ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬ ಮಹಿಳಾ ಶಾಸಕರಿಗೂ ಸಚಿವ ಸ್ಥಾನ ನೀಡದೆ ಸಂಪುಟ ರಚಿಸಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ತೀವ್ರವಾಗಿ ಖಂಡಿಸಿದೆ. ಮಹಿಳೆಯರೇ ಇಲ್ಲದ ಸಚಿವ ಸಂಪುಟದ ರಚನೆ ಮಹಿಳಾ ವಿರೋಧಿ ಮನೋಭಾವವನ್ನಷ್ಟೇ ಅಲ್ಲ, ಸಂವಿಧಾನಬದ್ಧ ಸಮಾನತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ಕ್ರಮವಾಗಿದೆ ಎಂದು ಜೆಎಂಎಸ್ ಹೇಳಿದೆ.
ರಾಜ್ಯದ ಒಟ್ಟು ಮತದಾರರಲ್ಲಿ ಶೇ.52ರಷ್ಟು ಮಹಿಳೆಯರಿದ್ದಾರೆ. ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಸರ್ಕಾರಗಳ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ, ಆಹಾರ ಭದ್ರತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಕೊಡುಗೆ ಮಹತ್ವದ್ದಾಗಿದೆ. ಇಂತಹ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಅವಕಾಶ ನೀಡದಿರುವುದು ಮಹಿಳೆಯರ ಸಾಮರ್ಥ್ಯವನ್ನು ಕಡೆಗಣಿಸುವುದಲ್ಲದೆ, ರಾಜಕೀಯ ನಿರ್ಧಾರ ಪ್ರಕ್ರಿಯೆಯಿಂದ ಅವರನ್ನು ಉದ್ದೇಶಪೂರ್ವಕವಾಗಿ ಹೊರಗಿಡುವ ಧೋರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಜೆಎಂಎಸ್ ದೂರಿದೆ.
ಇದನ್ನೂ ಓದಿ: ಮಹಿಳೆಯರಿಲ್ಲದ ಸಚಿವ ಸಂಪುಟ: ಸಿಎಂ ಡಿಕೆ ಶಿವಕುಮಾರ್‌ಗೆ ಮಹಿಳಾ ಸಂಘಟನೆಗಳ ಬಹಿರಂಗ ಪತ್ರ
“2023 ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಆಯ್ಕೆಯಾಗಿರುವ ಮಹಿಳಾ ಶಾಸಕರುಗಳ ಸಂಖ್ಯೆ 10. ಅದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು 4 ಮಹಿಳೆಯರಿಗೆ ಅವಕಾಶ ನಿರಾಕರಣೆಗೆ ಈ ಸಂಖ್ಯೆ ಸಾಕ್ಷಿಯಾಗಿದೆ. ರಾಜ್ಯ ಸಚಿವ ಸಂಪುಟದ ರಚನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಮಹಿಳೆಯರಿಗೆ ಸಚಿವ ಸ್ಥಾನ ನೀಡದಿರುವುದು ಅದರ ಮಹಿಳಾ ಸಮಾನತೆಯ ಬದ್ಧತೆಯ ಮೇಲೆಯೇ ಪ್ರಶ್ನೆಗಳನ್ನು ಎಬ್ಬಿಸಿದೆ. ಇದು ಪುರುಷ ಪ್ರಧಾನ ರಾಜಕೀಯ ಮನೋಭಾವ ಇನ್ನೂ ಮುಂದುವರಿದಿರುವುದಕ್ಕೆ ಸ್ಪಷ್ಟಉದಾಹರಣೆಯಾಗಿದೆ” ಎಂದು ದೂರಿದೆ.
“ದೇಶದ ಸಂವಿಧಾನವು ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಖಾತರಿಪಡಿಸಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ ಪರಿಣಾಮ ಲಕ್ಷಾಂತರ ಮಹಿಳೆಯರು ಯಶಸ್ವಿಯಾಗಿ ಜನಪ್ರತಿನಿಧಿಗಳಾಗಿ ಹಾಗೂ ಆಡಳಿತಗಾರರಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ದೇಶ ಕಂಡಿದೆ. ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕೆಂದು ದೇಶಾದ್ಯಂತ ಮಹಿಳಾ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ, ಕರ್ನಾಟಕ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಸ್ಥಾನ ನೀಡದಿರುವುದು ಮಹಿಳಾ ರಾಜಕೀಯ ಸಬಲೀಕರಣಕ್ಕೆ ವಿರುದ್ಧವಾದ ಕ್ರಮವಾಗಿದೆ” ಎಂದು ಟೀಕಿಸಿದೆ.
“ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಕಾಯ್ದೆಗೆ ಬೆಂಬಲ ವ್ಯಕ್ತಪಡಿಸುವ ಕಾಂಗ್ರೆಸ್ ಪಕ್ಷ, ತನ್ನದೇ ಆಡಳಿತವಿರುವ ರಾಜ್ಯದಲ್ಲಿ ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಅವಕಾಶ ನಿರಾಕರಿಸಿರುವುದು ತೀವ್ರ ವಿರೋಧಾಭಾಸವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರ ಮತಗಳನ್ನು ಪಡೆಯಲು ಅವರ ಕೊಡುಗೆಯನ್ನು ಹೊಗಳುವ ರಾಜಕೀಯ ಪಕ್ಷಗಳು, ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸುವುದು ದ್ವಂದ್ವ ನೀತಿಯಾಗಿದೆ. ಮಹಿಳೆಯರು ಕೇವಲ ಮತದಾರರಲ್ಲ, ಅವರು ಸಮರ್ಥ ಜನಪ್ರತಿನಿಧಿಗಳು, ಆಡಳಿತಗಾರರು ಮತ್ತು ನೀತಿ ರೂಪಿಸುವ ನಾಯಕರೂ ಆಗಿದ್ದಾರೆ ಎಂಬುದನ್ನು ಸರ್ಕಾರ ಅರಿಯಬೇಕು” ಎಂದು ತಿಳಿಸಿದೆ.
“ಆದ್ದರಿಂದ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್ ಕೂಡಲೇ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಮತ್ತು ನ್ಯಾಯಯುತ ಪ್ರಾತಿನಿಧ್ಯ ನೀಡಬೇಕು” ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ. ಮಹಿಳೆಯರನ್ನು ಅಧಿಕಾರದ ಕೇಂದ್ರದಿಂದ ದೂರವಿಡುವ ಯಾವುದೇ ಕ್ರಮವನ್ನು ಸಂಘಟನೆ ಬಲವಾಗಿ ವಿರೋಧಿಸಿದೆ.




