ಚಿಂತಾಮಣಿ ಕೆಎಸ್‌ಆರ್‌ಟಿಸಿ ಸಾರಿಗೆ ಡಿಪೋದಲ್ಲಿ ಮೇಲಾಧಿಕಾರಿಗಳಿಂದ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ,ಕಳೆದ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಚಾಲಕ ಮತ್ತು ನಿರ್ವಾಹಕ ಎಸ್. ರಾಜು ಅವರು ಬೆಂಗಳೂರು ಜೋಡಿ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಘಟಕದ ಗೇಟಿನ ಮುಂಭಾಗ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ತಮ್ಮ ವಿರುದ್ಧ ಯಾವುದೇ ಗಂಭೀರ ಪ್ರಕರಣಗಳಿಲ್ಲದಿದ್ದರೂ ವಿಭಾಗೀಯ ನಿಯಂತ್ರಣಾಧಿಕಾರಿಗಳು ಉದ್ದೇಶಪೂರ್ವಕವಾಗಿ ಆಕ್ಷೇಪಣೆ ಹಾಕಿಸಿ ವೇತನ ಕಡಿತ ಮಾಡುತ್ತಿದ್ದಾರೆ.ಇತ್ತೀಚೆಗೆ ತಮ್ಮ ಸಂಬಳದಿಂದ ₹6,162 ಕಡಿತ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಒಂದೇ ದಿನದಲ್ಲಿ ಅಮಾನತು ಹಾಗೂ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗಿದೆ.ಯಾವುದೇ ನೋಟಿಸ್ ನೀಡದೆ ವಾಟ್ಸಾಪ್ ಮೂಲಕ ಆದೇಶ ಕಳುಹಿಸಲಾಗಿದೆ ಅಮಾನತ ಅವಧಿಯಲ್ಲಿ ನೀಡಬೇಕಾದ ಶೇಕಡ 50ರಷ್ಟು ಜೀವನ ಭತ್ಯೆಯನ್ನೂ ನೀಡಿಲ್ಲ ಎಂದು ಅವರು ದೂರಿದರು.
ಡಿಪೋದಲ್ಲಿ ನೌಕರರು ರಜೆ ಕೇಳಿದರೆ ₹500 ನೀಡಬೇಕು ಹಣ ನೀಡಿದರೆ ಮಾತ್ರ ರಜೆ ಮಂಜೂರು ಮಾಡಲಾಗುತ್ತದೆ ಹಾಗೂ ನೈಟ್ ರೂಟ್‌ಗಳು ಅಥವಾ ಒಡಿ ರೂಟ್‌ಗಳನ್ನು ನಿಗದಿಪಡಿಸಲು ಲಂಚ ಕೇಳಲಾಗುತ್ತದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
‘ಶಕ್ತಿ ಯೋಜನೆ’ ಜಾರಿಯಾದ ನಂತರ ಬಸ್‌ಗಳ ಮೇಲೆ ಒತ್ತಡ ಹೆಚ್ಚಾಗಿದೆ. ಬಿಡಿಭಾಗಗಳು ಸರಿಯಾಗಿ ಸಿಗದ ಕಾರಣ ಕೆಲವು ಸಂದರ್ಭಗಳಲ್ಲಿ ಚಾಲಕರೇ ಸ್ವಂತ ಹಣದಿಂದ ಬಿಡಿಭಾಗಗಳನ್ನು ಖರೀದಿಸಿ ಅಳವಡಿಸಿಕೊಳ್ಳಬೇಕಾಗಿದೆ ಕಲೆಕ್ಷನ್ ಕಡಿಮೆಯಾದರೆ ಮೇಮೋ ಹಾಗೂ ಚಾರ್ಜ್‌ಶೀಟ್ ನೀಡಲಾಗುತ್ತಿದೆ ಎಂದು ನಿರ್ವಾಹಕ ಎಸ್.ರಾಜು ತಿಳಿಸಿದರು.
ಕಿರುಕುಳ ತಾಳಲಾರದೆ ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡಿದ್ದರೂ,ಅದನ್ನು ಸ್ವೀಕರಿಸದೆ ವಿಚಿತ್ರ ಷರತ್ತುಗಳನ್ನು ವಿಧಿಸಲಾಗುತ್ತಿದೆ.ನ್ಯಾಯ ಸಿಗುವವರೆಗೂ ಧರಣಿ ಮುಂದುವರಿಸುವುದಾಗಿ ರಾಜು ಎಚ್ಚರಿಸಿದ್ದಾರೆ.
ಈ ಕುರಿತು ವರದಿಗಾರರೊಂದಿಗೆ ಮಾತನಾಡಿದ ಚಿಂತಾಮಣಿ ಡಿಪೋ ವ್ಯವಸ್ಥಾಪಕಿ ಸರಿತಾ ಅವರು ನೌಕರ ರಾಜು ಅವರ ಆರೋಪಗಳನ್ನು ಸಂಪೂರ್ಣವಾಗಿ ತಳ್ಳುಹಾಕಿದ್ದಾರೆ.
ಮಹಿಳಾ ಟಿಕೆಟ್ ವಿತರಣೆ ಪ್ರಕರಣದಲ್ಲಿ ಅಕ್ರಮ ಎಸಗಿದ್ದರಿಂದ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದ್ದು, ಶಿಡ್ಲಘಟ್ಟ ಡಿಪೋಗೆ ವರ್ಗಾವಣೆ ಮಾಡಲಾಗಿದೆ.ಅಮಾನತಾದ ನೌಕರರು ನಿತ್ಯ ಡಿಪೋಗೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದರೆ ಜೀವನ ಭತ್ಯೆ ನೀಡಲಾಗುತ್ತದೆ, ಆದರೆ ರಾಜು ಅವರು ಸಹಿ ಮಾಡುತ್ತಿಲ್ಲ.
ಇದನ್ನು ಓದಿದ್ದೀರಾ..?ಚಿಂತಾಮಣಿ | ಮಳೆ ಮುನ್ಸೂಚನೆ, ಕಲ್ಯಾಣ ಮಂಟಪದ ಅಭಾವ:ಸೆ.18ರ ಜೆಡಿಎಸ್ ಬೃಹತ್ ಸಮಾವೇಶ ಚಿಂತಾಮಣಿಗೆ ಸ್ಥಳಾಂತರ
ಲಂಚದ ಆರೋಪಗಳು ಸುಳ್ಳು ರಾಜೀನಾಮೆ ಹಾಗೂ ವರ್ಗಾವಣೆ ಪ್ರಕ್ರಿಯೆಗಳು ವಿಭಾಗೀಯ ನಿಯಂತ್ರಣಾಧಿಕಾರಿಗಳ ಮಟ್ಟದಲ್ಲಿ ತೀರ್ಮಾನವಾಗಬೇಕಿರುವುದರಿಂದ ಮೇಲಾಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ. ಸದ್ಯ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದ್ದು,ಸಾರಿಗೆ ಘಟಕದ ಮುಂದೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.




