೇವಾ ಭದ್ರತೆಗಳು ಲಭ್ಯವಾಗುತ್ತಿಲ್ಲ ಎಂಬುದು ಅವರ ಪ್ರಮುಖ ಆಕ್ಷೇಪವಾಗಿದೆ. ಇದೇ ಕಾರಣಕ್ಕಾಗಿ ಅವರು ಸರ್ಕಾರಿ ಭೂಮಾಪಕರಾಗಿ ಖಾಯಂ ನೇಮಕಾತಿ, ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ಸಾಮಾಜಿಕ ಭದ್ರತೆ ಹಾಗೂ ವೃತ್ತಿ ಗೌರವ ನೀಡುವಂತೆ ಭೂಮಾಪಕರ ಮುಷ್ಕರದಲ್ಲಿ ಸರ್ಕಾರವನ್ನು ಆಗ್ರಹಿಸಲಾತ್ತಿದೆ.
ರಾಜ್ಯ ಸರ್ಕಾರವು 2002ರಿಂದ 2024ರವರೆಗೆ ವಿವಿಧ ಹಂತಗಳಲ್ಲಿ ಪರವಾನಗಿ ಭೂಮಾಪಕರನ್ನು ನೇಮಕ ಮಾಡಿಕೊಂಡಿದ್ದು, ಭೂಮಾಪನ ಮತ್ತು ಭೂದಾಖಲೆ ಇಲಾಖೆಯ ಬಹುತೇಕ ಕೆಲಸಗಳನ್ನು ಇವರ ಮೂಲಕವೇ ನಿರ್ವಹಿಸಿಕೊಂಡು ಬಂದಿದೆ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಸಿಬ್ಬಂದಿ ವರ್ಗವು, ಇಂದಿಗೂ ತಾತ್ಕಾಲಿಕ ಮತ್ತು ಅಸಂಘಟಿತ ಸ್ಥಿತಿಯಲ್ಲೇ ಸೇವೆ ಸಲ್ಲಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಪ್ರಸ್ತುತ ರಾಜ್ಯದಾದ್ಯಂತ ಸುಮಾರು 4,500ಕ್ಕೂ ಹೆಚ್ಚು ಪರವಾನಗಿ ಭೂಮಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ. ರೈತರ ಜಮೀನುಗಳ ಸೆರ್ವೇ, ಭೂ ಗಡಿ ಗುರುತುಪಡಿಸುವುದು, ಭೂ ದಾಖಲೆಗಳ ತಿದ್ದುಪಡಿ, ವಿವಿಧ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಭೂಮಾಪನ ಕಾರ್ಯಗಳು ಸೇರಿದಂತೆ ಹಲವು ಮಹತ್ವದ ಜವಾಬ್ದಾರಿಗಳನ್ನು ಇವರು ನಿರ್ವಹಿಸುತ್ತಿದ್ದಾರೆ. ರಾಜ್ಯದ ಭೂ ನಿರ್ವಹಣಾ ವ್ಯವಸ್ಥೆಯಲ್ಲಿ ಇವರು ಅವಿಭಾಜ್ಯ ಅಂಗವಾಗಿದ್ದರೂ, ಅವರ ಸೇವೆಗೆ ತಕ್ಕ ಮಾನ್ಯತೆ ಮತ್ತು ಭದ್ರತೆ ದೊರೆಯುತ್ತಿಲ್ಲ ಎಂಬುದು ಸಂಘದ ಆರೋಪವಾಗಿದೆ.

ಪರವಾನಗಿ ಭೂಮಾಪಕರ ನೇಮಕಾತಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ತಾಂತ್ರಿಕ ತರಬೇತಿ, ಸೇವಾ ನಿಯಮಗಳು ಹಾಗೂ ಕಾರ್ಯನಿರ್ವಹಣೆಯ ಸ್ವರೂಪವು ಸರ್ಕಾರಿ ಭೂಮಾಪಕರಿಗೆ ಸಮಾನವಾಗಿದ್ದರೂ, ಅವರಿಗೆ ಮಾಸಿಕ ವೇತನ ವ್ಯವಸ್ಥೆ ಇಲ್ಲ. ಅವರು ಮಾಡಿದ ಕೆಲಸದ ಆಧಾರದ ಮೇಲೆ ಮಾತ್ರ ಸಂಭಾವನೆ ಪಡೆಯಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಅವರ ಜೀವನ ನಿರ್ವಹಣೆ ಅನಿಶ್ಚಿತತೆಯಿಂದ ಕೂಡಿದ್ದು, ಕುಟುಂಬಗಳ ಭವಿಷ್ಯವೂ ಸಂಕಷ್ಟಕ್ಕೆ ಸಿಲುಕಿದೆ.
