ಕೋಲಾರ: ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಶಿವಗಂಗೆಯ ಆದಿಮ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ 223ನೇ ಹುಣ್ಣಿಮೆ ಹಾಡು ಪ್ರಯುಕ್ತ ಹಮ್ಮಿಕೊಂಡಿದ್ದ ರಾಜ್ಯೋತ್ಸವ ನಾಟಕೋತ್ಸವದಲ್ಲಿ ಎರಡು ನಾಟಕಗಳು ಜನರ ಮನಸೂರೆಗೊಂಡವು.
ಆದಿಮ ರಂಗಭೂಮಿ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳ ಚೊಚ್ಚಲ ಪ್ರಸ್ತುತಿ ಭಾಸ ಮಹಾಕವಿಯ ‘ಮಧ್ಯಮ ವ್ಯಾಯೋಗ’ ನಾಟಕ, ಬಹುಭಾಷ ನಟ ಪ್ರಕಾಶ ರೈ ಸ್ಥಾಪಿತ ನಿರ್ದಿಗಂತ ಪ್ರಸ್ತುತಿ, ದಾರಿಯೋ ಫೋ ಅವರ ‘ಕಾಂಟ್ ಪೇ, ವೊಂಟ್ ಪೇ’ ಆಧಾರಿತ ‘ಕೊಡಲ್ಲ ಅಂದ್ರ ಕೊಡಲ್ಲ’ ನಾಟಕ ಪ್ರದರ್ಶಿಸಲಾಯಿತು.
ಪ್ರಾಧ್ಯಾಪಕ ಕೆ.ವೈ.ನಾರಾಯಣಸ್ವಾಮಿ ಭಾಗವಹಿಸಿ ಮಾತನಾಡಿದರು. ‘ಚಿಕ್ಕ ಮಕ್ಕಳಾಗಿ ಬಂದಿದ್ದವರು ಇಂದು ಬೆಳೆದು ಯೌವ್ವನಕ್ಕೆ ಬಂದಿದ್ದೀರಿ. ಅಷ್ಟು ಸುದೀರ್ಘವಾದ ಬೆಳದಿಂಗಳುಗಳಲ್ಲಿ ನೀವಿಲ್ಲಿ ಕಳೆದಿದ್ದೀರಿ. ನನ್ನ ದೃಷ್ಟಿಯಲ್ಲಿ ಇದೊಂದು ಬಹುದೊಡ್ಡ ಸಾಂಸ್ಕೃತಿಕ ಪ್ರಯಾಣ. ನಾವು ಆಧುನಿಕ ಕಾಲದಲ್ಲಿ ಚಂದ್ರನ ಬೆಳದಿಂಗಳನ್ನು ಕಳೆದುಕೊಂಡಿದ್ದೇವೆ. ಬೆಳದಿಂಗಳ ಚಂದ್ರ ಹೊರಗೆ ಇದ್ದರೂ ಕೂಡ; ಅವು ಕಳೆದುಹೋಗಿರುವುದು ನಮ್ಮ ಮನಸ್ಸಿಗೆ ಅರ್ಥವೇ ಆಗಿಲ್ಲ. ಹಾಗೆ ಅರ್ಥಮಾಡಿಸಬಲ್ಲ, ಸ್ವಲ್ಪ ನಂಬಿಕೆ ಉಳಿಸಿಕೊಂಡಿರುವ ಕ್ಷೇತ್ರ ಅಂದರೆ ಅದು ರಂಗಭೂಮಿ’ ಎಂದರು.
ಜಿಲ್ಲೆ ಅನೇಕ ಕಾರಣಗಳಿಂದಾಗಿ ಸಾಂಸ್ಕೃತಿಕವಾಗಿ ಶ್ರೀಮಂತ. ಕೆಲವು ಬಾರಿ ವಿವೇಕ ಮತ್ತು ಹೃದಯಹೀನತೆಯಲ್ಲಿ ಅತ್ಯಂತ ಒರಟು, ಕಠಿಣವೂ ಆಗಿರುವ ವಿಚಿತ್ರವಾದ ಜಿಲ್ಲೆ ಎಂದು ಹೇಳಿದರು.
ರಂಗಭೂಮಿ ನಿರ್ದೇಶಕ ಶಕೀಲ್ ಅಹ್ಮದ್ ಮಾತನಾಡಿ, ‘ಯಾವುದೇ ಒಂದು ವಿಷಯ ಸಂವಹನಗೊಳಿಸಲು, ಏನೋ ಒಂದು ಘಟಿಸಲು ಮುಖ್ಯವಾಗಿ ಒಂದು ಜಾಗ ಬೇಕು. ಎಲ್ಲರನ್ನೂ ಸೇರಿಸುವಂತಹ ನಾಡಿನ ಅಂತಹ ಜಾಗಗಳಲ್ಲಿ ಆದಿಮ ಮುಖ್ಯವಾದಂತಹದು’ ಎಂದರು.
ಇದನ್ನು ಓದಿದ್ದೀರಾ…? ದೊಡ್ಡಬಳ್ಳಾಪುರ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ಪಾಂಡುರಂಗ ಎಸ್ ಅಧಿಕಾರ ಸ್ವೀಕಾರ
ಶ್ರೀ ದೇವರಾಜ ಅರಸು ಮಹಾವಿದ್ಯಾಲಯದ ಕುಲಪತಿ ಡಾ.ವೆಂಗಮ್ಮ ಕಲಾವಿದರನ್ನು ಉದ್ದೇಶಿಸಿ ಮಾತನಾಡಿದರು. ಪ್ರಮಾಣಪತ್ರ ವಿತರಿಸಿದರು. ಆದಿಮ ಕಾರ್ಯದರ್ಶಿ ಹ.ಮಾ.ರಾಮಚಂದ್ರ ಇದ್ದರು. ರಂಗಶಿಕ್ಷಕ ಗ.ನ.ಅಶ್ವತ್ ಕಾರ್ಯಕ್ರಮ ನಿರೂಪಣೆ, ಆದಿಮ ಶಿಕ್ಷಣ ಕೇಂದ್ರದ ಆಡಳಿತಾಧಿಕಾರಿ ಅಗ್ರಹಾರ ರಮೇಶ್ ಸ್ವಾಗತಿಸಿದರು. ನಾಯಕ್ ನಾಟಕ ತಂಡಗಳಿಗೆ ಅಭಿನಂದನೆ ತಿಳಿಸಿದರು.
ಕೋಲಾರ |ಆದಿಮ ನಾಟಕೋತ್ಸವ ಸಂಭ್ರಮ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




