ಕೆಪಿಎಸ್ಸಿ ಹಗರಣದಲ್ಲಿ ನನ್ನ ಪಾತ್ರ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಂಡುಬಂದರೆ ನಾನು ರಾಜಕೀಯ ನಿವೃತ್ತಿ ಪಡೆಯಲು ಸಿದ್ಧನಾಗಿದ್ದೇನೆ. ಆದರೆ ಬಿಜೆಪಿ ಅಥವಾ ಜೆಡಿಎಸ್ನವರ ಪಾತ್ರವಿದ್ದರೆ ಅವರು ರಾಜಕೀಯ ನಿವೃತ್ತಿ ಪಡೆಯಲು ಸಿದ್ಧರಿದ್ದಾರೆಯೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸವಾಲೆಸೆದಿದ್ದಾರೆ.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು, ಪ್ರಿಯಾಂಕ್ ಖರ್ಗೆ ಅವರು ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಸಚಿವರಾಗಿದ್ದ ಅವಧಿಯಲ್ಲಿ ನಡೆದ ಸಹಾಯಕ ಎಕ್ಸಿಕ್ಯೂಟೀವ್ ಎಂಜಿನಿಯರ್ (AEE) ಹುದ್ದೆಗಳ ನೇಮಕಾತಿಯಲ್ಲಿ ಓಎಂಆರ್ (OMR) ಶೀಟ್ ತಿದ್ದುಪಡಿ ಸೇರಿದಂತೆ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಕೆಪಿಎಸ್ಸಿಯ ʼಭ್ರಷ್ಟʼ ರೋಗಕ್ಕೆ ಅರೆಬರೆ ತೇಪೆ ಸಾಕು; ಶಾಶ್ವತ ಮದ್ದು ಬೇಕು!
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿರುವ ಪ್ರಿಯಾಂಕ್ ಖರ್ಗೆ ಅವರು, ಎಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ದಾಖಲೆ ಇಲ್ಲದೆ, ಪುರಾವೆಗಳೇ ಇಲ್ಲದೆ ಹಿಟ್ ಆಂಡ್ ರನ್ ಮಾಡುವುದು ಅವರಿಗೆ ಅಭ್ಯಾಸವಾಗಿದೆ. ಮಾಜಿ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಯಾವ ತೂಕದಲ್ಲಿ ಮಾತನಾಡಬೇಕೋ ಹಾಗೆ ಮಾತನಾಡುತ್ತಿಲ್ಲ” ಎಂದಿದ್ದಾರೆ.
“ಇತ್ತೀಚೆಗೆ ಕುಮಾರಸ್ವಾಮಿ ಅವರು ಆರ್ಎಸ್ಎಸ್ ಕಚೇರಿಗೆ ಹೋಗಿದ್ದರು ಎಂಬ ಸುದ್ದಿಯಿದೆ. ಅಲ್ಲಿ ಅವರಿಗೆ ಬಹುಶಃ ಗುತ್ತಿಗೆ ನೀಡಿರಬೇಕು. ಇಲ್ಲಿನ ಬಿಜೆಪಿ ಮುಖಂಡರಿಗೆ ಸರ್ಕಾರವನ್ನು ಯಾವುದೇ ವಿಷಯದಲ್ಲಿ ಸಿಕ್ಕಿಹಾಕಿಸಲು ಆಗುತ್ತಿಲ್ಲ. ನಮ್ಮವರೂ ಯಾಕೋ ಆಸಕ್ತಿಯೂ ತೋರಿಸುತ್ತಿಲ್ಲ. ಆದ್ದರಿಂದ ನೀವು ಈ ಕೆಲಸ ಮಾಡಿ ಎಂದು ಗುತ್ತಿಗೆ ನೀಡಿರಬೇಕು. ಆರ್ಎಸ್ಎಸ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮನ್ನು ಅಥವಾ ನನ್ನನ್ನೇ ಗುರಿ ಮಾಡಲು ಗುತ್ತಿಗೆ ನೀಡಿದ್ದಂತಿದೆ” ಎಂದು ದೂರಿದ್ದಾರೆ.
