ರೈಲ್ವೆ ನಿಲ್ದಾಣಕ್ಕೆ ಹೋಗತ್ತಿದ್ದ ವೃದ್ಧ ಮಹಿಳೆ ಮತ್ತು ಆಕೆಯ ಇಬ್ಬರು ಮೊಮ್ಮಕ್ಕಳ ಮೇಲೆ ಎಕ್ಸ್ಪ್ರೆಸ್ ರೈಲು ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ, ಸೋಮವಾರ ಮುಂಜಾನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಸಮೀಪ ಘಟಿಸಿದೆ.
ಮೃತರನ್ನು ಇರ್ಫಾನಾ (52) ಹಾಗೂ ಮೊಮ್ಮಕ್ಕಳಾದ ರುಕಿಯಾ (13) ಮತ್ತು ರಾಕಿಯಾ (8) ಎಂದು ಗುರುತಿಸಲಾಗಿದೆ. ಲಭ್ಯ ಮಾಹಿತಿ ಪ್ರಕಾರ, ಮೃತರು ಮುತ್ತೂರು ಕಡೆಯಿಂದ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ಈ ಘಟನೆ ಜರುಗಿದೆ.
ರಜೆ ಇದ್ದರಿಂದ ಮೊಮ್ಮಕ್ಕಳು ಹಿಂದೂಪುರದಿಂದ ಅಜ್ಜಿಯ ಮನೆಯಾದ ಮುತ್ತೂರಿಗೆ ಬಂದಿದ್ದರು. ಬೆಳಗ್ಗೆ ಹಿಂದೂಪುರಕ್ಕೆ ಹೋಗಲು ಅಜ್ಜಿಯ ಜೊತೆ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಮಾಹಿತಿಯ ಪ್ರಕಾರ, ಅಜ್ಜಿ ತನ್ನ ಮೊಮ್ಮಕ್ಕಳೊಂದಿಗೆ ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಬರುತ್ತಿದ್ದರು. ಎರಡು ಹಳಿಗಳಿದ್ದು, ತಿರುವಿನಲ್ಲಿ ರೈಲು ಬರುತ್ತಿರುವುದು ಗಮನಕ್ಕೆ ಬಂದಿರಲಿಲ್ಲ. ವೇಗವಾಗಿ ಬಂದ ಎಕ್ಸ್ಪ್ರೆಸ್ ರೈಲು ಮೂವರ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಯಶವಂತಪುರ ರೈಲ್ವೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ




