ಸಿಂಧನೂರು ಪಟ್ಟಣದ ಅಂಬೇಡ್ಕರ್ ವಸತಿ ನಿಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ವಸತಿ ನಿಲಯದ 13 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ನಡೆದಿದೆ.
ಮಂಗಳವಾರ ಬೆಳಗ್ಗೆ ವಸತಿ ನಿಲಯದಲ್ಲಿ ಚಪಾತಿ, ಅನ್ನ ಸಾಂಬಾರು ಆಹಾರ ಸೇವಿಸಿದ ವಿದ್ಯಾರ್ಥಿನಿಯರಿಗೆ ಹೊಟ್ಟೆ ನೋವು, ತಲೆ ಸುತ್ತ ಕಾಣಿಸಿಕೊಂಡಿದೆ. ನಂತರ ವಿದ್ಯಾರ್ಥಿನಿಯರನ್ನು ನಗರದ ತಾಯಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ. ವಸತಿ ನಿಲಯದ ವಾರ್ಡನ್ ಶೋಭಾ ಎನ್ನುವವರು ರಜೆಯಲ್ಲಿದ್ದು, ತಾಲ್ಲೂಕು ಅಧಿಕಾರಿ ನಟರಾಜ್ ಅವರು ಪ್ರಭಾರಿವಹಿಸಲಾಗಿದೆ. ಅಧಿಕಾರಿಗಳ ಲೋಪದಿಂದ ಈ ರೀತಿಯ ಘಟನೆ ನಡೆದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವಾರ ಅಲ್ಪಸಂಖ್ಯಾತ ವಸತಿ ನಿಲಯದ ವಿದ್ಯಾರ್ಥಿಗಳು ಉಪಹಾರ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಖುದ್ದು ಶಾಸಕ ಹಂಪನಗೌಡ ಬಾದರ್ಲಿ ಅವರೇ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ನಂತರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದೀಗ ನಗರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು ರಾಜಕೀಯದಲ್ಲಿ ಮತ್ತೆ ಹಿನ್ನಡೆ: ಸಚಿವ ಸ್ಥಾನಕ್ಕೆ ಚೊಂಬು, ಜಿಲ್ಲೆಯ ನಿರೀಕ್ಷೆ ಭಗ್ನ
ವಸತಿ ನಿಲಯದ 5 ವಿದ್ಯಾರ್ಥಿಗಳಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಎಲ್ಲ ವಿದ್ಯಾರ್ಥಿನಿಯರು ಆರೋಗ್ಯವಾಗಿದ್ದಾರೆ ಎಂದು ಸಹಾಯಕ ಉಪನಿರ್ದೇಶಕ ನಟರಾಜ ತಿಳಿಸಿದ್ದಾರೆ.