ಇದರ ಜತೆಗೆ, ಉದ್ಯೋಗಿಗಳಿಗೆ ಅತ್ಯಗತ್ಯವಾಗಿರುವ ಇಎಸ್‌ಐ, ಪಿಎಫ್, ಆರೋಗ್ಯ ವಿಮೆ, ನಿವೃತ್ತಿ ಸೌಲಭ್ಯ, ಅಪಘಾತ ವಿಮೆ ಹಾಗೂ ಇತರೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳು ಸಹ ಪರವಾನಗಿ ಭೂಮಾಪಕರಿಗೆ ದೊರೆಯುತ್ತಿಲ್ಲ. ಸರ್ಕಾರಿ ಇಲಾಖೆಯ ಕೆಲಸವನ್ನು ಪೂರ್ಣ ಪ್ರಮಾಣದಲ್ಲಿ ಮಾಡಿಸಿಕೊಂಡರೂ, ಕನಿಷ್ಠ ಕಾರ್ಮಿಕ ಹಕ್ಕುಗಳು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸದಿರುವುದು ಅನ್ಯಾಯವಾಗಿದೆ ಎಂದು ಸಂಘದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಜಮೀನುಗಳ ಸರ್ವೇ, ಪೌತಿ ಖಾತೆ, ಗಡಿ ವಿವಾದಗಳ ಇತ್ಯರ್ಥ ಸೇರಿದಂತೆ ಅನೇಕ ಸೇವೆಗಳು ವಿಳಂಬವಾಗುತ್ತಿದ್ದು, ಸಾರ್ವಜನಿಕರಿಗೆ ಪರೋಕ್ಷವಾಗಿ ಸಮಸ್ಯೆಗಳು ಎದುರಾಗುತ್ತಿವೆ. ಮುಷ್ಕರದ ಪರಿಣಾಮವಾಗಿ ಕಳೆದ ನಾಲ್ಕು ತಿಂಗಳಲ್ಲಿ ಅಂದಾಜು 6 ರಿಂದ 7 ಲಕ್ಷ ಮಂದಿ ರೈತರು ಮತ್ತು ಸಾರ್ವಜನಿಕರ ಭೂಮಾಪನ ಅರ್ಜಿಗಳು ಬಾಕಿ ಉಳಿದಿವೆ. ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಪರವಾನಗಿ ಭೂಮಾಪಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದರೂ, ಅವರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ.

ಭೂಮಾಪನ ಕಾರ್ಯವು ಕೇವಲ ಜಮೀನಿನ ಅಳತೆ ಮಾಡುವ ಪ್ರಕ್ರಿಯೆಯಲ್ಲ; ಅದು ತಾಂತ್ರಿಕ ಜ್ಞಾನ, ಕ್ಷೇತ್ರ ಅನುಭವ, ಕಾನೂನು ಅರಿವು ಹಾಗೂ ಸ್ಥಳ ಪರಿಶೀಲನೆಗಳನ್ನು ಒಳಗೊಂಡಿರುವ ಅತ್ಯಂತ ಜವಾಬ್ದಾರಿಯುತ ಕಾರ್ಯವಾಗಿದೆ. ಭೂ ದಾಖಲೆಗಳ ನಿಖರತೆ, ಆಸ್ತಿ ಹಕ್ಕುಗಳ ರಕ್ಷಣೆ ಹಾಗೂ ಭೂ ವಿವಾದಗಳ ನಿವಾರಣೆಯಲ್ಲಿ ಭೂಮಾಪನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಈ ಕಾರ್ಯವನ್ನು ತರಬೇತಿ ಪಡೆದ ಅಧಿಕೃತ ಭೂಮಾಪಕರ ಮೂಲಕವೇ ನಡೆಸುವುದು ಅಗತ್ಯವಾಗಿದೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಸ್ವಾವಲಂಬಿ’ ಯೋಜನೆಯಡಿ ರೈತರು ಅಥವಾ ಸಾರ್ವಜನಿಕರು ತಮ್ಮ ಜಮೀನಿನ ಅಳತೆಯನ್ನು ಸ್ವತಃ ಮಾಡಿಸಿಕೊಂಡು, ನಕ್ಷೆಗಳನ್ನು ಸಿದ್ಧಪಡಿಸಿ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಯೋಜನೆಯ ಉದ್ದೇಶ ಭೂಮಾಪನ ಪ್ರಕ್ರಿಯೆಯನ್ನು ಸರಳಗೊಳಿಸುವುದು ಮತ್ತು ಸೇವೆಗಳನ್ನು ವೇಗವಾಗಿ ಜನರಿಗೆ ತಲುಪಿಸುವುದಾಗಿದೆ. ಆದರೆ ಯೋಜನೆಯ ಅನುಷ್ಠಾನದಲ್ಲಿ ಹಲವು ಪ್ರಾಯೋಗಿಕ ಮತ್ತು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವ ಬಗ್ಗೆ ರೈತರು ಹಾಗೂ ತಜ್ಞ ವಲಯಗಳಿಂದ ಆಕ್ಷೇಪಗಳು ವ್ಯಕ್ತವಾಗುತ್ತಿವೆ.
