ಭಾರತದಲ್ಲಿ ಮತದಾನವು ಸಂವಿಧಾನಾತ್ಮಕವಾಗಿ ಅತ್ಯಂತ ಮಹತ್ವದ ಪ್ರಜಾಪ್ರಭುತ್ವದ ಹಕ್ಕಾಗಿದ್ದು, ಅದರ ಮೂಲಾಧಾರವೇ ನಿಖರವಾದ ಮತದಾರರ ಪಟ್ಟಿ. ಇದೇ ಉದ್ದೇಶದಿಂದ ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯನ್ನು ಕೈಗೊಳ್ಳುತ್ತಿದೆ. ಆದರೆ, ನೆಲಮಟ್ಟದಲ್ಲಿ ಈ ಪ್ರಕ್ರಿಯೆ ಹಲವು ಸಂಕೀರ್ಣ ಕುಟುಂಬ ಸನ್ನಿವೇಶಗಳನ್ನು ಎದುರಿಸುತ್ತಿದ್ದು, ವಿಶೇಷವಾಗಿ ವಿಚ್ಛೇದನ, ಮರುಮದುವೆ ಹಾಗೂ ಪ್ರತ್ಯೇಕವಾಗಿ ಬದುಕುತ್ತಿರುವ ದಂಪತಿಗಳ ಮಾಹಿತಿ ದಾಖಲಿಸುವ ವಿಚಾರ ಗಂಭೀರ ಕಾನೂನು ಮತ್ತು ಆಡಳಿತಾತ್ಮಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಭಾರತದ ಸಂವಿಧಾನದ 324ನೇ ವಿಧಿಯು ಚುನಾವಣೆಗಳನ್ನು ನಡೆಸುವ ಸಂಪೂರ್ಣ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಿದೆ. 326ನೇ ವಿಧಿಯು ಸಾರ್ವತ್ರಿಕ ವಯಸ್ಕ ಮತಾಧಿಕಾರದ ತತ್ವವನ್ನು ಪ್ರತಿಪಾದಿಸುತ್ತದೆ. ಅಂದರೆ ಅರ್ಹ ನಾಗರಿಕರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಮತ್ತು ಮತದಾನದ ಅವಕಾಶ ಕಲ್ಪಿಸುವುದು ಚುನಾವಣಾ ವ್ಯವಸ್ಥೆಯ ಮೂಲ ಉದ್ದೇಶವಾಗಿದೆ. ಆದ್ದರಿಂದ SIR ಪ್ರಕ್ರಿಯೆಯು ಮತದಾರರನ್ನು ಹೊರಗಿಡುವ ಸಾಧನವಲ್ಲ; ನಿಖರ ಹಾಗೂ ವಿಶ್ವಾಸಾರ್ಹ ಮತದಾರರ ಪಟ್ಟಿಯನ್ನು ರೂಪಿಸುವ ಪ್ರಕ್ರಿಯೆಯಾಗಿರಬೇಕು.
ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಕಾಯ್ದೆ, 1950 (Representation of the People Act, 1950) ಮತದಾರರ ಪಟ್ಟಿಯ ತಯಾರಿ, ಪರಿಷ್ಕರಣೆ, ಹೆಸರು ಸೇರ್ಪಡೆ ಮತ್ತು ತಿದ್ದುಪಡಿಯ ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ವಿಶೇಷವಾಗಿ ಸೆಕ್ಷನ್ 15 ರಿಂದ 23ರವರೆಗಿನ ವಿಧಿಗಳು ಮತದಾರರ ಪಟ್ಟಿಯ ಸಿದ್ಧತೆ, ಪರಿಷ್ಕರಣೆ ಮತ್ತು ತಿದ್ದುಪಡಿ ಪ್ರಕ್ರಿಯೆಯನ್ನು ವಿವರಿಸುತ್ತವೆ. ಜನಪ್ರತಿನಿಧಿ ಕಾಯ್ದೆ, 1951 ಮುಖ್ಯವಾಗಿ ಚುನಾವಣೆಯ ನಿರ್ವಹಣೆ, ಅಭ್ಯರ್ಥಿಗಳ ಅರ್ಹತೆ-ಅನರ್ಹತೆ ಹಾಗೂ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದೆ. ಈ ಎರಡೂ ಕಾಯ್ದೆಗಳಲ್ಲಿಯೂ ಮತದಾರರ ವೈವಾಹಿಕ ಸ್ಥಿತಿಯ ಆಧಾರದ ಮೇಲೆ ಮತದಾನದ ಹಕ್ಕು ನಿರ್ಧರಿಸುವ ಯಾವುದೇ ಅವಕಾಶವಿಲ್ಲ.
