ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಹೆಸರಿನಲ್ಲಿ ನಡೆಯುತ್ತಿರುವುದು ಪರಿಷ್ಕರಣೆ ಅಲ್ಲ. ಸಾಮೂಹಿಕ ಮತಗಳ ಹತ್ಯೆ. ಈ ಪ್ರಕ್ರಿಯೆ ಪ್ರಜಾಪ್ರಭುತ್ವ ವಿರೋಧಿ ಮತ್ತು ಅವೈಜ್ಞಾನಿಕವಾದದ್ದು. ಕರ್ನಾಟಕದಲ್ಲಿ ಬಿಹಾರ ಮತ್ತು ಬಂಗಾಳಕ್ಕಿಂತಲೂ ಹೆಚ್ಚಿನ ಅನಾಹುತವನ್ನು ಎಸ್‌ಐಆರ್ ತಂದೊಡ್ಡುತ್ತಿದೆ ಎಂದು ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯ ಮುಖಂಡ ನೂರ್ ಶ್ರೀಧರ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ವೇದಿಕೆಯ ಹಲವು ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದಾರೆ. ಚುನಾವಣಾ ಆಯೋಗವೇ ಬಿಡುಗಡೆ ಮಾಡಿರುವ ಆಘಾತಕಾರಿ ಅಂಕಿ-ಅಂಶಗಳನ್ನು ಮುಂದಿಟ್ಟು, ರಾಜ್ಯದ ಕೋಟ್ಯಂತರ ಜೀವಂತ ಮತದಾರರ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ಮಾತ್ರವಲ್ಲದೆ, ಆಯೋಗದ ಅಂಕಿಅಂಶಗಳುಳ್ಳ ಪ್ರತಿಗಳನ್ನು ಹರದು ಪ್ರತಿಭಟನೆ ದಾಖಲಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೂರ್ ಶ್ರೀಧರ್, “ಚುನಾವಣಾ ಆಯೋಗವು ‘ASDDO’ ಅಡಿಯಲ್ಲಿ ರಾಜ್ಯದ 1.10 ಕೋಟಿ ಮತದಾರರನ್ನು ಪಟ್ಟಿ ಮಾಡಿದರ. ಅಂದರೆ, ರಾಜ್ಯದ 1,10,59,288 ಮತದಾರರು ಡಿಲೀಟ್ ಪಟ್ಟಿಯಲ್ಲಿದ್ದಾರೆ. ಇದು ರಾಜ್ಯದ ಒಟ್ಟು ಮತದಾರರ ಪೈಕಿ 19.95%ರಷ್ಟಿದೆ ಅರ್ಥಾತ್ ಪ್ರತಿ ಐದು ಮತದಾರರಲ್ಲಿ ಒಬ್ಬರ ಹೆಸರನ್ನು ಡಿಲೀಟ್ ಮಾಡಲಾಗುತ್ತಿದೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿ 40% ರಷ್ಟು ಮತದಾರರು ಪಟ್ಟಿಯಿಂದ ಕಾಣೆಯಾಗುವ ಅಪಾಯವಿದೆ” ಎಂದು ಎಚ್ಚರಿಸಿದರು.
“ASDDO ಅಡಿಯಲ್ಲಿ 1.10 ಮತಗಳು ಮಾತ್ರವಲ್ಲದೆ, ‘ಮ್ಯಾಪಿಂಗ್ ಆಗದವರು’ ಮತ್ತು ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಎಂಬ ಇನ್ನೆರಡು ದೊಡ್ಡ ಗಂಡಾಂತರಗಳೂ ಇವೆ. ಚುನಾವಣಾ ಆಯೋಗದ ಲೆಕ್ಕಾಚಾರದಂತೆಯೇ 34 ಲಕ್ಷ ಜನರು ಮ್ಯಾಪಿಂಗ್ ಆಗದೆ ಉಳಿದಿದ್ದು, ಇವರೆಲ್ಲರಿಗೂ ಆಯೋಗದಿಂದ ನೋಟೀಸ್ ಹೋಗಲಿದೆ. ಅಂತೆಯೇ, ಆಲ್ಗಾರಿದಂ ಆಧಾರಿತವಾಗಿ ಕೆಲಸ ಮಾಡುವ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಎನ್ನುವ ಸಾಫ್ಟ್‌ವೇರ್ ಬಳಸಿ, ಇನ್ನೂ ಹೆಚ್ಚಿನ ಮತದಾರರನ್ನು ಹೊರಹಾಕುವ ಅಪಾಯವಿದೆ. ಈ ‘ತಾಂತ್ರಿಕ ವ್ಯತ್ಯಾಸ’ದ (ಲಾಜಿಕಲ್ ಡಿಸ್ಕ್ರಿಪೆನ್ಸಿ) ಬಗ್ಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಾಗಲಿ ಅಥವಾ ಆಯೋಗವಾಗಲಿ ಬಿಎಲ್‌ಒಗಳಿಗೆ ಯಾವುದೇ ತರಬೇತಿಯನ್ನೂ ನೀಡಿಲ್ಲ, ಪ್ರಶ್ನೆಗಳಿಗೆ ಉತ್ತರವನ್ನೂ ನೀಡದೆ ಮೌನ ವಹಿಸಿದ್ದಾರೆ” ಎಂದು ಆರೋಪಿಸಿದರು.
“ದೆಹಲಿ (ಕೇಂದ್ರ ಸರ್ಕಾರ-ಚುನಾವಣಾ ಆಯೋಗ) ನಿರ್ದೇಶನದಂತೆ ಕೆಲಸ ಮಾಡುವ ಈ ‘ತಾಂತ್ರಿಕ ವ್ಯತ್ಯಾಸ’ ಎಂಬ ಟ್ರಂಪ್ ಕಾರ್ಡ್‌ನಿಂದಾಗಿ ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಎಲ್ಲ ದಾಖಲೆಗಳಿದ್ದರೂ 34 ಲಕ್ಷ ಜನರು ಮತದಾನದ ಹಕ್ಕು ಸಿಗದೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದೇ ವ್ಯವಸ್ಥೆ ಈಗ ಕರ್ನಾಟಕದ ಜನರ ಮೇಲೆಯೂ ಪ್ರಯೋಗವಾಗುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಇಡೀ ಪ್ರಕ್ರಿಯೆಯನ್ನು ಅತ್ಯಂತ ಬೇಜವಾಬ್ದಾರಿಯಿಂದ ನಡೆಸಲಾಗಿದೆ. ಕಡಿಮೆ ಶಿಕ್ಷಣ ಹೊಂದಿರುವ ಬಿಎಲ್‌ಒಗಳಿಗೆ ಸರಿಯಾದ ತರಬೇತಿ ನೀಡದೆ, ಒತ್ತಡ ಹೇರಿ ಗಡಿಬಿಡಿಯಲ್ಲಿ ಕೆಲಸ ಮಾಡಿಸಲಾಗಿದೆ. ಈ ಅವ್ಯವಸ್ಥೆಗೆ ಆಯೋಗವೇ ಹೊಣೆಯ ಹೊರತು ಬಿಎಲ್‌ಒಗಳನ್ನು ಶಿಕ್ಷಿಸುವುದು ಖಂಡನೀಯ. ದುಡಿಮೆಗಾಗಿ ಬೇರೆಡೆಗೆ ವಲಸೆ ಹೋಗುವುದು ಅಥವಾ ಬಾಡಿಗೆ ಮನೆ ಬದಲಾಯಿಸುವುದು ಅಪರಾಧವಲ್ಲ. ಹೀಗಿರುವಾಗ, ಮನೆ ಪರಿಶೀಲನೆ ವೇಳೆ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಪಟ್ಟಿಯಿಂದ ಮತದಾರರ ಹೆಸರು ತೆಗೆದುಹಾಕುವುದು ‘ಸಾಮೂಹಿಕ ಮತ ಹತ್ಯೆ’ಗೆ ಸಮಾನ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾತನಾಡಿದ ಮುಸ್ಲಿಂ ನಾಯಕ ಮೊಹಮದ್ ಯೂಸಫ್ ಕನ್ನಿ, “ಡಿಲೀಟ್ ಮಾಡಲು ಹೊರಟಿರುವ 20%ರಷ್ಟು ಮತದಾರರಲ್ಲಿ 15% ರಷ್ಟು ಜನರು ಸತ್ತವರೂ ಅಲ್ಲ ಅಥವಾ ಎರಡು ಕಡೆ ನೋಂದಣಿಯಾದವರೂ ಅಲ್ಲ. ಅವರು ಕೇವಲ ಕೆಲಸ ಅಥವಾ ಇತರೆ ಕಾರಣಕ್ಕೆ ಸ್ಥಳಾಂತರಗೊಂಡವರು (Shifted) ಮತ್ತು ಬಿಎಲ್‌ಒಗಳು ಮನೆಗೆ ಹೋದಾಗ ಸಿಗದವರು (Absent). ಹೀಗಿರುವಾಗ ರಾಜ್ಯದ ಸುಮಾರು ಒಂದು ಕೋಟಿಯಷ್ಟು ಜೀವಂತ ಮತದಾರರನ್ನು ಯಾವ ಆಧಾರದಲ್ಲಿ ಪಟ್ಟಿಯಿಂದ ತೆಗೆದುಹಾಕುತ್ತಿದ್ದೀರಿ” ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿದರು.
“ಚುನಾವಣಾ ಆಯೋಗವೇ ಹೇಳಿರುವಂತೆ ಬೆಂಗಳೂರಿನಲ್ಲಿ 1.1 ಕೋಟಿ ಮತದಾರರಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ 57% ಮತದಾನ ನಡೆದಿದೆ. ಅಂದರೆ, 58 ಲಕ್ಷ ಜನರು ಮತದಾನ ಮಾಡಿದ್ದಾರೆ. ಹೀಗಿರುವಾಗ ಈಗ, ಬರೋಬ್ಬರಿ ಸುಮಾರು 40 ಲಕ್ಷ ಮತದಾರರನ್ನು ASDDO ಅಡಿಯಲ್ಲಿ ಡಿಲೀಟ್ ಮಾಡಲು ಆಯೋಗ ಗುರುತಿಸಿದೆ. ಅಂದರೆ, ಈ ಪ್ರಮಾಣದ ಜನ ಎಲ್ಲಿ ಹೋದರು? ಎಂದು ಪ್ರಶ್ನಿಸಿದರು.
“ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಈ ಇಡೀ ಪ್ರಕ್ರಿಯೆಯು ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚಲು ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ, ಈ ಬೃಹತ್ ಪ್ರಕ್ರಿಯೆಯ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಬಾಂಗ್ಲಾದೇಶಿ ನುಸುಳುಕೋರರ ಅಕ್ರಮ ಮತಗಳ ಸಂಖ್ಯೆ ಎಷ್ಟು ಎಂಬ ಲೆಕ್ಕವನ್ನು ಆಯೋಗ ಏಕೆ ಬಹಿರಂಗಪಡಿಸುತ್ತಿಲ್ಲ” ಎಂದು ಕೇಳಿದರು.
ಇದೇ ವೇಳೆ ಮಾತನಾಡದ ಕರ್ನಾಟಕ ಜನಶಕ್ತಿಯ ಕೆ.ಎಲ್ ಅಶೋಕ್, “ರಾಜ್ಯದ ಹಲವು ಜಿಲ್ಲೆಗಳಲ್ಲಿ 100% ರಷ್ಟು ಎನ್ಯುಮರೇಷನ್ ಮುಕ್ತಾಯಗೊಂಡಿದೆ ಹಾಗೂ 99.56%ರಷ್ಟು ಡಿಜಿಟಲೀಕರಣವಾಗಿದೆ ಎಂದು ಆಯೋಗ ಘೋಷಿಸಿದೆ. ಆದರೆ, ಇಂದಿಗೂ ಖಾಲಿ ಫಾರಂ ಹಿಡಿದು ಪರದಾಡುತ್ತಿರುವ ನೂರಾರು ಜೀವಂತ ಉದಾಹರಣೆಗಳು ನಮ್ಮ ಮುಂದಿವೆ. ಆಯೋಗ ಸುಳ್ಳು ಹೇಳುತ್ತಿದೆ. ಸರಿಯಾಗಿ ಪ್ರಕ್ರಿಯೆಯನ್ನೂ ನಡೆಸದೆ, ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಮುಂದಾಗಿದೆ” ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಧರ್ ಅರಿಣ್ ಲೂಯಿಸ್, “ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಡಿಲೀಷನ್ ಆಗಿರುವುದರ ಕುರಿತು ಚುನಾವಣಾ ಆಯೋಗವು ಸಮಗ್ರ ಅವಲೋಕನ ನಡೆಯಬೇಕು ಹಾಗೂ ಇದರಲ್ಲಿ ಸಾಮಾಜಿಕ ಸಂಘಟನೆಗಳು ವಿಚಾರ ಮಂಡಿಸಲು ಅವಕಾಶ ನೀಡಬೇಕು” ಎಂದು ಒತ್ತಾಯಿಸಿದರು.
“ಸ್ಥಳಾಂತರಗೊಂಡವರನ್ನು ಅಥವಾ ಮನೆಯಲ್ಲಿ ಸಿಗದವರನ್ನು ಯಾವುದೇ ಕಾರಣಕ್ಕೂ ಡಿಲೀಟ್ ಮಾಡಬಾರದು. ಅವರು ಇರುವ ಸ್ಥಳದಲ್ಲೇ ಎನ್ಯುಮರೇಷನ್ ಹಾಗೂ ಫಾರಂ-8 ನೀಡುವ ವ್ಯವಸ್ಥೆಯಾಗಬೇಕು. ಈಗಾಗಲೇ ಆಯೋಗದ ಬೇಜವಾವ್ದಾರಿತನದಿಂದ ಆಗಿರುವ ದೋಷಗಳನ್ನು ಸರಿಪಡಿಸಲು ಪ್ರಕ್ರಿಯೆಯ ಅವಧಿಯನ್ನು ಕನಿಷ್ಠ ಒಂದು ತಿಂಗಳು ವಿಸ್ತರಿಸಬೇಕು” ಎಂದು ಆಗ್ರಹಿಸಿದರು.
“ಕರಡು ಪಟ್ಟಿ ಪ್ರಕಟವಾದ ನಂತರ ಚುನಾವಣಾ ನಿಯಮಾವಳಿಯಂತೆ ಪ್ರತಿ ಬೂತ್ ಪ್ರದೇಶದಲ್ಲೂ ಮುಕ್ತ ಸಾರ್ವಜನಿಕ ಪರಿಶೀಲನಾ ಸಭೆಗಳನ್ನು ನಡೆಸಿ, ಸಾರ್ವಜನಿಕ ಸಾಕ್ಷ್ಯಗಳ ಆಧಾರದಲ್ಲಿ ಮತವನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು” ಎಂದು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವೆ, ಹೋರಾಟಗಾರ್ತಿ ಬಿ.ಟಿ ಲಲಿತಾ ನಾಯಕ್, ‘ಚುನಾವಣಾ ಆಯೋಗವು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದು, ನಾಗರಿಕ ಸಮಾಜ ನೀಡುತ್ತಿರುವ ಯಾವುದೇ ಸಲಹೆಗಳನ್ನು ಪರಿಗಣಿಸುತ್ತಿಲ್ಲ. ಸಾರ್ವಜನಿಕ ಭೇಟಿಗೂ ಅವಕಾಶ ನೀಡದೆ, ಪತ್ರಗಳಿಗೂ ಉತ್ತರಿಸದೆ 100ರಷ್ಟು ಎಲ್ಲವೂ ಸರಿಯಾಗಿದೆ ಎಂಬ ಭ್ರಮೆಯಲ್ಲಿದೆ. ಕೋಟ್ಯಂತರ ಜನರ ಸಾಂವಿಧಾನಿಕ ಮತದಾನದ ಹಕ್ಕಿನ ಜೊತೆ ಆಟವಾಡಲಾಗುತ್ತಿದೆ. ಆಯೋಗವು ತನ್ನ ಧೋರಣೆಯನ್ನು ತಕ್ಷಣವೇ ತಿದ್ದಿಕೊಳ್ಳದಿದ್ದರೆ, ಅಕ್ರಮ ಡಿಲೀಷನ್‌ಗಳನ್ನು ಕೈಬಿಡದಿದ್ದರೆ ಮತ್ತು ಎಸ್‌ಐಆರ್ ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯವ್ಯಾಪಿ ತೀವ್ರ ಸ್ವರೂಪದ ಪ್ರತಿರೋಧ ಹಾಗೂ ಹೋರಾಟವನ್ನು ಎದುರಿಸಬೇಕಾಗುತ್ತದೆ” ಎಂದು ಗಂಭೀರ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ತಾರಾ ರಾವ್, ವಿ.ಎಸ್ ಶ್ರೀಧರ್, ಅಮ್ಜದ್ ಪಾಶ, ನಾಗೇಶ್ ಅರಳಕುಪ್ಪೆ ಸೇರಿದಂತೆ ಹಲವರು ಇದ್ದರು.