ಭೂಮಾಪನಕ್ಕೆ ಸಂಬಂಧಿಸಿದ ತಾಂತ್ರಿಕ ಜ್ಞಾನ ಎಲ್ಲ ರೈತರು ಅಥವಾ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ಜಮೀನಿನ ಗಡಿ ಗುರುತಿಸುವುದು, ಭೂ ದಾಖಲೆಗಳಿಗೆ ಹೊಂದಾಣಿಕೆ ಮಾಡುವುದು, ನಿಖರ ನಕ್ಷೆ ತಯಾರಿಸುವುದು ಹಾಗೂ ಕಾನೂನುಬದ್ಧ ದಾಖಲೆಗಳನ್ನು ಸಿದ್ಧಪಡಿಸುವುದು ಸಾಮಾನ್ಯ ವ್ಯಕ್ತಿಗೆ ಸುಲಭದ ಕೆಲಸವಲ್ಲ. ಇದರಿಂದಾಗಿ ಬಹುತೇಕ ಜನರು ಖಾಸಗಿ ಮಧ್ಯವರ್ತಿಗಳು, ತಾಂತ್ರಿಕ ಸಲಹೆಗಾರರು ಅಥವಾ ಏಜೆಂಟರ ನೆರವನ್ನು ಪಡೆಯಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ.

ಈ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಮೇಲೆ ಹೆಚ್ಚುವರಿ ಹಣಕಾಸಿನ ಹೊರೆ ಬೀಳುತ್ತಿದೆ. ಸರ್ಕಾರದ ಸೇವೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಜಾರಿಗೆ ತಂದ ಯೋಜನೆಯೇ ಕೆಲವು ಸಂದರ್ಭಗಳಲ್ಲಿ ಹೆಚ್ಚುವರಿ ವೆಚ್ಚ, ವಿಳಂಬ ಹಾಗೂ ಅನಗತ್ಯ ಅವಲಂಬನೆಗೆ ಕಾರಣವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಜತೆಗೆ ತಪ್ಪು ಮಾಹಿತಿ ನೀಡುವುದು, ದಾಖಲೆಗಳಲ್ಲಿ ವ್ಯತ್ಯಾಸ ಉಂಟಾಗುವುದು ಹಾಗೂ ವಂಚನೆ ನಡೆಯುವ ಅಪಾಯಗಳೂ ಹೆಚ್ಚಾಗುತ್ತಿವೆ.
ಭೂಮಾಪನ ಕಾರ್ಯದಲ್ಲಿ ಸ್ಥಳ ಪರಿಶೀಲನೆ ಅತ್ಯಂತ ಪ್ರಮುಖ ಅಂಶವಾಗಿದೆ. ಅಧಿಕೃತ ಭೂಮಾಪಕರು ಸ್ಥಳಕ್ಕೆ ಭೇಟಿ ನೀಡಿ, ಗಡಿಗಳನ್ನು ಪರಿಶೀಲಿಸಿ, ನೆರೆ ಜಮೀನುಗಳ ಹೊಂದಾಣಿಕೆ ಪರಿಶೀಲಿಸಿ ನಕ್ಷೆಗಳನ್ನು ಸಿದ್ಧಪಡಿಸುವುದರಿಂದ ನಿಖರತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಸ್ಥಳ ಪರಿಶೀಲನೆ ಮತ್ತು ಅಧಿಕೃತ ದೃಢೀಕರಣವಿಲ್ಲದೆ ಕೇವಲ ಆನ್‌ಲೈನ್ ಮೂಲಕ ಸಲ್ಲಿಸಲಾದ ನಕ್ಷೆಗಳನ್ನು ಅನುಮೋದಿಸುವುದು ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
ತಪ್ಪಾದ ಅಳತೆಗಳು ಅಥವಾ ಅಸಂಗತ ನಕ್ಷೆಗಳು ಭೂ ಗಡಿ ವಿವಾದಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಇಂತಹ ಪ್ರಕರಣಗಳು ಗ್ರಾಮ ಮಟ್ಟದಿಂದ ನ್ಯಾಯಾಲಯದವರೆಗೆ ತಲುಪುವ ಸಾಧ್ಯತೆ ಇರುವುದರಿಂದ ರೈತರು ಅನಗತ್ಯ ಕಾನೂನು ಹೋರಾಟಕ್ಕೆ ಒಳಗಾಗುವ ಅಪಾಯವಿದೆ. ಇದರಿಂದ ಸಮಯ, ಹಣ ಹಾಗೂ ಮಾನಸಿಕ ಒತ್ತಡ ಹೆಚ್ಚುವುದಲ್ಲದೆ, ಭೂ ದಾಖಲೆ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ನಂಬಿಕೆಯೂ ಕುಸಿಯಬಹುದು.

ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಭೂಮಾಪನ ಕಾರ್ಯದಲ್ಲಿ ಗುಣಮಟ್ಟ, ನಿಖರತೆ ಹಾಗೂ ಕಾನೂನುಬದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ‘ಸ್ವಾವಲಂಬಿ’ ಯೋಜನೆಯ ಅನುಷ್ಠಾನವನ್ನು ತಕ್ಷಣ ಮರುಪರಿಶೀಲಿಸಿ, ಅಗತ್ಯವಿದ್ದಲ್ಲಿ ಯೋಜನೆಯನ್ನು ಸ್ಥಗಿತಗೊಳಿಸಿ, ಅಧಿಕೃತ ಭೂಮಾಪಕರ ಮೇಲ್ವಿಚಾರಣೆ ಮತ್ತು ಸ್ಥಳ ಪರಿಶೀಲನೆಯ ಮೂಲಕವೇ ಭೂಮಾಪನ ಕಾರ್ಯಗಳನ್ನು ನಡೆಸುವ ವ್ಯವಸ್ಥೆಯನ್ನು ಬಲಪಡಿಸಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.
ಹಲವು ವರ್ಷಗಳಿಂದ ಇಲಾಖೆಯ ಕಾರ್ಯಭಾರವನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಪರವಾನಗಿ ಭೂಮಾಪಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಬದಲು ಸರ್ಕಾರ ಖಾಸಗಿ ಏಜೆನ್ಸಿಗಳ ಮೂಲಕ ಸರ್ವೇ ಕಾರ್ಯಗಳನ್ನು ನಡೆಸಲು ಮುಂದಾಗಿರುವುದು ತೀವ್ರ ಆಕ್ಷೇಪಾರ್ಹವಾಗಿದೆ. ಇಲಾಖೆಯಲ್ಲಿಯೇ ಅನುಭವಿಗಳಾದ ಭೂಮಾಪಕರು ಲಭ್ಯವಿದ್ದರೂ, ಹೊರಗಿನ ಸಂಸ್ಥೆಗಳಿಗೆ ಸರ್ವೇ ಕಾರ್ಯ ವಹಿಸುವ ನಿರ್ಧಾರವು ಸಾರ್ವಜನಿಕ ಹಣದ ದುರುಪಯೋಗಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಭೂಮಾಪನ ಕಾರ್ಯವು ಕೇವಲ ತಾಂತ್ರಿಕ ಕೆಲಸವಲ್ಲ; ಇದು ಭೂ ಹಕ್ಕು, ಆಸ್ತಿ ದಾಖಲೆ, ರೈತರ ಜೀವನೋಪಾಯ ಹಾಗೂ ಕಾನೂನುಬದ್ಧ ಹಕ್ಕುಗಳಿಗೆ ನೇರವಾಗಿ ಸಂಬಂಧಿಸಿದ ಅತ್ಯಂತ ಜವಾಬ್ದಾರಿಯುತ ಸೇವೆಯಾಗಿದೆ. ಇಂತಹ ಮಹತ್ವದ ಕಾರ್ಯವನ್ನು ಇಲಾಖೆಯ ಅನುಭವಿಗಳಾದ ಭೂಮಾಪಕರನ್ನು ಕಡೆಗಣಿಸಿ ಖಾಸಗಿ ಏಜೆನ್ಸಿಗಳಿಗೆ ನೀಡುವುದು ಭೂ ದಾಖಲೆಗಳ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯ ಮೇಲೆಯೂ ಪ್ರಶ್ನಾರ್ಥಕ ಚಿಹ್ನೆ ಮೂಡಿಸುವಂತಾಗಿದೆ.

ಇದೀಗ ನಾಲ್ಕು ತಿಂಗಳಿಗೂ ಅಧಿಕ ಅವಧಿಯಿಂದ ಶಾಂತಿಯುತವಾಗಿ ನಡೆಯುತ್ತಿರುವ ಪರವಾನಗಿ ಭೂಮಾಪಕರ ಹೋರಾಟವನ್ನು ದುರ್ಬಲಗೊಳಿಸುವ ಉದ್ದೇಶದಿಂದ 2020ರ ನಂತರ ನೇಮಕಗೊಂಡಿರುವ ಸುಮಾರು 300 ರಿಂದ 350 ಯುವ ಪರವಾನಗಿ ಭೂಮಾಪಕರ ವಿರುದ್ಧ ಅಮಾನತು ಆದೇಶಗಳನ್ನು ಹೊರಡಿಸಿರುವುದು ಹೋರಾಟಗಾರರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಜೂನಿಯರ್ ಮತ್ತು ಸೀನಿಯರ್ ಬ್ಯಾಚ್‌ಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಿ ಸಂಘಟನೆಯ ಒಗ್ಗಟ್ಟನ್ನು ಮುರಿಯುವ ಯಾವುದೇ ಪ್ರಯತ್ನ ಪ್ರಜಾಪ್ರಭುತ್ವದ ಹೋರಾಟದ ಆತ್ಮಕ್ಕೆ ವಿರುದ್ಧವಾಗಿದೆ ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ.
ಪರವಾನಗಿ ಭೂಮಾಪಕರು ಸರ್ಕಾರಿ ಭೂಮಾಪಕರಂತೆಯೇ ಸಮಾನ ಶೈಕ್ಷಣಿಕ ಅರ್ಹತೆ, ತಾಂತ್ರಿಕ ತರಬೇತಿ, ಕ್ಷೇತ್ರಾನುಭವ ಮತ್ತು ಜವಾಬ್ದಾರಿಗಳನ್ನು ಹೊಂದಿದ್ದರೂ, ಅವರಿಗೆ ದೊರೆಯುತ್ತಿರುವ ವೇತನ ಮತ್ತು ಸೌಲಭ್ಯಗಳಲ್ಲಿ ತೀವ್ರ ಅಸಮಾನತೆ ಕಂಡುಬರುತ್ತಿದೆ. ಒಂದು ಕಡತ ಸಂಪೂರ್ಣವಾಗಿ ಮುಕ್ತಾಯಗೊಂಡರೆ ಕೇವಲ ₹1,200 ಹಾಗೂ ವಿವಿಧ ಕಾರಣಗಳಿಂದ ಕಡತ ಪೂರ್ಣಗೊಳ್ಳದಿದ್ದರೆ ಕೇವಲ ₹360 ಮಾತ್ರ ಪಾವತಿಸಲಾಗುತ್ತಿದೆ. ಇಂದಿನ ದುಬಾರಿ ಜೀವನದಲ್ಲಿ ಈ ಮೊತ್ತವು ವೃತ್ತಿಪರ ಭೂಮಾಪಕರ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ ಎಂಬುದು ಅವರ ವಾದವಾಗಿದೆ.
ಇದಲ್ಲದೆ, ಅವರಿಗೆ ಯಾವುದೇ ನಿಯಮಿತ ವೇತನ ವ್ಯವಸ್ಥೆ ಇಲ್ಲ. ಪಿಎಫ್, ಇಎಸ್‌ಐ, ಆರೋಗ್ಯ ವಿಮೆ, ನಿವೃತ್ತಿ ಸೌಲಭ್ಯ, ಕುಟುಂಬ ಭದ್ರತೆ ಸೇರಿದಂತೆ ಮೂಲಭೂತ ಸಾಮಾಜಿಕ ಭದ್ರತಾ ಸೌಲಭ್ಯಗಳೂ ದೊರೆಯುತ್ತಿಲ್ಲ. ಹಲವೆಡೆ ಕಚೇರಿಗಳಲ್ಲಿ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು, ಅಗತ್ಯ ಮೂಲಸೌಕರ್ಯಗಳ ಕೊರತೆ ಇರುವುದೂ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ಸಮಸ್ಯೆಯ ಮೂಲವನ್ನು ಪರಿಹರಿಸುವ ಬದಲು ಖಾಸಗಿ ಏಜೆನ್ಸಿಗಳ ಮೂಲಕ ಸರ್ವೇ ಕಾರ್ಯ ನಡೆಸುವುದು ಹಾಗೂ ಸ್ವಾವಲಂಬಿ ಯೋಜನೆಯಂತಹ ಕ್ರಮಗಳನ್ನು ಜಾರಿಗೊಳಿಸುವುದು ಇಲಾಖೆಯ ಅನುಭವಿಗಳನ್ನು ಕಡೆಗಣಿಸುವ ಕ್ರಮವಾಗಿದೆ ಎಂದು ಭೂಮಾಪಕರ ಸಂಘಟನೆಗಳು ಆರೋಪಿಸುತ್ತಿವೆ. ಭೂಮಾಪನದಂತಹ ತಾಂತ್ರಿಕ ಮತ್ತು ಕಾನೂನುಬದ್ಧ ಪರಿಣಾಮ ಹೊಂದಿರುವ ಕಾರ್ಯಗಳಲ್ಲಿ ಪರಿಣಿತರ ಪಾತ್ರವನ್ನು ಕಡಿಮೆ ಮಾಡುವುದು ಭವಿಷ್ಯದಲ್ಲಿ ಹೆಚ್ಚಿನ ವಿವಾದಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಈದಿನ.ಕಾಮ್ ಜೊತೆ ಮಾತನಾಡಿದ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ಅಧ್ಯಕ್ಷ ತಿರುಮಲೇಗೌಡ, “ಪರವಾನಗಿ ಭೂಮಾಪಕರು ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ರಾಜ್ಯದ ಭೂಮಾಪನ ಮತ್ತು ಭೂದಾಖಲೆ ಸಂಬಂಧಿತ ಕಾರ್ಯಗಳಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದರೂ, ಅವರಿಗೆ ಸರ್ಕಾರಿ ನೌಕರರಿಗೆ ದೊರೆಯುವ ಯಾವುದೇ ಭದ್ರತೆ, ವೇತನಮಾನ ಅಥವಾ ಸೇವಾ ಸೌಲಭ್ಯಗಳು ಲಭ್ಯವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಪರವಾನಗಿ ಭೂಮಾಪಕರ ವ್ಯವಸ್ಥೆಯನ್ನು 1998-99ನೇ ಸಾಲಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ (KLR Act) ಕಲಂ 46ರ ತಿದ್ದುಪಡಿಯ ಅನ್ವಯ ಇಲಾಖೆಗೆ ಪರಿಚಯಿಸಲಾಗಿತ್ತು. ಭೂಮಾಪನ ಕಾರ್ಯಗಳ ಹೆಚ್ಚುತ್ತಿರುವ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೆ ತರಲಾಗಿದ್ದು, 2002ರಲ್ಲಿ ಸುಮಾರು 800 ರಿಂದ 1000 ಮಂದಿಗೆ ಇಲಾಖೆಯ ವತಿಯಿಂದ ನಿಯಮಾನುಸಾರ ತರಬೇತಿ ನೀಡಿ, ಜಿಲ್ಲಾವಾರು ಕಾರ್ಯನಿರ್ವಹಿಸಲು ಪರವಾನಗಿ ನೀಡಲಾಗಿತ್ತು. ಆದರೆ, ಇಲಾಖೆಯ ಕಾರ್ಯಭಾರವನ್ನು ನಿರಂತರವಾಗಿ ನಿರ್ವಹಿಸುತ್ತಿದ್ದ ಈ ಭೂಮಾಪಕರನ್ನು ಸರ್ಕಾರಿ ಸೇವೆಯಲ್ಲಿ ಸಕ್ರಮಗೊಳಿಸುವ ಯಾವುದೇ ಕ್ರಮವನ್ನು ಸರ್ಕಾರ ಈವರೆಗೆ ಕೈಗೊಂಡಿಲ್ಲ. ಎರಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದರೂ, ಅವರ ಸೇವಾ ಅನುಭವ ಮತ್ತು ಕೊಡುಗೆಯನ್ನು ಪರಿಗಣಿಸದೆ ನಿರ್ಲಕ್ಷ್ಯ ಮಾಡಲಾಗಿದೆ” ಎಂದು ಆರೋಪಿಸಿದರು.

ಸಂಘದ ರಾಜ್ಯ ನಿರ್ದೇಶಕ ಪಿ.ಆರ್. ಷಣ್ಮುಖ ಮಾತನಾಡಿ, “ಪ್ರಸ್ತುತ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡನೇ ದರ್ಜೆ ಭೂಮಾಪಕರಿಗೆ ನೀಡಲಾಗುವ ಸಂಭಾವನೆಯನ್ನು ಪ್ರತಿ ಕಡತಕ್ಕೆ ಕೇವಲ 300 ರೂಪಾಯಿಗಳಂತೆ ನಿಗದಿಪಡಿಸಲಾಗಿದ್ದು, ತಿಂಗಳಿಗೆ ಗರಿಷ್ಠ 18 ಕಡತಗಳಿಗೆ ಮಾತ್ರ ಮಿತಿಗೊಳಿಸಲಾಗಿದೆ. ಇದರಿಂದ ಭೂಮಾಪಕರ ಆದಾಯವು ಅತ್ಯಂತ ಕಡಿಮೆ ಮಟ್ಟಕ್ಕೆ ಸೀಮಿತವಾಗಿದ್ದು, ಜೀವನ ನಿರ್ವಹಣೆಯೇ ಕಷ್ಟಕರವಾಗಿದೆ. ಇದಲ್ಲದೆ, ಭೂಮಾಪನ ಸೇವೆ ಪಡೆಯುವ ರೈತರು ಮತ್ತು ಸಾರ್ವಜನಿಕರಿಂದ ನೇರವಾಗಿ ಶುಲ್ಕವನ್ನು ಸಂಗ್ರಹಿಸಿ, ಅದರಲ್ಲಿ ಶೇ.20ರಷ್ಟು ಮೊತ್ತವನ್ನು ಇಲಾಖೆಗೆ ಪಾವತಿಸಿ ಉಳಿದ ಶೇ.80ರಷ್ಟು ಹಣದಿಂದಲೇ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸರ್ಕಾರದ ಇಲಾಖೆಯ ಕೆಲಸವನ್ನೇ ನಿರ್ವಹಿಸುತ್ತಿದ್ದರೂ, ಉದ್ಯೋಗ ಭದ್ರತೆ, ನಿಗದಿತ ವೇತನ ಅಥವಾ ನಿವೃತ್ತಿ ಸೌಲಭ್ಯಗಳು ಇಲ್ಲದಿರುವುದು ಪರವಾನಗಿ ಭೂಮಾಪಕರಿಗೆ ಅನ್ಯಾಯವಾಗಿದೆ” ಎಂದು ಅಭಿಪ್ರಾಯಪಟ್ಟರು.