ಆದರೆ SIR ಪ್ರಕ್ರಿಯೆಯಲ್ಲಿ ವಿಚ್ಛೇದನದ ಬಳಿಕ ಮರುಮದುವೆಯಾದ ಮತದಾರರ ಮಾಹಿತಿ ದಾಖಲಿಸುವ ವಿಚಾರ ಗಂಭೀರ ಗೊಂದಲಕ್ಕೆ ಕಾರಣವಾಗುತ್ತಿದೆ. ಹೊಸ ವೈವಾಹಿಕ ಸಂಬಂಧ ಇದ್ದರೂ, ಅನೇಕ ಸರ್ಕಾರಿ ದಾಖಲೆಗಳು ಮತ್ತು EPIC (ಮತದಾರರ ಗುರುತಿನ ಚೀಟಿ) ಸೇರಿದಂತೆ ಹಿಂದಿನ ದಾಖಲೆಗಳು ಇನ್ನೂ ಹಳೆಯ ಪತಿ ಅಥವಾ ಪತ್ನಿಯ ಮಾಹಿತಿಯನ್ನೇ ಹೊಂದಿರುವುದರಿಂದ, ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡುವ ಸಂದರ್ಭದಲ್ಲಿ ಮತದಾರರು ಮತ್ತು ಬೂತ್ ಮಟ್ಟದ ಅಧಿಕಾರಿಗಳು (BLO) ಅಯೋಮಯಕ್ಕೆ ಸಿಲುಕುತ್ತಿದ್ದಾರೆ. ಮದುವೆ ಕಾನೂನಾತ್ಮಕವಾಗಿ ಮಾನ್ಯವಾಗಿದ್ದರೂ, ದಾಖಲೆಗಳ ಪರಿಷ್ಕರಣೆ ವಿಳಂಬವಾಗುವುದು ಸಾಮಾನ್ಯ ಆಡಳಿತಾತ್ಮಕ ಸಮಸ್ಯೆಯಾಗಿದೆ.
ಈ ಸಮಸ್ಯೆಯ ಒಂದು ಉದಾಹರಣೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಬೆಳಕಿಗೆ ಬಂದಿದೆ. ವಿಚ್ಛೇದನದ ಬಳಿಕ ಮತ್ತೊಮ್ಮೆ ವಿವಾಹವಾಗಿರುವ ವ್ಯಕ್ತಿಯ ಬಳಿ ಹೊಸ ಸಂಗಾತಿಯ ಹೆಸರಿನ ದಾಖಲೆಗಳು ಇನ್ನೂ ಸಿದ್ಧವಾಗಿಲ್ಲ. ಮತ್ತೊಂದೆಡೆ, ಹೊಸ ಪತ್ನಿಯ EPIC ಹಾಗೂ ಇತರ ದಾಖಲೆಗಳಲ್ಲಿ ಇನ್ನೂ ಹಿಂದಿನ ಪತಿಯ ಹೆಸರೇ ದಾಖಲಾಗಿದ್ದು, ವ್ಯಕ್ತಿಯ ದಾಖಲೆಗಳಲ್ಲೂ ಹಿಂದಿನ ಪತ್ನಿಯ ಮಾಹಿತಿಯೇ ಮುಂದುವರಿದಿದೆ. ಇಂತಹ ವ್ಯತ್ಯಾಸಗಳು ಪರಿಶೀಲನಾ ಪ್ರಕ್ರಿಯೆಯಲ್ಲಿ ಅನುಮಾನಗಳಿಗೆ ಕಾರಣವಾಗುವ ಸಾಧ್ಯತೆಯಿದೆ.
ಇಂತಹ ಸಂದರ್ಭದಲ್ಲಿ SIR ಎನ್ಯುಮರೇಷನ್ ಫಾರ್ಮ್ನ ‘ಪತಿ/ಪತ್ನಿ’ ಎಂಬ ಕಾಲಂನಲ್ಲಿ ಯಾರ ಹೆಸರನ್ನು ದಾಖಲಿಸಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ಕಾನೂನಾತ್ಮಕವಾಗಿ ವಿಚ್ಛೇದನ ಪಡೆದು ಮರುಮದುವೆಯಾಗಿರುವುದರಿಂದ ‘ಪತಿ/ಪತ್ನಿ ಇಲ್ಲ’ ಎಂದು ಬರೆಯಲು ಸಾಧ್ಯವಿಲ್ಲ. ಆದರೆ ಹೊಸ ಸಂಗಾತಿಯ ವಿವರಗಳಿಗೆ ಹೊಂದುವ ದಾಖಲೆಗಳು ಇಲ್ಲದಿರುವುದರಿಂದ ಅವರ ಹೆಸರನ್ನು ದಾಖಲಿಸಲು ಸಹ ಗೊಂದಲ ಉಂಟಾಗಿದೆ. ಕಾಲಂ ಖಾಲಿ ಬಿಡುವ ಅವಕಾಶವೂ ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಈ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟವಾದ ಲಿಖಿತ ಮಾರ್ಗಸೂಚಿ ಅಗತ್ಯವಾಗಿದೆ.
ನೆಲಮಟ್ಟದಲ್ಲಿ ಮನೆ ಮನೆಗೆ ಭೇಟಿ ನೀಡಿದಾಗ ಸಮಾಜದಲ್ಲಿರುವ ಹಲವು ಸಂಕೀರ್ಣ ಜೀವನ ಸನ್ನಿವೇಶಗಳು ಈ ಪ್ರಕ್ರಿಯೆಯ ಮುಂದೆ ಸವಾಲಾಗಿ ನಿಲ್ಲುತ್ತಿವೆ. ಅವುಗಳಲ್ಲಿ ಹೆಚ್ಚು ಚರ್ಚೆಯಾಗದ, ಆದರೆ ಸಾವಿರಾರು ಕುಟುಂಬಗಳನ್ನು ಸ್ಪರ್ಶಿಸುವ ಸಮಸ್ಯೆಯೆಂದರೆ – ಕಾನೂನುಬದ್ಧವಾಗಿ ವಿಚ್ಛೇದನವಾಗದಿದ್ದರೂ ಪ್ರತ್ಯೇಕವಾಗಿ ಬದುಕುತ್ತಿರುವ ದಂಪತಿಗಳ ಮಾಹಿತಿ ಹೇಗೆ ದಾಖಲಿಸಬೇಕು? ಎಂಬ ಪ್ರಶ್ನೆ.
ಸಮಾಜದಲ್ಲಿ ಎಲ್ಲ ವೈವಾಹಿಕ ಸಂಬಂಧಗಳು ನ್ಯಾಯಾಲಯದ ಆದೇಶದೊಂದಿಗೆ ಕೊನೆಗೊಳ್ಳುವುದಿಲ್ಲ. ಅನೇಕ ದಂಪತಿಗಳು ಕುಟುಂಬ ಕಲಹ, ಹೊಂದಾಣಿಕೆಯ ಕೊರತೆ, ಕೌಟುಂಬಿಕ ಹಿಂಸೆ, ಆರ್ಥಿಕ ಸಮಸ್ಯೆ ಅಥವಾ ವೈಯಕ್ತಿಕ ಕಾರಣಗಳಿಂದ ವರ್ಷಗಳ ಕಾಲ ಪ್ರತ್ಯೇಕವಾಗಿ ಬದುಕುತ್ತಿದ್ದಾರೆ. ಕೆಲವರು ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇನ್ನೂ ಕೆಲವರು ಯಾವುದೇ ಕಾನೂನು ಪ್ರಕ್ರಿಯೆ ಆರಂಭಿಸದೆ ಪ್ರತ್ಯೇಕ ಜೀವನ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಒತ್ತಡ, ಕುಟುಂಬದ ಪ್ರತಿಷ್ಠೆ ಹಾಗೂ ಆರ್ಥಿಕ ಅಡಚಣೆಗಳಿಂದ ವಿಚ್ಛೇದನ ಪಡೆಯದೇ ದೂರವಿರುವ ಪ್ರಕರಣಗಳು ಹೆಚ್ಚಾಗಿವೆ.
