ಕೇರಳ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಪರ ಅಲೆ ಏಳುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಲ್ಪೆಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಯುಡಿಎಫ್ ಮಹಿಳಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಚುನಾವಣೆಯಲ್ಲಿ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತರು ಸಕ್ರಿಯರಾಗಿ ಪಕ್ಷದ ಗೆಲುವಿಗೆ ಸಹಕರಿಸಬೇಕು. ಪ್ರಚಾರದಲ್ಲಿ ಸಕ್ರಿಯರಾಗಿ ಮನೆ ಮನೆ ತಲುಪಿ ಯುಡಿಎಫ್ ಅಧಿಕಾರಕ್ಕೆ ಬಂದರೆ ಏನೆಲ್ಲಾ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎನ್ನುವುದನ್ನು ಮನದಟ್ಟು ಮಾಡಬೇಕೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಯುಡಿಎಫ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರಮುಖವಾಗಿ ಐದು ಗ್ಯಾರೆಂಟಿಗಳನ್ನು ಎಂದರೇ, ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರಿಗೆ ತಿಂಗಳಿಗೆ ₹1,000 ರೂಪಾಯಿ ನೆರವು, ಕಲ್ಯಾಣ ಪಿಂಚಣಿಯನ್ನು ₹3,000 ರೂಪಾಯಿಗಳಿಗೆ ಹೆಚ್ಚಿಸುವುದು, ಕುಟುಂಬಗಳಿಗೆ ₹25 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ವಿಮೆ ಹಾಗೂ ಯುವಕರಿಗೆ ₹5 ಲಕ್ಷ ರೂಪಾಯಿವರೆಗೆ ಬಡ್ಡಿರಹಿತ ಸಾಲ ನೀಡುವುದು ಸೇರಿದಂತೆ ಹಲವು ಭರವಸೆಗಳನ್ನು ಘೋಷಿಸಲಾಯಿತು. ಇದರ ಜೊತೆಗೆ ಹಿರಿಯ ನಾಗರಿಕರಿಗಾಗಿ ವಿಶೇಷ ಇಲಾಖೆಯನ್ನು ರಚಿಸುವುದಾಗಿ ತಿಳಿಸಿದರು.
ಕಲ್ಪೆಟ್ಟದ ತಿರುಹೃದಯ ದೇವಾಲಯದ ಸಭಾಂಗಣದಲ್ಲಿ ಮಹಿಳಾ ಕಾಂಗ್ರೆಸ್ ಮತ್ತು ವನಿತಾ ಲೀಗ್ ವತಿಯಿಂದ ಸಭೆ ಆಯೋಜಿಸಲಾಗಿದ್ದು, ಮೂಪೈನಾಡ್, ಮೆಪ್ಪಾಡಿ, ವೈತಿರಿ, ಕಲ್ಪೆಟ್ಟ, ಪದಿಂಜರಥರ, ಕೊಟ್ಟಥರ, ವೆಂಗಪ್ಪಳ್ಳಿ, ತರಿಯೋಡ್ ಹಾಗೂ ಮುಟ್ಟಿಲ್ ಪಂಚಾಯತ್‌ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು.
ಈ ಸುದ್ದಿ ಓದಿದ್ದೀರಾ? ಕೇರಳ ತನ್ನ ವೈಭವದ ದಿನಗಳಿಗೆ ಮರಳಬೇಕಾದರೆ ಯುಡಿಎಫ್ ಅಧಿಕಾರಕ್ಕೆ ಬರಬೇಕು: ಸಚಿವ ಕೃಷ್ಣಬೈರೇಗೌಡ

ಸಭೆಯಲ್ಲಿ ಕರ್ನಾಟಕ ರಾಜ್ಯದ ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ವನಿತಾ ಲೀಗ್ ಜಿಲ್ಲಾ ಅಧ್ಯಕ್ಷೆ ಕೆ.ಬಿ. ನಸೀಮಾ, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಜೆ. ಬಿ. ಮಾಥರ್ ಹಾಗೂ ವನಿತಾ ಲೀಗ್ ರಾಜ್ಯಾಧ್ಯಕ್ಷೆ ಸುಹ್ರಾ ಮಾಂಬಾಡ್, ಬಿಂದು ಜೋಸ್ ಇದ್ದರು.