“ಸರ್ಕಾರಿ ಭೂಮಾಪಕರಂತೆ ಕ್ಷೇತ್ರಮಟ್ಟದಲ್ಲಿ ಒಂದೇ ರೀತಿಯ ಜವಾಬ್ದಾರಿ ಮತ್ತು ತಾಂತ್ರಿಕ ಕಾರ್ಯಗಳನ್ನು ನಿರ್ವಹಿಸುತ್ತಿರುವ ಪರವಾನಗಿ ಭೂಮಾಪಕರಿಗೂ ಸಮಾನ ವೇತನ, ಸೇವಾ ಭದ್ರತೆ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಬೇಕು. ಹಲವು ವರ್ಷಗಳಿಂದ ಸಲ್ಲಿಸಿರುವ ಮನವಿಗಳಿಗೆ ಸರ್ಕಾರ ಸ್ಪಂದಿಸದಿರುವುದರಿಂದ ಭೂಮಾಪಕರಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಸರ್ಕಾರ ಕೂಡಲೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದರು.
ಮೈಸೂರು ಜಿಲ್ಲಾಧ್ಯಕ್ಷ ಮಹದೇವೇಗೌಡ ಮಾತನಾಡಿ, “23 ವರ್ಷಗಳಿಗಿಂತ ಹೆಚ್ಚು ಕಾಲ ಇಲಾಖೆಗೆ ಸೇವೆ ಸಲ್ಲಿಸಿರುವ ಹಿರಿಯ ಪರವಾನಗಿ ಭೂಮಾಪಕರಿಗೂ ಪದೋನ್ನತಿ, ಸೇವಾ ಭದ್ರತೆ ಅಥವಾ ಉದ್ಯೋಗದ ಸ್ಥಿರತೆ ಲಭ್ಯವಾಗಿಲ್ಲ. ವರ್ಷಗಳ ಅನುಭವ ಹೊಂದಿದ್ದರೂ ಅವರು ಇನ್ನೂ ತಾತ್ಕಾಲಿಕ ವ್ಯವಸ್ಥೆಯಲ್ಲೇ ಕಾರ್ಯನಿರ್ವಹಿಸಬೇಕಾಗಿರುವುದು ಸರ್ಕಾರದ ಮಾನವ ಸಂಪನ್ಮೂಲ ನಿರ್ವಹಣೆಯ ವೈಫಲ್ಯವನ್ನು ತೋರಿಸುತ್ತದೆ. ಭೂಮಾಪನ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಪರವಾನಗಿ ಭೂಮಾಪಕರು ಅನೇಕ ಅಪಾಯಗಳನ್ನು ಎದುರಿಸುತ್ತಾರೆ. ಮಳೆ, ಬಿಸಿಲು, ದುರ್ಗಮ ಪ್ರದೇಶಗಳು, ಕಾಡುಪ್ರಾಣಿಗಳ ದಾಳಿ, ವಿಷಜಂತುಗಳ ಕಾಟ, ರಸ್ತೆ ಅಪಘಾತಗಳ ಅಪಾಯ, ಸಾರ್ವಜನಿಕರಿಂದ ಬೆದರಿಕೆ ಕರೆಗಳು ಹಾಗೂ ಕೆಲವೊಮ್ಮೆ ದೈಹಿಕ ಮತ್ತು ಮಾನಸಿಕ ಹಲ್ಲೆಗಳನ್ನು ಸಹ ಎದುರಿಸುತ್ತ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲಿಯೂ ರಾಜ್ಯದ ಭೂ ದಾಖಲೆ ವ್ಯವಸ್ಥೆಯನ್ನು ಸುಗಮವಾಗಿ ನಡೆಸಲು ಅವರು ಮಹತ್ವದ ಕೊಡುಗೆ ನೀಡುತ್ತಿದ್ದಾರೆ” ಎಂದರು.
ಪ್ರಮುಖ ಬೇಡಿಕೆಗಳು
- ಪರವಾನಗಿ ಭೂಮಾಪಕರನ್ನು ಸರ್ಕಾರಿ ಭೂಮಾಪಕರಾಗಿ ಖಾಯಂ ಮಾಡಬೇಕು.
- ಸಮಾನ ಕೆಲಸಕ್ಕೆ ಸಮಾನ ವೇತನ, ಸಮಾನ ಸೌಲಭ್ಯ, ಸೇವಾ ಭದ್ರತೆ ಹಾಗೂ ವೃತ್ತಿ ಗೌರವ ನೀಡಬೇಕು.
