ನಮ್ಮ ಕೈಯಲ್ಲಿರುವ 100 ರೂಪಾಯಿ ಮತ್ತು 500 ರೂಪಾಯಿ ನೋಟುಗಳು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಇರುವ ವಸ್ತುಗಳಲ್ಲ. ಒಂದು ಕಾಗದದ ತುಂಡಿಗೆ ಸರ್ಕಾರ ನಿರ್ದಿಷ್ಟ ಮೌಲ್ಯ ನೀಡುತ್ತದೆ; ಸಮಾಜದ ಎಲ್ಲರೂ ಅದನ್ನು ಒಪ್ಪಿಕೊಂಡಾಗ ಆ ಕಾಗದಕ್ಕೆ ಆರ್ಥಿಕ ಮೌಲ್ಯ ಬರುತ್ತದೆ. 100 ರೂಪಾಯಿಯ ನೋಟನ್ನು 500 ರೂಪಾಯಿಯ ನೋಟಿಗಿಂತ ಕಡಿಮೆ ಮೌಲ್ಯದದ್ದೆಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಪ್ರಕೃತಿಯ ದೃಷ್ಟಿಯಿಂದ ನೋಡಿದರೆ ಎರಡೂ ಕಾಗದಗಳೇ. ಅವುಗಳ ಮೌಲ್ಯವು ನಮ್ಮ ಸಾಮೂಹಿಕ ಒಪ್ಪಿಗೆಯಿಂದ ನಿರ್ಮಾಣವಾಗುತ್ತದೆ.
ಇದೇ ರೀತಿ ಸಮಾಜದಲ್ಲಿ ಅನೇಕ ನಿಯಮಗಳು, ಮೌಲ್ಯಗಳು ಮತ್ತು ಸಂಸ್ಥೆಗಳು ರೂಪುಗೊಳ್ಳುತ್ತವೆ. ಒಂದು ನಿರ್ದಿಷ್ಟ ವ್ಯವಸ್ಥೆಯನ್ನು ಜನರು ಒಪ್ಪಿಕೊಂಡು ಅನುಸರಿಸುತ್ತ ಬಂದಾಗ ಅದು ಸಾಮಾಜಿಕ ವ್ಯವಸ್ಥೆಯಾಗಿ ಬಲಗೊಳ್ಳುತ್ತದೆ. ಕಾಲಕ್ರಮೇಣ ಅದರ ಹಿಂದೆ ಅಧಿಕಾರ, ನಿಯಮಗಳು ಮತ್ತು ಸಂಸ್ಥೆಗಳು ರೂಪುಗೊಳ್ಳುತ್ತವೆ ಎಂದು ಡಾ. ಪ್ರವೀಣ್ ರಾಮಚಂದ್ರ ಅವರು ವಿವರಿಸಿದರು.
ಹಾಸನದಲ್ಲಿ ನಡೆದ ‘ನಾನೇಕೆ ನಾಸ್ತಿಕ?’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಮಾಜದಲ್ಲಿ ನಾವು ಸಹಜವೆಂದು ಒಪ್ಪಿಕೊಂಡಿರುವ ಅನೇಕ ಸಂಗತಿಗಳು ವಾಸ್ತವದಲ್ಲಿ ‘ಸಾಮಾಜಿಕ ನಿರ್ಮಿತಿಗಳು’ (Social Constructs) ಆಗಿರುತ್ತವೆ” ಎಂಬುದನ್ನು ಹಣದ ಉದಾಹರಣೆಗಳ ಮೂಲಕ ವಿವರಿಸಿದರು.
ಇದೇ ಪರಿಕಲ್ಪನೆಯನ್ನು ಧರ್ಮದೊಂದಿಗೆ ಹೋಲಿಸಿ ಅವರು ವಿವರಿಸಿ ಅವರು, “ಧರ್ಮದಲ್ಲಿಯೂ ಒಂದು ರೀತಿಯ ಅಧಿಕಾರ ವ್ಯವಸ್ಥೆ ಇರುತ್ತದೆ. ಉದಾಹರಣೆಗೆ, ಕ್ರೈಸ್ತ ಧರ್ಮದಲ್ಲಿ ಪೋಪ್ ಪ್ರಮುಖ ಧಾರ್ಮಿಕ ಅಧಿಕಾರಿಯಾಗಿದ್ದಾರೆ. ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆಗಳ ಕುರಿತು ಅವರು ನೀಡುವ ಸೂಚನೆಗಳಿಗೆ ಅನುಯಾಯಿಗಳು ಮಹತ್ವ ನೀಡುತ್ತಾರೆ. ಇಸ್ಲಾಂ ಧರ್ಮದಲ್ಲಿಯೂ ಧಾರ್ಮಿಕ ಪಂಡಿತರು, ಗ್ರಂಥಗಳು ಮತ್ತು ಧಾರ್ಮಿಕ ವ್ಯಾಖ್ಯಾನಗಳ ವ್ಯವಸ್ಥೆ ಇದೆ. ಹೀಗೆಯೇ ಪ್ರತಿಯೊಂದು ಧಾರ್ಮಿಕ ವ್ಯವಸ್ಥೆಯಲ್ಲಿಯೂ ಧಾರ್ಮಿಕ ನಂಬಿಕೆಗಳನ್ನು ವಿವರಿಸುವ ಅಥವಾ ನಿರ್ದೇಶಿಸುವ ಒಂದು ರೀತಿಯ ಅಧಿಕಾರ ಮತ್ತು ಮಧ್ಯವರ್ತಿತ್ವದ ವ್ಯವಸ್ಥೆ ಕಂಡುಬರುತ್ತದೆ” ಎಂದು ಹೇಳಿದರು.
“ಭಾರತದ ಸಂದರ್ಭದಲ್ಲಿ ಧರ್ಮ ಮತ್ತು ಸಮಾಜದ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವಾಗ ಸಂವಿಧಾನದ ಪಾತ್ರವನ್ನೂ ಗಮನಿಸಬೇಕು. ವಿವಿಧ ಧರ್ಮಗಳು ಮತ್ತು ಸಮುದಾಯಗಳ ನಡುವೆ ಸಾಮಾನ್ಯ ಸಾಮಾಜಿಕ–ರಾಜಕೀಯ ವ್ಯವಸ್ಥೆಯನ್ನು ರೂಪಿಸುವಲ್ಲಿ ಭಾರತದ ಸಂವಿಧಾನ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಹೇಳಿದರು.
“ಧಾರ್ಮಿಕ ನಂಬಿಕೆಗಳು ಮನುಷ್ಯನ ಬದುಕಿನಲ್ಲಿ ಹೇಗೆ ಪ್ರವೇಶಿಸುತ್ತವೆ ಎಂಬುದನ್ನು ವಿವರಿಸುವ ಸಂದರ್ಭದಲ್ಲಿ, ಮಕ್ಕಳು ಹುಟ್ಟಿದ ಕ್ಷಣದಿಂದಲೇ ತಮ್ಮ ಕುಟುಂಬ ಮತ್ತು ಸಮಾಜದಿಂದ ಅನೇಕ ನಂಬಿಕೆಗಳನ್ನು ಕಲಿಯುತ್ತಾರೆ. ಮಗು ಒಂದು ನಿರ್ದಿಷ್ಟ ಧಾರ್ಮಿಕ ಕುಟುಂಬದಲ್ಲಿ ಹುಟ್ಟಿದರೆ, ಆ ಕುಟುಂಬದ ಧಾರ್ಮಿಕ ಆಚರಣೆಗಳು, ದೇವರುಗಳು, ಕಥೆಗಳು ಮತ್ತು ನಂಬಿಕೆಗಳು ಸಹಜವಾಗಿಯೇ ಅದರ ಬದುಕಿನ ಭಾಗವಾಗುತ್ತವೆ” ಎಂದು ಡಾ. ಪ್ರವೀಣ್ ಹೇಳಿದರು.

ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ಅವರು, ತಾವು ಕೂಡ ಬಾಲ್ಯದಲ್ಲಿ ಪರೀಕ್ಷೆಗಳು ಬಂದಾಗ ವಿವಿಧ ದೇವರುಗಳಿಗೆ ಪ್ರಾರ್ಥಿಸುತ್ತಿದ್ದುದಾಗಿ ಹೇಳಿದರು. “ಶಾಲಾ ದಿನಗಳಲ್ಲಿ ಪರೀಕ್ಷೆಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸುವುದು, ವಿವಿಧ ರೀತಿಯ ಪೂಜೆಗಳನ್ನು ಮಾಡುವುದು, ಅದೇ ಸಂದರ್ಭದಲ್ಲಿ ಯಾವುದಾದರೂ ವಸ್ತುವನ್ನು ಅದೃಷ್ಟ ತರುವ ವಸ್ತುವೆಂದು ಭಾವಿಸಿ ಅದಕ್ಕೂ ಪೂಜೆ ಸಲ್ಲಿಸುವಂತಹ ಆಚರಣೆಗಳನ್ನು ಮಾಡುತ್ತಿದ್ದೆ. ʼನಾನು ಇದನ್ನೆಲ್ಲ ಏಕೆ ಮಾಡುತ್ತಿದ್ದೆ?ʼ ಎಂಬ ಪ್ರಶ್ನೆಗೆ ಉತ್ತರ ಹುಡುಕಿದಾಗ, ತಾನು ಹುಟ್ಟಿದ ಸಾಮಾಜಿಕ ಮತ್ತು ಕುಟುಂಬದ ಪರಿಸರವೇ ಆ ನಂಬಿಕೆಗಳನ್ನು ತನ್ನೊಳಗೆ ಬೆಳೆಸಿತ್ತು ಎಂಬುದನ್ನು ನಂತರ ಅರ್ಥಮಾಡಿಕೊಂಡೆ” ಎಂದು ಹೇಳಿದರು.
ಇಲ್ಲಿಂದ ಅವರು “ನಾವು ಏಕೆ ನಂಬುವುದನ್ನು ನಂಬುತ್ತೇವೆ?” ಎಂಬ ಮೂಲಭೂತ ಪ್ರಶ್ನೆಯನ್ನು ಮುಂದಿಟ್ಟರು. ಮನುಷ್ಯನ ನಂಬಿಕೆಗಳು ಕೇವಲ ವೈಯಕ್ತಿಕವಾಗಿ ಹುಟ್ಟುವುದಿಲ್ಲ. ಕುಟುಂಬ, ಶಿಕ್ಷಣ, ಧರ್ಮ, ಸಂಸ್ಕೃತಿ, ಸಾಮಾಜಿಕ ಪರಿಸರ ಮತ್ತು ಅಧಿಕಾರ ವ್ಯವಸ್ಥೆಗಳು ಅವುಗಳನ್ನು ರೂಪಿಸುತ್ತವೆ. ಬಾಲ್ಯದಿಂದಲೇ ನಿರಂತರವಾಗಿ ಒಂದು ವಿಚಾರವನ್ನು ಕೇಳುತ್ತ, ನೋಡುತ್ತ ಮತ್ತು ಆಚರಿಸುತ್ತ ಬಂದಾಗ ಅದು ಸಹಜ ಸತ್ಯವೆಂದು ನಮಗೆ ಅನಿಸಬಹುದು” ಎಂಬ ಹಿನ್ನೆಲೆಯಲ್ಲಿ ಅವರು “Social Construct” ಎಂಬ ಪರಿಕಲ್ಪನೆಯನ್ನು ವಿವರಿಸಿದರು.