ಇಂತಹ ಸಂದರ್ಭದಲ್ಲಿ SIR ಎಣಿಕೆ ಫಾರಂ ಭರ್ತಿ ಮಾಡುವಾಗ ಗಂಭೀರ ಗೊಂದಲ ಎದುರಾಗುತ್ತದೆ. ಪತಿ ಅಥವಾ ಪತ್ನಿಯ ವಿವರವನ್ನು ನಮೂದಿಸಬೇಕೇ? ಅಥವಾ ಪ್ರತ್ಯೇಕವಾಗಿ ಬದುಕುತ್ತಿರುವ ಕಾರಣದಿಂದ ಆ ಮಾಹಿತಿಯನ್ನು ಬಿಟ್ಟುಬಿಡಬಹುದೇ? ಅಧಿಕೃತವಾಗಿ ವಿಚ್ಛೇದನವಾಗದಿರುವುದರಿಂದ ಕಾನೂನು ಪ್ರಕಾರ ಅವರು ಇನ್ನೂ ಗಂಡ-ಹೆಂಡತಿಯೇ ಆಗಿದ್ದಾರೆ. ಆದರೆ ನೈಜ ಜೀವನದಲ್ಲಿ ಯಾವುದೇ ಸಂಬಂಧವಿಲ್ಲದವರಂತೆ ಬದುಕುತ್ತಿದ್ದಾರೆ. ಈ ವಾಸ್ತವಿಕತೆಗೆ ಫಾರಂನಲ್ಲಿ ಯಾವ ರೀತಿಯ ಅವಕಾಶವಿದೆ ಎಂಬುದು ಸ್ಪಷ್ಟವಾಗಿಲ್ಲ.
ಈ ಸಂದರ್ಭದಲ್ಲಿ ಭಾರತದ ಸುಪ್ರೀಂ ಕೋರ್ಟ್ ನೀಡಿರುವ Justice K.S. Puttaswamy v. Union of India (2017) ತೀರ್ಪು ಮಹತ್ವ ಪಡೆಯುತ್ತದೆ. ಈ ತೀರ್ಪಿನಲ್ಲಿ ವೈಯಕ್ತಿಕ ಗೌಪ್ಯತೆ (Right to Privacy)ಯನ್ನು ಸಂವಿಧಾನದ 21ನೇ ವಿಧಿಯಡಿ ಮೂಲಭೂತ ಹಕ್ಕಾಗಿ ಗುರುತಿಸಲಾಗಿದೆ. ಹೀಗಾಗಿ ನಾಗರಿಕರು ತಮ್ಮ ಖಾಸಗಿ ಕುಟುಂಬ ಜೀವನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಹಿರಂಗಪಡಿಸುವಂತೆ ಒತ್ತಾಯಿಸುವುದು ಕಾನೂನು ಮತ್ತು ಗೌಪ್ಯತೆಯ ದೃಷ್ಟಿಯಿಂದ ಪ್ರಶ್ನಾರ್ಹವಾಗಬಹುದು.
ಇದಲ್ಲದೆ Lal Babu Hussein v. Electoral Registration Officer (1995) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಮತದಾರರ ಪಟ್ಟಿಯಿಂದ ಯಾರ ಹೆಸರನ್ನಾದರೂ ತೆಗೆದುಹಾಕುವ ಮೊದಲು ಅವರಿಗೆ ಸಮರ್ಪಕ ನೋಟಿಸ್ ನೀಡಿ, ತಮ್ಮ ಅಭಿಪ್ರಾಯ ಮಂಡಿಸಲು ನ್ಯಾಯಸಮ್ಮತ ಅವಕಾಶ ನೀಡಬೇಕು ಎಂದು ಸ್ಪಷ್ಟಪಡಿಸಿದೆ. ಅಂದರೆ ಮತದಾರರ ಹಕ್ಕಿನ ಮೇಲೆ ಪರಿಣಾಮ ಬೀರುವ ಯಾವುದೇ ಕ್ರಮವು ನೈಸರ್ಗಿಕ ನ್ಯಾಯದ ತತ್ವಗಳಿಗೆ (Principles of Natural Justice) ಅನುಗುಣವಾಗಿರಬೇಕು.
ಹಲವರು ತಮ್ಮ ವೈಯಕ್ತಿಕ ಬದುಕಿನ ಸೂಕ್ಷ್ಮ ವಿಚಾರಗಳನ್ನು ಸರ್ಕಾರಿ ದಾಖಲೆಗಳಲ್ಲಿ ದಾಖಲಿಸಲು ಹಿಂಜರಿಯುತ್ತಿದ್ದಾರೆ. ಮತ್ತೆ ಕೆಲವರು ನಿಜಸ್ಥಿತಿಯನ್ನು ದಾಖಲಿಸಿದರೆ ಮುಂದೆ ಕುಟುಂಬದ ಸಮಸ್ಯೆಗಳು ಅಥವಾ ಕಾನೂನು ಸಂಬಂಧಿತ ತೊಂದರೆಗಳು ಎದುರಾಗಬಹುದೆಂಬ ಆತಂಕದಲ್ಲಿದ್ದಾರೆ. ಮತ್ತೊಂದೆಡೆ, ತಪ್ಪು ಮಾಹಿತಿ ನೀಡಿದರೆ ಅದು ಭವಿಷ್ಯದಲ್ಲಿ ದಾಖಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
ಇದಕ್ಕಿಂತಲೂ ಚಿಂತಾಜನಕ ಸಂಗತಿಯೆಂದರೆ, ಈ ಕುರಿತು ಚುನಾವಣಾ ಆಯೋಗದಿಂದ ಸಾರ್ವಜನಿಕರಿಗೆ ಸ್ಪಷ್ಟ ಮಾರ್ಗಸೂಚಿ ಲಭ್ಯವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬಿಎಲ್ಒಗಳಿಗೂ ಇಂತಹ ವಿಶೇಷ ಸನ್ನಿವೇಶಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕುರಿತು ಸಮರ್ಪಕ ತರಬೇತಿ ಅಥವಾ ಲಿಖಿತ ಸೂಚನೆಗಳು ಸಿಕ್ಕಿಲ್ಲ ಎನ್ನಲಾಗುತ್ತಿದೆ. ಪರಿಣಾಮವಾಗಿ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಮಾಹಿತಿ ದಾಖಲಿಸುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಇದು ಸಮಾನ ಆಡಳಿತ (Administrative Uniformity) ತತ್ವಕ್ಕೂ ಧಕ್ಕೆ ಉಂಟುಮಾಡಬಹುದು.
ಇದು ಕೇವಲ ವಿಚ್ಛೇದನ ಪ್ರಕರಣಗಳಿಗೆ ಮಾತ್ರ ಸೀಮಿತವಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವವರು, ಹಲವು ವರ್ಷಗಳಿಂದ ಸಂಪರ್ಕವಿಲ್ಲದೆ ಬದುಕುತ್ತಿರುವವರು, ಕುಟುಂಬದಿಂದ ಬೇರ್ಪಟ್ಟು ಸ್ವತಂತ್ರ ಜೀವನ ನಡೆಸುತ್ತಿರುವವರು, ವಿದೇಶ ಅಥವಾ ಬೇರೆ ರಾಜ್ಯದಲ್ಲಿ ನೆಲೆಸಿರುವ ಜೀವನ ಸಂಗಾತಿಗಳು – ಇಂತಹ ಅನೇಕ ಸಂದರ್ಭಗಳಲ್ಲಿ ಒಂದೇ ಪ್ರಶ್ನೆ ಎದುರಾಗುತ್ತಿದೆ: ವಾಸ್ತವಿಕತೆಯನ್ನು ದಾಖಲಿಸಬೇಕೇ ಅಥವಾ ಕಾನೂನುಬದ್ಧ ಸ್ಥಿತಿಯನ್ನು ದಾಖಲಿಸಬೇಕೇ?
SIR ಪ್ರಕ್ರಿಯೆಯ ಉದ್ದೇಶ ಮತದಾರರ ಪಟ್ಟಿಯನ್ನು ಹೆಚ್ಚು ನಿಖರಗೊಳಿಸುವುದಾಗಿದೆ. ಆದರೆ ಸಾಮಾಜಿಕ ವಾಸ್ತವಿಕತೆಗಳಿಗೆ ಹೊಂದಿಕೊಳ್ಳುವ ಮಾರ್ಗಸೂಚಿಗಳಿಲ್ಲದಿದ್ದರೆ ನಿಖರ ಮಾಹಿತಿಗಿಂತ ಗೊಂದಲವೇ ಹೆಚ್ಚಾಗುವ ಅಪಾಯವಿದೆ. ಚುನಾವಣಾ ಆಯೋಗವು ಸಂವಿಧಾನದ 324ನೇ ವಿಧಿಯಡಿ ಪಡೆದಿರುವ ಅಧಿಕಾರವನ್ನು ಬಳಸಿಕೊಂಡು ಇಂತಹ ವಿಶೇಷ ಪ್ರಕರಣಗಳಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸುವ ಅಧಿಕಾರವನ್ನೂ ಹೊಂದಿದೆ. ಇದರಿಂದ ದೇಶದಾದ್ಯಂತ ಏಕರೂಪದ ಅನುಷ್ಠಾನ ಸಾಧ್ಯವಾಗುತ್ತದೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಮತದಾರರ ಪಟ್ಟಿ ಪರಿಷ್ಕರಣೆನಾ, ದಾಖಲೆಗಳ ಪರೀಕ್ಷೆಯಾ? -SIR ಮೇಲೇಳಿಸಿರುವ ಪ್ರಶ್ನೆಗಳು
ಆದ್ದರಿಂದ, ಅಧಿಕೃತವಾಗಿ ವಿಚ್ಛೇದನವಾಗದಿದ್ದರೂ ಪ್ರತ್ಯೇಕವಾಗಿ ಬದುಕುತ್ತಿರುವ ದಂಪತಿಗಳು, ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣ ಬಾಕಿ ಇರುವವರು, ವಿಚ್ಛೇದನದ ಬಳಿಕ ಮರುಮದುವೆಯಾಗಿರುವವರು ಹಾಗೂ ಇತರೆ ವಿಶೇಷ ಕುಟುಂಬ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಬೇಕಾಗಿದೆ. ಬಿಎಲ್ಒಗಳಿಗೆ ಸಮಗ್ರ ತರಬೇತಿ ನೀಡಬೇಕು. ದಾಖಲೆಗಳಲ್ಲಿ ವ್ಯತ್ಯಾಸವಿದ್ದರೆ ಯಾವ ದಾಖಲೆಯನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂಬ ಬಗ್ಗೆ ಸ್ಪಷ್ಟ ಲಿಖಿತ ಸೂಚನೆಗಳನ್ನು ಹೊರಡಿಸಬೇಕು. ಮತದಾರರ ಗೌಪ್ಯತೆ, ಕಾನೂನುಬದ್ಧ ಹಕ್ಕು ಮತ್ತು ಮತದಾರರ ಪಟ್ಟಿಯ ವಿಶ್ವಾಸಾರ್ಹತೆ—ಈ ಮೂರರ ನಡುವೆ ಸಮತೋಲನ ಸಾಧಿಸುವುದೇ SIR ಪ್ರಕ್ರಿಯೆಯ ಯಶಸ್ಸಿನ ನಿಜವಾದ ಮಾನದಂಡವಾಗಬೇಕು.
ಸಂಚಿಕೆ ಮುಂದುವರೆಯಲಿದೆ…