- ನಿಯಮಿತ ವೇತನ ವ್ಯವಸ್ಥೆ ಜಾರಿಗೊಳಿಸಿ, ಆರೋಗ್ಯ ವಿಮೆ, ಪಿಎಫ್, ವಿವಿಧ ಭತ್ಯೆಗಳು, ನಿವೃತ್ತಿ ಗೌರವಧನ ಹಾಗೂ ಕುಟುಂಬ ಸಹಾಯಧನ ವ್ಯವಸ್ಥೆ ಕಲ್ಪಿಸಬೇಕು.
- ಪರವಾನಗಿ ಭೂಮಾಪಕರ ಬೇಡಿಕೆಗಳು ಈಡೇರುವವರೆಗೆ ಸರ್ಕಾರಿ ಭೂಮಾಪಕರು(GS) ಹಾಗೂ ಪರವಾನಗಿ ಭೂಮಾಪಕರು(LS) ಹುದ್ದೆಗಳ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು.
- ʼಪರವಾನಗಿʼ ವ್ಯವಸ್ಥೆಗೆ ಅಂತ್ಯ ಹಾಡಿ, ಶಾಶ್ವತ ಮತ್ತು ಭದ್ರವಾದ ಸೇವಾ ರೂಪುರೇಷೆಯನ್ನು ಜಾರಿಗೊಳಿಸಬೇಕು.
- ಸ್ವಾವಲಂಬಿ ಯೋಜನೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು.
- ಖಾಸಗಿ ಏಜೆನ್ಸಿಗಳ ಮೂಲಕ ಸರ್ವೇ ಕಾರ್ಯ ನೀಡುವ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು.
ಪರವಾನಗಿ ಭೂಮಾಪಕರ ಬೇಡಿಕೆಗಳು ಕೇವಲ ಉದ್ಯೋಗ ಭದ್ರತೆಗೆ ಸಂಬಂಧಿಸಿದವುಗಳಲ್ಲ; ರಾಜ್ಯದ ಭೂ ದಾಖಲೆಗಳ ನಿಖರತೆ, ರೈತರ ಹಿತಾಸಕ್ತಿ, ಸಾರ್ವಜನಿಕ ಸೇವೆಯ ಗುಣಮಟ್ಟ ಮತ್ತು ಭೂ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡುವ ಉದ್ದೇಶವನ್ನೂ ಹೊಂದಿವೆ. ಆದ್ದರಿಂದ ಸರ್ಕಾರವು ಸಂಘಟನೆಗಳೊಂದಿಗೆ ತಕ್ಷಣ ಮಾತುಕತೆ ನಡೆಸಿ ನ್ಯಾಯಯುತ ಪರಿಹಾರ ಕಂಡುಕೊಳ್ಳಬೇಕೆಂಬ ಒತ್ತಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಕರ್ನಾಟಕದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಪರವಾನಗಿ ಭೂಮಾಪಕರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘ (ರಿ), ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜೂನ್ 23ರಂದು ಮುಷ್ಕರ ನಡೆಸಿ, ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸಿಎಂ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟವನ್ನು ಹಿಂಪಡೆದು ಒಂದೂವರೆ ತಿಂಗಳೊಳಗೆ ಬೇಡಿಕೆ ಈಡೇರಿಸುವಂತೆ ಗಡುವು ನೀಡಿರುವುದಾಗಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?ಮೈಸೂರಿನಲ್ಲಿ ಜೀತಪದ್ಧತಿ ಇನ್ನೂ ಜೀವಂತ: ಬಾಲ ಕಾರ್ಮಿಕರೂ ಸೇರಿ 18 ಮಂದಿ ರಕ್ಷಣೆ
ಪರವಾನಗಿ ಭೂಮಾಪಕರು ಕಳೆದ ಹಲವು ವರ್ಷಗಳಿಂದ ಇಲಾಖೆಯ ಕಾರ್ಯಭಾರವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದು, ಅವರ ಸೇವೆಯನ್ನು ಪರಿಗಣಿಸಿ ಸರ್ಕಾರ ಮಾನವೀಯ ಹಾಗೂ ನ್ಯಾಯಯುತ ದೃಷ್ಟಿಕೋನದಿಂದ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿಯೂ ಕೇಳಿಬರುತ್ತಿದೆ. ರಾಜ್ಯದ ಭೂಮಾಪನ ವ್ಯವಸ್ಥೆಯ ಸುಗಮ ನಿರ್ವಹಣೆ ಹಾಗೂ ಸಾವಿರಾರು ಕುಟುಂಬಗಳ ಬದುಕಿನ ಭದ್ರತೆಯ ದೃಷ್ಟಿಯಿಂದ ಸರ್ಕಾರ ಶೀಘ್ರವೇ ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕೆಂದು ಸಂಘ ಆಗ್ರಹಿಸಿದೆ.