“ಕೆಪಿಎಸ್ಸಿ ಹಗರಣದಲ್ಲಿ ಸಾಕಷ್ಟು ಅಕ್ರಮಗಳು ಆಗಿರುವುದು ಜಗಜ್ಜಾಹೀರು. ಆದರೆ ವಿಶೇಷವಾಗಿ 24 AW ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಎಚ್ಡಿಕೆ ಅವರು ಸಾಕಷ್ಟು ಅಪಪ್ರಚಾರ ಮಾಡುತ್ತಿದ್ದಾರೆ. ದೂರು ಇರುವುದು ಒಎಂಆರ್ ಶೀಟ್ ತಿದ್ದಲಾಗಿದೆ ಎಂಬುದು. ಒಎಂಆರ್ ಶೀಟ್ಗಳ ಕಸ್ಟಡಿ ಗ್ರಾಮೀಣಾಭಿವೃದ್ಧಿ ಇಲಾಖೆ, ಸಚಿವರು, ನಮ್ಮ ಕಾರ್ಯದರ್ಶಿಗಳ ಹತ್ತಿರ ಇರುತ್ತದೆಯೇ? ಒಎಂಆರ್ ಶೀಟ್ ಕೆಪಿಎಸ್ಸಿ ವಶದಲ್ಲಿರುತ್ತದೆ ಎಂಬ ಸಾಮಾನ್ಯ ಪ್ರಜ್ಞೆಯೂ ಜೆಡಿಎಸ್ ನಾಯಕರಿಗೆ ಇಲ್ಲವೇ? ಅದಕ್ಕೂ ನಮಗೂ ಏನು ಸಂಬಂಧ” ಎಂದು ಪ್ರಶ್ನಿಸಿದ್ದಾರೆ.
“ನಮಗೆ ಈ ವಿಚಾರದಲ್ಲಿ ಸಂಶಯ ಬಂದಾಗ ನಮ್ಮ ಕರ್ನಾಟಕ ಪೊಲೀಸರೇ ಆರೋಪಿಗಳನನ್ನು ವಶಕ್ಕೆ ಪಡೆದಿರುವುದು. ನಿಮ್ಮ ಸಿಬಿಐ, ಇಡಿ ಅಲ್ಲ. ಹೀಗಿರುವಾಗ ಸುಮ್ಮನೆ ಹಿಟ್ ಆಂಡ್ ರನ್ ಮಾಡುವ ಮುನ್ನ ಆಲೋಚನೆ ಮಾಡಿ. ತನಿಖೆ ಆಳವಾಗುತ್ತಾ ಹೋದಂತೆ ಬಿಜೆಪಿ, ಜೆಡಿಎಸ್ನವರು ದಿನ ಪತ್ರಿಕಾಗೋಷ್ಠಿ ನಡೆಸಿ ನಾವಲ್ಲ, ನಾವಲ್ಲ ಎಂದು ಹೇಳಿಕೊಳ್ಳಬಹುದು” ಎಂದು ವ್ಯಂಗ್ಯವಾಡಿದ್ದಾರೆ.
“ಕೆಪಿಎಸ್ಸಿ ಭ್ರಷ್ಟಾಚಾರದಲ್ಲಿ ತುಂಬಿ ತುಳಿಕಿರುವವರೆಲ್ಲರನ್ನೂ ಸದಸ್ಯರನ್ನು ನೇಮಕಾತಿ ಮಾಡಿರುವುದು ಮಾಜಿ ಸಿಎಂ ಯಡಿಯೂರಪ್ಪನವರು. ಯಾಕೆ ಇಂತಹ ಜನರನ್ನು ಆಯ್ಕೆ ಮಾಡಿದ್ದೀರಿ ಎಂದು ಕುಮಾರಸ್ವಾಮಿ ಒಂದು ಬಾರಿಯಾದರೂ ಪ್ರಶ್ನಿಸಿದ್ದಾರೆಯೇ? ಅವರ ಬಗ್ಗೆ ನೀವು ಮಾತನಾಡಲೂ ಸಿದ್ದರಿಲ್ಲ ಅಲ್ವ” ಎಂದು ಕೇಳಿದ್ದಾರೆ.




