ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿ ವಿಜಯಪುರ ವತಿಯಿಂದ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡ ಅವರನ್ನು ಭೇಟಿ ಮಾಡಿ, ಆಲಮಟ್ಟಿ ಅಣೆಕಟ್ಟಿನಲ್ಲಿ 524.256 ಮೀಟರ್ ಮಟ್ಟದವರೆಗೆ ನೀರು ಸಂಗ್ರಹ ಮತ್ತು ಬಳಕೆಗೆ ಅಗತ್ಯವಾದ ಗೆಜೆಟ್ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಶೀಘ್ರ ಹೊರಡಿಸುವಂತೆ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಯಿತು.
ಕೃಷ್ಣಾ ನದಿ ತಟದ ಜನರ ಬಹುಕಾಲದ ಬೇಡಿಕೆಯಾಗಿರುವ ಆಲಮಟ್ಟಿ ಅಣೆಕಟ್ಟಿನ ಪೂರ್ಣ ಪ್ರಮಾಣದ ನೀರು ಸಂಗ್ರಹ ಮತ್ತು ಬಳಕೆಯು ಉತ್ತರ ಕರ್ನಾಟಕದ ನೀರಾವರಿ, ಕುಡಿಯುವ ನೀರಿನ ಪೂರೈಕೆ ಹಾಗೂ ಸಮಗ್ರ ಅಭಿವೃದ್ಧಿಗೆ ಅತ್ಯಂತ ಅಗತ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಯಿತು.
“ಈ ಸಂಬಂಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲು ನಿಯೋಗಕ್ಕೆ ಅವಕಾಶ ಕಲ್ಪಿಸಿ, ಯೋಜನೆಗೆ ಅಗತ್ಯವಿರುವ ಕೇಂದ್ರ ಸರ್ಕಾರದ ಅನುಮೋದನೆ ಮತ್ತು ಗೆಜೆಟ್ ಅಧಿಸೂಚನೆ ಶೀಘ್ರ ದೊರಕುವಂತೆ ಕ್ರಮ ಕೈಗೊಳ್ಳಬೇಕು” ಎಂದು ಸಂಸದರಲ್ಲಿ ಒತ್ತಾಯಿಸಲಾಯಿತು.
“ಈ ಹೋರಾಟ ಕೇವಲ ಒಂದು ಜಿಲ್ಲೆಯ ಬೇಡಿಕೆಯಲ್ಲ, ಕೃಷ್ಣಾ ಕೊಳ್ಳ ಪ್ರದೇಶದ ರೈತರು, ಯುವಕರು ಹಾಗೂ ಜನಸಾಮಾನ್ಯರ ಬದುಕಿನ ಪ್ರಶ್ನೆಯಾಗಿದ್ದು, ಜನರ ನೀರಿನ ಹಕ್ಕಿಗಾಗಿ ಹೋರಾಟ ನಿರಂತರವಾಗಿ ಮುಂದುವರಿಯಲಿದೆ” ಎಂದು ಸಮಿತಿ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಪಂಚಪ್ಪ ಕಲಬುರ್ಗಿ, ಅರವಿಂದ್ ಕುಲಕರ್ಣಿ, ಬಿ. ಭಗವಾನ್ ರೆಡ್ಡಿ, ಸುರೇಶ್ ಬಿಜಾಪುರ, ಸಿದ್ದಲಿಂಗ ಬಾಗೇವಾಡಿ, ಭೋಗೇಶ್ ಸೋಲಾಪುರ ಹಾಗೂ ಗುರುರಾಜ್ ಪಡಶೆಟ್ಟಿ ಉಪಸ್ಥಿತರಿದ್ದರು.




