ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ ಕಳೆಯುತ್ತಾ ಬಂದರೂ ಬೆಳೆಗಳನ್ನು ಉಳಿಸಿಕೊಳ್ಳಲು ನೀರಿಗಾಗಿ ರೈತರು ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಹೋಗುತ್ತಿಲ್ಲ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೀರಭದ್ರಸ್ವಾಮಿ ಕೋಲಾರ ಬೇಸರ ವ್ಯಕ್ತ ಪಡಿಸಿದರು.
ತಾಲ್ಲೂಕಿನ ಹಿರೇಜಾವೂರು ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ಡಿಸೆಂಬರ್ ಅಂತ್ಯದವರೆಗೆ ನೀರಾವರಿ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
‘ರೈತರ ಅನುಕೂಲಕ್ಕಾಗಿ ಜಲಾಶಯಗಳನ್ನು ನಿರ್ಮಾಣ ಮಾಡಿ ಅದನ್ನು ಉಸ್ತುವಾರಿ ನೋಡಿಕೊಳ್ಳಲು ಅಧಿಕಾರಿಗಳನ್ನು ನಿಯೋಜನೆ ಮಾಡಿದರೆ ಆ ಅಧಿಕಾರಿಗಳು ಜಲಾಶಯವೇ ತಮ್ಮ ಸ್ವಂತ ಜಾಹಗೀರವೆಂದು ಭಾವಿಸಿಕೊಂಡು ತಮ್ಮ ಮನಬಂದಂತೆ ಕೆಲಸ ಮಾಡುತ್ತಿದ್ದಾರೆ. ರೈತರು ಬಿತ್ತನೆ ಮಾಡಿದ ಬೆಳೆಗಳಿಗೆ ನೀರಿನ ಅಗತ್ಯವಿದ್ದರೂ ಕೂಡಾ ಕಾಲುವೆಗಳಿಗೆ ನೀರು ನಿಲ್ಲಿಸುವ ಮೂಲಕ ರೈತನಿಗೆ ಸಂಕಷ್ಟ ತರುವ ಕೆಲಸ ಮಾಡುತ್ತಿದ್ದಾರೆ. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹವಿದ್ದರೂ ನೀರು ಹರಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದಂತಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಲುವೆಗಳಿಗೆ ನೀರು ಹರಿಸುವ ವಿಚಾರವಾಗಿ ನೀರಾವರಿ ಸಲಹಾ ಸಮಿತಿ ತೆಗೆದುಕೊಳ್ಳುವ ನಿರ್ಣಯಗಳು ರೈತರನ್ನು ಕೃಷಿಯಿಂದ ವಿಮುಖರನ್ನಾಗಿ ಮಾಡುವ ಹುನ್ನಾರವಾಗಿದೆ.ರಾಯಚೂರು ಜಿಲ್ಲೆಯಲ್ಲಿ ಅನೇಕ ರೈತರು ತೋಟಗಾರಿಕೆ ಬೆಳೆಯಾದ ಮೆಣಸಿನಕಾಯಿ ಬೆಳೆ ಫಸಲು ರೈತರ ಕೈಗೆ ಬರಬೇಕಾದರೆ ಕನಿಷ್ಠವೆಂದರೂ ಡಿಸೆಂಬರ್ ಅಂತ್ಯದವರೆಗೆ ನಾರಾಯಣಪುರ ಬಲದಂಡೆ ಹಾಗೂ ರಾಂಪೂರು ಕಾಲುವೆಗಳಿಗೆ ನೀರು ಹರಿಸಿದರೆ ಮಾತ್ರ ಬೆಳೆ ಕಟಾವಿಗೆ ಬರುತ್ತದೆ. ಇಲ್ಲದಿದ್ದರೆ ಸಾಲ ಮಾಡಿದ ರೈತರು ನಾನಾ ರೀತಿಯ ಸಂಕಷ್ಟಕ್ಕೆ ಬಲಿಯಾಗುವಂತಾಗುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತು ಕಾಲುವೆಗಳಿಗೆ ಡಿಸೆಂಬರ್ ಕೊನೆವರೆಗೆ ನೀರು ಹರಿಸಬೇಕು ಹಾಗೂ ರೈತರ ಪಂಪಸೆಟ್ಗಳಿಗೆ ನಿರಂತರ 9 ಗಂಟೆ ಐಪಿ ಸೆಟ್ ವಿದ್ಯುತ್ ಸರಬರಾಜು ಮಾಡಬೇಕು’ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರಣಿ ಮನೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರು ಆರೋಪಿಗಳ ಬಂಧನ, 45.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ರಾಜ್ಯ ಘಟಕದ ಕಾರ್ಯದರ್ಶಿ ಭಕ್ಕರಳ್ಳಿ ಬೈರೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ಹನುಮಂತರಾಯ ನೆಲೋಗಿ, ಆನಂದ ಕುಂಬಾರ, ರಮೇಶ ಗೌಡೂರು, ಹನುಮ ಗೌಡ ಭೂಪುರ ಸೇರಿ ಅನೇಕರಿದ್ದರು.