“ಪ್ರಕೃತಿಯಲ್ಲಿ ಸ್ವತಂತ್ರವಾಗಿ ಅಸ್ತಿತ್ವದಲ್ಲಿರುವ ವಸ್ತುಗಳು ಒಂದೆಡೆ; ಮನುಷ್ಯರು ಪರಸ್ಪರ ಒಪ್ಪಿಕೊಂಡು ನಿರ್ಮಿಸಿಕೊಂಡಿರುವ ಮೌಲ್ಯಗಳು, ನಿಯಮಗಳು ಮತ್ತು ವ್ಯವಸ್ಥೆಗಳು ಮತ್ತೊಂದೆಡೆ. ಹಣದ ಮೌಲ್ಯ, ಸಾಮಾಜಿಕ ಸ್ಥಾನಮಾನ, ಕೆಲವು ಸಂಸ್ಥೆಗಳು ಮತ್ತು ವಿವಿಧ ಸಾಮಾಜಿಕ ನಿಯಮಗಳಂತೆ ಧಾರ್ಮಿಕ ನಂಬಿಕೆಗಳನ್ನೂ ಅವುಗಳ ಸಾಮಾಜಿಕ ಹಿನ್ನೆಲೆಯೊಂದಿಗೆ ಪರಿಶೀಲಿಸಬಹುದು” ಎಂಬುದು ಅವರ ಮಾತಿನ ಮುಖ್ಯ ಆಶಯವಾಗಿತ್ತು.
ಅವರು ʼಪ್ರಕೃತಿಯಲ್ಲಿ ನಾವು 100 ರೂಪಾಯಿ ಅಥವಾ 500 ರೂಪಾಯಿ ಎಂದು ಬೇರ್ಪಡಿಸಿದ ಯಾವುದೇ ವಸ್ತುವನ್ನು ಕಾಣುವುದಿಲ್ಲ; ಸಮಾಜದ ಸಾಮೂಹಿಕ ಒಪ್ಪಿಗೆಯಿಂದಲೇ ಆ ಮೌಲ್ಯ ನಿರ್ಮಾಣವಾಗುತ್ತದೆʼ ಎಂಬ ಉದಾಹರಣೆಯ ಮೂಲಕ ಸಾಮಾಜಿಕ ನಿರ್ಮಿತಿಯ ಪರಿಕಲ್ಪನೆಯನ್ನು ಸರಳವಾಗಿ ವಿವರಿಸಿದರು.
ಇದನ್ನೂ ಓದಿದ್ದೀರಾ? ಹಾಸನ | ಮನುಷ್ಯನನ್ನು ಕೇಂದ್ರವಾಗಿಟ್ಟುಕೊಂಡು ವೈಜ್ಞಾನಿಕವಾಗಿ ಚಿಂತಿಸಬೇಕು: ಡಾ. ರಾಜಪ್ಪ ದಳವಾಯಿ
ಅಂತಿಮವಾಗಿ, ನಾವು ಯಾವುದೇ ನಂಬಿಕೆಯನ್ನು ಹೊಂದಿದ್ದರೂ “ನಾನು ಇದನ್ನು ಏಕೆ ನಂಬುತ್ತೇನೆ?”, “ಈ ನಂಬಿಕೆ ನನ್ನೊಳಗೆ ಹೇಗೆ ಬಂತು?”, “ಇದಕ್ಕೆ ಸಾಕ್ಷ್ಯವೇನು?” ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕೆಂದು ಕರೆ ನೀಡಿದರು.
ನಂಬಿಕೆಗಳನ್ನು ಕುರುಡಾಗಿ ಸ್ವೀಕರಿಸುವ ಬದಲು ಅವುಗಳ ಮೂಲ, ಸಾಮಾಜಿಕ ಹಿನ್ನೆಲೆ ಮತ್ತು ಅವುಗಳನ್ನು ರೂಪಿಸುವ ಅಧಿಕಾರ ವ್ಯವಸ್ಥೆಗಳನ್ನು ಪರಿಶೀಲಿಸುವುದೇ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವದ ಮುಖ್ಯ ಲಕ್ಷಣವಾಗಿದೆ ಎಂದು ಡಾ. ಪ್ರವೀಣ್ ರಾಮಚಂದ್ರ ಅವರು ತಮ್ಮ ಮಾತುಗಳ ಮೂಲಕ ಸಂದೇಶ ನೀಡಿದರು.




